ಬೇಡಿಕೆ ಮುಂದಿಟ್ಟು ರೈತರ ಪ್ರತಿಭಟನೆ

7

ಬೇಡಿಕೆ ಮುಂದಿಟ್ಟು ರೈತರ ಪ್ರತಿಭಟನೆ

Published:
Updated:

ಸುರಪುರ: ರೈತರ ಪಂಪಸೆಟ್‌ಗಳಿಗೆ ಸಮರ್ಪಕ ವಿದ್ಯುತ್ ಒದಗಿಸಬೇಕೆಂಬುದೂ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಸೋಮವಾರ ಇಲ್ಲಿನ ಗಾಂಧಿ ವೃತ್ತದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.ವೇಣುಗೋಪಾಲಸ್ವಾಮಿ ದೇವಸ್ಥಾನದಲ್ಲಿ ಜಮಾವಣೆಗೊಂಡ ರೈತರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ಗಾಂಧಿವೃತ್ತದಲ್ಲಿ ಸೇರಿ ಬಹಿರಂಗ ಸಭೆ ನಡೆಸಿದರು.ಜಿಲ್ಲಾ ಸಂಚಾಲಕ ಮಲ್ಲಿಕಾರ್ಜುನ ಸತ್ಯಂಪೇಟೆ ಮಾತನಾಡಿ, ರಾಜ್ಯ ಭೀಕರ ಬರಗಾಲದಿಂದ ತತ್ತರಿಸಿದರೂ ಸರ್ಕಾರ ರೈತರ ನೆರವಿಗೆ ಧಾವಿಸುತ್ತಿಲ್ಲ. ಬರಗಾಲ ಕಾಮಗಾರಿ ಆರಂಭಿಸಿಲ್ಲ. ಉದ್ಯೋಗ ಖಾತ್ರಿ ಸಂಪೂರ್ಣ ವಿಫಲವಾಗಿದೆ. ಗೊಬ್ಬರ, ಕ್ರಿಮಿನಾಶಕದ ಬೆಲೆ ಗಗನಕ್ಕೇರಿದೆ. ಇದರಿಂದ ರೈತ ಹತಾಶನಾಗಿದ್ದಾನೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.ರೈತರ ಬಹುದಿನಗಳ ಬೇಡಿಕೆಯಾಗಿದ್ದ ಬೋನ್ದಾಳ ಏತ ನೀರಾವರಿ ಯೋಜನೆ ಲೋಕಾರ್ಪಣೆಗೊಂಡರೂ ಜಮೀನುಗಳಿಗೆ ನೀರು ಹರಿದಿಲ್ಲ. ಈ ಯೋಜನೆಯ ಭಾಗದಲ್ಲಿ ಬರುವ ಕಾಲುವೆಗಳಲ್ಲಿ ಹೂಳು ತುಂಬಿದೆ. ಮುಳ್ಳು, ಕಂಟಿಗಳು ಬೆಳೆದಿವೆ. ಈ ಕಾಲುವೆಗಳು ನವೀಕರಣಗೊಳ್ಳಬೇಕು ಎಂದು ಆಗ್ರಹಿಸಿದರು.ರವಿ ಕಾಣದ್ದನ್ನು ಕವಿ ಕಾಣುತ್ತಾನೆ ಎಂಬ ನಾಣ್ಣುಡಿ ಇದೆ. ಖ್ಯಾತ ಸಾಹಿತಿ ಎ. ಕೃಷ್ಣ ಅವರು ಸ್ವಯಂ ಪ್ರೇರಿತರಾಗಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ. ಅಧಿಕಾರಿಗಳಿಗೆ ತಿಳಿಯದ ರೈತರ ಕಷ್ಟವನ್ನು ಸಾಹಿತಿ ಅರ್ಥ ಮಾಡಿಕೊಂಡಿದ್ದಾರೆ. ವಿವಿಧ ಸಂಘಟನೆಗಳು ಪ್ರತಿಭಟನೆಯನ್ನು ಬೆಂಬಲಿಸಿ ಭಾಗವಹಿಸಿವೆ. ಇದು ರೈತರ ಶಕ್ತಿ ಎಂದು ಪ್ರತಿಪಾದಿಸಿದರು.ತಾಲ್ಲೂಕು ಅಧ್ಯಕ್ಷ ಅಯ್ಯಣ್ಣ ಹಾಲಬಾವಿ, ಪ್ರಧಾನ ಕಾರ್ಯದರ್ಶಿ ಶರಣಪ್ಪ ಕೋಳೀಹಾಳ, ಕನ್ನಡ ಸೇನೆಯ ಜಿಲ್ಲಾಧ್ಯಕ್ಷ ರಾಜು ಕುಂಬಾರ, ಮುಖಂಡರಾದ ರಾಜಾ ರಾಮಪ್ಪನಾಯಕ್ ಜೇಜಿ, ಉಸ್ತಾದ್ ವಜಾಹತ್ ಹುಸೇನ್, ಅಹ್ಮದ್ ಪಠಾಣ ಮಾತನಾಡಿದರು.ರೈತರ ಎಲ್ಲ ಸಾಲವನ್ನು ಮನ್ನಾ ಮಾಡಬೇಕು. ಬರಗಾಲದಿಂದ ನಾಶವಾದ ಪ್ರತಿ ಎಕರೆ ಬೆಳೆಗೆ ಕನಿಷ್ಠ ರೂ. 5 ಸಾವಿರ ಪರಿಹಾರ ವಿತರಿಸಬೇಕು. ಟ್ರ್ಯಾಕ್ಟರ್ ಸಾಲಗಾರರಿಗೆ ಕೊಡುತ್ತಿರುವ ಕಿರುಕುಳ ನಿಲ್ಲಬೇಕು. ಕಾವೇರಿ ವಿಷಯದಲ್ಲಿ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿರುವುದನ್ನು ಬಿಡಬೇಕು. ಜಮೀನುಗಳ ಸರ್ವೆ ಕಾರ್ಯ ನಿಗದಿತ ಸಮಯದಲ್ಲಿ ಆಗಬೇಕು. ಇತರ ಬೇಡಿಕೆಗಳ ಮನವಿ ಪತ್ರವನ್ನು ತಹಸೀಲ್ದಾರ್ ಅವರಿಗೆ ಸಲ್ಲಿಸಲಾಯಿತು.ಮೈಲಾರೆಪ್ಪ ಸಗರ, ಹಣಮಗೌಡ ನಾರಾಯಣಪುರ, ಸಂಗಣ್ಣ ಅಂಗಡಿ, ಬಸವರಾಜಪ್ಪಗೌಡ, ಕನಕ ಯುವಸೇನೆಯ ಉತ್ತರ ಕರ್ನಾಟಕ ವಿಭಾಗದ ಅಧ್ಯಕ್ಷ ರಂಗನಗೌಡ ದೇವಿಕೇರಿ, ಅರ್ಷದ್ ದಖನಿ, ರತ್ನರಾಜ ಶಾಲಿಮನಿ, ಹಣಮಂತರಾಯ ಬಿರೆದಾರ, ಹಣಮಂತರಾಯ ದೊರೆ ಚೌಡೇಶ್ವರಿಹಾಳ, ಮರೆಪ್ಪ ನಾಯಕ್, ಮರಿಲಿಂಗಪ್ಪ ದೊರಿ, ಮಲ್ಲಯ್ಯ ಮೇಟಿ, ಮತ್ತಿತರರು ಪ್ರತಿಭಟನೆಯಲ್ಲಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry