ಶನಿವಾರ, ಅಕ್ಟೋಬರ್ 19, 2019
27 °C

ಬೆಸುಗೆ ಯೋಗಿ

Published:
Updated:
ಬೆಸುಗೆ ಯೋಗಿ

ಬಸವನಗುಡಿಯ ಗಾಂಧೀಬಜಾರಿನಲ್ಲಿ ಓಡಾಡುವುದೆಂದರೆ ವಿಶಿಷ್ಟ ಅನುಭವ. ಮನೆಗೆ ಏನೆಲ್ಲ ಅಗತ್ಯವೋ ಅವೆಲ್ಲ ಇಲ್ಲಿ ಲಭ್ಯ, ಶ್ರಿಸಾಮಾನ್ಯನ ಶಾಪಿಂಗ್ ತಾಣ ಅದು. ಬಟ್ಟೆ ಬರೆ, ಪಾತ್ರೆ, ಒಡವೆ ವಿದ್ಯುತ್ ಸಲಕರಣೆಗಳು ಹೂವು, ತರಕಾರಿ, ಪೂಜಾ ಸಾಮಗ್ರಿಗಳು, ಕನ್ನಡಕ, ಕ್ಯಾಮರ, ಬೇಕರಿ.. ಎಲ್ಲವೂ ಕೆಲವೇ ಮಾರುಗಳ ಅಡ್ಡಾಟದಲ್ಲಿ. ದಣಿವಾದರೆ ಶರಬತ್ತು, ಕಾಫಿ ತಿಂಡಿ ಸೇವನೆಗೆ ಹೆಸರುವಾಸಿಯಾದ ಮುಂಗಟ್ಟು, ಫಲಾಹಾರ ಮಂದಿರಗಳು. ಅಂದಹಾಗೆ, ಮುಖ್ಯರಸ್ತೆಯಲ್ಲಿ ಬಸ್ ನಿಲ್ದಾಣದ ಬಳಿ ಒಬ್ಬ ಕಾಯಕನಿಷ್ಠನನ್ನು ನೀವು ಗಮನಿಸದಿರಲು ಸಾಧ್ಯವೇ ಇಲ್ಲ. ಆತ ಮುನಿಯಪ್ಪ.ಕಳೆದ ಅರ್ಧ ಶತಮಾನದಿಂದಲೂ ಆತ ಇದೇ ರಸ್ತೆಯಲ್ಲಿ ತಾನಾಯಿತು ತನ್ನ ಕೆಲಸವಾಯಿತು ಎಂಬ ಶ್ರದ್ಧೆಯಿಂದ ಸ್ಟೌ ದುರಸ್ತಿ, ಪಾತ್ರೆ ಪಡಗಳಿಗೆ ಅಡಿಕಟ್ಟುವುದು, ಬೆಸುಗೆ ಹಾಕುವುದು, ಫಿಲ್ಟರ್ ರಿಪೇರಿ, ಕಲಾಯಿ ಹೀಗೆ ಬಗೆಬಗೆ ವಸ್ತುಗಳನ್ನು ಸರಿಪಡಿಸುವ ಯೋಗಿ, ಬೆಸುಗೆ ಜೋಗಿ. ಮುನಿಯಪ್ಪನ ಕೆಲಸದ ಗುಣಮಟ್ಟಕ್ಕೆ ಅವನ ಸುತ್ತ ಗಿಜಿಗಿಡುವ ಗಿರಾಕಿಗಳೇ ಸಾಕ್ಷಿ. ಈ ಮುಚ್ಚಳ ಸರಿಯಿಲ್ಲ, ಕಷಾಯ ಬೀಳೊಲ್ಲ ಎಂಬಂಥ ಚಿತ್ರ ವಿಚಿತ್ರ ದೂರುಗಳನ್ನೂ ಮುನಿಯಪ್ಪ ತನ್ನ ದೀರ್ಘ ಅನುಭವದಿಂದ ಪರಿಹರಿಸುತ್ತಾನೆ.ಮುನಿಯಪ್ಪ ಕೆಲವು ತಿಂಗಳ ತನಕವೂ ಅಂಗಡಿ ಬಾಗಿಲೊಂದರ ಮುಂದೆ ಹೇಗೋ ಬೀಡುಬಿಟ್ಟಿದ್ದ. ಆದರೆ ಆ ಅಂಗಡಿ ಮಾಲೀಕನಿಗೆ ತೆರವುಗೊಳಿಸುವ ಅನಿವಾರ್ಯತೆಯಾಯಿತು. ಹಾಗಾಗಿ ಸದ್ಯ ಬಸ್‌ಸ್ಟಾಪಿನ ಬಳಿ ರಸ್ತೆಯಂಚಿನಲ್ಲೇ ಬಿಡಾರ.ಆದರೂ ಅದೇ ಕಾಯಕ, ಅದೇ ಗುಣಮಟ್ಟ. ಎಂಬತ್ತರ ಸಮೀಪದಲ್ಲಿರುವ ಈತನಿಗೆ ಈಚೀಚೆಗೆ ಸರಿಯಾಗಿ ಕಣ್ಣೂ ಕಾಣುತ್ತಿಲ್ಲ. ಯಾವುದಾದರೂ ಸ್ವಯಂಸೇವಾ ಸಂಸ್ಥೆ ತನಗೊಂದು ಕುಟೀರ ನಿರ್ಮಿಸಿಕೊಟ್ಟೀತೆ ಎಂಬ ನಿರೀಕ್ಷೆಯನ್ನು ಮಾತ್ರ ಆತ ಇನ್ನೂ ಇಟ್ಟುಕೊಂಡಿದ್ದಾನೆ.

Post Comments (+)