ಮಂಗಳವಾರ, ಮಾರ್ಚ್ 2, 2021
24 °C

ಬೇಂದ್ರೆ ಸಾಂಸ್ಕೃತಿಕ ಡಾನ್‌: ಚಂಪಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೇಂದ್ರೆ ಸಾಂಸ್ಕೃತಿಕ ಡಾನ್‌: ಚಂಪಾ

ಬೆಂಗಳೂರು: ‘ದ.ರಾ.ಬೇಂದ್ರೆ ಅವರು ತಾವು ಬೆಳೆದಂತೆ ಉಳಿದವರನ್ನು ಬೆಳೆಯಲು ಬಿಡಲಿಲ್ಲ. ಅವರು ಸಾಂಸ್ಕೃತಿಕ ಡಾನ್‌ ಆಗಿ ಬೆಳೆದರು’ ಎಂದು ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ ಹೇಳಿದರು.ಹೊಂಬಾಳೆ ಪ್ರತಿಭಾರಂಗವು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಯನ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ‘ಕವಿದನಿ’ ಬೆಟಗೇರಿ ಕೃಷ್ಣಶರ್ಮ ಅವರ ಕವಿತೆಗಳ ಓದು–ಗಮಕ–ಗಾಯನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.‘ಬೇಂದ್ರೆ ಉತ್ತರ ಕರ್ನಾಟಕ ಭಾಗದ ದೊಡ್ಡ ಕವಿ. ಆದರೆ, ಕವಿ ವ್ಯಕ್ತಿತ್ವಕ್ಕೆ ತಕ್ಕಂತೆ ಹೃದಯವಂತಿಕೆ ಇರಲಿಲ್ಲ. ದೊಡ್ಡ ಕವಿ ತಾನು ಬೆಳೆಯುವ ಜತೆಗೆ ಉಳಿದವರು ಬೆಳೆಯಲು ಬೇಕಾದ ಪರಿಸರವನ್ನು ನಿರ್ಮಿಸುತ್ತಾನೆ. ಆದರೆ, ಬೇಂದ್ರೆ ಅವರು ತಾವು ಮಾತ್ರ ಬೆಳೆದರು. ಉಳಿದವರನ್ನು ತಮ್ಮ ಎತ್ತರಕ್ಕೆ ಬೆಳೆಯಲು ಬಿಡಲಿಲ್ಲ. ಬೆಳೆಯಬೇಕಾದವರನ್ನು ಹತ್ತಿಕ್ಕಲು ಬಹಳ ಪ್ರಯತ್ನಪಟ್ಟಿದ್ದರು’ ಎಂದು ದೂರಿದರು.‘ಬೆಟಗೇರಿ ಕೃಷ್ಣಶರ್ಮ, ಸಾಲಿ ರಾಮಚಂದ್ರರಾಯರು ನೈಜ ಕವಿಗಳು. ಅವರು ಬೆಳೆಯದಿರಲು ಅಥವಾ ಬೆಳೆದಿದ್ದು ಗೊತ್ತಾಗದಿರಲು ಬೇಂದ್ರೆ ಮುಂತಾದವರ ಸಾಂಸ್ಕೃತಿಕ ರಾಜಕಾರಣ ಮುಖ್ಯವಾಗಿತ್ತು’ ಎಂದರು.‘ಬೇಂದ್ರೆ ಅವರನ್ನು ನೇರವಾಗಿ ಎದುರಿಸಿದವರು ಶಂ.ಬಾ. ಜೋಷಿ. ಇಬ್ಬರ ನಡುವೆ ಅನೇಕ ರೀತಿಯ ಘರ್ಷಣೆಗಳು ನಡೆದಿದ್ದವು. ಇವರು ವಾಚಕರ ವಾಣಿಗಳ ಮೂಲಕ ಜಗಳವಾಡುತ್ತಿರಲಿಲ್ಲ. ಸಭೆಗಳಲ್ಲಿ ಭಾಗವಹಿಸಿದ್ದಾಗ ಇಬ್ಬರೂ ಎದ್ದು ನಿಂತು ತೋಳು ಏರಿಸಿ ಜಗಳವಾಡುತ್ತಿದ್ದರು’ ಎಂದು ನೆನಪು ಮಾಡಿಕೊಂಡರು.‘ಸುಗಮ ಸಂಗೀತದ ಕಲಾವಿದರು ಮಾಡಿದ ಕೆಟ್ಟ ಕೆಲಸ ಎಂದರೆ, ಕ್ರಾಂತಿಕಾರಿ ಗೀತೆಗಳನ್ನು ರಾಗವಾಗಿ ಹಾಡಿ ಅದರ ಮೊನಚನ್ನು ಕಡಿಮೆ ಮಾಡಿದರು. ಸಿಟ್ಟು, ನೋವು, ಅಕ್ರೋಶ, ವ್ಯಂಗ್ಯದ ಪದ್ಯಗಳನ್ನು ಸುಗಮ ಸಂಗೀತದ ಪರಿಧಿಗೆ ತರುವ ಪ್ರಯತ್ನ ಮಾಡಿದರು’ ಎಂದು ಬೇಸರ ವ್ಯಕ್ತಪಡಿಸಿದರು.ಬೆಳಗಾವಿಯ ಬೆಟಗೇರಿ ಕೃಷ್ಣಶರ್ಮ ಸ್ಮಾರಕ ಪ್ರತಿಷ್ಠಾನದ ಅಧ್ಯಕ್ಷ ಪ್ರೊ. ರಾಘವೇಂದ್ರ ಪಾಟೀಲ ಮಾತನಾಡಿ, ‘ಆನಂದಕಂದ ಎಂಬ ಕಾವ್ಯನಾಮದಿಂದ ಪ್ರಸಿದ್ಧರಾದ ಕೃಷ್ಣಶರ್ಮರು ಜೀವನವಿಡೀ ಬಡತನದಿಂದ ಬದುಕಿದವರು. ಅವರು ಓದಿದ್ದು ಏಳನೇ ತರಗತಿಯಾದರೂ, ಸಾಹಿತ್ಯವನ್ನು ಆಳವಾಗಿ ಅಧ್ಯಯನ ಮಾಡಿದ್ದರು. ಅವರು ಜನಪದ ಸಂಗ್ರಹದ ಆರಂಭಿಕರು. ಕೆರೆಗೆಹಾರ ಕಥನ ಕಾವ್ಯವನ್ನು ಸಂಗ್ರಹಿಸಿ ಪ್ರಕಟಿಸಿದ್ದರು’ ಎಂದು ಹೇಳಿದರು.ಚಂಪಾ ಅವರು  ಆನಂದಕಂದರ ‘ದೇವರಿಗೆಂಥ ದೊಡ್ಡಸ್ತಿಕೆ ಬಿಡೋ, ನನ್ನ ದೊರೆಯ ಮೇಲೆ’, ಲೇಖಕಿ ಭಾರತಿ ಕಾಸರಗೋಡು  ‘ಅಮ್ಮ ಊಟಕ್ಕೆ ಒಲ್ಲೆನು ಕರೆಯದಿರು’ ಕವನಗಳ ವಾಚಿಸಿದರು.ಗಾಯಕ ಗಣೇಶ್‌ ದೇಸಾಯಿ ಹಾಗೂ ಮಂಜುನಾಥ್‌ ಭಟ್‌ ಅವರು ಆನಂದಕಂದರ ಕವಿತೆಗಳಿಗೆ ಗಾಯನ ಹಾಗೂ ಗಮಕವನ್ನು ಪ್ರಸ್ತುತಪಡಿಸಿದರು. ಎಸ್‌.ಮಧುಸೂದನ್‌, ಎಲ್‌.ಎನ್‌. ವಸಂತಕುಮಾರ್‌ ಅವರು ವಾದ್ಯ ಸಹಕಾರ ನೀಡಿದರು.***

ದೊಡ್ಡ ಕವಿ ತಾನು ಬೆಳೆಯುವ ಜತೆಗೆ ಉಳಿದವರು ಬೆಳೆಯಲು ಬೇಕಾದ ಪರಿಸರವನ್ನು ನಿರ್ಮಿಸುತ್ತಾನೆ. ಆದರೆ, ಬೇಂದ್ರೆ ಅವರು ತಾವಷ್ಟೇ ಬೆಳೆದರು

ಪ್ರೊ.ಚಂದ್ರಶೇಖರ ಪಾಟೀಲ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.