ಸೋಮವಾರ, ಆಗಸ್ಟ್ 19, 2019
28 °C

ಬೇಕಾಬಿಟ್ಟಿ ಶೌಚಾಲಯ: ನೀಗದ ಸಮಸ್ಯೆ

Published:
Updated:
ಬೇಕಾಬಿಟ್ಟಿ ಶೌಚಾಲಯ: ನೀಗದ ಸಮಸ್ಯೆ

ಗಜೇಂದ್ರಗಡ: ಗ್ರಾಮೀಣ ಪ್ರದೇಶದ `ಮಹಿಳಾ ಸಮುದಾಯ ಶೌಚಾಲಯ'ಗಳು ಬೇಕಾಬಿಟ್ಟಿ ನಿರ್ಮಾಣದ ಶಾಪಕ್ಕೆ ಸಿಲುಕಿವೆ. ಸರ್ಕಾರದ ಗ್ರಾಮ ನೈರ್ಮಲ್ಯ ಕನಸು ಕನಸಾಗಿಯೇ ಉಳಿದಿದೆ. ಹೀಗಾಗಿ ಗ್ರಾಮೀಣ ಪ್ರದೇಶಗಳ ಮಹಿಳೆಯರಿಗೆ ಜಾಲಿಪೊದೆಗಳೇ ಸಮುದಾಯ ಶೌಚಾಲಯ!ಬಯಲು ಬಹಿರ್ದೆಸೆಗೆ ಶಾಶ್ವತ ತಿಲಾಂಜಲಿ ಹಾಡುವ ನಿಟ್ಟಿನಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಸಾಕಷ್ಟು ಶ್ರಮಿಸಿವೆ. ಇದಕ್ಕಾಗಿ ಮಹತ್ವಾಕಾಂಕ್ಷಿ ಯೋಜನೆಗಳನ್ನು ಜಾರಿಗೊಳ್ಳುತ್ತಲೇ ಇವೆ. ಆದರೆ ಬೇಕಾಬಿಟ್ಟಿ `ಸಮುದಾಯ ಶೌಚಾಲಯ'ಗಳ ನಿರ್ಮಾಣದಿಂದಾಗಿ ಸರ್ಕಾರದ ಉದ್ದೇಶಗಳು ಇಂದಿಗೂ ಸಫಲವಾಗಿಲ್ಲ.ಇದಕ್ಕೆ ಪಷ್ಟಿ ಎನ್ನುವಂತೆ ರೋಣ ತಾಲ್ಲೂಕಿನ ಮುಶಿಗೇರಿ, ಕೊಡಗಾನೂರ, ಸೂಡಿ, ರಾಜೂರ, ಲಕ್ಕಲಕಟ್ಟಿ, ನಾಗೇಂದ್ರಗಡ, ಕಲ್ಲಿಗನೂರ, ಇಟಗಿ, ಹಿರೇ ಅಳಗುಂಡಿ, ಚಿಕ್ಕ ಅಳಗುಂಡಿ, ಗೋಗೇರಿ, ರಾಮಾಪುರ, ಕುಂಟೋಜಿ ಸೇರಿದಂತೆ ತಾಲ್ಲೂಕಿನ 30 ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯ 97 ಗ್ರಾಮಗಳ 575 `ಮಹಿಳಾ ಸಮುದಾಯ ಶೌಚಾಲಯ'ಗಳು ಅವೈಜ್ಞಾನಿಕವಾಗಿ ನಿರ್ಮಾಣಗೊಂಡಿವೆ.ಪರಿಣಾಮ 2,47,645 ಮಹಿಳೆಯರಿಗೆ ಜಾಲಿ ಪೊದೆಗಳನ್ನೇ ಬಹಿರ್ದೆಸೆ ತಾಣಗಳನ್ನಾಗಿಸಿಕೊಂಡಿರುವುದು ಶೌಚಾಲಯಗಳ ವೈಜ್ಞಾನಿಕತೆಯನ್ನು ಪ್ರಶ್ನಿಸುವಂತಾಗಿದೆ. ಇಲಾಖೆಯ ಅಂಕಿ-ಅಂಶದ ಪ್ರಕಾರ 1992 ರಲ್ಲಿ ಗ್ರಾಮೀಣ ನೈರ್ಮಲ್ಯ ಯೋಜನೆಯಡಿ 24,12,256 ರೂಪಾಯಿ ವೆಚ್ಚದಲ್ಲಿ ಮುಶಿಗೇರಿ, ಸೂಡಿ, ಅಬ್ಬಿಗೇರಿ, ಜಕ್ಕಲಿ ಮುಂತಾದ ಗ್ರಾಮಗಳಲ್ಲಿ 64 ಮಹಿಳಾ ಸಮುದಾಯ ಶೌಚಾಲಯಗಳು ನಿರ್ಮಾಣಗೊಂಡವು. 1997 ರಲ್ಲಿ 26,11,985 ರೂಪಾಯಿ ವೆಚ್ಚದಲ್ಲಿ ವಿವಿಧ ಗ್ರಾಮಗಳಲ್ಲಿ 76 ಮಹಿಳಾ ಸಮುದಾಯ ಶೌಚಾಲಯಗಳು ನಿರ್ಮಾಣಗೊಂಡವು. 2001ರಲ್ಲಿ 28,14,658 ವೆಚ್ಚದಲ್ಲಿ ತಾಲ್ಲೂಕಿನಾದ್ಯಂತ 86 ಶೌಚಾಲಯ ನಿರ್ಮಾಣಗೊಂಡವು. 2005 ರಿಂದ 2012 ರ ವರೆಗೆ ಸಂಪೂರ್ಣ ಸ್ವಚ್ಛತಾ ಆಂದೋಲನ ಯೋಜನೆಯಡಿಯಲ್ಲಿ ತಾಲ್ಲೂಕಿ ಗ್ರಾಮೀಣ ಪ್ರದೇಶಗಳಲ್ಲಿ 4.1 ರೂಪಾಯಿ ಕೋಟಿ ವೆಚ್ಚದಲ್ಲಿ  299 ಮಹಿಳಾ ಸಮುದಾಯ ಶೌಚಾಲಯ ನಿರ್ಮಾಣಗೊಂಡವು. 2012-13ರಲ್ಲಿ 45 ಶೌಚಾಲಯ ನಿರ್ಮಾಣಗೊಂಡವು.ಆದರೆ, ತಾಲ್ಲೂಕಿನ ಗ್ರಾಮೀಣ ಪ್ರದೇಶದಲ್ಲಿರುವ 575 ಶೌಚಾಲಯಗಳು ಅವೈಜ್ಞಾನಿಕವಾಗಿ  ನಿರ್ಮಾಣಗೊಂಡ ಪರಿಣಾಮವೇ ಕೋಟ್ಯಂತರ ಅನುದಾನದ ವೆಚ್ಚದಲ್ಲಿ ನಿರ್ಮಾಣಗೊಂಡ ಈ ಶೌಚಾಲಯಗಳು ಮಹಿಳಾ ಬಹಿರ್ದೆಸೆಯಿಂದ ದೂರ ಉಳಿದಿವೆ.ಬೇಕಾಬಿಟ್ಟಿ ನಿರ್ಮಾಣ: ಶೌಚಾಲಯ ನಿರ್ಮಾಣಕ್ಕೆ ಸ್ಥಳ ಯೋಗ್ಯವಾಗಿದೆಯೇ ಎಂಬುದನ್ನು ಪರಾಮರ್ಶಿಸದ ಸ್ಥಳೀಯ ಆಡಳಿತಗಳು ಆತುರಕ್ಕೆ ಬಿದ್ದು  ಗ್ರಾಮದ ಮಧ್ಯ, ಶಾಲೆಗಳ ಅಕ್ಕ-ಪಕ್ಕ, ಸಾರಿಗೆ ನಿಲ್ದಾಣದ ಪಕ್ಕ ಹೀಗೆ ಜನ ಜಂಗುಳಿ ಇರುವ ಪ್ರದೇಶಗಳಲ್ಲಿಯೇ ನಿರ್ಮಿಸುತ್ತಿವೆ. ಜತೆಗೆ ಶೌಚಾಲಯ ನಿರ್ಮಾಣ ಕಾರ್ಯದಲ್ಲಿನ ಕುರುಡು ಕಾಂಚಾಣ ಜೇಬಿಗೇರಿಸಿಕೊಳ್ಳುವ ಭರದಲ್ಲಿ ಕಿಷ್ಕಿಂದೆಯಂತಹ ಶೌಚಾಲಯಗಳನ್ನು ನಿರ್ಮಿಸಿದ್ದೂ ಮಹಿಳೆಯರು ಬಹಿರ್ದೆಸೆಗೆ ಶೌಚಾಲಯಗಳನ್ನು ತಿರಸ್ಕರಿಸಲು ಕಾರಣ.ಅಸಮರ್ಪಕ ನಿರ್ವಹಣೆ: ಗ್ರಾಮೀಣ ಪ್ರದೇಶಗಳಲ್ಲಿನ ಮಹಿಳಾ ಸಮುದಾಯ ಶೌಚಾಲಯಗಳ ಅಮರ್ಪಕ ನಿರ್ವಹಣೆಯೂ ಮಹಿಳೆಯರ ತಿರಸ್ಕಾರಕ್ಕೆ ಪ್ರಮುಖ ಕಾರಣ.  ಗ್ರಾಮೀಣ ಪ್ರದೇಶಗಳಲ್ಲಿನ ಶೇ. 97 ರಷ್ಟು ಶೌಚಾಲಯಗಳಲ್ಲಿ ಜಾಲಿಗಳು ಬೆಳೆದಿವೆ. ಶೌಚಾಲಯಗಳ ಕೆಲ ಭಾಗದಲ್ಲಿನ ಗಲೀಜು ಸಾಗಿ ಹೋಗಲು ವ್ಯವಸ್ಥಿತ ಮಾರ್ಗವಿಲ್ಲ. ಹೀಗಾಗಿ ಶೌಚಾಲಯಗಳು ಕನಿಷ್ಠ 0.5 ಕಿ.ಮೀ ವಿಸ್ತೀರ್ಣನಾದ್ಯಂತ ದುರ್ನಾತ ಬೀರುತ್ತಿವೆ. ಇವುಗಳ ಆಸು-ಪಾಸು ಮೂಗು ಮುಚ್ಚಿಕೊಂಡೇ ಸಂಚರಿಸಬೇಕು. ಹೀಗಾಗಿಯೇ ಮಹಿಳೆಯರು ಶೌಚಾಲಯಗಳಿಂದ ದೂರ ಉಳಿಯುತ್ತಿದ್ದಾರೆ.`ನಮ್ಮ ಅಧಿಕಾರಾವಧಿಯಲ್ಲಿ ವೈಜ್ಞಾನಿಕ ಮಹಿಳಾ ಸಮುದಾಯ ಶೌಚಾಲಯ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ. ಅವುಗಳ ನಿರ್ವಹಣೆಯ ಹೊಣೆ ಹೊತ್ತಿರುವ ಸ್ಥಳೀಯ ಆಡಳಿತ ಸಮರ್ಪಕ ಕಾರ್ಯನಿರ್ವಹಿಸಬೇಕು' ಎನ್ನುತ್ತಾರೆ ಮಾಜಿ ಸಚಿವ ಕಳಕಪ್ಪ ಬಂಡಿ.

 

Post Comments (+)