ಶುಕ್ರವಾರ, ನವೆಂಬರ್ 15, 2019
27 °C

ಬೆವರು ಹರಿಸಿ ನೀರಿನ ಭರವಸೆ ನೀಡುತ್ತಾ...

Published:
Updated:

ಶ್ರೀನಿವಾಸಪುರ: ಮಾವಿನ ಮಡಿಲಲ್ಲಿ ಸುರಿಯುವ ಉರಿ ಬಿಸಿಲು, ಉಸಿರಾಡಲು ಕಷ್ಟಕೊಡುವ ಸೆಖೆ. ಮುನಿದ ತಂಗಾಳಿ. ಆದರೆ ಅಭ್ಯರ್ಥಿಗಳ ಚುನಾವಣಾ ಪ್ರಚಾರಕ್ಕೆ ಇದಾವುದೂ ಅಡ್ಡಿಯಲ್ಲ.ಶ್ರೀನಿವಾಸಪುರ ವಿಧಾನಸಭೆ ಕ್ಷೇತ್ರಕ್ಕೆ ಹೋಳೂರು, ಸುಗಟೂರು ಹೋಬಳಿಗಳು ಸೇರ್ಪಡೆಯಾದ ಮೇಲೆ, ಕ್ಷೇತ್ರದ ವಿಸ್ತೀರ್ಣ ಗಣನೀಯವಾಗಿ ಹೆಚ್ಚಿದೆ. 430 ಗ್ರಾಮಗಳನ್ನು ಸುತ್ತಿ ಮತ ಯಾಚನೆ ಮಾಡುವುದು ಸುಲಭದ ಮಾತಲ್ಲ. ಆದರೂ ಸ್ಪರ್ಧಾಳುಗಳಿಗೆ ಅನಿವಾರ್ಯ. ಆಯಾ ಪಕ್ಷದ ಕಾರ್ಯಕರ್ತರಿಗೂ ಇದು ಸವಾಲಿನ ವಿಷಯ.ಈ ಕ್ಷೇತ್ರದ ಮಟ್ಟಿಗೆ ಸ್ಪರ್ಧೆ ಇರುವುದು ಕಾಂಗ್ರೆಸ್, ಜೆಡಿಎಸ್ ನಡುವೆ ಮಾತ್ರ. ಅರ್ಥಾತ್ ವಿಧಾನಸಭೆಯ ಮಾಜಿ ಸಭಾಧ್ಯಕ್ಷ ಕೆ.ಆರ್.ರಮೇಶ್ ಕುಮಾರ್, ಹಾಲಿ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಅವರ ಮಧ್ಯೆ. ಈ ಸಾಂಪ್ರದಾಯಿಕ ಸ್ಪರ್ಧಿಗಳು ನಾಮಪತ್ರ ಸಲ್ಲಿಸುವ ಮೊದಲೇ ಚುನಾವಣಾ ಪ್ರಚಾರ ಆರಂಭಿಸಿ, ಮತದಾರರನ್ನು ಭೇಟಿಯಾಗಿ ಮತ ಯಾಚನೆ ಮಾಡುತ್ತಿದ್ದಾರೆ.ಜಿಲ್ಲೆಗೆ ಶಾಶ್ವತ ನೀರಾವರಿ ಯೋಜನೆ ಜಾರಿ, ಈ ಇಬ್ಬರೂ ಮುಖಂಡರ ಆದ್ಯತಾ ವಿಷಯ. ಶಾಶ್ವತ ನೀರಾವರಿ ಯೋಜನೆ ಜಾರಿಗೆ ಜೆಡಿಎಸ್ ಅಧಿಕಾರಕ್ಕೆ ಬರಬೇಕು. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತೆ ಮುಖ್ಯಮಂತ್ರಿ ಆಗಬೇಕು. ಅದಕ್ಕಾಗಿ ಜೆಡಿಎಸ್ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು ಎಂದು ಜಿ.ಕೆ.ವೆಂಕಟಶಿವಾರೆಡ್ಡಿ ಮತದಾರರಲ್ಲಿ ಮನವಿ ಮಾಡುತ್ತಿದ್ದಾರೆ.ಬಾಯಾರಿದ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಯೋಜನೆ ಕಾಂಗ್ರೆಸ್ ಪ್ರಣಾಳಿಕೆಯ ಮುಖ್ಯ ವಿಷಯ. ಜಿಲ್ಲೆಗೆ ನದಿ ನೀರು ಹರಿಸಿ ಹಸಿರು ಮೂಡಿಸುವಾಸೆ ನನ್ನದು. ಕುಡಿಯುವ ನೀರಿಗಾಗಿ ಕಷ್ಟ ಅನುಭವಿಸುತ್ತಿರುವ ಜನರಿಗೆ ನೀರು ಸಿಗುವಂತೆ ಮಾಡುವುದು ಜೀವನದ ಧ್ಯೇಯವಾಗಿದೆ. ಜೀವನದ ಸಾರ್ಥಕತೆಯೂ ಅದೇ ಆಗಿದೆ. ಅದಕ್ಕೆ ಕಾಂಗ್ರೆಸ್ ಅನ್ನು ಬೆಂಬಲಿಸಬೇಕು ಎಂದು ರಮೇಶ್‌ಕುಮಾರ್ ಕೋರುತ್ತಿದ್ದಾರೆ.ಈವರೆಗೆ ಚುನಾವಣಾ ಪ್ರಚಾರ ಗ್ರಾಮ ಮಟ್ಟದ ಸಭೆಗಳಿಗೆ ಮೀಸಲಾಗಿದೆ. ಮತದಾರರನ್ನು ವೈಯಕ್ತಿವಾಗಿ ಭೇಟಿಯಾಗುವ ಕಾರ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಈ ಇಬ್ಬರು ಮುಖಂಡರೂ, ಹೋದಲ್ಲಿ ಬಂದಲ್ಲಿ ಚುನಾವಣೆ ಸಂದರ್ಭದಲ್ಲಿ ಶಾಂತಿ ಸುವ್ಯವಸ್ಥೆಗೆ ಧಕ್ಕೆ ಬರದಂತೆ ನಡೆದುಕೊಳ್ಳುವಂತೆ ತಮ್ಮ ಬೆಂಬಲಿಗರಿಗೆ ಸಲಹೆ ನೀಡುತ್ತಿದ್ದಾರೆ. ಇದೊಂದು ಮಹತ್ವದ ವಿಚಾರ ಎನ್ನುವುದರಲ್ಲಿ ಎರಡು ಮಾತಿಲ್ಲ.ಕಾಂಗ್ರೆಸ್ ಪಕ್ಷ ಕೆ.ಆರ್.ರಮೇಶ್ ಕುಮಾರ್ ಅವರನ್ನು ರಾಜ್ಯ ರಾಜಕಾರಣದಲ್ಲಿ ತೊಡಗಿಸಿಕೊಂಡಿದೆ. ಪಕ್ಷದ ಪ್ರಣಾಳಿಕೆ ರಚನಾ ಸಭೆಯ ಅಧ್ಯಕ್ಷ ಸ್ಥಾನವನ್ನು ನೀಡಿ ಹೆಚ್ಚಿನ ಜವಾಬ್ದಾರಿ ವಹಿಸಿದೆ. ಹಾಗಾಗಿ ಅವರು ಇಲ್ಲಿ ಪ್ರಚಾರ ಮಾಡುತ್ತಲೇ, ರಾಜಧಾನಿಯ ವಿದ್ಯಮಾನಗಳ ಕಡೆ ಗಮನ ನೀಡಬೇಕಿದೆ. ಇಲ್ಲಿ ಮತದಾರರನ್ನು ಭೇಟಿ ಮಾಡಬೇಕು. ಕರೆದಾಗ ರಾಜಧಾನಿಗೂ ಹೋಗಬೇಕು.ಜಿ.ಕೆ.ವೆಂಕಟಶಿವಾರೆಡ್ಡಿ ಪರಿಸ್ಥಿತಿ ಇದಕಿಂತ ಭಿನ್ನವಾಗಿಲ್ಲ. ಜಿಲ್ಲಾ ಜೆಡಿಎಸ್ ಅಧ್ಯಕ್ಷರಾಗಿದ್ದಾರೆ. ಪಕ್ಷವನ್ನು ಜಿಲ್ಲೆಯಲ್ಲಿ ಮುನ್ನಡೆಸುವ ಹೊಣೆಗಾರಿಕೆ ಹೊತ್ತಿದ್ದಾರೆ. ತಮ್ಮ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ನಡೆಸುವುದರ ಜತೆಗೆ, ಇತರ ಕ್ಷೇತ್ರಗಳಲ್ಲಿನ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕಿದೆ. ಅಲ್ಲಲ್ಲಿ ನಡೆಯುವ ಪಕ್ಷದ ಸಭೆಗಳಲ್ಲಿ ಭಾಗವಹಿಸಬೇಕಿದೆ.ಹಾಗಾಗಿ ಈ ಇಬ್ಬರೂ ಮುಖಂಡರು ಸಾಧ್ಯವಾದಷ್ಟು ನಾಮಪತ್ರ ಸಲ್ಲಿಕೆಗೆ ಮೊದಲೇ ಕ್ಷೇತ್ರ ಪ್ರವಾಸ ಮಾಡುತ್ತಿದ್ದಾರೆ. ಬೇರೆ ಪಕ್ಷದಿಂದ ಬಂದವರನ್ನು ತಮ್ಮ ವಲಯಕ್ಕೆ ಸೇರಿಸಿಕೊಳ್ಳುತ್ತಿದ್ದಾರೆ. ಇರುವ ಕಡಿಮೆ ಅವಧಿಯಲ್ಲಿ ಎಲ್ಲ ಗ್ರಾಮಗಳಿಗೂ ಭೇಟಿ ನೀಡಿ, ಮನೆ ಮನೆಗೆ ತೆರಳಿ ಮತಯಾಚನೆ ಮಾಡುವುದು ಸಾಧ್ಯವಾಗದ ಮಾತು. ಇದೆಲ್ಲವೂ ಇಲ್ಲಿ ಸಾಮಾನ್ಯ. ನಾಯಕ ನಿಷ್ಠೆ ಬದಲಿಸುವುದು ಅಪರೂಪದ ವಿದ್ಯಮಾನ. ಗ್ರಾಮ ಮಟ್ಟದ ಮುಖಂಡರು ಹಾಗೂ ಕಾರ್ಯಕರ್ತರು ತಮ್ಮ ತಮ್ಮ ಪಕ್ಷದ ಅಭ್ಯರ್ಥಿ ಪರ ಪ್ರಚಾರ ಮಾಡುತ್ತಾರೆ.ಬೇಸಿಗೆಯಲ್ಲಿ ಚುನಾವಣೆ ಬಂದಿದೆ. ಈಗ ನೀರಿನ ಸಮಸ್ಯೆ ಸಾಮಾನ್ಯ. ಇನ್ನೂ ಶಾಶ್ವತ ನೀರಾವರಿ ಯೋಜನೆ ಅನುಷ್ಠಾನ ಇಲ್ಲಿನ ಜನರ ಮಹದಾಸೆಯಾಗಿದೆ. ಆದ್ದರಿಂದಲೇ ರಾಜಕೀಯ ಪಕ್ಷಗಳು ಅದನ್ನು ಮುಖ್ಯ ವಿಷಯವನ್ನಾಗಿ ಮಾಡಿಕೊಂಡು ಮಾತನಾಡುತ್ತಿವೆ.ಚುನಾವಣೆ ಘೋಷಣೆ ಆದಂದಿನಿಂದಲೂ ಇಲ್ಲಿನ ಚುನಾವಣಾ ಕಣದಲ್ಲಿ ಈ ಇಬ್ಬರು ಮುಖಂಡರೇ ಕಾಣಿಸಿಕೊಳ್ಳುತ್ತಿದ್ದಾರೆ. ನಾಮಪತ್ರ ಸಲ್ಲಿಕೆ ಮತ್ತು ಹಿಂಪಡೆತದ ನಂತರ ಚುನಾವಣಾ ಪ್ರಚಾರ ರಂಗೇರುವ ಸಾಧ್ಯತೆ ಇದೆ.

ಪ್ರತಿಕ್ರಿಯಿಸಿ (+)