ಬೇಡಿಕೆ ಈಡೇರಿಕೆ: ಕಾರ್ಮಿಕರ ಪ್ರತಿಭಟನೆ

7

ಬೇಡಿಕೆ ಈಡೇರಿಕೆ: ಕಾರ್ಮಿಕರ ಪ್ರತಿಭಟನೆ

Published:
Updated:
ಬೇಡಿಕೆ ಈಡೇರಿಕೆ: ಕಾರ್ಮಿಕರ ಪ್ರತಿಭಟನೆ

ಬೆಂಗಳೂರು: ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವುದು, ಗುತ್ತಿಗೆ ಪದ್ಧತಿಯನ್ನು ರದ್ದು ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಬೆಂಗಳೂರು ಜಿಲ್ಲಾ ಗುತ್ತಿಗೆ ಕಾರ್ಮಿಕರ ಒಕ್ಕೂಟದ ಸದಸ್ಯರು ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.

ಪುರಭವನದಿಂದ ಜಾಥಾ ಆರಂಭಿಸಿದ ಪ್ರತಿಭಟನಾಕಾರರು, ಮೈಸೂರು ಬ್ಯಾಂಕ್ ವೃತ್ತ ಮಾರ್ಗವಾಗಿ ಬನಪ್ಪ ಉದ್ಯಾನಕ್ಕೆ ತೆರಳಿ ಅಲ್ಲಿ ಧರಣಿ ಕುಳಿತರು.ಪಶ್ಚಿಮ ಬಂಗಾಳದ ಮಜ್ದೂರ್ ಕ್ರಾಂತಿ ಪರಿಷತ್‌ನ ಕಾರ್ಯದರ್ಶಿ ಆವಾಷ್ ಮುನ್ಷಿ ಮಾತನಾಡಿ, `ಸರ್ಕಾರಿ ಸ್ವಾಮ್ಯದ ಉದ್ದಿಮೆಗಳು, ಖಾಸಗಿ ಕಂಪೆನಿಗಳು, ಕೈಗಾರಿಕೆಗಳು ಸೇರಿದಂತೆ ದೇಶದ ಬಹುತೇಕ ಉದ್ದಿಮೆಗಳಲ್ಲಿ ಗುತ್ತಿಗೆ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಕಾಯಂ ನೌಕರರಿಗೆ ಹೆಚ್ಚಿನ ವೇತನ, ಮೂಲ ಸೌಕರ್ಯಗಳನ್ನು ಒದಗಿಸುತ್ತಿರುವ ಮಾಲೀಕರು, ಗುತ್ತಿಗೆ ಕಾರ್ಮಿಕರಿಗೆ ನಾಲ್ಕೈದು ಸಾವಿರ ವೇತನ ನೀಡಿ ಹೆಚ್ಚು ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ. ಇಂತಹ ಶೋಷಣೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಶೀಘ್ರವೇ ಗುತ್ತಿಗೆ ಪದ್ಧತಿ ನಿಯಂತ್ರಣ ಮತ್ತು ರದ್ದತಿ ಕಾಯ್ದೆಯನ್ನು ಜಾರಿಗೆ ತರಬೇಕು' ಎಂದು ಒತ್ತಾಯಿಸಿದರು.`ಕೈಗಾರಿಕೆಗಳಲ್ಲಿ ಉತ್ಪಾದನೆಯ ಕೇಂದ್ರ ಚಟುವಟಿಕೆ (ಕೋರ್ ಆಕ್ಟಿವಿಟಿ) ಮತ್ತು ಉತ್ಪಾದನೇತರ ಹೊರಗಿನ ಕೆಲಸಗಳು (ನಾನ್ ಕೋರ್) ಎಂಬ ವಿಭಾಗ ಮಾಡಲಾಗಿದೆ. ನಾನ್‌ಕೋರ್ ವಿಭಾಗದಲ್ಲಿ ಸೆಕ್ಯುರಿಟಿ, ಹೌಸ್ ಕೀಪಿಂಗ್, ಕ್ಯಾಂಟಿನ್ ನಿರ್ವಹಣೆಯಂತಹ ಕೆಲಸಗಳಲ್ಲಿ ಮೊದಲು ಗುತ್ತಿಗೆ ಪದ್ಧತಿಯನ್ನು ಜಾರಿಗೆ ತರಲಾಯಿತು. ಇದನ್ನು ವಿರೋಧಿಸಿ ಕಾರ್ಮಿಕ ಸಂಘಟನೆಗಳು ದೇಶದಾದ್ಯಂತ ಹೋರಾಟ ಮಾಡಿದ್ದವು. ಇದರ ಫಲವಾಗಿ ಗುತ್ತಿಗೆ ಕಾರ್ಮಿಕರ ಪದ್ಧತಿಯನ್ನು ರದ್ದು ಮಾಡುವುದಾಗಿ ಸರ್ಕಾರ 1997ರ ಏಪ್ರಿಲ್ 4ರಂದು ಪ್ರಕಟಣೆ ಹೊರಡಿಸಿತು.

ಈ ಕ್ರಮದ ವಿರುದ್ಧ ಮಾಲೀಕರು ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್‌ಗಳಲ್ಲಿ ಪ್ರಶ್ನಿಸಿದರೂ ನ್ಯಾಯಾಲಯ ನಿಷೇಧದ ಪ್ರಕಟಣೆಯನ್ನು ಎತ್ತಿಹಿಡಿದಿತ್ತು. ಆದರೆ, ಸರ್ಕಾರವೇ ಮಾಲೀಕರ ಒತ್ತಡಕ್ಕೆ ಮಣಿದು 2001ರ ಆಗಸ್ಟ್ 1ರಂದು ಪ್ರಕಟಣೆಯನ್ನು ವಾಪಸ್ ತೆಗೆದುಕೊಂಡಿದ್ದರಿಂದ ಗುತ್ತಿಗೆ ಪದ್ಧತಿ ವ್ಯಾಪಕವಾಗಿ ಬೆಳೆದಿದೆ' ಎಂದು ಒಕ್ಕೂಟದ ರಾಜ್ಯ ಘಟಕದ ಸಂಚಾಲಕ ಎಚ್.ವಿ.ವಾಸು ಹೇಳಿದರು.ಪ್ರತಿಭಟನೆಯಲ್ಲಿ ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಸಂಶೋಧನಾ ಸಂಸ್ಥೆಯ ಶುಶ್ರೂಷಕರು, ರೇಸ್‌ಕೋರ್ಸ್ ಕಾರ್ಮಿಕರು ಸೇರಿದಂತೆ ವಿವಿಧ ಕಂಪೆನಿಗಳ ಗುತ್ತಿಗೆ ನೌಕರರು ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry