ಬೇಡಿಕೆ ಈಡೇರಿಕೆಗೆ ನೌಕರರ ಪ್ರತಿಭಟನೆ

7

ಬೇಡಿಕೆ ಈಡೇರಿಕೆಗೆ ನೌಕರರ ಪ್ರತಿಭಟನೆ

Published:
Updated:

ಚಿಂತಾಮಣಿ: ರಾಜ್ಯ ಸರ್ಕಾರ  ಮಂಡಿಸಲಿರುವ ಬಜೆಟ್‌ನಲ್ಲಿ ರಾಜ್ಯ ಸರ್ಕಾರಿ ನೌಕರರಿಗೂ ಕೇಂದ್ರ ಸರ್ಕಾರಿ ನೌಕರರಿಗೆ ನೀಡುವ ವೇತನ ಹಾಗೂ ಭತ್ಯೆ ನೀಡಲು ತೀರ್ಮಾನ ಕೈಗೊಳ್ಳದಿದ್ದರೆ ಮಾರ್ಚ್‌ನಲ್ಲಿ ಹೋರಾಟ ಹಮ್ಮಿಕೊಳ್ಳುವುದು ಎಂದು ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಆರ್.ನಾರಾಯಣರೆಡ್ಡಿ ಎಚ್ಚರಿಸಿದರು.ರಾಜ್ಯ ಸರ್ಕಾರಿ ನೌಕರರ ಸಂಘದ  ವತಿಯಿಂದ ಬುಧವಾರ ತಾಲ್ಲೂಕು ಕಚೇರಿ ಎದುರು ಹಮ್ಮಿಕೊಂಡಿದ್ದ  ಬಹಿರಂಗ ಸಭೆಯಲ್ಲಿ ನೌಕರರನ್ನು ಉದ್ದೇಶಿಸಿ ಅವರು ಮಾತನಾಡಿದರು.ರಾಜ್ಯ ನೌಕರರ ಸಂಘದ ಪದಾಧಿಕಾರಿಗಳು ಹಲವು ಬಾರಿ ಮುಖ್ಯಮಂತ್ರಿಗಳನ್ನು ಹಾಗೂ ಮುಖ್ಯ ಕಾರ್ಯದರ್ಶಿ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಲಾಗಿದೆ. ಅನೇಕ ಬಾರಿ ಮನವಿ ಸಹ ನೀಡಲಾಗಿದೆ, ಬಜೆಟ್‌ನಲ್ಲಿ ಅನುಕೂಲಕರ ತಿರ್ಮಾನ ಕೈಗೊಳ್ಳುವುದಾಗಿ ಸಿಎಂ ಭರವಸೆಯನ್ನು ಸಹ ನೀಡಿದ್ದಾರೆ. ಬರುವ ದಿನಗಳಲ್ಲಿ ಬೇಡಿಕೆ ಈಡೇರಿಸದಿದ್ದರೆ ಒಗ್ಗಟ್ಟಿನಿಂದ ಪ್ರತಿಭಟನೆಗೆ ಸಿದ್ದಗೊಳ್ಳುವಂತೆ ಕರೆ ನೀಡಿದರು.ಕೇಂದ್ರ ಸರ್ಕಾರಿ ನೌಕರರು ಮತ್ತು ಇತರೆ ರಾಜ್ಯ ಸರ್ಕಾರಗಳ ನೌಕರರು 2006ದಿಂದ 6 ನೇ ವೇತನ ಆಯೋಗದ ಶಿಫಾರಸ್ಸಿನಂತೆ ವೇತನ ಭತ್ಯೆ ಪಡೆಯುತ್ತಿದ್ದಾರೆ. ಅಂತಿಮ ಬಜೆಟ್‌ವರೆಗೂ ಸಮಯದ ಅವಕಾಶ ನೀಡಲಾಗಿದೆ ಎಂದು ಹೇಳಿದರು.ಸರ್ಕಾರವು ನೂತನವಾಗಿ ಜಾರಿಗೆ ತಂದಿರುವ ಪೆನ್ಷನ್(ಎನ್.ಪಿ.ಎಸ್) ಪದ್ದತಿಯನ್ನು ರದ್ದುಪಡಿಸಿ ಹಿಂದಿನ ನಿವೃತ್ತಿ ವೇತನ ಪದ್ದತಿಯನ್ನೇ ಮುಂದುವರಿಸಬೇಕು, ಮನೆ ಬಾಡಿಗೆ ಮತ್ತು ನಗರ ಪರಿಹಾರ ಭತ್ಯೆಗಳನ್ನು ಸಹ ಕೇಂದ್ರ ಸರ್ಕಾರಿ ನೌಕರರ ಸಮಾನ ನೀಡಬೇಕು. ದೇಶದ ಎಲ್ಲ ಸರ್ಕಾರಿ ನೌಕರರಿಗೂ ಒಂದೇ ರೀತಿಯ ವೇತನ ಸಿಗುವಂತೆ ರಾಷ್ಟ್ರೀಯ ವೇತನ ನೀತಿಯನ್ನು ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.ವೈದ್ಯಕೀಯ ಇಲಾಖೆಯಿಂದ ಡಾ.ವೆಂಕಟೇಶ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ವಸಂತರೆಡ್ಡಿ, ಚೌಡಪ್ಪ, ವೆಂಕಟೇಶ್ ಸೇರಿದಂತೆ ಹಲವು ಇಲಾಖೆಯ ನೌಕರರ ಪ್ರತಿನಿಧಿಗಳು ಮಾತನಾಡಿದರು. ವರ್ಗಾವಣೆಯಾದ ಶಿಕ್ಷಕರು ಮತ್ತು ನೌಕರರಿಗೆ ಸೇವೆಗೆ ಸೇರಿದ ದಿನವನ್ನು ಪರಿಗಣಿಸಿ ಕಾಲಮಿತಿ ಬಡ್ತಿ ಹಾಗೂ ಸ್ವಯಂಚಾಲಿತ ಬಡ್ತಿಯನ್ನು ಮಂಜೂರು ಮಾಡಬೇಕು. ವರ್ಗಾವಣೆ ಕಾಯ್ದೆ ರೂಪಿಸಬೇಕು, ಆರೋಗ್ಯ ಭಾಗ್ಯ ಯೋಜನೆಯಡಿ ರಾಜ್ಯ ಸರ್ಕಾರಿ ನೌಕರರಿಗೆ ನಗದು ರಹಿತ ಚಿಕಿತ್ಸೆ ಯೋಜನೆ ರೂಪಿಸಬೇಕೆಂದರು.ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ನೌಕರರಿಗೆ ಪ್ರತಿ  ತಿಂಗಳಿಗೆ 5 ನೇ ತಾರೀಖಿನೊಳಗೆ ವೇತನ ಪಾವತಿ, ರಾಜ್ಯ ಸರ್ಕಾರಿ ನೌಕರರ ಮಕ್ಕಳು ಶಾಲಾ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ವರಮಾನದ ಮೀತಿ ಕೇಂದ್ರ ಸರ್ಕಾರದ ವರಮಾನದ ಮಿತಿ , ಸ್ಥಗಿತ ವೇತನ ಬಡ್ತಿ ಹೆಚ್ಚಳ ಮತ್ತಿತರ ಬೇಡಿಕೆಗಳನ್ನು ಮನವಿ ಪತ್ರವನ್ನು ತಹಶೀಲ್ದಾರ್ ಕೃಷ್ಣಮೂರ್ತಿ ಮೂಲಕ ಮುಖ್ಯಮಂತ್ರಿ ಅವರಿಗೆ ಸಲ್ಲಿಸಲಾಯಿತು.ತಹಶೀಲ್ದಾರ್ ಕೃಷ್ಣಮೂರ್ತಿ, ಜಿಲ್ಲಾಧಿಕಾರಿ ಮೂಲಕ ಕೂಡಲೇ ಸರ್ಕಾರಕ್ಕೆ ಸಲ್ಲಿಸುವುದಾಗಿ ಭರವಸೆ ನೀಡಿದ ನಂತರ ಸಭೆಯನ್ನು ಮುಕ್ತಾಯಗೊಂಡಿತು.ತಾಲ್ಲೂಕು ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು ಹಾಗೂ ಬಹುತೇಕ ಎಲ್ಲ ಇಲಾಖೆಗಳ ಅಧಿಕಾರಿಗಳು ಹಾಗೂ ನೂರಾರು ನೌಕರರು ಸಭೆಯಲ್ಲಿ ಭಾಗವಹಿಸಿದ್ದರು.ವೇತನ ಆಯೋಗ ಜಾರಿಯಾಗಲಿ

ಬಾಗೇಪಲ್ಲಿ: ಕೇಂದ್ರ ಆರನೇ ವೇತನ ಆಯೋಗದ ಶಿಫಾರಸುಗಳನ್ನು ರಾಜ್ಯ ಸರ್ಕಾರಿ ನೌಕರರಿಗೂ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ತಾಲ್ಲೂಕು ಸರ್ಕಾರಿ ನೌಕರರ ಸಂಘದ ನೇತೃತ್ವದಲ್ಲಿ ನೂರಾರು ಸರ್ಕಾರಿ ನೌಕರರು ಬುಧವಾರ ಇಲ್ಲಿ ಪ್ರತಿಭಟನೆ ನಡೆಸಿದರು.ಮನೆ ಬಾಡಿಗೆ, ನಗರ ಪರಹಾರ ಭತ್ಯೆ, ಆರೋಗ್ಯ ಭಾಗ್ಯ ಯೋಜನೆಯಡಿಯಲ್ಲಿ ಸರ್ಕಾರಿ ನೌಕರರಿಗೆ ನಗದು ರಹಿತ ಚಿಕಿತ್ಸಾ ಸೌಲಭ್ಯ ಮತ್ತಿತರ ಬೇಡಿಕೆಗಳನ್ನು ಈಡೇರಿಸುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು. ಪಟ್ಟಣದ ತಾಲ್ಲೂಕು ಕಚೇರಿಯ ಮುಂಭಾಗದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ರಾಜ್ಯ ಸರ್ಕಾರ ಈ ಕೊಡಲೇ 6ನೇ ವೇತನ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಆರ್. ಹನುಮಂತರೆಡ್ಡಿ ಮಾತನಾಡಿ, ಕೇಂದ್ರ ಸರ್ಕಾರ  ಪ್ರತಿ 10 ವರ್ಷಗಳಿಗೊಮ್ಮೆ ವೇತನ ಪರಿಷ್ಕರಣೆ ಮಾಡಲಿದೆ.  1998ರಲ್ಲಿ 5ನೇ ವೇತನ ಆಯೋಗದ ಶಿಫಾರಸು ಜಾರಿಗೊಳಿಸಿದ ನಂತರ 6ನೇ ವೇತನ ಆಯೋಗ ರಚಿಸುವ ಪೂರ್ವದಲ್ಲಿ ತನ್ನ ನೌಕರರಿಗೆ ಶೇ 50 ರಷ್ಟು ತುಟ್ಟಿಭತ್ಯೆ ನೀಡಿತ್ತು, ಆದರೆ ರಾಜ್ಯ ಸರ್ಕಾರ ಇಂಥ ಯಾವುದೇ ಸೌಲಭ್ಯ ನೀಡಿಲ್ಲ ಎಂದು ಕಿಡಿಕಾರಿದರು.ಕರ್ನಾಟಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಡಿ.ಎನ್.ನಾರಾಯಣಸ್ವಾಮಿ ಶೆಟ್ಟಿ  ಮಾತನಾಡಿ, ಜಿಲ್ಲೆಯಿಂದ ಜಿಲ್ಲೆಗೆ ವರ್ಗಾವಣೆಗೊಳ್ಳುವ ಶಿಕ್ಷಕರ ಹಿಂದಿನ ಜಿಲ್ಲೆಯಲ್ಲಿರುವ ಸೇವೆಯನ್ನು ಪರಿಗಣಿಸಬೇಕು. 10 ವರ್ಷದ ಕಾಲಮಿತಿ ಬಡ್ತಿ ಹಾಗೂ 15 ವರ್ಷದ ಸ್ವಯಂಚಾಲಿತ ಬಡ್ತಿ ನೀಡಬೇಕು ಎಂದು ಒತ್ತಾಯಿಸಿದರು.ಸರ್ಕಾರಿ ಪ್ರೌಢಶಾಲಾ ಸಹ ಶಿಕ್ಷಕರ ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಎಸ್.ಕೃಷ್ಣರಾವ್, ಕಾರ್ಯದರ್ಶಿ ಕೆ.ಬಿ.ಆಂಜನೇಯರೆಡ್ಡಿ, ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಎ.ವೆಂಕಟೇಶ್ವರ, ಅಖಿಲ ಕರ್ನಾಟಕ ಪ್ರಾಥಮಿಕ ಶಿಕ್ಷಕ ಸಂಘದ ತಾಲ್ಲೂಕು  ಘಟಕದ ಅಧ್ಯಕ್ಷ ಬಿ.ವಿ.ಶಿವಯ್ಯ, ಕಾರ್ಯದರ್ಶಿ ಕೆ.ವಿ.ರಾಜಣ್ಣ, ಸಂಘಟನಾ ಕಾರ್ಯದರ್ಶಿ ಕೆ.ಎನ್.ವಿಜಯ್‌ಕುಮಾರ್, ತಾಲ್ಲೂಕು ದೈಹಿಕ ಶಿಕ್ಷಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಎ.ನರಸಿಂಹಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳಾದ ನಾರಾಯಣಸ್ವಾಮಿ, ಫಯಾಜ್‌ಅಹಮದ್, ಜಿ.ಆರ್.ರಮೇಶ್ ಇತರರು ಪ್ರತಿಭಟನೆ ನೇತೃತ್ವ ವಹಿಸಿದ್ದರು.ತಾರತಮ್ಯ ನಿವಾರಣೆಗೆ ಮೆರವಣಿಗೆ

ಶಿಡ್ಲಘಟ್ಟ: ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಸರ್ಕಾರಿ ನೌಕರರು ಬುಧವಾರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ತಾಲ್ಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು.

 ಕೇಂದ್ರ ಸರ್ಕಾರದ ಮಾದರಿಯಲ್ಲಿ ರಾಜ್ಯ ಸರ್ಕಾರಿ ನೌಕರರರಿಗೆ 6ನೇ ವೇತನ ಆಯೋಗ ಶಿಫಾರಸ್ಸು ಮಾಡಿದ ವೇತನ ಮತ್ತು ಭತ್ಯೆ ಪರಿಷ್ಕರಣೆ, ಕೇಂದ್ರ ಸರ್ಕಾರಕ್ಕನುಗುಣವಾಗಿ ರಾಜ್ಯ ಸರ್ಕಾರಿ ನೌಕರರಿಗೆ ಮನೆ ಬಾಡಿಗೆ ಹಾಗೂ ಇತರೆ ಭತ್ಯೆ ಮಂಜೂರು ಮಾಡಬೇಕು. ಇತರೆ ರಾಜ್ಯಗಳಿಗೆ ಹೋಲಿಸಿದಲ್ಲಿ ರಾಜ್ಯದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಿ ನೌಕರರ ನಡುವೆ  ಶೇ 30ರಿಂದ  40ರಷ್ಟು ವೇತನದಲ್ಲಿ ವ್ಯತ್ಯಾಸವಿದೆ ಎಂದು ಆರೋಪಿಸಿರುವ ನೌಕರರು ಕೂಡಲೆ ಇದನ್ನು  ಸರಿಪಡಿಸುವಂತೆ ಆಗ್ರಹಿಸಿದರು.  ಕಳೆದ 2006ರಿಂದ 6ನೇ ವೇತನ ಆಯೋಗದ ಅನ್ವಯ ವೇತನ ಪಾವತಿಯಾಗಬೇಕಿದ್ದರೂ ಇದುವರೆಗೂ ಅನುಷ್ಠಾನ ಗೊಳ್ಳದೆ ನೌಕರರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.  ನೌಕರರು ತಮ್ಮೆಲ್ಲಾ ಬೇಡಿಕೆ ಈಡೇರಿಸವಂತೆ ಮುಖ್ಯಮಂತ್ರಿ ಒತ್ತಾಯಿಸಿ ಮನವಿ ಪತ್ರ ಸಲ್ಲಿಸಿದರು.ತಹಸೀಲ್ದಾರ್ ಬಿ.ಮಲ್ಲಿಕಾರ್ಜುನ್ ಮನವಿ ಸ್ವೀಕರಿಸಲಾಯಿತು. ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಗುರುರಾಜ್‌ರಾವ್, ಕಾರ್ಯದರ್ಶಿ ಎಸ್.ಎಂ.ಅಕ್ಕಲರೆಡ್ಡಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಟಿ.ಟಿ ನರಸಿಂಹಪ್ಪ, ರಾಜ್ಯ ಪರಿಷತ್ ಸದಸ್ಯ ಸುಬ್ಬಾರೆಡ್ಡಿ, ನಟರಾಜ್, ಕೇಶವರೆಡ್ಡಿ, ವಿಜಯಕುಮಾರ್, ಶ್ರೀರಾಮಯ್ಯ, ಮಂಜುನಾಥ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಬೇಡಿಕೆಗೆ ಆಗ್ರಹಿಸಿ ಪ್ರತಿಭಟನೆ 

ಗುಡಿಬಂಡೆ:  ಕೇಂದ್ರ ಹಾಗೂ ರಾಜ್ಯ ಸರ್ಕಾರದ ನೌಕರರ ನಡುವಿನ ವೇತನದದಲ್ಲಿ  ಅಜಗಜಾಂತರ ವ್ಯತ್ಯಾಸವಿದೆ. ಇದನ್ನು ಹೋಗಲಾಡಿಸಲು ರಾಜ್ಯ ಸರ್ಕಾರ ಆರನೇ ವೇತನ ಆಯೋಗದ ಶಿಫಾರಸ್ಸುಗಳನ್ನು ಯಥಾವತ್ತಾಗಿ ಜಾರಿಗೆ ತರಬೇಕು ಎಂದು ಆಗ್ರಹಿಸಿ ಬುಧವಾರ ತಾಲ್ಲೂಕು ಸರ್ಕಾರಿ ನೌಕರರು ಪಟ್ಟಣದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ತಹಶೀಲ್ದಾರ್‌ಗೆ ಮನವಿ ಪತ್ರ ಸಲ್ಲಿಸಿದರು.ಇಂದಿನ ಪರಿಸ್ಥಿತಿಯಲ್ಲಿ ಸಾಮಾನ್ಯ ಸರ್ಕಾರಿ ನೌಕರರು ಜೀವನ ನಡೆಸುವುದು ತುಂಬಾ ದುಸ್ತರವಾಗಿದೆ, ನಿತ್ಯ ಬಳಕೆಯ ಪದಾರ್ಥಗಳ ಬೆಲೆ ಗಗನಮುಖಿಯಾಗಿದೆ. ರಾಜ್ಯ ಸರ್ಕಾರದ ನೌಕರರು ಸವಲತ್ತುಗಳಿಂದ ವಂಚಿತರಾಗಿದ್ದಾರೆ, ಸಮಾನ ಕೆಲಸಕ್ಕೆ ಸಮಾನ ವೇತನ ಎಂಬ ನೀತಿ ಜಾರಿಯಲ್ಲಿದ್ದರೂ,  ಒಂದೇ ರೀತಿಯ ಕೆಲಸ ನಿರ್ವಹಿಸುವ ನೌಕರರ ನಡುವೆ ವೇತನ ತಾರತಮ್ಯ ಇದೆ ಎಂದು ನೌಕರರು ಟೀಕಿಸಿದರು.ರಾಜ್ಯ ಸರ್ಕಾರ 6ನೇ ವೇತನ ಆಯೋಗದ ಶಿಫಾರಸ್ಸುಗಳನ್ನು ಜಾರಿಗೆ ತಂದು ಬಜೆಟ್‌ನಲ್ಲಿ ಸೇರ್ಪಡೆ ಮಾಡಬೇಕೆಂದು ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ವಿ.ನಾರಾಯಣಸ್ವಾಮಿ ಆಗ್ರಹಿಸಿದರು.ಉಪಾಧ್ಯಕ್ಷ ರವೀಂದ್ರ ಉಪ್ಪಾರ್, ಕಾರ್ಯದರ್ಶಿ ಮುನಿಕೃಷ್ಣ, ಮಾಜಿ ಅಧ್ಯಕ್ಷ ಕೃಷ್ಣಪ್ಪ,  ಗಂಗರತ್ನಮ್ಮ, ಜಯರಾಮರೆಡ್ಡಿ, ಶ್ರೀರಾಮರೆಡ್ಡಿ, ಚಿನ್ನಪ್ಪರೆಡ್ಡಿ, ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಅಶ್ವತ್ಥನಾರಾಯಣಪ್ಪ, ಕಾರ್ಯದರ್ಶಿ ಶ್ರೀರಾಮಪ್ಪ, ಉಪಾಧ್ಯಕ್ಷ ಬಾಲಾಜಿ, ತಾಲ್ಲೂಕು ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎನ್.ನಾರಾಯಣಸ್ವಾಮಿ, ಕಾರ್ಯದರ್ಶಿ ಪ್ರವೀಣ್‌ಕುಮಾರ್, ಉಪಾಧ್ಯಕ್ಷ ಗಣೇಶ್, ಎನ್.ಕೃಷ್ಣಪ್ಪ, ಪದಾಧಿಕಾರಿಗಳಾದ ಗಂಗರಾಜು, ಹನುಮಂತು, ಶ್ರೀನಿವಾಸ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry