ಬೇಡ ಬಣ್ಣದ ಗಣಪ

7

ಬೇಡ ಬಣ್ಣದ ಗಣಪ

Published:
Updated:

ತ್ತೆ ಬಂದಿದೆ ಗೌರಿ- ಗಣೇಶ ಹಬ್ಬ. ಬಹುಶಃ ನಮ್ಮ ದೇಶದಲ್ಲಿ ಆಚರಿಸುವಷ್ಟು ಹಬ್ಬಗಳನ್ನು ವಿಶ್ವದ ಯಾವ ರಾಷ್ಟ್ರವೂ ಆಚರಿಸಲಿಕ್ಕಿಲ್ಲ. ಬಹುಸಂಖ್ಯಾತರಾದ ಹಿಂದೂಗಳಿಗಂತೂ ತಿಂಗಳಿಗೆ ಎರಡೆರಡು ಹಬ್ಬಗಳು! ಒಂದೆಡೆ ಈ ಹಬ್ಬಗಳು ನಮ್ಮ ದೇಶದ ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸಿದರೆ, ಇನ್ನೊಂದೆಡೆ ಇವು ಆಧುನಿಕ ಶೈಲಿಯ ಆಚರಣೆಗಳಿಂದ ಅರ್ಥ ಕಳೆದುಕೊಳ್ಳುತ್ತಿವೆ.

ತಮ್ಮ ಮೂಲ ಸ್ವರೂಪವನ್ನು ಕಳೆದುಕೊಂಡು ಆತಂಕಕಾರಿಯಾಗಿ ಮಾರ್ಪಡುತ್ತಿವೆ. ಇದಕ್ಕೊಂದು ಉತ್ತಮ ನಿದರ್ಶನ ಗೌರಿ- ಗಣೇಶ ಹಬ್ಬ. ಆಧುನಿಕ ಶೈಲಿಯ ಆಚರಣೆಯಿಂದ ಸುಂದರ ಪರಿಸರವನ್ನು ನಮಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಹಾಳು ಮಾಡಿಕೊಳ್ಳುತ್ತಿದ್ದೇವೆ. ಕಿವಿಗಡಚಿಕ್ಕುವ ಧ್ವನಿವರ್ಧಕಗಳು, ಉಸಿರು ಬಂದ್ ಮಾಡುವ ಪಟಾಕಿಗಳ ಹೊಗೆ, ರೋಗಗಳ ಮನೆಯಾಗುತ್ತಿರುವ ಜಲ ಮೂಲಗಳು ಸಕಲ ಜೀವಕುಲದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿವೆ.ಗೌರಿ- ಗಣೇಶನ ಮೂರ್ತಿಗಳನ್ನು ಕೊಂಡು ತರುವಾಗ, ವಿಸರ್ಜಿಸುವಾಗ ನಡೆಸುವ ಮೆರವಣಿಗೆಯಿಂದ ಹಿಡಿದು ಪಟಾಕಿ, ಪೂಜೆ, ಮೂರ್ತಿಯ ಆಕಾರ, ಗಾತ್ರ, ರಚನೆ, ಬಣ್ಣ ಪ್ರತಿಯೊಂದು ಹಂತದಲ್ಲೂ ನಾವು ಪರಿಸರವನ್ನು ಮಲಿನಗೊಳಿಸುತ್ತಿದ್ದೇವೆ. ಮೆರವಣಿಗೆಯಲ್ಲಿ ಬಳಸುವ ಧ್ವನಿವರ್ಧಕಗಳು ಶಬ್ದಮಾಲಿನ್ಯವನ್ನೂ, ಪಟಾಕಿಗಳು ವಾಯುಮಾಲಿನ್ಯವನ್ನೂ, ಮೂರ್ತಿಗಳ ಆಕಾರ, ಗಾತ್ರ, ಬಣ್ಣಗಳು ಜಲಮಾಲಿನ್ಯವನ್ನೂ, ಪೂಜೆಗೆ ಬಳಸುವ ಸಾಮಗ್ರಿಗಳು ಭೂ ಮಾಲಿನ್ಯವನ್ನೂ ಗರಿಷ್ಠ ಪ್ರಮಾಣದಲ್ಲಿ ಉಂಟು ಮಾಡುತ್ತಿರುವುದನ್ನು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಯನ ದೃಢಪಡಿಸಿದೆ.ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಯನದ ಪ್ರಕಾರ, ಮೂರ್ತಿಗಳ ತಯಾರಿಕೆಯಲ್ಲಿ ಉಪಯೋಗಿಸುವ ವಿಷಪೂರಿತ ರಾಸಾಯನಿಕ ವಸ್ತುಗಳಿಂದ ನೀರಿನಲ್ಲಿ ತೀವ್ರವಾದ ಮಾಲಿನ್ಯ ಉಂಟಾಗುತ್ತಿದೆ. ಲೋಹ ಮಿಶ್ರಿತ ಬಣ್ಣಗಳಿಂದ ನೀರಿನಲ್ಲಿ ಲೋಹದ ಸಾಂದ್ರತೆ ಹೆಚ್ಚಾಗಿ ನೀರಿನ ಗುಣಮಟ್ಟ ಕ್ಷೀಣಿಸುತ್ತಿದೆ.ಹೀಗಾಗಿ ಭಕ್ತಿ ನವನವೀನವಾದರೇನು, ಮೂರ್ತಿಗಳಿಗೆ ಬಳಿಯುವ ಬಣ್ಣ ನಿಸರ್ಗಪ್ರಿಯ ಆಗಿರಲಿ. ಹಬ್ಬ ಪರಿಸರ ಸ್ನೇಹಿ ಆಗಿರಲಿ. ಗಣೇಶನ ಮೇಲಿನ ಭಕ್ತಿ, ಜೀವಸಂಕುಲದ ಆರೋಗ್ಯದೆಡೆಗಿನ ಕಾಳಜಿಯನ್ನು `ಪರಿಸರ ಸ್ನೇಹಿ' ಹಬ್ಬ ಆಚರಿಸುವ ಮೂಲಕ ವ್ಯಕ್ತಪಡಿಸಬಹುದು ಅಲ್ಲವೇ? ಹೀಗಿರಲಿ ಹಬ್ಬ

ಸಾಂಪ್ರದಾಯಿಕವಾಗಿ ಜೇಡಿಮಣ್ಣಿನಿಂದ ತಯಾರಿಸಿದ ಮೂರ್ತಿಗಳನ್ನೇ ಕೊಳ್ಳಿ. ಸುಟ್ಟ ಜೇಡಿಮಣ್ಣಿನ ಅಥವಾ ಪ್ಲಾಸ್ಟರ್ ಆಫ್ ಪ್ಯಾರಿಸ್‌ನ ಮೂರ್ತಿಗಳು ಬೇಡ. ಬಣ್ಣರಹಿತ ಜೇಡಿಮಣ್ಣಿನ ಮೂರ್ತಿಗಳನ್ನು ಪೂಜೆ ಮಾಡಿ ಅಥವಾ ನೀರಿನಲ್ಲಿ ಕರಗುವ, ವಿಷಯುಕ್ತ ಅಲ್ಲದ, ಔಷಧ- ಆಹಾರ ಪದಾರ್ಥಗಳಲ್ಲಿ ಉಪಯೋಗಿಸುವ ನೈಸರ್ಗಿಕ ಬಣ್ಣ ಬಳಿದ ವಿಗ್ರಹಗಳನ್ನು ಪೂಜಿಸಿ. ರಾಸಾಯನಿಕ ಬಣ್ಣಗಳನ್ನು ಬಳಿದ ವಿಗ್ರಹಗಳ ಬಳಕೆಯನ್ನು ನಿಷೇಧಿಸಿ.ಅಪಾರ ಜನಸಂದಣಿ ಇರುವ ಪ್ರದೇಶಗಳಲ್ಲಿ ಸಾರ್ವಜನಿಕ ಗಣೇಶ ವಿಗ್ರಹ ಪ್ರತಿಷ್ಠಾಪಿಸುವುದು ಬೇಡ. ಸಾರ್ವಜನಿಕವಾಗಿ ದೊಡ್ಡ ದೊಡ್ಡ ಮೂರ್ತಿಗಳನ್ನು ಪೂಜಿಸುವ ಬದಲು ಚಿಕ್ಕ ಮೂರ್ತಿಗಳನ್ನು ಪೂಜಿಸಿ. ಗಣೇಶ ಮೂರ್ತಿ ಪ್ರತಿಷ್ಠಾಪಿಸುವಾಗ, ವಿಸರ್ಜಿಸುವಾಗ ಧ್ವನಿವರ್ಧಕ, ಪಟಾಕಿಗಳ ಅಬ್ಬರ ಬೇಡವೇ ಬೇಡ.

ಮೂರ್ತಿ ಮೆರವಣಿಗೆಯಲ್ಲಿ ಗುಲಾಲು ಮತ್ತು ಬಣ್ಣಗಳನ್ನು ಎರಚುವುದು ಬೇಡ. ಪೂಜೆ ಮಾಡಲು ಪ್ಲಾಸ್ಟಿಕ್ ಹೂವು, ವಸ್ತ್ರ, ಆಲಂಕಾರಿಕ ಸಾಮಗ್ರಿಗಳನ್ನು ಉಪಯೋಗಿಸಬೇಡಿ. ಒಂದು ವೇಳೆ ಉಪಯೋಗಿಸಲೇಬೇಕಿದ್ದರೆ ಪ್ಲಾಸ್ಟಿಕ್ ವಸ್ತುಗಳನ್ನು ಸರಿಯಾಗಿ ವಿಲೇವಾರಿ ಮಾಡಿ. ಜೈವಿಕ ವಿಘಟನೆಯಾಗುವ ಪದಾರ್ಥಗಳನ್ನು ಗೊಬ್ಬರ ತಯಾರಿಕೆಗೆ ಬಳಸಿ.

ಪೂಜೆಗೆ ಉಪಯೋಗಿಸಿದ ಹೂವುಗಳು, ಪತ್ರಿ, ಅಕ್ಕಿಕಾಳು, ಹಣ್ಣು, ಪ್ರಸಾದ ಮುಂತಾದ ವಸ್ತುಗಳನ್ನು ಮೂರ್ತಿಯ ವಿಸರ್ಜನೆ ಜೊತೆಗೇ ಬಾವಿ, ಕೆರೆಗೆ ಎಸೆಯ ಬೇಡಿ. ಮೂರ್ತಿಯನ್ನು ನಿಮ್ಮ ಮನೆಯಲ್ಲೇ ಒಂದು ಬಕೆಟ್ ನೀರಿನಲ್ಲಿ ವಿಸರ್ಜಿಸಿದರೆ ಒಳ್ಳೆಯದು. ಸಾರ್ವಜನಿಕ ಮೂರ್ತಿಗಳನ್ನು ತಾತ್ಕಾಲಿಕ ತೊಟ್ಟಿ, ಹೊಂಡ ನಿರ್ಮಿಸಿ ವಿಸರ್ಜಿಸಬಹುದು. ಆ ಸ್ಥಳಗಳಲ್ಲಿ ಸಂಗ್ರಹವಾಗುವ ಘನತ್ಯಾಜ್ಯ ವಸ್ತುಗಳನ್ನು ಸುಡಬೇಡಿ. ಕೊಳೆಯಲು ಬಿಟ್ಟು ಗೊಬ್ಬರ ತಯಾರಿಸಿ.ಶುದ್ಧ ನೀರಿನ ಮೂಲಗಳಲ್ಲಿ ಗಣೇಶ ವಿಸರ್ಜನೆ ಬೇಡವೇ ಬೇಡ. ಮೂರ್ತಿ ವಿಸರ್ಜನೆಯಾದ 24 ಗಂಟೆಗಳಲ್ಲಿ ಕೆರೆ, ಬಾವಿ, ಹೊಂಡ, ನದಿಗಳ ಹತ್ತಿರ ಬಿಟ್ಟು ಹೋದ ಸಾಮಗ್ರಿಗಳನ್ನು ಕೂಡಲೇ ಸಂಗ್ರಹಿಸಿ, ವಿಂಗಡಿಸಿ, ವಿಲೇವಾರಿ ಆಗುವಂತೆ ನೋಡಿಕೊಳ್ಳಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry