ಗುರುವಾರ , ಮೇ 6, 2021
23 °C

ಬೆಸ್ಕಾಂ ಸಂಸ್ಥೆಯಿಂದ ವಿದ್ಯುತ್ ದರ ಹೆಚ್ಚಳ ಪ್ರಸ್ತಾವನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪ್ರತಿ ಯೂನಿಟ್ ವಿದ್ಯುತ್‌ಗೆ 73 ಪೈಸೆ ಹೆಚ್ಚಳ ಮಾಡಲು ಅನುಮತಿ ನೀಡಬೇಕು ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪೆನಿ (ಬೆಸ್ಕಾಂ) ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ (ಕೆಇಆರ್‌ಸಿ) ಮುಂದಿಟ್ಟ ಕೋರಿಕೆಗೆ ಸಾರ್ವಜನಿಕರು, ಸಣ್ಣ ಉದ್ದಿಮೆಗಳ ಸಂಘದಿಂದ ತೀವ್ರ ವಿರೋಧ ವ್ಯಕ್ತವಾಯಿತು.ವಿದ್ಯುತ್ ದರ ಏರಿಕೆ ಪ್ರಸ್ತಾವದ ಸಂಬಂಧ ಕೆಇಆರ್‌ಸಿ ಬೆಂಗಳೂರಿನಲ್ಲಿ ಬುಧವಾರ ಸಾರ್ವಜನಿಕರಿಂದ ಅಹವಾಲು ಆಲಿಸಿತು. ಸಣ್ಣ ಕೈಗಾರಿಕೆಗಳ ಸಂಘ, ರೈತ ಪ್ರತಿನಿಧಿಗಳು, ಗ್ರಾಹಕರ ಸಂಘಟನೆ ಪ್ರತಿನಿಧಿಗಳು ದರ ಏರಿಕೆ ಪ್ರಸ್ತಾವವನ್ನು ವಿರೋಧಿಸಿದರು.`ಬೆಸ್ಕಾಂ ತಪ್ಪು ಲೆಕ್ಕ ನೀಡಿ, ತಾನು ನಷ್ಟ ಅನುಭವಿಸುತ್ತಿರುವುದಾಗಿ ಹೇಳುತ್ತಿದೆ. ವಿದ್ಯುತ್ ದರ ಹೆಚ್ಚಳಕ್ಕೆ ಅವಕಾಶ ನೀಡಬಾರದು. ವಿವಿಧ ಮೂಲಗಳಿಂದ ಬೆಸ್ಕಾಂಗೆ ಅಪಾರ ಮೊತ್ತದ ಹಣ ಬರಬೇಕಿದೆ. ಆ ಹಣ ಬಾರದ ಕಾರಣ, ಸಂಸ್ಥೆಗೆ ಬೇರೆ ಬೇರೆ ಬಿಲ್ ಪಾವತಿ ಮಾಡುವುದು ಕಷ್ಟವಾಗುತ್ತಿದೆ. ಕೆಲವರು ಬೆಸ್ಕಾಂ ಮೇಲೆ ದಂಡವನ್ನೂ ವಿಧಿಸುತ್ತಿದ್ದಾರೆ~ ಎಂದು ರಾಜ್ಯ ಸಣ್ಣ ಉದ್ದಿಮೆಗಳ ಸಂಘದ (ಕಾಸಿಯಾ) ಪ್ರತಿನಿಧಿಗಳು ವಾದಿಸಿದರು.ದರ ಏರಿಕೆ ಪ್ರಸ್ತಾವನೆಯನ್ನು ವಿರೋಧಿಸಿ ವಾದ ಮಂಡಿಸಿದ ಕರ್ನಾಟಕ ವಿದ್ಯುತ್ ಗ್ರಾಹಕರ ವೇದಿಕೆಯ ಉಪಾಧ್ಯಕ್ಷ ಮಲ್ಲಪ್ಪ ಗೌಡ, `ಅಕ್ರಮ ವಿದ್ಯುತ್ ಸಂಪರ್ಕಗಳನ್ನು ಕಡಿದುಹಾಕುವ ನಿಟ್ಟಿನಲ್ಲಿ ಬೆಸ್ಕಾಂ ಸಾಕಷ್ಟು ಗಮನಹರಿಸಿಲ್ಲ. ಈ ಕುರಿತು ನಿಗಾ ವಹಿಸಿದ್ದರೆ, ಆದಾಯ ಸೋರಿಕೆ ತಡೆಗಟ್ಟಲು ಸಾಧ್ಯವಾಗುತ್ತಿತ್ತು. 2004ರಲ್ಲಿ ಹಾಳಾದ ಕೆಲವು ಟ್ರಾನ್ಸ್‌ಫಾರ್ಮರ್‌ಗಳನ್ನು ಇನ್ನೂ ಬದಲಾಯಿಸಿಲ್ಲ~ ಎಂದು ದೂರಿದರು.ರೈತ ಪ್ರತಿನಿಧಿ ಮಂಜುನಾಥ ಚಿಂತಾಮಣಿ ಮಾತನಾಡಿ, `ಬಚತ್ ಲ್ಯಾಂಪ್ ಯೋಜನೆಯಡಿ ಮಿತವಾಗಿ ವಿದ್ಯುತ್ ಬಳಸುವ ದೀಪಗಳು ಹಳ್ಳಿಗಳನ್ನು ತಲುಪಿಯೇ ಇಲ್ಲ. ಈ ಯೋಜನೆ ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ಬಂದಿದ್ದರೆ ವಿದ್ಯುತ್ ಬಳಕೆ ಈಗಿರುವುದಕ್ಕಿಂತ ಕಡಿಮೆ ಆಗಿರುತ್ತಿತ್ತು~ ಎಂದು ಹೇಳಿದರು. ಅಲ್ಲದೆ, ಬೆಸ್ಕಾಂ ಆರಂಭಿಸಿರುವ ಉಚಿತ ಸಹಾಯವಾಣಿಯ ಸಂಖ್ಯೆ ಬದಲಾಗಿ ಮೂರು ತಿಂಗಳಾದರೂ ಅದನ್ನು ಸಾರ್ವಜನಿಕರ ಗಮನಕ್ಕೆ ತರುವ ಪ್ರಯತ್ನ ನಡೆದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಬೆಸ್ಕಾಂ ವ್ಯಾಪ್ತಿಯ ಅನೇಕ ಹಳ್ಳಿಗಳಲ್ಲಿ ಅಂತರ್ಜಲ ತೀವ್ರ ಕುಸಿತ ಕಂಡಿದೆ. ಅನೇಕ ಕಡೆ ಪಂಪ್‌ಸೆಟ್ ಮೂಲಕ ನೀರೆತ್ತುವ ಕಾರ್ಯ ನಡೆಯುತ್ತಿಲ್ಲ. ರೈತರ ಪಂಪ್‌ಸೆಟ್‌ಗಳು ವಿದ್ಯುತ್ ಪೋಲು ಮಾಡುತ್ತಿಲ್ಲ ಎಂದು ಕೆಲ ರೈತ ಪ್ರತಿನಿಧಿಗಳು ವಾದಿಸಿದರು.ವೆಬ್‌ಸೈಟ್‌ನಲ್ಲಿ ಅರ್ಜಿ: ಬೆಸ್ಕಾಂನ ವಿವಿಧ ಅರ್ಜಿ ನಮೂನೆಗಳನ್ನು ವೆಬ್‌ಸೈಟ್‌ನಲ್ಲಿ ದೊರೆಯುವ ವ್ಯವಸ್ಥೆಯನ್ನು ಶೀಘ್ರ ಕಲ್ಪಿಸಲಾಗುವುದು ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಪಿ. ಮಣಿವಣ್ಣನ್ ಆಯೋಗಕ್ಕೆ ಭರವಸೆ ನೀಡಿದರು. ಅಲ್ಲದೆ, ವಿದ್ಯುತ್ ಪೋಲಾಗದಂತೆ ನಿಗಾ ವಹಿಸುವ ಸಂಬಂಧ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಆಯೋಜಿಸುವುದಾಗಿ ಅವರು ತಿಳಿಸಿದರು.ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅಧಿಕಾರಿಗಳು ವಾದ ಮಂಡಿಸಿ, `ಇಲಾಖೆಯ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿ ನಡೆಯುವ ಕುಡಿಯುವ ನೀರಿನ ಪೂರೈಕೆ ಮತ್ತು ಬೀದಿ ದೀಪಗಳ ವಿದ್ಯುತ್ ಶುಲ್ಕ ಬಾಕಿಗೆ ಬಡ್ಡಿ ವಿಧಿಸಬಾರದು~ ಎಂದು ಮನವಿ ಮಾಡಿದರು.ಆಯೋಗದ ಅಧ್ಯಕ್ಷ ಎಂ.ಆರ್. ಶ್ರೀನಿವಾಸಮೂರ್ತಿ,  ಸದಸ್ಯರಾದ ವಿ. ಹಿರೇಮಠ ಮತ್ತು ಕೆ. ಶ್ರೀನಿವಾಸ ರಾವ್ ಅಹವಾಲು ಆಲಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.