ಬೇಲಿಯಾದ ಬಾಳೆ...!

7

ಬೇಲಿಯಾದ ಬಾಳೆ...!

Published:
Updated:

ಬಾಳೆಯ ತೋಟಕ್ಕೆ ಬೇಲಿ ಸರ್ವೆಸಾಮಾನ್ಯ. ಆದರೆ ತೋಟಕ್ಕೆ ಬಾಳೆಯನ್ನೇ ಬೇಲಿ­ಯಾಗಿ ಬಳಸಿದರೆ? ಇಂತಹ ಒಂದು ವೈಶಿಷ್ಠ್ಯಪೂರ್ಣ ಬೇಲಿಯನ್ನು ಹಾವೇರಿ ಜಿಲ್ಲೆ ಸವಣೂರ ತಾಲ್ಲೂಕಿನ ನೂರಾರು ತೋಟಗಳಲ್ಲಿ ಕಾಣಬಹುದು.ನವಾಬರ ಸಂಸ್ಥಾನವಾಗಿದ್ದ ಸವಣೂರ, ಹತ್ತಾರು ದಶಕಗಳಿಂದ ವೀಳ್ಯದ ಎಲೆಗೆ ಸುಪ್ರಸಿದ್ಧಿ. ‘ಕರಾಚಿ ಪಾನ್’ ಎಂದೇ ಕರೆಯಲಾಗುವ ಇಲ್ಲಿನ ವೀಳ್ಯದ ಎಲೆಗಳಿಗೆ ಉತ್ತರ ಭಾರತದಲ್ಲಿಯೇ ದೊಡ್ಡ ಮಾರುಕಟ್ಟೆ. ಪ್ರತಿನಿತ್ಯ ನೂರಾರು ಅಂಡಿಗೆ (1,200 ಎಲೆಗಳ ಕಟ್ಟು) ಎಲೆ ಇಲ್ಲಿಂದ ರವಾನೆಯಾಗುತ್ತದೆ. ಸಾವಿರಾರು ಕುಟುಂಬಗಳು ವೀಳ್ಯದ ಎಲೆಯ ತೋಟದ ಕೆಲಸಗಳನ್ನೆ ಅವಲಂಬಿಸಿಕೊಂಡಿವೆ.10 ಗುಂಟೆಯಿಂದ ಆರಂಭಿಸಿ, ಹಲವು ಎಕರೆಗಳ ವಿಸ್ತೀರ್ಣದ ತೋಟಗಳಿಗೆ ರಕ್ಷಣೆಗಾಗಿ ಬಾಳೆಯನ್ನು ಬೆಳೆಸಲಾಗುತ್ತದೆ. ತೋಟದ ಸುತ್ತಲೂ ದಟ್ಟವಾಗಿ ಬಾಳೆಯನ್ನು ಬೆಳೆಸುವ ಕೃಷಿಕರಿದ್ದಾರೆ. ಬಾಳೆಯ ಜೊತೆಯಲ್ಲಿ ತೆಂಗು, ಔಡಲ, ನುಗ್ಗೆ ಮೊದಲಾದ ಗಿಡ-ಮರಗಳನ್ನು ಬೆಳೆಸಿದರೂ, ಬೇಲಿಯಾಗಿ ಬಾಳೆಯೇ ಹೆಚ್ಚು ಬಳಕೆಯಾಗುತ್ತದೆ.ಚೊಗಚೆ ಗಿಡಗಳನ್ನು ಆಧಾರವಾಗಿಟ್ಟುಕೊಂಡು ಬೆಳೆಯುವ ವೀಳ್ಯದೆಲೆಗೆ ಗಾಳಿ-ಬಿಸಿಲಿನಿಂದ ರಕ್ಷಣೆ ನೀಡುವ ಬಾಳೆ, ರೈತರಿಗೆ ಕಿರು ಆದಾಯವನ್ನೂ ನೀಡುತ್ತದೆ. ಜೊತೆಗೆ ಎಲೆಯ ಅಂಡಿಗೆ ಮಾಡಲು, ಕಟ್ಟಲು ಬಾಳೆಯ ಎಲೆ, ನಾರು, ತೊಗಟೆ ಬಳಕೆಯಾಗುತ್ತದೆ. ಕೊನೆಗೆ ಜಾನುವಾರುಗಳಿಗೆ ಮೇವು ಹಾಗೂ ಗೊಬ್ಬರವಾಗಿ ಬಳಕೆಯಾಗುತ್ತದೆ.ಬಾಳೆ ಬೆರಗು

ಎಲೆ ಬಳ್ಳಿ ತೋಟದ ಬಾಳೆ ಬೇಲಿ ನಿರ್ಮಾಣದಲ್ಲಿಯೂ ವಿಶಿಷ್ಟವಾದ ಪದ್ಧತಿಯನ್ನು ಇಲ್ಲಿ ಅನುಸರಿಸಲಾಗುತ್ತದೆ. ಬಲಿತ ಬಾಳೆ ಗಿಡದ ಮೇಲ್ಭಾಗವನ್ನು ಸಂಪೂರ್ಣವಾಗಿ ಕತ್ತರಿಸಿ ತೆಗೆಯಲಾಗುತ್ತದೆ. ಬಾಳೆ ದಿಂಡನ್ನು ಸ್ಪಲ್ಪ ಬೇರಿನೊಂದಿಗೆ ಸ್ಥಳಾಂತರಿಸಿ, ತೋಟದ ಅಂಚಿನಲ್ಲಿ ನೆಡಲಾಗುತ್ತದೆ. ಮಳೆಗಾಲದ ಅವಧಿಯಲ್ಲಿ ಹೊಸ ಚಿಗುರು ಒಡೆಯುವ ದಿಂಡಿನ ಭಾಗ, ತನ್ನ ಸುತ್ತಲೂ ಹಲವಾರು ಕುಡಿ (ಮರಿ)ಗಳನ್ನೂ ಮೂಡಿಸುತ್ತದೆ. ಆರು ತಿಂಗಳ ಅವಧಿಯಲ್ಲಿ ಪೂರ್ಣಪ್ರಮಾಣದ ಬೇಲಿ ನಿರ್ಮಾಣಗೊಂಡು, ಬಾಳೆ ಗೊನೆಗಳೂ ಮೂಡಲು ಆರಂಭಿಸುತ್ತದೆ. 10 ಗುಂಟೆಗಳ ತೋಟಕ್ಕೆ ಕನಿಷ್ಠ 100 ಬಾಳೆ ದಿಂಡನ್ನು ಸುತ್ತಲೂ ನೆಡಲಾಗುತ್ತದೆ. ಇದರಿಂದ ಒಂದು ವರ್ಷಕ್ಕೆ ಕನಿಷ್ಠ 200 ಗೊನೆ ಸಿಕ್ಕರೆ, ಪ್ರತಿ ಬಾಳೆ ಗೊನೆಗೂ ಕನಿಷ್ಠ 300 ರೂಪಾಯಿ ಬೆಲೆ ಲಭ್ಯ. ಹಣ್ಣಿನ ಉತ್ಪನ್ನಕ್ಕಿಂತಲೂ ತೋಟದ ರಕ್ಷಣೆ ಹಾಗೂ ಬಾಳೆಯ ಎಲೆ, ನಾರು ನಮಗೆ ಹೆಚ್ಚು ಉಪಯುಕ್ತವಾಗುತ್ತದೆ ಎನ್ನುತ್ತಾರೆ ಇಲ್ಲಿನ ವೀಳ್ಯದೆಲೆ ತೋಟದ ಮಾಲಿಕರಾದ ಲಿಯಾಖತ್ ಅಳ್ನಾವರ್.ಅತಿಯಾದ ಗಾಳಿ-ಮಳೆಯಾದಲ್ಲಿ ಬಾಳೆಯ ಬೇಲಿ ಹಾನಿಗೀಡಾಗುತ್ತದೆ. ಆದರೂ ಎಲೆ ಬಳ್ಳಿ ತೋಟದ ಸುತ್ತಲೂ ಬೇಲಿಯಾಗಿ ಬಾಳೆಯೇ ಸೂಕ್ತ ಎಂಬ ಅಭಿಪ್ರಾಯ ಇಲ್ಲಿನ ತೋಟಗಾರರದ್ದು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry