ಬೇಲೆಕೇರಿ: ಇನ್ನೊಬ್ಬ ಆರೋಪಿ ಬಂಧನ

7

ಬೇಲೆಕೇರಿ: ಇನ್ನೊಬ್ಬ ಆರೋಪಿ ಬಂಧನ

Published:
Updated:

ಬೆಂಗಳೂರು: ಬೇಲೆಕೇರಿ ಬಂದರಿನಿಂದ ಅದಿರು ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸಪೇಟೆಯ ಐಎಲ್‌ಸಿ ಇಂಡಸ್ಟ್ರೀಸ್‌ನ ವ್ಯವಸ್ಥಾಪಕ ನಿರ್ದೇಶಕ ಕೆ.ಸೋಮಶೇಖರ್ ಅವರನ್ನು ಸಿಬಿಐ ಅಧಿಕಾರಿಗಳು ಬುಧವಾರ ಬಂಧಿಸಿದ್ದಾರೆ.ಆರೋಪಿಯನ್ನು ಬಂಧಿಸಿದ ಬಳಿಕ ಸಿಬಿಐ ವಿಶೇಷ ನ್ಯಾಯಾಲಯದ ಎದುರು ಹಾಜರುಪಡಿಸಲಾಗಿತ್ತು. ಹೆಚ್ಚಿನ ವಿಚಾರಣೆಗಾಗಿ ತಮ್ಮ ವಶಕ್ಕೆ ನೀಡುವಂತೆ ಸಿಬಿಐ ಅಧಿಕಾರಿಗಳು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು. ತನಿಖಾ ತಂಡದ ಕೋರಿಕೆಯನ್ನು ಮಾನ್ಯ ಮಾಡಿದ ನ್ಯಾಯಾಲಯ, ಆರೋಪಿಯನ್ನು ಸಿಬಿಐ ವಶಕ್ಕೆ ಒಪ್ಪಿಸಿ ಆದೇಶ ಹೊರಡಿಸಿದೆ ಎಂದು ಮೂಲಗಳು ತಿಳಿಸಿವೆ.ಬೇಲೆಕೇರಿ ಬಂದರಿನ ಮೂಲಕ ನಡೆದ ಅದಿರು ಕಳ್ಳಸಾಗಣೆ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಐದು ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸಿತ್ತು. ಎಸ್‌ಬಿ ಲಾಜಿಸ್ಟಿಕ್ಸ್‌ಗೆ ಸಂಬಂಧಿಸಿದ ಪ್ರಕರಣದಲ್ಲಿ ಮಾಜಿ ಸಚಿವ ಜಿ.ಜನಾರ್ದನ ರೆಡ್ಡಿ ಸೇರಿದಂತೆ ಏಳು ಆರೋಪಿಗಳ ವಿರುದ್ಧ ಆರೋಪಪಟ್ಟಿ ಸಲ್ಲಿಸಿದ್ದರು. ಎರಡನೇ ಪ್ರಕರಣದ ತನಿಖೆ ಚುರುಕಾಗಿದ್ದು, ಕಾರವಾರದ ಹಿಂದಿನ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ಈಗ ಡಿಸಿಎಫ್) ನರೇಂದ್ತ ಹಿತ್ತಲಮಕ್ಕಿ, ವಲಯ ಅರಣ್ಯಾಧಿಕಾರಿ ಚಂದ್ರಕಾಂತ ನಾಯಕ, ಸ್ವಸ್ತಿಕ್ ನಾಗರಾಜ್ ಸಂಬಂಧಿ ಕೆ.ಯರ್ರಿಸ್ವಾಮಿ ಮತ್ತು ಶಾಸಕ ಆನಂದಸಿಂಗ್ ಸಂಬಂಧಿ ಶ್ಯಾಮ್ ಸಿಂಗ್ ಅವರನ್ನು ಬಂಧಿಸಲಾಗಿತ್ತು. ಈಗ ಸೋಮಶೇಖರ್ ಅವರ ಬಂಧನದೊಂದಿಗೆ ಬಂಧಿತರ ಸಂಖ್ಯೆ ಐದಕ್ಕೆ ಏರಿದೆ.ಸೋಮಶೇಖರ್ ಕೂಡ ಆನಂದ ಸಿಂಗ್ ಅವರ ಆಪ್ತ. ನಂತರದ ದಿನಗಳಲ್ಲಿ ಜನಾರ್ದನ ರೆಡ್ಡಿ ಅವರ ಜೊತೆ ನಿಕಟವಾಗಿದ್ದರು. ರೆಡ್ಡಿ ನಡೆಸಿದ ಅಕ್ರಮ ಗಣಿಗಾರಿಕೆಯ ಪೂರ್ಣ ಉಸ್ತುವಾರಿ ವಹಿಸಿದ್ದ ಮೂವರಲ್ಲಿ ಒಬ್ಬರಾಗಿದ್ದರು. ನಕಲಿ ಕಂಪೆನಿಗಳ ಹೆಸರಿನಲ್ಲಿ ಅದಿರು ಸಾಗಣೆ ಮತ್ತು ರಫ್ತು ಚಟುವಟಿಕೆಗಳಲ್ಲಿ ಸೋಮಶೇಖರ್ ಪ್ರಮುಖ ಪಾತ್ರ ನಿರ್ವಹಿಸಿರುವುದು ತನಿಖೆಯ ವೇಳೆ ಖಚಿತಪಟ್ಟಿದೆ. ನಂತರವೇ ಅವರನ್ನು ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry