ಗುರುವಾರ , ಮೇ 13, 2021
40 °C

ಬೇಗಾರು: ರಸ್ತೆ ಡಾಂಬರೀಕರಣಕ್ಕೆ ಅಡ್ಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶೃಂಗೇರಿ: ತಾಲ್ಲೂಕಿನ ಬೇಗಾರು ಗ್ರಾಮ ಪಂಚಾಯಿತಿಯ ಮೀಗ ಗ್ರಾಮದ ಶಂಕರಕೊಪ್ಪ ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಡಾಂಬರೀಕರಣಕ್ಕೆ ಖಾಸಗಿ ವ್ಯಕ್ತಿಯೊಬ್ಬರು ಅಡ್ಡಿಪಡಿಸಿದ ಕಾರಣ ಕಂದಾಯ ಇಲಾಖೆ ಅಧಿಕಾರಿಗಳ ಸಮಕ್ಷದಲ್ಲಿ ಬುಧವಾರ ಸಮೀಕ್ಷೆ ನಡೆಸಲಾಯಿತು.ಮೀಗ ಗ್ರಾಮದ ಶಂಕರಕೊಪ್ಪ, ಮರೂರು, ತಲವಂತಿ, ಬೆಲಗೋಡುಕುಡಿಗೆ ಹಳ್ಳಿಗಳಿಂದ ಬೋಳೂರು ಕಿಗ್ಗ ಮುಖ್ಯ ರಸ್ತೆಗೆ ಸಂಪರ್ಕ ಕಲ್ಪಿಸುವ ಜಲ್ಲಿ ರಸ್ತೆಯನ್ನು ಜಿಲ್ಲಾ ಪಂಚಾಯಿತಿ ವತಿಯಿಂದ ಡಾಂಬರೀಕರಣ ಮಾಡಲು ಕಾಮಗಾರಿ ಆರಂಭಿಸಲಾಗಿತ್ತು. ಸುಮಾರು 20 ವರ್ಷಗಳಿಂದ ಗ್ರಾಮಸ್ಥರು ಈ ರಸ್ತೆ ಮೂಲಕ ಸಂಚರಿಸುತ್ತಿದ್ದು, ಕಳೆದ ಸಾಲಿನಲ್ಲಿ ಸದರಿ ರಸ್ತೆಗೆ ಜಲ್ಲಿ ಹಾಕಲಾಗಿತ್ತು. ಆದರೆ ಇದೀಗ ಡಾಂಬರೀಕರಣ ಆರಂಭಿಸುತ್ತಿದ್ದಂತೆ ರಸ್ತೆ ಪಕ್ಕದಲ್ಲಿರುವ ಖಾಸಗಿ ಜಮೀನಿನ ಮಾಲೀಕರು ರಸ್ತೆ ತಮ್ಮ ಜಮೀನಿನ ಸರ್ವೆ ವ್ಯಾಪ್ತಿಯಲ್ಲಿ ಬರುವುದರಿಂದ ಕಾಮಗಾರಿ ತಡೆಹಿಡಿಯುವಂತೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು.ಈ ಹಿನ್ನೆಲೆಯಲ್ಲಿ ಬುಧವಾರ ತಹಶೀಲ್ದಾರ್ ಜಗದೀಶ್, ಕಚೇರಿ ಸಿಬ್ಬಂದಿ ಶೇಷಾದ್ರಿ, ಶ್ರಿನಿವಾಸ್ ಮತ್ತು ಸಬ್ ಇನ್ಸ್‌ಪೆಕ್ಟರ್ ರವಿ ಅವರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಶಿವಶಂಕರ್, ರಂಗನಾಥ್ ಹಾಗೂ ಗ್ರಾಮಸ್ಥರ ಸಮಕ್ಷಮ ಸರ್ವೆ ನಡೆಸಿದರು. ಈ ಸಂದರ್ಭರಸ್ತೆಯ ಕೆಲಭಾಗ ಖಾಸಗಿ ಜಮೀನಿನ ಸರ್ವೆ ನಂ. 39 ಮತ್ತು 41ರಲ್ಲಿ ಬರುವ ಕಾರಣ ಈ ಕುರಿತ ಗೊಂದಲ ನಿವಾರಣೆ ಆಗುವವರೆಗೆ ಈ ಪ್ರದೇಶವನ್ನು ಹೊರತು ಪಡಿಸಿ ಉಳಿದೆಡೆ ಡಾಂಬರೀಕರಣ ನಡೆಸ ಬಹುದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.ಆದರೆ ಈ ಭಾಗದ ಗ್ರಾಮಸ್ಥರು ಹೇಳುವ ಪ್ರಕಾರ, ಆ ಜಮೀನಿನ ಹಿಂದಿನ ಮಾಲೀಕರು ಗ್ರಾಮಸ್ಥರಿಗೂ ಅನುಕೂಲವಾಗುವಂತೆ ಈ ಹಿಂದೆ ನಕ್ಷೆಯಲ್ಲಿರುವ ರಸ್ತೆ ಜಾಗವನ್ನು ತಾವು ಪಡೆದು ತಮ್ಮ ಜಮೀನಿನ ಸ್ವಲ್ಪ ಜಾಗವನ್ನು ರಸ್ತೆಗೆ ಬಿಟ್ಟುಕೊಟ್ಟ ನಂತರ ಗ್ರಾಮಪಂಚಾಯಿತಿ ವತಿಯಿಂದ 1991ರಲ್ಲಿ ಈ ರಸ್ತೆ ನಿರ್ಮಾಣವಾಗಿತ್ತು. ಆದ್ದರಿಂದ ಸರ್ವೆ ಪ್ರಕಾರ ರಸ್ತೆಯ ಕೆಲಭಾಗ ಅವರ ಹಿಡುವಳಿಯಲ್ಲಿ ಬರುತ್ತದೆ. ಈ ವಿಷಯ ನಂತರ ಜಮೀನು ಖರೀದಿಸಿರುವ ಆಶಾ ಚಂದ್ರಶೇಖರ್ ಅವರಿಗೆ ತಿಳಿದಿಲ್ಲದಿರುವ ಕಾರಣ ಅವರು ಕಾಮಗಾರಿಗೆ ಅಡ್ಡಿಪಡಿಸುತ್ತಿದ್ದಾರೆ ಎಂದು ಆರೋಪಿಸಿದರು.ಈಗ ಕಾಮಗಾರಿಗೆ ಅಡ್ಡಿಪಡಿಸಿದವರು ಮುಂದೆ ರಸ್ತೆಯಲ್ಲಿ ಸಂಚರಿಸುವುದಕ್ಕೂ ಅಡ್ಡಿಪಡಿಸಿದರೆ ನಮ್ಮ ಹಳ್ಳಿಗಳಿಗೆ ರಸ್ತೆಯೇ ಇಲ್ಲದಂತಾಗುತ್ತದೆ. ಆದ್ದರಿಂದ ಸ್ಥಳಕ್ಕೆ ಆಗಮಿಸಿರುವ ಅಧಿಕಾರಿಗಳು ಈಗಲೇ ಈ ಸಮಸ್ಯೆಗೆ ಪರಿಹಾರ ಒದಗಿಸಬೇಕೆಂದು ಪಟ್ಟುಹಿಡಿದರು.ಈ ಸಂದರ್ಭಉದ್ರಿಕ್ತರಾದ ಕೆಲ ಗ್ರಾಮಸ್ಥರು ನಕ್ಷೆಯಲ್ಲಿರುವ ರಸ್ತೆಗೆ ಜಮೀನಿನ ಮಾಲೀಕರು ಹಾಕಿರುವ ಬೇಲಿಯನ್ನು ಕೀಳುವ ಕೆಲಸಕ್ಕೆ ಮುಂದಾದರಾದರೂ ಜಿಲ್ಲಾಪಂಚಾಯಿತಿ ಸದಸ್ಯ ಶಿವಶಂಕರ್, ಸದ್ಯಕ್ಕೆ ವಿವಾದಿತ ಪ್ರದೇಶವನ್ನು ಹೊರತುಪಡಿಸಿ ಕಾಮಗಾರಿಯನ್ನು ಮುಂದುವರಿಸಿ. ಸದ್ಯದಲ್ಲಿ ಖಾಸಗಿ ಜಮೀನಿನ ಮಾಲೀಕರಲ್ಲಿ ಚರ್ಚಿಸಿ ಸಮಸ್ಯೆಯನ್ನು ಸೌಹಾರ್ದವಾಗಿ ಬಗೆಹರಿಸುವ ಭರವಸೆ ನೀಡಿದರು. ಬಳಿಕ ವಾತಾವರಣ ತಿಳಿಗೊಂಡಿತು.ಬೇಗಾರು ಗ್ರಾಮ ಪಂಚಾಯಿತಿ ಸದಸ್ಯ ಮೀಗಾ ಪದ್ಮನಾಭ, ಮಾಜಿ ಅಧ್ಯಕ್ಷ ಸುರೇಶ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಚ್.ಆರ್. ಕೃಷ್ಣಮೂರ್ತಿ, ಮೀಗಾ ರತ್ನಾಕರ್, ನಡುತೋಟ ಸತೀಶ್ ಮತ್ತಿತರರು ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.