ಶುಕ್ರವಾರ, ಅಕ್ಟೋಬರ್ 18, 2019
28 °C

ಬೇಡಿಕೆ ಈಡೇರಿಕೆಗೆ ಆಗ್ರಹ: ಮನವಿ

Published:
Updated:

ಚಿಕ್ಕೋಡಿ: ಶಿಕ್ಷಣ ಇಲಾಖೆ ಚಟುವಟಿಕೆಗಳಲ್ಲಿ ಶಿಕ್ಷಕರ ಸಂಘಟನೆಗೆ ಅವಕಾಶ ನೀಡದೇ ಇರುವುದು ಮತ್ತು  ಶಿಕ್ಷಕರ ವಿಚಾರಣೆ ವರದಿಗಳನ್ನು ತಪ್ಪಾಗಿ ನೀಡುತ್ತಿರುವ ಕ್ರಮವನ್ನು ಖಂಡಿಸಿರುವ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚಿಕ್ಕೋಡಿ ಜಿಲ್ಲಾ ಘಟಕವು ಶಿಕ್ಷಕರ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದೆ.ಈ ಕುರಿತು ಸಂಘದ ಪದಾಧಿಕಾರಿಗಳು ಸೋಮವಾರ ಡಿಡಿಪಿಐ ಕಚೇರಿಯಲ್ಲಿ ಶಿಕ್ಷಣಾಧಿಕಾರಿ ಎಸ್.ಎಸ್.ಚೌಧರಿ ಮತ್ತು ವ್ಯವಸ್ಥಾಪಕ ಬಿ.ಎನ್.ಅಸ್ಕಿ ಅವರಿಗೆ ಮನವಿ ಸಲ್ಲಿಸಿದರು. ಅಥಣಿ ಪಟ್ಟಣದಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಕೇವಲ ಅಧಿಕಾರಿಗಳಿಗೆ ಸೀಮಿತವಾಗಿತ್ತು. ಇಲಾಖೆಯ ಜೊತೆಗೆ ಸಂಘಟನೆಯು ಕಲಿಕೆಗೆ ಮತ್ತು ಇಲಾಖೆಯ ಯೋಜನೆಗಳನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವುದು ಸಂಘದ ಮುಖ್ಯ ಧ್ಯೇಯವಾಗಿದೆ. ಆದರೆ, ಪ್ರತಿಭಾ ಕಾರಂಜಿ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯಲ್ಲಿ ಸಂಘಟನೆಯ ಅಧ್ಯಕ್ಷರನ್ನೂ ಹೆಸರಿಸಿಲ್ಲ. ಅಲ್ಲದೇ ಆಮಂತ್ರಣವನ್ನೂ ನೀಡದೇ ಕಾಟಾಚಾರಕ್ಕೆ ಕಾರ್ಯಕ್ರಮ ಮಾಡಲಾಗಿದೆ ಎಂದು ಮನವಿಯಲ್ಲಿ ದೂರಲಾಗಿದೆ.ರಾಯಬಾಗ ವಲಯದ ಶಿಕ್ಷಕರೊಬ್ಬರ ಮೇಲಿನ ದೂರಿನ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಡೋಣಿ ಎಂಬ ಅಧಿಕಾರಿ ಕೈಗೊಂಡ ವಿಚಾರಣೆ ವರದಿಯೂ ತಪ್ಪುಗಳಿಂದ ಕೂಡಿದೆ. ಇದರಿಂದ ಸಂಬಂಧವೇ ಇಲ್ಲದ ಶಿಕ್ಷಕರ ಬಡ್ತಿ ತಡೆ ಹಿಡಿಯುವಂತಹ ಕಠಿಣ ಕ್ರಮ ಜರುಗಿಸಲಾಗಿದೆ. ಈ ಕುರಿತು ಮರು ಪರಿಶೀಲನೆ ನಡೆಸಬೇಕು ಎಂದು ಆಗ್ರಹಿಸಲಾಗಿದೆ. ಜಿಲ್ಲೆಯಲ್ಲಿ ಅಮಾನತ್ತುಗೊಂಡ ಶಿಕ್ಷಕರ ವಿಚಾರಣೆ ವಿಳಂಬವಾಗುತ್ತಿದ್ದು, ತ್ವರಿತವಾಗಿ ಅಂತಹ ಪ್ರಕರಣಗಳನ್ನು ಮುಕ್ತಾಯಗೊಳಿಸಿ ಶಿಕ್ಷಕರು ನೆಮ್ಮದಿಯಿಂದ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಬೇಕು ಎಂದು ಮನವಿಯಲ್ಲಿ ಕೋರಲಾಗಿದೆ.ಎಚ್‌ಆರ್‌ಎಂಎಸ್ ಅಡಿಯಲ್ಲಿ ಸೇವಾ ದಾಖಲೆಗಾಗಿ ಮಾಹಿತಿಯನ್ನು ಕೂಡಲೇ ತಯಾರಿಸಿ ಸಕಾಲಕ್ಕೆ ವೇತನ ದೊರೆಯುವಂತಾಗಬೇಕು, ಮುಖ್ಯೋಪಾಧ್ಯಾಯ ಬಡ್ತಿ ಪ್ರಕ್ರಿಯೆಯನ್ನು ಜನವರಿ ಒಳಗಾಗಿ ಪೂರ್ಣಗೊಳಿಸಬೇಕು. ಪ್ರೌಢಶಾಲೆಗೆ ಪ್ರಾಥಮಿಕ ಶಾಲಾ ಶಿಕ್ಷಕರ ಬಡ್ತಿಯನ್ನು ನೀಡಬೇಕು, ಶಿಕ್ಷಕರ ಕೊರತೆಯಿರುವ ಶಾಲೆಗಳಿಗೆ ನಿಯೋಜನೆ ಮೇಲೆ ಶಿಕ್ಷಕರನ್ನು ನೀಡಬೇಕು, ಶಿಕ್ಷಕರ ಸಮಸ್ಯೆ ಕುರಿತು ವಲಯವಾರು ಸಂಘದ ಸಭೆ ಕರೆಯಬೇಕು ಮುಂತಾದ ಬೇಡಕೆಗಳನ್ನು ಈಡೇರಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಸಂಘದ ಜಿಲ್ಲಾಧ್ಯಕ್ಷ ಜಿ.ಎಂ.ಹಿರೇಮಠ, ಉಪಾಧ್ಯಕ್ಷ ಬಿ.ಬಿ.ಬಾಯನ್ನವರ, ಪ್ರಧಾನ ಕಾರ್ಯದರ್ಶಿ ಎಂ.ವೈ.ಗೋಕಾರ,ಪದಾಧಿಕಾರಿಗಳಾದ ಎಸ್.ಎಂ.ಲೋಕನ್ನವರ, ಸಿ.ವಿ.ದೊಡಮನಿ, ಎಸ್.ಜಿ.ದೇಶಿಂಗೆ, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಎನ್.ಜಿ.ಪಾಟೀಲ, ಎಂ.ಕೆ.ಅಳಗುಂಡಿ, ಎಸ್.ಎಸ್.ಧುಪದಾಳ, ವೈ.ಎಸ್. ಬುಡ್ಡಗೊಳ, ಎಸ್.ಎಸ್.ಜಂಬಗಿ, ಎನ್.ಎಸ್.ಕಾಂಬಳೆ, ಎಸ್. ಬಿ. ನೇಸರಗಿ, ಎಸ್.ಕೆ.ಕೋಚರಿಕರ ಮುಂತಾದವರು ಉಪಸ್ಥಿತರಿದ್ದರು.

Post Comments (+)