ಭಾನುವಾರ, ಮೇ 22, 2022
29 °C

ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ತಮಟೆ ಚಳವಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ತಮಟೆ ಚಳವಳಿ

ಶಿವಮೊಗ್ಗ: ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯವರು ಗುರುವಾರ ನಗರದ ಸೈನ್ಸ್ ಮೈದಾನದಿಂದ ಜಿಲ್ಲಾಧಿಕಾರಿ ಕಚೇರಿಗೆ ಬೃಹತ್ ಪ್ರತಿಭಟನಾ ತಮಟೆ ಚಳವಳಿ ನಡೆಸಿದರು.ತಮಟೆ ಬಾರಿಸುತ್ತಾ, ದಲಿತರ ಪರ ಘೋಷಣೆ ಕೂಗುತ್ತಾ ಮೆರವಣಿಗೆಯಲ್ಲಿ ಸಾಗಿದ ಕಾರ್ಯಕರ್ತರು ತದನಂತರ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಅವರ ಮೂಲಕ ಮುಖ್ಯಮಂತ್ರಿಗೆ ವಿವಿಧ ಬೇಡಿಕೆ ಮನವಿಯನ್ನು ಸಲ್ಲಿಸಿದರು.ಡಾ.ಅಂಬೇಡ್ಕರ್ ಕಂಚಿನ ಪ್ರತಿಮೆಯನ್ನು ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ  ಪ್ರತಿಷ್ಠಾಪಿಸಬೇಕು. ನಗರದಲ್ಲಿ ನೆನೆಗುದಿಗೆ ಬಿದ್ದಿರುವ ಡಾ.ಬಾಬು ಜಗಜೀವನರಾಂ ಭವನದ ಕಾಮಗಾರಿಯನ್ನು ತಕ್ಷಣವೇ ಆರಂಭಿಸಬೇಕು ಎಂದು ಆಗ್ರಹಿಸಿದರು.ಹಾಗೆಯೇ, ಕುವೆಂಪು ವಿಶ್ವವಿದ್ಯಾಲಯದಲ್ಲಿ ದಲಿತ ಸಂಘರ್ಷ ಸಮಿತಿ ಸಂಸ್ಥಾಪಕ `ಪ್ರೊ.ಬಿ. ಕೃಷ್ಣಪ್ಪ ಅಧ್ಯಯನ ಪೀಠ~ ತಕ್ಷಣವೇ ಆರಂಭಿಸಬೇಕು. ಬಿ.ಎಚ್. ರಸ್ತೆಯ ಆಲ್ಕೊಳ ವೃತ್ತಕ್ಕೆ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಸಂಸ್ಥಾಪಕ ಪ್ರೊ.ಬಿ. ಕೃಷ್ಣಪ್ಪ ಅವರ ಹೆಸರನ್ನು ನಾಮಕರಣ ಮಾಡಬೇಕು ಎಂದು ಒತ್ತಾಯಿಸಿದರು.ಕುವೆಂಪು ವಿಶ್ವವಿದ್ಯಾಲಯದಲ್ಲಿ ಪರಿಶಿಷ್ಟ ಜಾತಿ, ವರ್ಗಗಳ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಹಾಸ್ಟೆಲ್ ಕಟ್ಟಿಸಬೇಕು. ಬಡವರಿಗೆ ತಕ್ಷಣವೇ ಪಡಿತರಚೀಟಿ ನೀಡಬೇಕು. ಜಿಲ್ಲೆಯ ದಲಿತರಿಗೆ ಪ್ರತ್ಯೇಕ ಸ್ಮಶಾನಭೂಮಿ ಮಂಜೂರು ಮಾಡಬೇಕು ಎಂದು ಆಗ್ರಹಿಸಿದರು.ಶಿವಮೊಗ್ಗ ತಾಲ್ಲೂಕು ತಮ್ಮಡಿಹಳ್ಳಿ ಗ್ರಾಮಕ್ಕೆ ಸರ್ಕಾರಿ ಪದವಿಪೂರ್ವ ಕಾಲೇಜು ಮತ್ತು ಹಿಂದುಳಿದ ವರ್ಗಗಳ ವಿದ್ಯಾರ್ಥಿನಿಯರಿಗೆ ಮೆಟ್ರಕ್‌ಪೂರ್ವ ಹಾಸ್ಟೆಲ್ ಮಂಜೂರು ಮಾಡಬೇಕು ಎಂದು ಒತ್ತಾಯಿಸಿದರು.ಶಿವಮೊಗ್ಗ ತಾಲ್ಲೂಕಿನ ತೆವರಚಟ್ನಹಳ್ಳಿ, ಸೂಗೂರು ಕ್ಯಾತಿನಕೊಪ್ಪ, ಹೊಳೆಹಟ್ಟಿ, ಸೊರಬ ತಾಲ್ಲೂಕಿನ ದ್ವಾರಹಳ್ಳಿ, ಭದ್ರಾವತಿಯ ಕೂಡ್ಲಿಗೆರೆ, ಸಿಂಗನಮನೆ, ಗ್ಯಾರೇಜ್‌ಕ್ಯಾಂಪ್, ಗೋಣಿಬೀಡು, ಹುಣಸೇಕಟ್ಟೆ ಬೊಮ್ಮನಕಟ್ಟೆ, ಕಂಬದಾಳ್ ಹೊಸೂರು, ಕಾಚಗೊಂಡನಹಳ್ಳಿ, ದೇವರಹಳ್ಳಿ, ಕಂಚೀಬಾಗಿಲು, ಎಂ.ಎನ್ ಕಾಂಪೌಂಡ್ ಕಬಳಿಕಟ್ಟೆ ವಾಸಿಗಳಿಗೆ ಹಕ್ಕುಪತ್ರ ನೀಡಬೇಕು ಎಂದು ಆಗ್ರಹಿಸಿದರು.ತಾಲ್ಲೂಕಿನ ಸೂಗೂರು ಗ್ರಾಮಕ್ಕೆ ಪ್ರಾಥಮಿಕ ಆರೋಗ್ಯ ಕೇಂದ್ರ ಮಂಜೂರು ಮಾಡಬೇಕು. ಸೂಗೂರು ಗ್ರಾಮದಲ್ಲಿರುವ ಕಿರಿಯ ಪ್ರಾಥಮಿಕ ಶಾಲೆಗೆ ಹೆಚ್ಚುವರಿಯಾಗಿ 2 ಕೊಠಡಿಗಳನ್ನು ಮಂಜೂರು ಮಾಡಬೇಕು ಎಂದುಒತ್ತಾಯಿಸಿದರು.ತೀರ್ಥಹಳ್ಳಿ ಪಟ್ಟಣದಲ್ಲಿ ಪರಿಶಿಷ್ಟ ಜಾತಿ ಮತ್ತು ವರ್ಗಗಳ ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯ  ಮಂಜೂರು ಮಾಡಬೇಕು. ಸಾಗರ ತಾಲ್ಲೂಕಿನ ಆನಂದಪುರಕ್ಕೆ ಸರ್ಕಾರಿ ಪದವಿ ಕಾಲೇಜು ಹಾಗೂ ಪರಿಶಿಷ್ಟ ಜಾತಿ ಮತ್ತು ವರ್ಗಗಳ ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯವನ್ನೂ ಮಂಜೂರು ಮಾಡಬೇಕು. ಹಾಗೆಯೇ,    ಸೊರಬದ ಜಡೆ ಗ್ರಾಮಕ್ಕೆ ಹಿಂದುಳಿದ ವರ್ಗಗಳ ಕಾಲೇಜು ವಿದ್ಯಾರ್ಥಿನಿಲಯ ಎಂದು ಆಗ್ರಹಿಸಿದರು.ಪ್ರತಿಭಟನೆಯ ನೇತೃತ್ವವನ್ನು ಡಿಎಸ್‌ಎಸ್ ರಾಜ್ಯ ಸಂಘಟನಾ ಸಂಚಾಲಕ ಎಂ. ಗುರುಮೂರ್ತಿ, ರಾಜ್ಯ ಸಂಚಾಲಕ ಎನ್. ಗಿರಿಯಪ್ಪ, ಜಿಲ್ಲಾ ಸಂಚಾಲಕರಾದ  ಟಿ.ಎಚ್. ಹಾಲೇಶಪ್ಪ, ಮಂಜುನಾಥ್, ಶಿವಬಸಪ್ಪ, ವೆಂಕಟರಮಣ ಹಾಗೂ ದೇವರಾಜ್ ಮತ್ತಿತರರು ವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.