ಬೇಟೆಗಾರರ ಕಾಟ..

7

ಬೇಟೆಗಾರರ ಕಾಟ..

Published:
Updated:
ಬೇಟೆಗಾರರ ಕಾಟ..

ದೊಡ್ಡಬಳ್ಳಾಪುರ: ತಾಲ್ಲೂಕಿನ ಗುಂಡ್ಲಹಳ್ಳಿ ಗ್ರಾಮದ ಟೆರ‌್ರಾಫರ್ಮಾದಲ್ಲಿ ಬಿಬಿಎಂಪಿ ಕಸ ತಂದು ಸುರಿಯುತ್ತಿರುವುದರಿಂದ ಸುತ್ತಲಿನ ಪರಿಸರ ಹಾಳಾಗಿರುವುದು ಒಂದು ಕಥೆಯಾದರೆ ಈ ಪ್ರದೇಶದಲ್ಲಿ ಕಸ ತಿನ್ನಲು ಬರುವ ಕಾಡು ಪ್ರಾಣಿಗಳನ್ನು ಬೇಟೆಯಾಡುವ ಬಂದೂಕುಧಾರಿಗಳ ಹಾವಳಿ ಈಗ ಮತ್ತೊಂದು ಹೊಸ ಅಧ್ಯಾಯಕ್ಕೆ ಮುನ್ನುಡಿ ಯಾಗಿದೆ.ನೆರೆಯ ನೆಲಮಂಗಲ, ಹೆಸರಘಟ್ಟ, ಕೊರಟಗೆರೆ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳ ಕೆಲಜನರು ಪ್ರತಿನಿತ್ಯ ಇಲ್ಲಿ ಹಾಡಹಗಲೇ ಹೆಗಲಿಗೆ ಬಂದೂಕು ಏರಿಸಿಕೊಂಡು ತಿರುಗಾಡುತ್ತಿರುವುದು ಸಾಮಾನ್ಯವಾಗಿ ಪರಿಣಮಿಸಿದೆ.ಗುಂಡ್ಲಹಳ್ಳಿ, ಕಾಮನಗ್ರಹಾರ, ಹಬ್ಬೇಗೌಡನಪಾಳ್ಯ, ಖಾಲಿಪಾಳ್ಯ, ಸಕ್ಕರೆಗೊಲ್ಲಹಳ್ಳಿ ಸುತ್ತಮುತ್ತಲ ಪ್ರದೇಶಗಳಲ್ಲಿ ಇವರೆಲ್ಲಾ ನಿರ್ಭೀತಿಯಿಂದ ಸಂಚರಿಸುತ್ತಾ ಕಸದರಾಶಿ ತಿನ್ನಲು ಬರುವ ಕಾಡುಪ್ರಾಣಿಗಳನ್ನು ಬೇಟೆಯಾಡುತ್ತ್ದ್ದಿದಾರೆ.ಈ ಬೇಟೆಗಾರರಿಗೆ ಕಸ ತಿನ್ನಲು ದಂಡುದಂಡಾಗಿ ಬರುವ ಗುಂಡ್ಲಹಳ್ಳಿ ಸುತ್ತಮುತ್ತಲಿನ ಹಂದಿ, ನರಿಗಳ ದಂಡೇ ಮುಖ್ಯ ಈಡು. ರೈತರ ಹೊಲಗಳಲ್ಲಿ ಅಷ್ಟೇಕೆ ಗ್ರಾಮಗಳ ನಡುಬೀದಿಯಲ್ಲೇ ಇವರು ರಾಜಾರೋಷವಾಗಿ ಹೆಗಲ ಮೇಲೆ ಬಂದೂಕು ಏರಿಸಿಕೊಂಡು ಬೀದಿ ದಾಟಿ ಹೋದರೂ ಇವರನ್ನು ಪ್ರಶ್ನಿಸುವವರು ಯಾರೂ ಇಲ್ಲದಂತಾಗಿದೆ. ನೋಡಿದಾಕ್ಷಣ ನಕ್ಸಲರ ರೀತಿ ಭಯ ಹುಟ್ಟಿಸುವ ಇವರನ್ನು ಕಂಡು ಗ್ರಾಮಸ್ಥರು ಏನೊಂದೂ ಪ್ರಶ್ನಿಸದೆ ಭೀತಿಯಿಂದಲೇ ಬಾಯಿ ಮುಚ್ಚಿಕೊಂಡು ಜೀವನ ಸಾಗಿಸುತ್ತಿದ್ದಾರೆ.ಇತ್ತಿಚೆಗೆ ಕೆಲ ಗ್ರಾಮಗಳಲ್ಲಿ `ಪ್ರಜಾವಾಣಿ' ಇವರನ್ನು ಕಂಡಾಗ ಹಿಂಬದಿಯಿಂದ ಕ್ಲಿಕ್ಕಿಸಿದ ಚಿತ್ರಗಳು ಇಲ್ಲಿವೆ.

ಕಸದ ಹಾವಳಿ: ದೊಡ್ಡಬೆಳವಂಗಲ ಹೋಬಳಿಯ ಗುಂಡ್ಲಹಳ್ಳಿ ಸುತ್ತಲಿನ ಪ್ರದೇಶವು ಹಳ್ಳ, ಗುಡ್ಡಗಳಿಂದ ಆವೃತವಾಗಿದೆ.  ಬೇಕಾದಷ್ಟು ಕಿರು ಅರಣ್ಯ ಹಾಗೂ ಸಾಕಷ್ಟು ಕೃಷಿ ಭೂಮಿಯೂ ಇಲ್ಲಿದೆ. ಈ ಪ್ರದೇಶದಲ್ಲಿ ರಾಗಿ ಬೆಳೆಗಿಂತಲೂ ಹೆಚ್ಚಾಗಿ ಮುಸುಕಿನ ಜೋಳ, ಶೇಂಗಾ ಬೆಳೆಯಲಾಗುತ್ತದೆ. ಸಹಜವಾಗಿಯೇ ಈ ಬೆಳೆಗಳಿಗೆ ಹಂದಿ, ನರಿ, ನಾಯಿಗಳ ಹಾವಳಿ ಇರುತ್ತದೆ. ಆದರೆ ಇತ್ತೀಚೆಗೆ ಟೆರ‌್ರಾಫರ್ಮಾಗೆ ಬೆಂಗಳೂರಿನಿಂದ ಕಸ ತಂದು ಸುರಿಯಲು ಆರಂಭಿಸಿದ ಮೇಲಂತೂ ನಾಯಿ, ನರಿ ಹಾಗೂ ಹಂದಿಗಳ ಹಾವಳಿ ಮೀತಿ ಮೀರಿ ಹೋಗಿದೆ. ಜೋಳ, ಶೇಂಗಾ ಕೊಯ್ಲಾಗಿ ಮನೆ ಸೇರುವವರೆಗೂ ರೈತರಿಗೆ ಬೆಳೆಯ ಮೇಲೆ ನಂಬಿಕೆಯೇ ಇಲ್ಲದಾಗಿದೆ.ಏರ್‌ಪೋರ್ಟ್ ಕಸದ ಆಕರ್ಷಣೆ: `ಬೆಂಗಳೂರು ನಗರ ವ್ಯಾಪ್ತಿಯಿಂದ ಹಾಗೂ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕಸ ತುಂಬಿಕೊಂಡು ಬರುವ ಲಾರಿಗಳಿಗೆ ಇಲ್ಲಿನ ಕಾಡು ಪ್ರಾಣಿಗಳು ಮುಗಿಬೀಳುತ್ತವೆ. ಕಸದ ತಂದು ಸುರಿಯುತ್ತಿದ್ದಂತೆಯೇ ನಾಯಿ, ನರಿ, ಹಂದಿ, ಹದ್ದು ಹಾಗೂ ಇತರೆ ಪ್ರಾಣಿಗಳ ದಂಡೇ ಇಲ್ಲಿ ಜಮಾಯಿಸುತ್ತದೆ. ಕೆಲವಂತೂ ದೂರದೂರ ಪ್ರದೇಶಗಳಿಂದ ಇಲ್ಲಿಗೆ ಬರುತ್ತವೆ' ಎನ್ನುತ್ತಾರೆ ಗುಂಡ್ಲಹಳ್ಳಿ ಗ್ರಾಮಸ್ಥರು.ಅದರಲ್ಲೂ ವಿಶೇಷವಾಗಿ ವಿಮಾನದಲ್ಲಿ ತಿಂದು ಬಿಸಾಡಿದ ಮಾಂಸದ ಊಟವೂ ಸೇರಿದಂತೆ ಇತರೆ ಹೋಟೆಲ್ ತಿನಿಸುಗಳು ಈ ಪ್ರಾಣಿಗಳನ್ನು ಹೆಚ್ಚಾಗಿ ಆಕರ್ಷಿಸುತ್ತವೆ. ಈ ತಿನಿಸುಗಳನ್ನು ಪ್ಲಾಸ್ಟಿಕ್ ಕವರ್‌ನಲ್ಲಿ ಸುತ್ತಿ ಹಾಕಲಾಗಿರುತ್ತದೆ. ಲಾರಿಗಳು ಬಂದು ಕಸ ಸುರಿದಾಕ್ಷಣ ಈ ಪ್ರಾಣಿಗಳು ಕಸ ಗೆಬರಿ ತಿನ್ನುವಾಗ ಈ ಬೇಟೆಗಾರರು ಇವನ್ನು ಬೇಟೆಯಾಡುವುದು ಸಾಮಾನ್ಯವಾಗಿದೆ.ಭಯದ ನೆರಳಿನಲ್ಲಿ ಬದುಕು: `ಕಸ ಕೇವಲ ಪರಿಸರವನ್ನಷ್ಟೇ ಹಾಳು ಮಾಡುತ್ತಿಲ್ಲ. ಇಲ್ಲಿನ ರೈತರು ದಿನನಿತ್ಯ ಭಯದಲ್ಲೇ ಬದುಕು ಕಳೆಯುವಂತೆ ಮಾಡಿದೆ' ಎನ್ನುತ್ತಾರೆ ಹಬ್ಬೇಗೌಡನಪಾಳ್ಯ ಗ್ರಾಮದ ರೈತ ಹನುಮಂತರಾಯಪ್ಪ ಅವರು.`ಟೆರ‌್ರಾಫರ್ಮಾಗೆ ಕಸ ತಂದು ಸುರಿಯುವುದು ಆರಂಭವಾದ ಮೇಲಂತೂ ಮುಸುಕಿನ ಜೋಳಕ್ಕೆ ಹಂದಿ, ನರಿಗಳ ಹಾವಳಿ ಜೊತೆಗೆ ಕಾಗೆಗಳ ಕಾಟವೂ ಮೀತಿ ಮೀರಿದೆ. ಈ ಪ್ರದೇಶದಲ್ಲಿ ಕಸ ತಂದು ಸುರಿಯುವುದು ಹೀಗೆಯೇ ಮುಂದುವರೆದರೆ ಮುಂದೊಂದು ದಿನ ಈ ಭಾಗದಲ್ಲಿ ಯಾವುದೇ ರೀತಿಯ ಬೆಳೆ ಬೆಳೆಯಲು ಸಾಧ್ಯವಾಗುವುದಿಲ್ಲ' ಎನ್ನುತ್ತಾರೆ ಕಾಮನಗ್ರಹಾರ ಗ್ರಾಮದ ಚಿಕ್ಕಹನುಮೇಗೌಡ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry