ಶುಕ್ರವಾರ, ಜನವರಿ 24, 2020
21 °C

ಬೇಡಿಕೆಗೂ ಪೂರೈಕೆಗೂ ಭಾರಿ ವ್ಯತ್ಯಾಸ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೇವನಹಳ್ಳಿ: ಸರ್ಕಾರದ ಲೋಡ್ ಶೆಡ್ಡಿಂಗ್ ನೀತಿಯಿಂದ ತಾಲ್ಲೂಕಿನ ರೈತರು ಮತ್ತು ಜನರು ಈಗಾಗಲೇ ನಲುಗಿದ್ದು, ಈ ನಡುವೆಯೆ ಉಂಟಾಗಿರುವ ಅಸಮರ್ಪಕ ವಿದ್ಯುತ್ ಹಂಚಿಕೆ ಮತ್ತು ಪೂರೈಕೆ ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ.ತಾಲ್ಲೂಕಿಗೆ ದೊಡ್ಡಬಳ್ಳಾಪುರದಿಂದ ವಿದ್ಯುತ್ ಸರಬರಾಜಾಗುತ್ತಿದ್ದು, ಪ್ರತಿ ನಿತ್ಯ 25 ಮೆಗಾವಾಟ್ ವಿದ್ಯುತ್‌ನ ಬೇಡಿಕೆ ಇದೆ. ಆದರೆ ತಾಲ್ಲೂಕಿಗೆ ಪ್ರಸ್ತುತ ಪೂರೈಕೆಯಾಗುತ್ತಿರುವುದು ಕೇವಲ  8ಮೆಗಾವಾಟ್ ವಿದ್ಯುತ್. ಅಂದರೆ ಶೇ. 60ರಷ್ಟು ಮಾತ್ರ.  ಈ 8 ಮೆಗಾವಾಟ್ ವಿದ್ಯುತ್‌ಅನ್ನು ತಾಲ್ಲೂಕಿನ ಎಲ್ಲಾ ಭಾಗಗಳಿಗೂ ಸಮಾನವಾಗಿ ಹಂಚಲಾಗುತ್ತಿದೆಯೇ ಎಂಬುದನ್ನು ನೋಡಿದರೆ, ಇಲ್ಲ ಎಂಬ ಉತ್ತರ.ದೇವನಹಳ್ಳಿ ಕೆಪಿಟಿಸಿಎಲ್ ಮಾಹಿತಿಯಂತೆ ಕೊಯಿರಾ ವಿದ್ಯುತ್ ಘಟಕ ಎಫ್ 12ರ ವ್ಯಾಪ್ತಿಯಲ್ಲಿ ಸುಮಾರು 25ಗ್ರಾಮಗಳಿಗೆ 6 ಮೆಗಾವಾಟ್ ವಿದ್ಯುತ್ ನೀಡಲಾಗುತ್ತಿದೆ. ಉಳಿದ ಎರಡು ಮೆಗಾವಾಟ್‌ನಲ್ಲಿ ತಾಲ್ಲೂಕಿನ ಇತರೆ ಭಾಗಗಳಿಗೆ ಪೂರೈಕೆ ಮಾಡಬೇಕು. ಈ ಎರಡು ಮೆಗಾವಾಟ್ ವಿದ್ಯುತ್ ಅನ್ನು ದೇವನಹಳ್ಳಿ ಪಟ್ಟಣ, ಕೈಗಾರಿಕಾ ಪ್ರದೇಶ ಮತ್ತು ಕೊಯಿರಾ ಹೊರತುಪಡಿಸಿದ ಗ್ರಾಮೀಣ ಪ್ರದೇಶಗಳು ಸೇರುತ್ತವೆ. ತಾಲ್ಲೂಕಿನಲ್ಲಿ ಪ್ರಸ್ತುತ 6 ಗಂಟೆ  ತ್ರಿಫೇಸ್, 9 ಗಂಟೆ ಸಿಂಗಲ್ ಫೇಸ್ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. ರಾತ್ರಿ 2 ಮತ್ತು ಹಗಲು ವೇಳೆ 4ಗಂಟೆ ತ್ರಿಫೇಸ್ ನೀಡುತ್ತಿದೆ. ಆದರೆ ಕೆಲವು ವೇಳೆ ಈ ವಿದ್ಯುತ್‌ಗೂ ಕತ್ತರಿ ಬೀಳುತ್ತಿದೆ. ಇಲ್ಲಿನ ಬೆಸ್ಕಾಂ ವ್ಯಾಪ್ತಿಯಲ್ಲಿ ತಾಂತ್ರಿಕ ಅಥವಾ ಇತರೆ ಅಡಚಣೆ ಉಂಟಾದಲ್ಲಿ ವಿದ್ಯುತ್‌ಅನ್ನು ಕಡಿತಗೊಳಿಸಲಾಗುತ್ತದೆ. ಈ ನಡುವೆ ಲೋಡ್ ಶೆಡ್ಡಿಂಗ್,  ತ್ರಿಫೇಸ್, ಸಿಂಗಲ್ ಫೇಸ್ ವಿದ್ಯುತ್ ಪೂರೈಕೆಯ ವೇಳೆ ಬಗ್ಗೆ ಸಾರ್ವಜನಿಕರಿಗೆ ಮಾಹಿತಿಯೇ ಇಲ್ಲ.ಪಟ್ಟಣದ ಹಾಗೂ ಕೈಗಾರಿಕಾ ಪ್ರದೇಶ ವ್ಯಾಪ್ತಿಯಲ್ಲಿ ಸರಾಸರಿ ದಿನಕ್ಕೆ 20ಗಂಟೆ ಪೂರೈಕೆ ಮಾಡಬೇಕು. ಆದರೆ ದೊಡ್ಡಬಳ್ಳಾಪುರ ವಿದ್ಯುತ್ ಘಟಕದದಿಂದ ಎಷ್ಟು ವಿದ್ಯುತ್ ಪೂರೈಕೆಯಾಗುತ್ತದೆಯೊ ಆ ಮಾನದಂಡದ ಆಧಾರದಲ್ಲಿ ಕೈಗಾರಿಕೆಗಳಿಗೆ ವಿದ್ಯುತ್ ಸರಬರಾಜು  ಮಾಡುತ್ತೇವೆ ಎನ್ನುತ್ತಾರೆ ಕೆಪಿಟಿಸಿಎಲ್ ತಾಂತ್ರಿಕ ಅಭಿಯಂತರ ರಾಮಮೂರ್ತಿ. ರೈತರಿಗೆ ವಿದ್ಯುತ್ ಕಡಿತದ ಬಗ್ಗೆ ಮಾಹಿತಿ ಇಲ್ಲದ ಕಾರಣ ಜಮೀನುಗಳಿಗೆ ನೀರುಣಿಸುವುದು ತ್ರಾಸದಾಯಕವಾಗಿದೆ. ಅಲ್ಲದೆ ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರು ಸರಬರಾಜಿಗೂ ಗೊಂದಲ ಉಂಟಾಗಿದೆ. ಇದರಿಂದ ಕೃಷಿ ಚಟುವಟಿಕೆ ಹಿನ್ನೆಡೆಯಾಗಿದೆ ಎಂಬುದು ಹಲವು ರೈತರ ದೂರು.  

ಪ್ರತಿಕ್ರಿಯಿಸಿ (+)