ಬೇಡಿಕೆ ಹಲವು: ಪ್ರತಿಭಟನೆ ಮೂರು

7

ಬೇಡಿಕೆ ಹಲವು: ಪ್ರತಿಭಟನೆ ಮೂರು

Published:
Updated:

ಗುಲ್ಬರ್ಗ:  ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ವಿವಿಧ ಸಂಘಟನೆಗಳು ಹಾಗೂ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಸದಸ್ಯರು ನಗರದ ಮಿನಿ ವಿಧಾನಸೌಧ ಹಾಗೂ ಸರ್ದಾರ್ ವಲ್ಲಭಭಾಯ್ ಪಟೇಲ್ ವೃತ್ತದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.ಮೀಸಲಾತಿ ನೀಡಲು ಆಗ್ರಹ: ಕಡಗಂಚಿಯಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಬೋಧಕ ಮತ್ತು ಬೋಧಕೇತರ ಹುದ್ದೆಗಳ ನೇಮಕಾತಿಯಲ್ಲಿ ಸಂವಿಧಾನದ 371 (ಜೆ) ಕಲಂ ಪ್ರಕಾರ ಮೀಸಲಾತಿ ನೀಡಬೇಕು ಎಂದು ಒತ್ತಾಯಿಸಿ ಬಿಜೆಪಿ ಯುವ ಮೋರ್ಚಾ (ಗ್ರಾಮಾಂತರ ಘಟಕ) ಸದಸ್ಯರು ಪ್ರತಿಭಟನೆ ಮಾಡಿದರು.ಹೈದರಾಬಾದ್ ಕರ್ನಾಟಕ ಪ್ರದೇಶ 60 ವರ್ಷಗಳಿಂದಲೂ ಹಿಂದುಳಿದಿದೆ. ಈ ಕಾರಣಕ್ಕಾಗಿಯೇ ನಂಜುಂಡಪ್ಪ ವರದಿ ಆಧರಿಸಿ ಕೇಂದ್ರೀಯ ವಿ.ವಿ ಸ್ಥಾಪಿಸಲಾಗಿದೆ. ಆದ್ದರಿಂದ ಕೇಂದ್ರೀಯ ವಿ.ವಿ ನೇಮಕಾತಿಯಲ್ಲಿ ಹೈ.ಕ ಭಾಗಕ್ಕೆ ಹೆಚ್ಚಿನ ಪ್ರಾತಿನಿಧ್ಯ ನೀಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಪ್ರತಿಭಟನಾನಿರತರು ಆಕ್ರೋಶ ವ್ಯಕ್ತಪಡಿಸಿದರು.ಇದಕ್ಕೂ ಮುನ್ನ ಸರ್ದಾರ್ ವಲ್ಲಭಭಾಯ್ ಪಟೇಲ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ತೆರಳಿ ಮನವಿಪತ್ರ ಸಲ್ಲಿಸಿದರು.

ಮಾಜಿ ಸಚಿವ ರೇವುನಾಯಕ ಬೆಳಮಗಿ, ಶಾಸಕ ದತ್ತಾತ್ರೇಯ ಪಾಟೀಲ ರೇವೂರ, ಜಿಲ್ಲಾ ಘಟಕದ ಅಧ್ಯಕ್ಷ ಪರಶುರಾಮ ನಸಲವಾಯಿ, ಅಶೋಕ ಹೊಕ್ರಾಣಿ, ಸಚಿನ್ ಪಾಟೀಲ, ರಾಮಚಂದ್ರ ರೆಡ್ಡಿ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.ಸಚಿವ ಸ್ಥಾನ ನೀಡಲು ಆಗ್ರಹ: ಅಫಜಲಪುರ ಕ್ಷೇತ್ರದಿಂದ ಸತತ ಆರು ಬಾರಿ ಆಯ್ಕೆಯಾಗಿರುವ ಶಾಸಕ ಮಾಲೀಕಯ್ಯ ಗುತ್ತೇದಾರ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಒತ್ತಾಯಿಸಿ ಮಾಲೀಕಯ್ಯ ಅಭಿಮಾನಿಗಳು ಪ್ರತಿಭಟನೆ ನಡೆಸಿದರು. ಮಾಲೀ­ಕಯ್ಯ ಅವರನ್ನು ಸಚಿವ ಸಂಪುಟದಿಂದ ಹೊರಗಿಡುವ ಮೂಲಕ ಹೈ.ಕ ಭಾಗಕ್ಕೆ ಅನ್ಯಾಯ ಮಾಡಲಾಗಿದೆ. ಜನಪರ ಕೆಲಸದಲ್ಲಿ ತೊಡಗಿಸಿಕೊಂಡಿರುವ ಅವರಿಗೆ ಮಂತ್ರಿ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದರು.ಚಂದ್ರಕಾಂತ್ ಎಚ್.ಗುತ್ತೇದಾರ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

‘ಆಧಾರ್’ ಕಡ್ಡಾಯಕ್ಕೆ ವಿರೋಧ: ಅಡುಗೆ ಅನಿಲ ಸಿಲಿಂಡರ್ ಪಡೆಯಲು ಆಧಾರ್ ಕಾರ್ಡ್ ಕಡ್ಡಾಯ ಮಾಡಿರುವುದನ್ನು ಕೈಬಿಡಬೇಕು ಎಂದು ಒತ್ತಾಯಿಸಿ ವೀರ ಕನ್ನಡಿಗರ ಸೇನೆ ಕಾರ್ಯಕರ್ತರು ಪ್ರತಿಭಟನೆ ಮಾಡಿದರು.ಅಡುಗೆ ಅನಿಲ ವಿತರಕರು ಆಧಾರ್ ಕಾರ್ಡ್ ಕೇಳುತ್ತಿದ್ದಾರೆ. ಬ್ಯಾಂಕ್‌ಗಳಲ್ಲೂ ಆಧಾರ್ ಕಾರ್ಡ್ ನೀಡಬೇಕಾಗಿದೆ. ಆಧಾರ್ ಕಾರ್ಡ್ ನೋಂದಣಿ ಪ್ರಕ್ರಿಯೆಯಲ್ಲೂ ಸಾಕಷ್ಟು ವಿಳಂಬವಾಗುತ್ತಿದೆ. ಅಲ್ಲದೇ, ಸುಪ್ರೀಂಕೋರ್ಟ್ ಕೂಡ ಆಧಾರ್ ಕಡ್ಡಾಯವಲ್ಲ ಎಂದು ಹೇಳಿದೆ. ಆದಾಗ್ಯೂ, ಕಡ್ಡಾಯಗೊಳಿಸಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.ರಾಜ್ಯ ಘಟಕದ ಅಧ್ಯಕ್ಷ ಅಮೃತ ಪಾಟೀಲ ಸಿರನೂರ, ಉಪಾಧ್ಯಕ್ಷ ರವಿ ವಂಟಿ, ಸಿದ್ದು ಕಂದಗಲ್, ನಾಗರಾಜ ಬೆಡಪಳ್ಳಿ, ಹಣಮಂತ ಸುಲ್ತಾನಪುರ ಇದ್ದರು.ಸ್ಥಳೀಯರಿಗೆ ಉದ್ಯೋಗ– ಮನವಿ: ಸೇಡಂ ತಾಲ್ಲೂಕಿನ ಸಿಮೆಂಟ್ ಕಾರ್ಖಾನೆಗಳಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಸೇಡಂ ತಾಲ್ಲೂಕು ಘಟಕದ ಸದಸ್ಯರು ಜಿಲ್ಲಾಧಿಕಾರಿಗೆ  ಶುಕ್ರವಾರ ಮನವಿ ಸಲ್ಲಿಸಿದರು.ಸೇಡಂನಲ್ಲಿ ಎಂಟು ಕಾರ್ಖಾನೆಗಳಿದ್ದು, ಅವುಗಳಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡಬೇಕು. ತಾಲ್ಲೂಕಿನ ಕೆಲವು ಹಳ್ಳಿಗಳ ಹೆಸರು ಪಲ್ಲಿ ಎಂದು ಕೊನೆಗೊಳ್ಳುತ್ತವೆ. ಅವುಗಳನ್ನು ಹಳ್ಳಿ ಎಂದು ಬದಲಾಯಿಸಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.ತಾಲ್ಲೂಕು ಘಟಕದ ಅಧ್ಯಕ್ಷ ನಾಗರೆಡ್ಡಿ ಹೂವಿನಬಾವಿ, ರಾಮಚಂದ್ರ ಗುತ್ತೇದಾರ, ವಿದ್ಯಾಸಾಗರ, ಶ್ರೀನಿವಾಸ್‌ರಾವ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry