ಬೇಳೂರಿಗೆ ಮಂತ್ರಿಸ್ಥಾನ ಸಿಗಲಿ: ಬಿವೈಆರ್

7

ಬೇಳೂರಿಗೆ ಮಂತ್ರಿಸ್ಥಾನ ಸಿಗಲಿ: ಬಿವೈಆರ್

Published:
Updated:

ಸಾಗರ: ಎರಡು ಬಾರಿ ಶಾಸಕರಾಗಿ ಆಯ್ಕೆ ಆಗಿರುವ ಗೋಪಾಲಕೃಷ್ಣ ಬೇಳೂರು ಅವರಿಗೆ ಮಂತ್ರಿಸ್ಥಾನ ದೊರಕಲಿ ಎಂದು ಸಂಸತ್ ಸದಸ್ಯ ಬಿ.ವೈ. ರಾಘವೇಂದ್ರ ಆಶಿಸಿದರು.ಶಾಸಕರ 48ನೇ ಹುಟ್ಟುಹಬ್ಬ ಆಚರಣೆ ಅಂಗವಾಗಿ ಅವರ ಅಭಿನಂದನಾ ಸಮಿತಿ ಬುಧವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಸಾಗರದಂತಹ ಪ್ರಜ್ಞಾವಂತ ಮತದಾರರನ್ನು ಹೊಂದಿರುವ ಕ್ಷೇತ್ರದಲ್ಲಿ 2ನೇ ಬಾರಿ ಶಾಸಕರಾಗಿ ಆಯ್ಕೆಯಾಗುವುದು ಸುಲಭದ ಮಾತಲ್ಲ. ಅವರು ಮಂತ್ರಿಯಾದರೆ ಕ್ಷೇತ್ರದ ಅಭಿವೃದ್ಧಿಗೆ ಮತ್ತಷ್ಟು ಸಹಕಾರಿಯಾಗುತ್ತದೆ ಎಂದರು.ಅಧಿಕಾರ ಬಂದಾಗ ಅರಿತು ನಡೆ ಎಂದು ಹಿರಿಯರು ಹೇಳಿದ್ದಾರೆ. ಸಾರ್ವಜನಿಕ ಕ್ಷೇತ್ರಗಳಲ್ಲಿ ಕೆಲಸ ಮಾಡುವಾಗ ಸಣ್ಣಪುಟ್ಟ ತಪ್ಪುಗಳಾದರೂ ಅದನ್ನು ದೊಡ್ಡದಾಗಿ ಬಿಂಬಿಸುವ ಕಾಲ ಇದು. ಹೀಗಾಗಿ, ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು ಎಂದು ಕಿವಿಮಾತು ಹೇಳಿದರು.ಶಾಸಕ ಗೋಪಾಲಕೃಷ್ಣ ಬೇಳೂರು ಮಾತನಾಡಿ, ಆಕಸ್ಮಿಕವಾಗಿ ರಾಜಕೀಯ ಪ್ರವೇಶಿಸಿದ ನನಗೆ ಈ ಕ್ಷೇತ್ರದ ಜನರು ತೋರಿಸಿರುವ ಪ್ರೀತಿ ಮತ್ತು ವಿಶ್ವಾಸ ಮರೆಯಲಾಗದ್ದು. ಅಭಿವೃದ್ಧಿಯ ಜತೆಗೆ ಬಡವರ ಕಷ್ಟಗಳಿಗೆ ಸ್ಪಂದಿಸುವುದು ಕೂಡ ಜನಪ್ರತಿನಿಧಿಯಾದವರ ಕರ್ತವ್ಯ ಎಂಬ ಮಾತನ್ನು ಪಾಲಿಸಿಕೊಂಡು ಬಂದಿದ್ದೇನೆ ಎಂದರು.ನಾನು ಶಾಸಕನಾದ ನಂತರ ತಾಲ್ಲೂಕಿನಲ್ಲಿ ವರ್ಗ ಸಂಘರ್ಷಕ್ಕೆ ಅವಕಾಶ ಇಲ್ಲವಾಗಿದೆ. ಎಲ್ಲಾ ಜಾತಿ ಮತ್ತು ಧರ್ಮದವರು ಒಂದೆ ಎಂಬ ಭಾವನೆ ನೆಲೆಯೂರುವಂತೆ ಮಾಡಿರುವ ಸಮಾಧಾನ ಇದೆ. ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದರಿಂದ ಕ್ಷೇತ್ರಕ್ಕೆ ಹೆಚ್ಚಿನ ಕೆಲಸ ಮಾಡಲು ಸಾಧ್ಯವಾಯಿತು  ಎಂದು ಹೇಳಿದರು.ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರು ನನ್ನ ರಾಜಕೀಯ ಗುರು. ಅವರಿಂದಲೆ ಯಾವುದೇ ವಿಷಯದ ಬಗ್ಗೆ ನೇರವಾಗಿ ಮಾತನಾಡುವ ಅಭ್ಯಾಸ ಬೆಳೆಸಿಕೊಂಡಿದ್ದೇನೆ. ಹಾಗೆಂದು ಯಾರ ಮನಸ್ಸಿಗೂ ನೋವುಂಟು ಮಾಡುವುದಿಲ್ಲ ಎಂದರು.ಮುರುಘಾಮಠದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ನೇತೃತ್ವ ವಹಿಸಿದ್ದರು. ತಾಲ್ಲೂಕು ಬಿಜೆಪಿ ಘಟಕದ ಅಧ್ಯಕ್ಷ ಬಿ.ಆರ್.ಜಯಂತ್, ನಗರಸಭೆ ಅಧ್ಯಕ್ಷ ರಾಧಾಕೃಷ್ಣ ನಾಯಕ್ ಬೇಂಗ್ರೆ, ಸದಸ್ಯರುಗಳಾದ ಟಿ.ಡಿ.ಮೇಘರಾಜ್, ವಿ.ಮಹೇಶ್,  ಶರಾವತಿ ಸಿ.ರಾವ್, ಟಿಪ್‌ಟಾಪ್ ಬಶೀರ್, ರಾಧಾರಂಜಿತ ಗೋಪಾಲಕೃಷ್ಣ ಬೇಳೂರು, ಎಪಿಎಂಸಿ ಅಧ್ಯಕ್ಷ ಸಿ.ಜೆ.ಮಂಜಪ್ಪ, ಉಪಾಧ್ಯಕ್ಷ ಬಿ.ತ್ಯಾಗಮೂರ್ತಿ, ಆಪ್ಸ್‌ಕೋಸ್ ಉಪಾಧ್ಯಕ್ಷ ಬಿ.ಎ.ಇಂದೂಧರ ಗೌಡ, ಡಿಸಿಸಿ ಬ್ಯಾಂಕ್ ನಿರ್ದೇಶಕಿ ಸರಸ್ವತಿ ನಾಗರಾಜ್, ಆರ್.ಸಿ.ಮಂಜುನಾಥ್, ತಾಹೀರ್ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry