ಶುಕ್ರವಾರ, ಜೂನ್ 25, 2021
29 °C

ಬೇಡಿಕೆ ಈಡೇರಿಕೆಗೆ ಪಾದಯಾತ್ರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರವಾರ: ಉಳಗಾ - ಕೇರವಡಿ ಗ್ರಾಮಗಳ ನಡುವೆ ಕಾಳಿನದಿಗೆ ಸೇತುವೆ ನಿರ್ಮಿಸಬೇಕು, ಅರಣ್ಯ ಅತಿಕ್ರಮಣ ಸಕ್ರಮ ಮಾಡಬೇಕು ಮತ್ತು ಏತ ನೀರಾವರಿ ಯೋಜನೆಗಳ ಜಾರಿ ಮಾಡಬೇಕು ಎಂದು ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘದ ತಾಲ್ಲೂಕಿನ ಉಳಗಾದಿಂದ ಪಾದಯಾತ್ರೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಜಿಲ್ಲಾಧಿಕಾರಿ ಇಂಕಾಂಗ್ಲೋ ಜಮೀರ್ ಅವರಿಗೆ ಮನವಿ ಸಲ್ಲಿಸಿದರು.ತಾಲ್ಲೂಕಿನ ಉಳಗಾದಿಂದ ಆರಂಭವಾದ ಪಾದಯಾತ್ರೆ ಹಳಗೇಜೂಗ್, ಹಣಕೋಣಜೂಗ್, ಹಣಕೋಣ, ಅಸ್ನೋಟಿ, ಸದಾಶಿವಗಡ ಮಾರ್ಗವಾಗಿ ನಗರಕ್ಕೆ ಆಗಮಿಸಿತು. ನಗರದ ಪ್ರಮುಖ ಬೀದಿಗಳಲ್ಲಿಯೂ ಪ್ರತಿಭಟನಾಕಾರರು ಮೆರವಣಿಗೆ ನಡೆಸಿದರು.ಕೇರವಡಿ, ಮಲ್ಲಾಪುರ, ಕದ್ರಾ, ದೇವಳಮಕ್ಕಿ, ಹಳಗಾ (ಘಾಡಶಾಯಿ), ಭೈರಾ, ಬಾಳ್ನಿ,  ಚಿತ್ತಾಕುಲ ಮುಂತಾದ ಗ್ರಾಮಗಳ ಜನತೆಯ ಬಹು ವರ್ಷಗಳ ಬೇಡಿಕೆಯಾಗಿರುವ ಉಳಗಾ- ಕೆರವಡಿ ನಡುವೆ ಕಾಳಿ ನದಿಗೆ ಸೇತುವೆ ನಿರ್ಮಾನ ನೆನೆಗುದಿಗೆ ಬಿದ್ದಿದೆ.

 

ಸಾವಿರಾರು ಜನರಿಗೆ ಬಹು ಉಪಯೋಗಿಯಾದ ಸೇತುವೆ ನಿರ್ಮಾಣ ಭರವಸೆ ಮಾತು ಚುನಾವಣೆಯಲ್ಲಷ್ಟೆ ಕೇಳಿ ಬರುತ್ತವೆ. ಆ ನಂತರ  ಮರೆಯಾಗುತ್ತದೆ. ಮತ್ತೆ ಚುನಾವಣೆ ಬಂದಾಗ ಜನಪ್ರತಿನಿಧಿಗಳು ಆಶ್ವಾಸನೆ ಕೊಡುತ್ತಾರೆ. ಚುನಾಯಿತರಾದ ಮೇಲೆ ಮತ್ತೆ ಮರೆಯುತ್ತಾರೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.ಸೇತುವೆಗೆ ಬೇಡಿಕೆಯಿಟ್ಟು ಕರ್ನಾಟಕ ಪ್ರಾಂತ ರೈತ ಸಂಘ ಹತ್ತಾರು ವರ್ಷಗಳಿಂದ ಚಳವಳಿ ನಡೆಸುತ್ತಾ ಬಂದಿದೆ. ಕೆಲ ವರ್ಷಗಳ ಹಿಂದೆ ಉಳಗಾ- ಕೆರವಡಿ ಮಧ್ಯೆ ದೋಣಿ ದುರಂತ ಸಂಭವಿಸಿ ಜೀವಹಾನಿಯಾಗಿದೆ.ಏಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನರಿಗೆ ಅವಶ್ಯಕವಾದ ಈ ಸೇತುವೆ ನಿರ್ಮಾಣ ಅತಿಜರೂರಾಗಿ ಆಗಬೇಕಾದ ಕೆಲಸವಾಗಿದೆ. ಸೇತುವೆಯಿಂದ ಜನರಿಗೆ ಸಮಯ ಹಾಗೂ ಇಂಧನ ಉಳಿತಾಯವಾಗುತ್ತದೆ.

 

ದೋಣಿಯಿಂದ ಸಂಭವಿಸಬಹುದಾದ ದುರಂತಗಳು ತಪ್ಪಲಿದೆ. ಉಳಗಾ ಪದವಿ ಕಾಲೇಜಿಗೆ ಬರಲು ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.ಅರಣ್ಯ ಭೂಮಿ ಅತಿಕ್ರಮಣ ಮಾಡಿಕೊಂಡು 50-60 ವರ್ಷಗಳಿಂದ ಜೀವನ ಸಾಗಿಸುತ್ತಿರುವ ಸಾವಿರಾರು ಕುಟುಂಬಗಳು ಈ ಪ್ರದೇಶದಲ್ಲಿದ್ದು, ಸರ್ಕಾರಕ್ಕೆ ಅರ್ಜಿ ಹಾಕಿಕೊಂಡು ಕಾಯುತ್ತಿದ್ದಾರೆ. ಬಡ ಜನರಿಗೆ ತಕ್ಷಣದಲ್ಲಿ ಅರಣ್ಯ ಜಮೀನು ಮಂಜೂರು ಮಾಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.ಸಂಘದ ಜಿಲ್ಲಾ ಕಾರ್ಯದರ್ಶಿ ಶಾಂತಾರಾಮ ನಾಯಕ, ತಾಲ್ಲೂಕು ಘಟಕದ ಅಧ್ಯಕ ವಿಷ್ಣು ನಾಯ್ಕ, ಕಾರ್ಯದರ್ಶಿ ಶಾಮನಾಥ ನಾಯ್ಕ, ಯಮುನಾ ಗಾಂವಕರ್ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.