ಸೋಮವಾರ, ಜೂನ್ 21, 2021
23 °C

ಬೇಲೂರು: ಬಾಲ್ಯ ವಿವಾಹ ತಡೆದ ಅಧಿಕಾರಿಗಳು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೇಲೂರು: ಇಲ್ಲಿನ ಕಲ್ಯಾಣ ಮಂಟಪದಲ್ಲಿ ಗುರುವಾರ ನಡೆಯಬೇಕಿದ್ದ ಅಪ್ರಾಪ್ತ ಬಾಲಕಿಯ ವಿವಾಹವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ತಡೆದ ಘಟನೆ ಬುಧವಾರ ರಾತ್ರಿ ನಡೆದಿದೆ.ತಾಲ್ಲೂಕಿನ ಹಾಡ್ಲಗೆರೆ ಗ್ರಾಮದ ಶಿವಪ್ಪ ನಾಯಕ ಎಂಬುವರ ಪುತ್ರಿ ಪುಟ್ಟರಮ್ಯ(17) ಮತ್ತು ಪಟ್ಟಣದ ಶಂಕರದೇವರ ಪೇಟೆಯ ಮಲ್ಲಾನಾಯಕ ಎಂಬುವವರ ಅಶೋಕ(26) ಇವರ ವಿವಾಹ ಪಟ್ಟಣದ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಗುರುವಾರ ನಡೆಯಬೇಕಿತ್ತು. ಇದಕ್ಕಾಗಿ ಗಂಡು- ಹೆಣ್ಣಿನ ಕಡೆಯವರು ಕಲ್ಯಾಣ ಮಂಟಪದಲ್ಲಿ ಸೇರಿ ಮದುವೆ ಸಿದ್ಧತೆಯಲ್ಲಿ ತೊಡಗಿದ್ದರು.ಅಪ್ರಾಪ್ತ ವಯಸ್ಸಿನ ಬಾಲಕಿಯ ವಿವಾಹ ನಡೆಯುವ ಮಾಹಿತಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಸರಳ ಅವರ ಮೊಬೈಲ್‌ಗೆ ಅನಾಮಧೇಯ ಕರೆ ಬಂದ ಹಿನ್ನೆಲೆಯಲ್ಲಿ ಅವರು ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಅಪ್ರಾಪ್ತ ವಯಸ್ಸಿನ ಬಾಲಕಿಯ ವಿವಾಹ ನಡೆಯುತ್ತಿರುವುದು ಕಂಡು ಬಂದಿತು.ಪೋಷಕರ ಮನವೊಲಿಸಿ 18 ವರ್ಷ ಪೂರ್ಣಗೊಳ್ಳುವ ಮುನ್ನ ಮದುವೆ ಮಾಡುವುದು ಕಾನೂನಿಗೆ ವಿರುದ್ಧ ಎಂದು ಮನವರಿಕೆ ಮಾಡಿಕೊಟ್ಟರು. 18 ವರ್ಷ ತುಂಬುವ ಮುನ್ನ ಮದುವೆ ಮಾಡುವುದಿಲ್ಲ ಎಂಬ ಲಿಖಿತ ಹೇಳಿಕೆ ಹುಡುಗಿಯ ಪೋಷಕರಿಂದ ಪಡೆದುಕೊಂಡ ನಂತರ ಅಧಿಕಾರಿಗಳು ಸ್ಥಳದಿಂದ ತೆರಳಿದ್ದಾರೆ.ಕಲ್ಯಾಣ ಮಂಟಪದ ಮಾಲೀಕರು ಮದುವೆ ಮಾಡಲು ಬರುವ ಪೋಷಕರಿಂದ ಕಡ್ಡಾಯವಾಗಿ ಹುಡುಗ ಮತ್ತು ಹುಡುಗಿಯ ವಯಸ್ಸಿನ ದೃಢೀಕರಣ ಪತ್ರ ಪಡೆಯಬೇಕು ಎಂದು ಶಿಶು ಅಭಿವೃದ್ಧಿ ಸರಳ ಅವರು ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.