ಭಾನುವಾರ, ಮೇ 9, 2021
19 °C

ಬೇಡಿಕೆಗೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಾದಗಿರಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕದ ಕಾರ್ಯಕರ್ತರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯ ಎದುರು ಪ್ರತಿಭಟನೆ ನಡೆಸಿದರು.ಮೇ 5 ರಂದು ನಡೆದ ಚುನಾವಣೆಯಲ್ಲಿ ಸುರಪುರ ತಾಲ್ಲೂಕಿನ ಸದಬ ಗ್ರಾಮದಲ್ಲಿ ದಲಿತರು ಮತ್ತು ಸವರ್ಣೀಯ ವ್ಯಕ್ತಿಯ ಮಧ್ಯೆ ಭಿನ್ನಾಭಿಪ್ರಾಯ ಉಂಟಾಗಿತ್ತು. ಕ್ರಮೇಣ ಗ್ರಾಮದಲ್ಲಿ ಅಶಾಂತಿಯ ವಾತಾವರಣ ಸೃಷ್ಟಿಯಾದ ಹಿನ್ನೆಲೆಯಲ್ಲಿ ಕೆಂಭಾವಿ ಪೊಲೀಸ್ ಠಾಣೆ ಅಧಿಕಾರಿಗಳು ಮತ್ತು ಗ್ರಾಮದ ಹಿರಿಯರು ಶಾಂತಿ ಸಭೆ ನಡೆಸಿದ್ದರು. ಕಳೆದ 15 ವರ್ಷದಿಂದ ಗ್ರಾಮದಲ್ಲಿ ಅಂಬೇಡ್ಕರ್ ಹೆಸರಿನ ಅಂಗಡಿಯಲ್ಲಿ ಪಡಿತರ ವಿತರಣೆ ಮಾಡಲಾಗುತ್ತಿದೆ. ಇದೀಗ ಈ ಅಂಗಡಿಯಲ್ಲಿ ಪಡಿತರ ಪಡೆದಲ್ಲಿ, ಅವರ ವಿರುದ್ಧ ರೂ. 2 ಸಾವಿರ ದಂಡ ಹಾಕಲಾಗುವುದು ಎಂದು ಬೆದರಿಕೆ ಹಾಕಿದ್ದಾರೆ ಎಂದು ದೂರಿದರು.ಈ ಪರಿಸ್ಥಿತಿಯನ್ನು ಗಮನಿಸದಲ್ಲಿ ದಲಿತರ ಮೇಲೆ ಬಹಿಷ್ಕಾರ ಹೇರುವ ಹುನ್ನಾರು ನಡೆದಿದೆ. ಅದಕ್ಕಾಗಿ ಇದನ್ನು ತಡೆಯಬೇಕು. ಜೂ. 24 ರೊಳಗಾಗಿ ಸೂಕ್ತ ಕ್ರಮ ಜರುಗಿಸದಿದ್ದಲ್ಲಿ ಸುರಪುರ ಬಂದ್ ಕರೆ ನೀಡಲಾಗುವುದು ಎಂದು ಎಚ್ಚರಿಸಿದರು.ದಲಿತರ ಮೇಲೆ ಬಹಿಷ್ಕಾರ ಹಾಕಲು ಸಂಚು ಮಾಡಿದ ಮೇಲ್ವರ್ಗದ ಗೂಂಡಾಗಳನ್ನು ಗೂಂಡಾ ಕಾಯ್ದೆಯಡಿ ಬಂಧಿಸಬೇಕು. ದಲಿತರ ಮೇಲೆ ಹಾಕಿದ ಸುಳ್ಳು ಕೇಸ್‌ಗಳನ್ನು ಹಿಂಪಡೆಯಬೇಕು. ಸವರ್ಣೀಯರಿಂದ ದೌರ್ಜನ್ಯಕ್ಕೆ ಒಳಗಾದ 9 ದಲಿತರಿಗೆ ಪರಿಹಾರ ಒದಗಿಸಬೇಕು. ದಲಿತ ಮಹಿಳೆಯರಿಗೆ ಶೌಚಾಲಯ ನಿರ್ಮಿಸಬೇಕು. ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು.ನಾಯ್ಕಲ್ ಗ್ರಾಮದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಅವಮಾನ ಮಾಡಿದ ಆರೋಪಿಗಳನ್ನು ಬಂಧಿಸಬೇಕು ಎಂಬಿತ್ಯಾದಿ ಬೇಡಿಕೆಗಳ ಮನವಿಯನ್ನು ಜಿಲ್ಲಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದರು.  ಶರಣಪ್ಪ ದಖನಿ, ಚಂದಪ್ಪ ಮುನಿಯಪ್ಪನೋರ, ನಿಂಗಣ್ಣ ಮಳ್ಳಳ್ಳಿ, ಶಿವಪುತ್ರ ಜವಳಿ, ಶಿವಲಿಂಗ ಹಸನಾಪುರ, ರವೀಂದ್ರ ಬಡಿಗೇರ, ದೇವಿಂದ್ರಪ್ಪ ಬಾದ್ಯಾಪೂರ, ತಿಪ್ಪಣ್ಣ ಶೆಳ್ಳಗಿ, ಮಾನಪ್ಪ ಬಿಜಾಸಪುರ ಸೇರಿದಂತೆ ಅನೇಕ ಮಹಿಳೆಯರು ಮತ್ತು ಕಾರ್ಯಕರ್ತರು ಪಾಲ್ಗೊಂಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.