ಬೇವಿನಮರ ಏರಿದ ಜಾಂಬವಂತ

7

ಬೇವಿನಮರ ಏರಿದ ಜಾಂಬವಂತ

Published:
Updated:
ಬೇವಿನಮರ ಏರಿದ ಜಾಂಬವಂತ

ಕಂಪ್ಲಿ: ಬೇವಿನಮರ ಏರಿದ ಕರಡಿಮರಿ ಸತತ ಎಂಟು ಗಂಟೆಗಳ ಕಾಲ ಮರದ ಟೊಂಗೆಯಲ್ಲಿಯೇ ಆಶ್ರಯಿಸಿದ್ದರಿಂದ ಇಡೀ ರಾತ್ರಿ ಜನತೆ ತುಂಬಾ ಆತಂಕಕ್ಕೆ ಒಳಗಾದ ಘಟನೆ ಇಲ್ಲಿಗೆ ಸಮೀಪದ ದೇವಲಾಪುರದ ರಾಜನಮಟ್ಟಿ ಗ್ರಾಮದಲ್ಲಿ ಗುರುವಾರ ರಾತ್ರಿ ನಡೆದಿದೆ.ಸಂಜೆ 7.30ಕ್ಕೆ ರಾಜನಮಟ್ಟಿಗೆ ತಾಯಿ ಕರಡಿ ಮತ್ತು ಎರಡು ಮರಿ ಕರಡಿಗಳು ಪ್ರವೇಶಿಸಿವೆ.

ಈ ಸಂದರ್ಭದಲ್ಲಿ ವಿದ್ಯುತ್ ಕಡಿತಗೊಂಡಿದ್ದರಿಂದ ಮಂದ ಬೆಳಕಿನಲ್ಲಿಯೇ ಕರಡಿಗಳನ್ನು ಕಂಡ ಜನರು ಬೆದರಿಸುತ್ತಿದ್ದಂತೆ ಹತ್ತಿರ ಗುಡ್ಡದ ಕಡೆ ನಡೆದಿವೆ. ಇದರಲ್ಲಿ ಮರಿ ಕರಡಿಯೊಂದು ಕತ್ತಲಲ್ಲಿ ತಪ್ಪಿಸಿ ಕೊಂಡು ಮರಳಿ ಕಾಲೋನಿ ಬನ್ನಿ ಮಹಾಂಕಾಳಿ ಕಟ್ಟೆ ಬೇವಿನಮರ ಏರಿ ಕುಳಿತಿದೆ.ರಾತ್ರಿ 9ಗಂಟೆ ಸುಮಾರಿಗೆ ಕಾಲೊನಿಗೆ ವಿದ್ಯುತ್ ಸರಬರಾಜು ಆಗುತ್ತಿದ್ದಂತೆ ಮರ ಏರಿ ಕುಳಿತಿದ್ದ ಕರಡಿಮರಿ ಬೆಳಕು ಕಂಡು ಅಬ್ಬರಿಸಿದೆ. ಮಲಗಿದ್ದ ಜನ ಈ ಶಬ್ಧವನ್ನು ಅರಿತು ಬ್ಯಾಟರಿಗಳ ಸಹಾಯದಿಂದ ಮರದ ಕಡೆ ಧಾವಿಸಿ ಬಂದು ಕಣ್ಣಾಯಿಸಿದಾಗ ಕರಡಿ ಮರದಲ್ಲಿ ಕುಳಿತಿರುವುದು ಕಂಡು ಬಂದಿದೆ.ಈ ಸುದ್ದಿ ರಾಜನಮಟ್ಟಿಗೆ ಹೊಂದಿ ಕೊಂಡ ದೇವಲಾಪುರ ಜನತೆಗೂ ತಿಳಿಯುತ್ತಿದ್ದಂತೆ ಜನಜಂಗುಳಿ ಸೇರಿ ಕರಡಿಯಮರಿಯನ್ನು ಮರದಿಂದ ಇಳಿಸುವ ಯತ್ನ ಮಾಡಿದ್ದಾರೆ. ಆದರೆ ಭೀತಿಗೊಂಡ ಕರಡಿಮರಿ   ಮರದಲ್ಲಿ ಯೇ ಕುಳಿತುಕೊಂಡಿದೆ.ಈ ವಿಷಯವನ್ನು ದರೋಜಿ ಕರಡಿ ಧಾಮದ ಸಿಬ್ಬಂದಿಗೂ ತಲುಪು ತ್ತಿದ್ದಂತೆ ಇಲಾಖೆಯ ಕುಮಾರ, ವೀರಣ್ಣ ಮತ್ತು ಇತರರು ಧಾವಿಸಿ ಮಧ್ಯರಾತ್ರಿ 2.30ರವರೆಗೆ ಸರ್ಕಸ್ ಮಾಡಿ ಹೇಗೋ ಕರಡಿಮರಿಯನ್ನು ಮರದಿಂದ ಕೆಳಗಿಳಿಸಿ ಹತ್ತಿರದ ಗುಡ್ಡದ ಕಡೆ ಸುರಕ್ಷಿತವಾಗಿ ಸಾಗಿಸಿದ್ದಾರೆ.ಬೇವಿನಮರದಲ್ಲಿ ಜೇನುಗೂಡು ಇದ್ದದ್ದೇ ಕರಡಿ ಮರಿ ಏರಲು ಕಾರಣ. ಕರಡಿಗೆ ಜೇನು ಎಂದರೆ ತುಂಬಾ ಇಷ್ಟವಂತೆ. ಈ ಕಾರಣದಿಂದ ಮರ ಏರಿದೆ ಎಂದು ಜನರು ತಿಳಿಸಿದರು.

ಕರಡಿಮರಿ ಮರ ಏರಿ ಕುಳಿತಿದ್ದ ಕಾರಣ ಇಡೀ ಕಾಲೋನಿ ಜನ ರಾತ್ರಿಯಿಡೀ ಎಂಟು ಗಂಟೆಗಳ ಕಾಲ ನಿದ್ರೆ ಇಲ್ಲದೆ ಜಾಗರಣೆ ಜೊತೆಗೆ ಭಯಭೀತಗೊಂಡಿದ್ದರು. ಕರಡಿಮರಿ ಮರದಿಂದ ಇಳಿದು ಹೋದ ನಂತರ ಜನತೆ  ನಿದ್ರೆಗೆ ಜಾರಿದರು.ರಾಜನಮಟ್ಟಿಗೆ ಹೊಂದಿಕೊಂಡಂತೆ ಬೆಟ್ಟವಿದ್ದು, ವಾರದಲ್ಲಿ ಎರಡು ಮೂರು ಬಾರಿ ತಮ್ಮ ಕಾಲೊನಿಯ ಮೂಲಕವೇ ಕರಡಿಗಳು ಹಾದು ಹೋಗುತ್ತವೆ. ಆದರೆ ಕೆಲವೊಮ್ಮೆ ಈ ರೀತಿ ತೊಂದರೆ ಕೊಡುತ್ತವೆ ಎನ್ನುತ್ತಾರೆ ಅಲ್ಲಿನ ಜನತೆ. ಕರಡಿ ಹಾವಳಿಯಿಂದ ರಾತ್ರಿಯಾಗು ತ್ತಿದ್ದಂತೆ ಮಹಿಳೆಯರು ಶೌಚಕ್ಕೆ ತೆರಳುವುದು ಕಷ್ಟ ಎನ್ನುತ್ತಾರೆ ಹಿಮಂತಮ್ಮ, ಚನ್ನದಾಸರ ಚನ್ನಮ್ಮ.ಗುಡ್ಡದಿಂದ ಕಾಲೋನಿ ಪ್ರವೇಶಿಸುವ ಸ್ಥಳವನ್ನು ಗುರುತಿಸಿ ತಂತಿಬೇಲಿ ಅಳವಡಿಸಬೇಕು. ಪ್ರಮುಖ ಸ್ಥಳಗಳಲ್ಲಿ ಸೋಲಾರ್ ದೀಪಗಳನ್ನು ಹಾಕಬೇಕು ಎಂದು ಚನ್ನದಾಸರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಕಾರ್ಯದರ್ಶಿ ಸಿ.ಡಿ. ಗಿರೀಶ್, ಸಣ್ಣ ತಿಮ್ಮಯ್ಯ ಮತ್ತು ಸಿರಿವಾರದ ಹುಚ್ಚಪ್ಪ ಆಗ್ರಹಿಸುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry