ಭಾನುವಾರ, ಅಕ್ಟೋಬರ್ 20, 2019
22 °C

ಬೇತಮಂಗಲ ಜಲಾಶಯ ನೀರು ಸರಬರಾಜು ಬಂದ್

Published:
Updated:
ಬೇತಮಂಗಲ ಜಲಾಶಯ ನೀರು ಸರಬರಾಜು ಬಂದ್

 ಕೆಜಿಎಫ್: ಜಲಮಂಡಳಿ ಕಳೆದ ಮೂರು ವರ್ಷದಿಂದ ನಗರದ ಜನತೆಗೆ ಅಲ್ಪ-ಸ್ವಲ್ಪ ಕುಡಿಯುವ ನೀರು ಸರಬರಾಜು ಮಾಡುತ್ತಿತ್ತು. ಸೋಮವಾರದಿಂದ ನೀರು ಸರಬರಾಜು ನಿಲ್ಲಿಸುವ ನಿರ್ಧಾರ ಮಾಡಿ, ನಗರದ ಜನತೆಗೆ ಹೊಸ ವರ್ಷದ ಉಡುಗೊರೆ ನೀಡಿದೆ.ಜಲಮಂಡಳಿಯ ಈ ನಿರ್ಧಾರದಿಂದ ನಗರದಲ್ಲಿ ಕುಡಿಯುವ ನೀರಿನ ಹಾಹಾಕಾರ ಮತ್ತಷ್ಟು ಹೆಚ್ಚಲಿದ್ದು, ಜನತೆ ಟ್ಯಾಂಕರ್‌ಗಳನ್ನು ಅವಲಂಬಿಸಬೇಕಾದ ಅನಿವಾರ್ಯ ಎದುರಾಗಿದೆ.ಬೇತಮಂಗಲ ಜಲಾಶಯದಲ್ಲಿ ನೀರಿನ ಪ್ರಮಾಣ ತೀವ್ರವಾಗಿ ತಗ್ಗಿರುವ ಕಾರಣ ಜಲಾಶಯದ ತಳದ ನೀರನ್ನು ಪಂಪ್ ಮಾಡಲು ಸಾಧ್ಯವಾಗುತ್ತಿಲ್ಲ. ಇದರಿಂದ ಜಲಾಶಯದಿಂದ ನೀರು ಸರಬರಾಜು ನಿಲ್ಲಿಸಿ, ಕೊಳವೆ ಬಾವಿಗಳಿಂದ ನೀರು ಪೂರೈಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಜಲಮಂಡಳಿ ಮೂಲಗಳು ತಿಳಿಸಿವೆ.ನಗರಕ್ಕೆ ಪ್ರತಿನಿತ್ಯ ಸುಮಾರು 12 ಲಕ್ಷ ಗ್ಯಾಲನ್ ನೀರಿನ ಅವಶ್ಯಕತೆ ಇದೆ. ಕಳೆದ ಒಂದು ಶತಮಾನದಿಂದ ಬೇತಮಂಗಲ ಜಲಾಶಯದಿಂದ ಕೆಜಿಎಫ್ ಮತ್ತು ಬೇತಮಂಗಲ ಗ್ರಾಮಕ್ಕೆ ಸಿಹಿ ನೀರನ್ನು ಸರಬರಾಜು ಮಾಡಲಾಗುತ್ತಿದೆ.

ಜಲಾಶಯದಿಂದ ಪೈಪುಗಳ ಮೂಲಕ ಕೆಜಿಎಫ್ ಜಲಸಂಗ್ರಹಾಲಯಕ್ಕೆ  ನೀರು ತುಂಬಿಸಿ ನಗರ ವಿವಿಧ ಪ್ರದೇಶಗಳಿಗೆ ಹಂಚಿಕೆ ಮಾಡಲಾಗುತ್ತಿತ್ತು. ಕೇಂದ್ರ ಸರ್ಕಾರಿ ಸ್ವಾಮ್ಯದ ಬೆಮಲ್ ಕೂಡ ಜಲಾಶಯದಿಂದ ನೀರನ್ನು ಪಡೆಯುತ್ತಿತ್ತು.ಈಚಿನ ವರ್ಷಗಳಲ್ಲಿ ಉಂಟಾಗುತ್ತಿದ್ದ ಬರ ಜಲಾಶಯವನ್ನು ಬರಿದು ಮಾಡಿತ್ತು. ಸುಮಾರು ಒಂದು ಸಾವಿರ ಎಕರೆ ಪ್ರದೇಶ ವ್ಯಾಪ್ತಿಯ ಕೆರೆಯಲ್ಲಿ ಹೂಳು ಸಾಕಷ್ಟು ತುಂಬಿರುವುದರಿಂದ ನೀರು ಸಂಗ್ರಹ ಸಾಮರ್ಥ್ಯ ಕಡಿಮೆಯಾಗಿದೆ.

ಹೂಳು ತೆಗೆಯಬೇಕೆಂಬ ಸಾರ್ವಜನಿಕರ ಕೂಗು ಹೆಚ್ಚಿದಾಗ ಎಚ್ಚೆತ್ತುಕೊಳ್ಳುವ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಹೂಳು ತೆಗೆಯುವ ಪ್ರಸ್ತಾವನೆ ತಯಾರಿಸುತ್ತಾರೆ. ಮತ್ತು ಅಷ್ಟೇ ಬೇಗ ಮರೆಯುವ ಪ್ರಕ್ರಿಯೆ ನಡೆಯುತ್ತಲೇ ಬಂದಿದೆ. ಒಮ್ಮೆ ಹೂಳು ತೆಗೆದರೆ ನೀರು ಸಂಗ್ರಹಣಾ ಸಾಮರ್ಥ್ಯ ಹೆಚ್ಚುತ್ತದೆ. ಒಂದು ವರ್ಷಕ್ಕೆ ಬೇಕಾಗುವಷ್ಟು ನೀರನ್ನು ಸಂಗ್ರಹಿಸಬಹುದು ಎಂದು ಅಂದಾಜು ಮಾಡಲಾಗಿದೆ.ನಗರದಲ್ಲಿ ಈಗಾಗಲೇ 32 ಕೊಳವೆ ಬಾವಿಗಳಿಗೆ ಮೋಟರ್ ಅಳವಡಿಸಿದ್ದು, ಆ ಮೂಲಕ ನೀರು ಸರಬರಾಜು ಮಾಡಿ ಜನತೆಯ ನೀರಿನ ಕೊರತೆಯನ್ನು ನೀಗಿಸುವ ಪ್ರಯತ್ನವನ್ನು ಜಲಮಂಡಳಿ ಅಧಿಕಾರಿಗಳು ಮಾಡುತ್ತಿದ್ದಾರೆ.

Post Comments (+)