ಬೇಡುವ ಜಾಯಮಾನ ನನ್ನದಲ್ಲ

7

ಬೇಡುವ ಜಾಯಮಾನ ನನ್ನದಲ್ಲ

Published:
Updated:

ಗೋಲ್ಡನ್ ಸ್ಟಾರ್ ಗಣೇಶ್ ನಿರ್ದೇಶನದ `ಮಳೆಯಲಿ ಜೊತೆಯಲಿ~ ಚಿತ್ರದಲ್ಲಿ ಮೋಡಿಮಾಡಿದ್ದ ನಟಿ ಅಂಜನಾ ಸುಖಾನಿ ಆನಂತರದಲ್ಲಿ ಯಾಕೋ ಕನ್ನಡ ಚಿತ್ರಗಳಲ್ಲಿ ಕಾಣಿಸಿಕೊಳ್ಳಲಿಲ್ಲ. ಯಾಕೆ ಎಂದು ಕೇಳಿದರೆ, ಬಾಲಿವುಡ್‌ನತ್ತ ನನ್ನ ಮನಸ್ಸು ಹರಿದಿದ್ದರಿಂದ ಕನ್ನಡ ಚಿತ್ರಗಳಲ್ಲಿ ನಟಿಸಲು ಸಾಧ್ಯವಾಗಲಿಲ್ಲ ಎಂದು ತುಟಿ ಕೊಂಕಿಸಿ ನಗುತ್ತಾರೆ.

ಇತ್ತೀಚೆಗೆ ಅವರು ಫ್ಯಾಷನ್ ಶೋ ಒಂದರಲ್ಲಿ ಭಾಗವಹಿಸುವ ಸಲುವಾಗಿ ನಗರಕ್ಕೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಮಾತಿಗಿಳಿದ ಅವರು ಕನ್ನಡ ಚಿತ್ರದಲ್ಲಿ ನಟಿಸಿದ ನೆನಪು, ಬಾಲಿವುಡ್‌ನಲ್ಲಿರುವ ಅವಕಾಶಗಳ ಬಗ್ಗೆ ಓತಪ್ರೋತವಾಗಿ ಮಾತನಾಡಿದರು. ತಮ್ಮ ಕನಸುಗಳನ್ನು ಹಂಚಿಕೊಂಡರು. ಅದನ್ನು ಅವರ ಮಾತಲ್ಲೇ ಕೇಳಿ... 

“ನನ್ನ ವೃತ್ತಿ ಜೀವನ ಅತಿ ನಿಧಾನವಾಗಿ ನಡೆಯುತ್ತಿರುವುದರ ಬಗ್ಗೆ ನನಗೆ ಯಾವುದೇ ಅಳುಕಿಲ್ಲ. ನನಗೆ ಸಿಕ್ಕಿರುವ ಸಣ್ಣ ಸಣ್ಣ ಅವಕಾಶಗಳನ್ನೇ ಏಳಿಗೆಯ ಮೆಟ್ಟಿಲುಗಳಾಗಿ ಬಳಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದೇನೆ. ಹಾಗಾಗಿ ಪ್ರತಿ ಕೆಲಸವನ್ನು ಶ್ರದ್ಧೆಯಿಂದ ಮಾಡುತ್ತೇನೆ. ನಾನು ತುಂಬಾ ಮಹತ್ವಾಕಾಂಕ್ಷೆಯುಳ್ಳವಳು. ನನಗೆ ಯಾವಾಗಲೂ ಒಳ್ಳೆಯ ಪ್ರೊಡಕ್ಷನ್‌ನಲ್ಲಿ ಕೆಲಸ ಮಾಡಬೇಕು ಎಂಬ ಆಸೆ. ಜನರ ಮನಸ್ಸಿನಲ್ಲಿ ಉಳಿಯುವಂತಹ ಸಿನಿಮಾಗಳಲ್ಲಿ ನಟಿಸಬೇಕು ಎಂದು ಕನಸು ಕಂಡವಳು. ಹಾಗಂತ ನಾನು ಎಲ್ಲರ ಮುಂದೆ ನಿಂತು ಅವಕಾಶ ಕೊಡಿ ಎಂದು ಬೇಡುವ ಜಾಯಮಾನದವಳಲ್ಲ.  ಕಡ್ಡಿ ತುಂಡು ಮಾಡಿದಂತೆ ಹೇಳುವ ವ್ಯಕ್ತಿತ್ವ ನನ್ನದು. ನನಗೆ ಯಾವುದೇ ಗಾಡ್‌ಫಾದರ್‌ಗಳಿಲ್ಲ. ಸಿನಿಮಾ ಹಾಗೂ ನಮ್ಮ ಕುಟುಂಬಕ್ಕೂ ಏನೇನು ಸಂಬಂಧವಿಲ್ಲ. ನಮ್ಮ ಕುಟುಂಬದಲ್ಲಿ ಚಿತ್ರಜಗತ್ತಿಗೆ ಕಾಲಿಟ್ಟವಳಲ್ಲಿ ನಾನೇ ಮೊದಲಿಗಳು, `ಐ ಥಿಂಕ್ ಐ ಹ್ಯಾವ್ ಡನ್ ಎ ಪ್ರೆಟಿ ಡೀಸೆಂಟ್ ಜಾಬ್~ ಎಂಬ ಹೆಮ್ಮೆ ನನ್ನಲ್ಲಿದೆ.

ನನ್ನ ಕೈಯಲ್ಲಿ ಈಗ ಕೆಲವು ಬಾಲಿವುಡ್ ಪ್ರಾಜೆಕ್ಟ್‌ಗಳಿವೆ. ಅಮಿತಾಬ್ ಬಚ್ಚನ್, ರಾಮ್ ಗೋಪಾಲ್ ವರ್ಮಾ ಹಾಗೂ ಸಂಜಯ್ ದತ್ ಅವರೊಂದಿಗೆ ಕೆಲಸ ಮಾಡುವಾಗ ನನಗೆ ಆದ ಥ್ರಿಲ್ ಅಷ್ಟಿಷ್ಟಲ್ಲ. `ಡಿಪಾರ್ಟ್‌ಮೆಂಟ್~ ಸಿನಿಮಾ ಚಿತ್ರೀಕರಣದ ವೇಳೆ ನಾನು ಸಖತ್ ಖುಷಿ ಅನುಭವಿಸಿದೆ. ಇದೊಂದು ಪೊಲೀಸ್ ಸಿನಿಮಾ. ಸಿನಿಮಾ ತುಂಬಾ ಇದೇ ಖಾಕಿ ಖದರ್ ತುಂಬಿಕೊಂಡಿದೆ. ಈ ಚಿತ್ರದಿಂದ ನಾನು ಸಾಕಷ್ಟು ವಿಚಾರಗಳನ್ನು ತಿಳಿದುಕೊಂಡೆ. ಎಲ್ಲಕ್ಕಿಂತ ಮುಖ್ಯವಾಗಿ ರಾಮ್ ಗೋಪಾಲ್ ವರ್ಮಾ ಹಾಗೂ ಬಿಗ್‌ಬಿ ನನ್ನ ಮೇಲೆ ತುಂಬಾ ಪ್ರಭಾವ ಬೀರಿದರು.

ನಾನು ನಿರ್ದೇಶಕ ರಾಮ್‌ಗೋಪಾಲ್ ವರ್ಮಾ ಅವರನ್ನು ಹತ್ತಿರದಿಂದ ಕಂಡಿದ್ದೇನೆ. ಅವರ ಜತೆ ಕೆಲಸ ಮಾಡಿದ್ದೇನೆ. ವರ್ಮಾ ಒಬ್ಬ ವಿಲಕ್ಷಣ ವ್ಯಕ್ತಿ. ಇಂತಹುದ್ದೊಂದು ವಿಲಕ್ಷಣ ವ್ಯಕ್ತಿತ್ವ ಎಲ್ಲ ಜೀನಿಯಸ್‌ಗಳಲ್ಲೂ ಇರುತ್ತದೆ ಎಂದು ನನ್ನ ಭಾವನೆ. ಆತ ತುಂಬ ಸೃಜನಶೀಲ ವ್ಯಕ್ತಿ. ಹೊಸತನಕ್ಕಾಗಿ ತುಡಿವ ಮನಸ್ಸು. ಸಿನಿಮಾದ ಬಗೆಗಿನ ತಾಂತ್ರಿಕ ಜ್ಞಾನವನ್ನು ಅರೆದು ಕುಡಿದಿರುವುದಷ್ಟೇ ಅಲ್ಲ, ಅದನ್ನು ಅರಗಿಸಿಕೊಂಡಿದ್ದಾರೆ. ನನಗೆ ಅವರ ಬಳಿ ಕೆಲಸ ಮಾಡುವ ಅವಕಾಶ ಸಿಕ್ಕಿದ್ದು ನನ್ನ ಜೀವನದುದ್ದಕ್ಕೂ ಮರೆಯಲಾರದ ನೆನಪು. ನಾನು ಚಿತ್ರೀಕರಣದ ವೇಳೆ ಹೀಗೆಂದು ಅವರ ಬಳಿ ಅನೇಕ ಬಾರಿ ಹೇಳಿದ್ದೇನೆ.

ಈ ಸಿನಿಮಾ ಹೊರತುಪಡಿಸಿ ನನ್ನ ಕೈಯಲ್ಲಿ ಈಗ ಸೋನು ಸೂದ್ ಮೊದಲಾದ ಖ್ಯಾತನಾಮರು ಇರುವ `ಮ್ಯಾಕ್ಸಿಮಂ~ ಸಿನಿಮಾ ಇದೆ. ನಾನು ಈ ಸಿನಿಮಾ ಕುರಿತು ಹೆಚ್ಚು ಹೇಳಲು ಬಯಸುವುದಿಲ್ಲ. ಆದರೆ, ಅದರಲ್ಲಿನ ನನ್ನ ಪಾತ್ರ ಕುತೂಹಲಕಾರಿಯಾದುದು. ನಾನು ಈ ಪಾತ್ರವನ್ನು ಫೀಲ್ ಮಾಡಿದ್ದೇನೆ. ನನಗೆ ಇಂತಹ ಪಾತ್ರ ಮಾಡಲು ಆಫರ್ ನೀಡಿದ ನಿರ್ದೇಶಕ ಕಬೀರ್ ಕೌಶಿಕ್‌ಗೆ ಎಷ್ಟು ಥ್ಯಾಂಕ್ಸ್ ಹೇಳಿದರೂ ಸಾಲದು.

ನನಗೆ ಮಳೆಯಲಿ ಜೊತೆಯಲಿ ಸಿನಿಮಾದಲ್ಲಿ ಆದ ಸಾವಿರ ಸಾವಿರ ಮಧುರ ನೆನೆಪುಗಳು ಇಂದಿಗೂ ನನ್ನ ಮನಸ್ಸಿನಲ್ಲಿ ಬೆಚ್ಚಗೆ ಕುಳಿತಿವೆ. ಸ್ಯಾಂಡಲ್‌ವುಡ್‌ನಲ್ಲಿ ಮತ್ತೆ ನಟಿಸಬೇಕು ಎಂಬ ಹೆಬ್ಬಯಕೆ ಕೂಡ ಇದೆ. ಒಳ್ಳೆ ಕಥೆಗಳು ಸಿಕ್ಕರೆ ಖಂಡಿತವಾಗಿಯೂ ಮತ್ತೆ ನಟಿಸುತ್ತೇನೆ. ಗಣೇಶ್ ಅವರೊಂದಿಗೆ ಮತ್ತೊಂದು ಪ್ರಾಜೆಕ್ಟ್ ಮಾಡಬೇಕು ಎಂದು ನನಗೆ ಆಸೆ. ಮಳೆಯಲಿ ಟೀಂ ಜತೆ ಕಳೆದ ಸಂತಸದ ಕ್ಷಣಗಳು ನನ್ನ ಮನಸ್ಸಿನಲ್ಲಿ ಇನ್ನೂ ಜೀಕುತ್ತಿವೆ. ಕನ್ನಡದಲ್ಲಿ ಮತ್ತೊಮ್ಮೆ ಇಂತಹ ಉತ್ತಮ ಸ್ಕ್ರಿಪ್ಟ್ ಸಿಕ್ಕೇ ಸಿಗುತ್ತದೆ ಎಂದು ಕಾಯುತ್ತಿದ್ದೇನೆ” ಎಂದು ಮಾತು ಮುಗಿಸಿದರು ಅಂಜನಾ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry