ಬೆಳ್ಳುಳ್ಳಿ:ಗ್ರಾಹಕರಿಗೆ ತಲುಪದ ಕುಸಿದ ಧಾರಣೆ ಲಾಭ

7

ಬೆಳ್ಳುಳ್ಳಿ:ಗ್ರಾಹಕರಿಗೆ ತಲುಪದ ಕುಸಿದ ಧಾರಣೆ ಲಾಭ

Published:
Updated:

ನವದೆಹಲಿ (ಪಿಟಿಐ): ರಾಜಧಾನಿಯ ಸಗಟು ಮಾರುಕಟ್ಟೆಯಲ್ಲಿ ಬೆಳ್ಳುಳ್ಳಿ ದರ ಗಣನೀಯವಾಗಿ ಇಳಿಕೆಯಾಗಿದ್ದರೂ ಚಿಲ್ಲರೆ ಮಾರುಕಟ್ಟೆಯಲ್ಲಿ ಮಾತ್ರ ಇನ್ನೂ ಕೆಜಿಗೆ 225 ರೂಪಾಯಿ ಆಸುಪಾಸಿನಲ್ಲೇ ಮುಂದುವರಿದಿದೆ.ದೆಹಲಿಯ ಬೃಹತ್ ತರಕಾರಿ ಮಾರುಕಟ್ಟೆಯಾದ ಆಜಾದ್‌ಪುರದ ಸಗಟು ಮಂಡಿಯಲ್ಲಿ ಸದ್ಯ ಬೆಳ್ಳುಳ್ಳಿ ಕೆಜಿಗೆ 40-75 ರೂಪಾಯಿ ದರದಲ್ಲಿ ಮಾರಾಟವಾಗುತ್ತಿದೆ. ಆದರೆ ಇದೇ ಬೆಳ್ಳುಳ್ಳಿ ಚಿಲ್ಲರೆ ಮಾರುಕಟ್ಟೆಯಲ್ಲಿ ಕೆ.ಜಿಗೆ 225 ರೂಪಾಯಿಯಷ್ಟಿದೆ ಎಂದು ವ್ಯಾಪಾರಿಗಳ ಸಂಘದ ಉಪಾಧ್ಯಕ್ಷ ಜಿತೇಂದ್ರ ಖುರಾನಾ ಭಾನುವಾರ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.‘ಫೆಬ್ರುವರಿಗೆ ಮುನ್ನ ಚಿಲ್ಲರೆ ಮಾರುಕಟ್ಟೆಯಲ್ಲಿ 120 ರಿಂದ 170 ರೂಪಾಯಿ ಇದ್ದ ಧಾರಣೆ ಫೆಬ್ರುವರಿ ಮೊದಲ ವಾರದ ಹೊತ್ತಿಗೆ ಕೆಜಿಗೆ 300 ರೂಪಾಯಿಯಷ್ಟಾಯಿತು. ಈಗ ಅದು 225 ರೂಪಾಯಿಗೆ ಬಂದು ನಿಂತಿದೆ. ಚಿಲ್ಲರೆ ಮಾರುಕಟ್ಟೆಯ ಮೇಲೆ ಯಾವುದೇ ನಿಯಂತ್ರಣವೇ ಇಲ್ಲದಂತಾಗಿದೆ’ ಎಂದು ಖುರಾನಾ ಆತಂಕ ವ್ಯಕ್ತಪಡಿಸಿದ್ದಾರೆ. ‘ಸರ್ಕಾರ ಕೂಡಲೇ ಈ ಬಗ್ಗೆ ಎಚ್ಚೆತ್ತುಕೊಂಡು ಚಿಲ್ಲರೆ ಮಾರುಕಟ್ಟೆಯ ಮೇಲೆ ಸೂಕ್ತ ನಿಯಂತ್ರಣ ವಿಧಿಸುವುದು ಅವಶ್ಯವಿದೆ’ ಎಂದು ಅವರು ಹೇಳಿದ್ದಾರೆ.‘ಮಧ್ಯಪ್ರದೇಶದಿಂದ ಈಗ ಆಜಾದ್‌ಪುರ ಮಾರುಕಟ್ಟೆಗೆ ಪ್ರತಿದಿನ ಏನಿಲ್ಲವೆಂದರೂ 220 ಟನ್‌ಗಳಷ್ಟು ಬೆಳ್ಳುಳ್ಳಿ ಬರುತ್ತಿದೆ. ಇದು ದಿನವೊಂದರ ಬೇಡಿಕೆ ತಣಿಸಲು ಸಾಕಾಗುತ್ತದೆ. ಪ್ರತಿದಿನದ ಬೇಡಿಕೆ ಕೇವಲ 150 ಟನ್ ಮಾತ್ರ. ಪೂರೈಕೆ ಹೆಚ್ಚಿದ್ದರೂ ದರ ಇಳಿದಿಲ್ಲ’ಎಂದು ಬೆಳ್ಳುಳ್ಳಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಸುರೇಂದ್ರ ಬುಧಿ ರಾಜ್ ಪ್ರತಿಕ್ರಿಯಿಸಿದ್ದಾರೆ.

 ‘ಮಾರ್ಚ್ ವೇಳೆಗೆ ಉತ್ತರ ಪ್ರದೇಶದಿಂದಲೂ ಸಾಕಷ್ಟು ಪ್ರಮಾಣದಲ್ಲಿ ಬೆಳ್ಳುಳ್ಳಿ ದೆಹಲಿ ಮಾರುಕಟ್ಟೆಗೆ ಬರಲಿದೆ. ಆಗ ಕೆ.ಜಿಗೆ 15 ರಿಂದ 40 ರೂಪಾಯಿಗೆ ಕುಸಿಯಬಹುದು’ ಎಂದೂ ರಾಜ್ ಇದೇ ಸಂದರ್ಭದಲ್ಲಿ ಅಂದಾಜಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry