ಭಾನುವಾರ, ಮೇ 16, 2021
22 °C

ಬೇಡಕ್ಕಿಹಳ್ಳ ತೂಗು ಸೇತುವೆ: ನನಸಾಗದ ಕನಸು

ಪ್ರಜಾವಾಣಿ ವಾರ್ತೆ/ - ರವಿ ಕೆಳಂಗಡಿ Updated:

ಅಕ್ಷರ ಗಾತ್ರ : | |

ಕಳಸ: ಉಕ್ಕಿ ಹರಿಯುತ್ತಿದ್ದ ಹಳ್ಳದ ನಡುವೆ ಎದೆ ಎತ್ತರದ ನೀರಿನಲ್ಲಿ ಅನೇಕ ಗ್ರಾಮಸ್ಥರು ಇಳಿದಿದ್ದರು. ನೀರಿನ ಬಲವಾದ ಸೆಳೆತವನ್ನು ವಿರೋಧಿಸಿ ಅವರು ಕ್ವಿಂಟಾಲ್‌ಗಟ್ಟಲೆ ತೂಕದ ಮರವೊಂದನ್ನು ಹಳ್ಳಕ್ಕೆ ಅಡ್ಡಲಾಗಿ ನಿಲ್ಲಿಸುತ್ತಿದ್ದರು. ಇಂತಹ ಸಾಹಸಮಯ ದೃಶ್ಯ ಸೋಮವಾರ ಇಳಿ ಸಂಜೆ ಬೇಡಕ್ಕಿ ಹಳ್ಳದ ಬಳಿ ಕಂಡು ಬಂತು.ಬೇಡಕ್ಕಿ ಹಳ್ಳವನ್ನು ದಾಟಲು ಗುಡ್ಡೆ ಎಡದಾಳು, ದೇವರಗುಡ್ಡ, ಬಿಳಗೋಡು ಪ್ರದೇಶದ ಗ್ರಾಮಸ್ಥರು ಸಂಕ ಕಟ್ಟುವ ಅಪಾಯಕಾರಿ ಸಾಹಸವನ್ನು ಸುಮಾರು 4 ಗಂಟೆಗಳ ಅವಧಿಯಲ್ಲಿ ಯಶಸ್ವಿಯಾಗಿ ಮುಗಿಸಿಬಿಟ್ಟರು. `ಈ ಮಳೇಲಿ ಸಂಕ ಯಾಕೆ ಹಾಕ್ತೆರಿ?' ಎಂಬ ಪ್ರಶ್ನೆಗೆ ಅವರು ಹಳ್ಳದ ಆಚೆ ಬದಿಯ ಎಡದಾಳು ಗದ್ದೆ ಬಯಲನ್ನು ಉತ್ತರ ಎಂಬಂತೆ ತೋರಿಸಿದರು.`ಈಗ ಹಳ್ಳಕ್ಕೆ ಸಂಕ ಹಾಕದಿದ್ದರೆ ನಮ್ಮ ಗದ್ದೆ ಸಾಗುವಳಿ ಮಾಡಕ್ಕೆ ಅಲ್ಲಿಗೆ ಹೋಗುವಂತೆಯೇ ಇಲ್ಲ. ನೋಡೋವ್ರಿಗೆ ಇದು ಸರ್ಕಸ್ ಥರ ಕಾಣಬಹುದು. ಆದ್ರೆ ಇದು ನಮ್ಮ ಬದುಕು...' ಸತ್ಯಕ್ಕೆ ಹತ್ತಿರವಾದರೂ ಹಿರಿಯರೊಬ್ಬರು ಕೊಂಚ ಕೋಪದಿಂದಲೇ ಹೇಳುತ್ತಿದ್ದರು.ದಿನದ ಕೂಳಿಗೆ ಬತ್ತದ ಗದ್ದೆ ಸಾಗುವಳಿಯನ್ನೇ ನಂಬಿರುವ ಅನೇಕ ಕುಟುಂಬಗಳ ಅಲ್ಪ ಸ್ವಲ್ಪ ಗದ್ದೆ ಇರುವುದು ಎಡದಾಳು ಬಯಲಿನಲ್ಲಿ. ಆದರೆ ಇವರ ಮನೆಗಳು ಇರುವುದು ಗುಡ್ಡೆ ಎಡದಾಳು, ಬಿಳಗೋಡು ಪ್ರದೇಶದಲ್ಲಿ. ಮಧ್ಯೆ ಹರಿಯುವುದು ಬೇಡಕ್ಕಿ ಹಳ್ಳ. ಈ ಹಿನ್ನೆಲೆಯಲ್ಲಿ ಮಳೆಗಾಲದಲ್ಲಿ ಹಳ್ಳಕ್ಕೆ ಅಡ್ಡಲಾಗಿ ಕಾಲು ಸಂಕ ನಿರ್ಮಿಸುವುದು ಕೃಷಿಕರ ಪ್ರತಿವರ್ಷದ ಕಸರತ್ತು. `ಕಷ್ಟ ಪಟ್ಟು ಅಲ್ಲಿ ಇಲ್ಲಿ ಹುಡುಕಿ, ಫಾರೆಸ್ಟ್‌ನವ್ರ ಕೈ ಕಾಲು ಹಿಡ್ದು ಮರ ತಂದು ಸಂಕ ಕಟ್ತೀವಿ. ಆದ್ರೆ ಎರಡು ವರ್ಷದಲ್ಲೇ ಅದು ಕುಂಬಾಗಿ ಹಳ್ಳದಲ್ಲಿ ಕೊಚ್ಚಿ ಹೋಗ್ತದೆ...' ಎಂದು ಗ್ರಾಮದ ಯುವಕ ಮೂರ್ತಿ ವಿವರಣೆ ನೀಡುತ್ತಿದ್ದಂತೆ ರೈತಾಪಿ ಮಹಿಳೆ ಅಪ್ಪಿಯಕ್ಕ ರಾಜಕಾರಣಿಗಳಿಗೆ ಶಾಪ ಹಾಕುತ್ತಿದ್ದರು.`ಓಟ್ ಕೇಳಕ್ ಬಂದಾಗ ಅದು ಮಾಡಿಕೊಡ್ತೀವಿ, ಆಮೇಲೆ ನಮ್ಮನ್ನ ಕೇಳೋರು ಇಲ್ಲ...' ಎಂದು 70ರ ಹರೆಯದಲ್ಲೂ ಬತ್ತದ ಕೃಷಿಯನ್ನೇ ನಂಬಿರುವ ಅವರ ಆಕ್ರೋಶ ಮುಂದುವರೆದಿತ್ತು. `ಬೇಡಕ್ಕಿ ಹಳ್ಳಕ್ಕೆ ಕಾಲುಸೇತುವೆ ನಿರ್ಮಿಸಬೇಕು ಎಂದು ಎಲ್ಲ ಜನಪ್ರತಿನಿಧಿಗಳಿಗೂ ಮನವಿ ಕೊಡುತ್ತಲೇ ಇದ್ದೀವಿ. ಈಗ ಇರುವ ಚೆಕ್ ಡ್ಯಾಂ ಮೇಲೆಯೇ ಕಡಿಮೆ ಖರ್ಚಿನಲ್ಲಿ ಕಾಲುಸಂಕ ನಿರ್ಮಿಸಬಹುದು. ಆದರೆ ಯಾರಿಗೂ ನಮ್ಮ ಸಮಸ್ಯೆ ಅರಿವಾಗಿಲ್ಲ' ಎಂದು ಗ್ರಾಮಸ್ಥರಮೇಶ, ಬೇಸರ ವ್ಯಕ್ತಪಡಿಸಿದರು.ಬತ್ತದ ಕೃಷಿ ಮೂಲೆಗುಂಪಾಗುತ್ತಿರುವ ಮಲೆನಾಡಿನಲ್ಲಿ ಸಾಂಪ್ರದಾಯಿಕ ಕೃಷಿ ನಡೆಸುತ್ತಿರುವವರ ಬೇಡಿಕೆ ಈಡೇರಿಸಲು ಶಾಸಕರು ಮನಸ್ಸು ಮಾಡುತ್ತಾರೆಯೇ ಎಂಬುದು ಪ್ರಶ್ನೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.