ಶನಿವಾರ, ಜೂನ್ 19, 2021
26 °C

ಬೇಕಲ್‌ಗೂ ಬಂತು ತಾಜ್ ಹೋಟೆಲ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಾಜ್ ಹೋಟೆಲ್ ಸಮೂಹದ ನೂತನ ವಿವಾಂತಾ ಸ್ಪಾ ರೆಸಾರ್ಟ್ ಕಾಸರಗೋಡು ಸಮೀಪದ ಬೇಕಲದಲ್ಲಿ ಆರಂಭವಾಗಿದೆ. 73 ಐಷಾರಾಮಿ ಕೊಠಡಿಗಳು, ವಿಲ್ಲಾಗಳು ಮತ್ತು ಸೂಟ್‌ಗಳನ್ನು ಹೊಂದಿರುವ ಇಲ್ಲಿನ ಜಿವಾ ಗ್ರಾಂಡ್ ಸ್ಪಾ ಮತ್ತು ಆಯುರ್ವೇದ ಆರೈಕೆ ಪ್ರಮುಖ ಆಕರ್ಷಣೆ. ಬೇಕಲ್ ಕೋಟೆ ಕಡಲ ತೀರದ ಸಹಜ ಸೌಂದರ್ಯಕ್ಕೆ ಅದ್ದೂರಿಯ ಸೊಬಗನ್ನು ತಂದಿದೆ ಈ ಹೋಟೆಲ್.ತಾಜ್‌ನ ವಿವಾಂತಾ ಹೋಟೆಲ್ ಬ್ರ್ಯಾಂಡ್ ಈಗಾಗಲೇ ಖ್ಯಾತವಾಗಿದ್ದು, ಕೇರಳದಲ್ಲಿ ಸ್ಥಾಪನೆಯಾಗಿರುವ 5ನೇ ವಿವಾಂತಾ ಹೋಟೆಲ್ ಇದು. ಈ ಮೂಲಕ ಒಟ್ಟಾರೆಯಾಗಿ ದೇಶದಲ್ಲಿ ತಾಜ್ ಸಮೂಹದ 24 ಹೋಟೆಲ್‌ಗಳು ಆರಂಭವಾದಂತಾಗಿದೆ. 110 ವರ್ಷಗಳ ಇತಿಹಾಸ ಇರುವ ತಾಜ್ ಹೋಟೆಲ್ ಸಮೂಹ ಪ್ರವಾಸಿ  ನಕಾಶೆಯಲ್ಲಿ ದೊಡ್ಡದಾಗಿ ಗುರುತಿಸಿಕೊಳ್ಳದ ಸ್ಥಳಗಳನ್ನೂ ಆರಿಸಿಕೊಂಡು ಅದನ್ನು ಪ್ರವಾಸಿಗರಿಗೆ ದೊಡ್ಡದಾಗಿ ಪರಿಚಯಿಸುವಂತಹ ಕಾರ್ಯ ನಡೆಸುತ್ತಿದ್ದು, ಬೇಕಲ್‌ದಲ್ಲಿ ಹೋಟೆಲ್ ಸ್ಥಾಪಿಸಿರುವುದು ಅದಕ್ಕೊಂದು ನಿದರ್ಶನ ಎಂಬಂತಿದೆ.ಒಳಗಿನವರಿಗೇ ಆದ್ಯತೆ

ಭಾರತೀಯ ಕಂಪೆನಿಗಳು ಸಿಇಒ ಹುದ್ದೆಯನ್ನು ಸಾಮಾನ್ಯವಾಗಿ ತಮ್ಮಲ್ಲಿ ಕೆಲಸ ಮಾಡಿದವರಿಗೇ ನೀಡುವ ಮೂಲಕ ಶ್ರದ್ಧೆ, ದಕ್ಷತೆಯಿಂದ ಕೆಲಸ ಮಾಡಿದರೆ ಉನ್ನತ ಹುದ್ದೆ ನಿಶ್ಚಿತ ಎಂಬ ಸಂದೇಶ ಸಾರುತ್ತಿವೆ. ಇದರಿಂದ ಸಹಜವಾಗಿಯೇ ಕಂಪೆನಿಯಲ್ಲಿ ಕೆಳ ಮಟ್ಟದ ಹುದ್ದೆಗಳಲ್ಲಿ ಇರುವವರು ಇನ್ನಷ್ಟು ಉತ್ಸಾಹದಿಂದ ಕೆಲಸ ಮಾಡುವಂತಾಗುತ್ತದೆ ಎಂದು ಜಾಗತಿಕ ಮ್ಯಾನೇಜ್‌ಮೆಂಟ್ ಸಲಹಾ ಸಂಸ್ಥೆ ಹೇ ಗ್ರೂಪ್ ವಿಶ್ಲೇಷಿಸಿದೆ.ಯಾಹೂ, ಎಚ್‌ಪಿಯಂತಹ ಜಾಗತಿಕ ಕಂಪೆನಿಗಳು ತಮ್ಮ ಉನ್ನತ ಹುದ್ದೆಗಳನ್ನು ಸಾಮಾನ್ಯವಾಗಿ ಹೊರಗಿನವರಿಗೆ ನೀಡುತ್ತವೆ. ಆದರೆ, ಭಾರತದಲ್ಲಿ ಟಾಟಾ, ಎಲ್‌ಆ್ಯಂಡ್‌ಟಿ ಸಹಿತ ಪ್ರಮುಖ ಕಂಪೆನಿಗಳಲ್ಲಿನ ಉನ್ನತ ಹುದ್ದೆಗಳನ್ನು ಈ ಕಂಪೆನಿಗಳಲ್ಲಿ ಶ್ರಮಿಸಿದವರಿಗೇ ನೀಡಿದ್ದನ್ನು ಉಲ್ಲೇಖಿಸಿ ಈ ಅಭಿಪ್ರಾಯಕ್ಕೆ ಬರಲಾಗಿದೆ.

ಕ್ರೆಡಿಟ್ ಕಾರ್ಡ್: ವಂಚನೆ ಇಳಿಮುಖ

ಕ್ರೆಡಿಟ್ ಕಾರ್ಡ್‌ಗಳ ಬಳಕೆ ಹೆಚ್ಚಿದಂತೆ ಅದನ್ನು ಬಳಸಿ ವಂಚಿಸುವ ಪ್ರಮಾಣವೂ ಹೆಚ್ಚುತ್ತಿದೆ ಎಂಬುದು ಸಾರ್ವಕಾಲಿಕ ಸತ್ಯ ಮಾತು ಅಂದುಕೊಳ್ಳಬೇಡಿ, ಯಾಕೆಂದರೆ, ಎರಡು ವರ್ಷದ ಹಿಂದೆ ವಂಚನೆಯ ಪ್ರಕರಣಗಳ ಸಂಖ್ಯೆ 20,806ರಷ್ಟಿದ್ದುದು 2011ರಲ್ಲಿ 7,300ಕ್ಕೆ ಇಳಿದಿದೆ!ಆರ್‌ಬಿಐ ನೀಡಿದ ಮಾಹಿತಿ ಪ್ರಕಾರ 2009ರಲ್ಲಿ 20,806 ಕ್ರೆಡಿಟ್ ಕಾರ್ಡ್‌ಗಳಿಂದ ರೂ 61  ಕೋಟಿಗಳಷ್ಟು ಮೊತ್ತದ ವಂಚನೆ ನಡೆದಿತ್ತು. ಆದರೆ, ಕಳೆದ ವರ್ಷ 7,300 ಕ್ರೆಡಿಟ್ ಕಾರ್ಡ್‌ಗಳಿಂದ  ರೂ 21.79 ಕೋಟಿಗಳಷ್ಟು ಮೊತ್ತದ ವಂಚನೆಯಷ್ಟೇ ನಡೆದಿದೆ. ವಂಚನೆಯ ಪ್ರಮಾಣವನ್ನು ಇನ್ನಷ್ಟು ತಗ್ಗಿಸುವ ನಿಟ್ಟಿನಲ್ಲಿ ಕ್ರೆಡಿಟ್ ಕಾರ್ಡ್‌ಗಳಲ್ಲಿನ ಮ್ಯಾಗ್ನೆಟಿಕ್ ಸ್ರೈಪ್ ಬದಲಿಗೆ ಚಿಪ್ ಆಧರಿತ ಕಾರ್ಡ್ ಬಳಸಬಹುದು ಎಂದೂ `ಆರ್‌ಬಿಐ~ ಸಲಹೆ ನೀಡಿದೆ.ಸಿನಿಮಾ ಉದ್ಯಮ

 ದೇಶದಲ್ಲಿ ಸಿನಿಮಾ ಟಿಕೆಟ್‌ಗಳ ಮಾರಾಟ ಗರಿಷ್ಠ ಪ್ರಮಾಣದಲ್ಲಿ ಇದೆ. ಎರಡು ವರ್ಷದಲ್ಲಿ ಈ ಉದ್ಯಮವು 25,000 ಕೋಟಿಗಳಷ್ಟು ಬೃಹತ್ ಪ್ರಮಾಣದಲ್ಲಿ ಬೆಳೆಯಲಿದೆ. ದೇಶದಲ್ಲಿ ಪ್ರತಿ ವರ್ಷ 330 ಕೋಟಿ ಸಿನಿಮಾ ಟಿಕೆಟ್‌ಗಳು ಮಾರಾಟವಾಗುತ್ತಿವೆ. ಭಾರತೀಯ ಆರ್ಥಿಕ ರಂಗಕ್ಕೆ ಸಿನಿಮಾ ಉದ್ಯಮದಿಂದ ವಾರ್ಷಿಕ 3200 ಕೋಟಿಗಳ ಕೊಡುಗೆ ನೀಡುತ್ತಿದೆ..!ಈ ಮಾಹಿತಿ ನೀಡಿದವರು ಮೋಷನ್ ಪಿಕ್ಚರ್ ಅಸೋಸಿಯೇಷನ್ ಆಫ್ ಅಮೆರಿಕದ (ಎಂಪಿಎಎ) ಅಧ್ಯಕ್ಷ ಮತ್ತು ಸಿಇಒ ಕ್ರಿಸ್ ಡಾಡ್. ಮುಂಬೈಯಲ್ಲಿ ಇತ್ತೀಚೆಗೆ ಭಾರತೀಯ ಮಾಧ್ಯಮ ಮತ್ತು ಮನರಂಜನಾ ಉದ್ಯಮದ ಮೇಲೆ ನಡೆಯುವ ವಾರ್ಷಿಕ `ಫಿಕ್ಕಿ ಫ್ರೇಮ್ಸ 2012~ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಭಾರತೀಯ ಸಿನಿಮಾ ರಂಗದ ವ್ಯಾಪ್ತಿಯನ್ನು ವಿಶ್ಲೇಷಿಸಿದ್ದು ಮಾತ್ರವಲ್ಲ, ಭಾರತದೊಂದಿಗೆ ಸಹಭಾಗಿತ್ವ ಸಾಧಿಸಿದರೆ ಅಮೆರಿಕಕ್ಕೆ ಸಹ ಅನುಕೂಲ ಎಂದರು. ಸಿನಿಮಾ ನಿರ್ಮಾಣ ಮತ್ತು ವಿತರಣೆಗೆ ಸಂಬಂಧಿಸಿದಂತೆ ಇರುವ ಅಡ್ಡಿಗಳನ್ನು ನಿವಾರಿಸುವ ಅಗತ್ಯ ಇದೆ ಎಂಬುದನ್ನು ಅವರು ಒತ್ತಿ ಹೇಳಿದ್ದರು. ಸಿನಿಮಾ ರಂಗದಲ್ಲಿನ ನಕಲಿ ಹಾವಳಿ (ಪೈರಸಿ) ಬಗ್ಗೆಯೂ ಅವರು ಗಮನ ಸೆಳೆದಿದ್ದರು. ಪೈರಸಿಯಿಂದ ದೇಶಿ ಸಿನಿಮಾ ಪ್ರತಿ ವರ್ಷ ಕೋಟ್ಯಂತರ ರೂಪಾಯಿಗಳ ವರಮಾನ  ಕಳೆದುಕೊಳ್ಳುತ್ತಿದೆ ಎಂದು ಅವರು ವಿಶ್ಲೇಷಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.