ಶುಕ್ರವಾರ, ಮಾರ್ಚ್ 5, 2021
28 °C
ವಿಷಜನ್ಯ ಚಿಕಿತ್ಸಾ ಪದ್ಧತಿಯಿಂದ ಕಾಯಿಲೆ ನಿವಾರಣೆ ಸಾಧ್ಯ

ಬೇವಿನ ಗಿಡಕ್ಕೆ ರೋಗ: ಕಳವಳ

ಪ್ರಜಾವಾಣಿ ವಾರ್ತೆ/ಕಾಶೀನಾಥ ಬಿಳಿಮಗ್ಗದ Updated:

ಅಕ್ಷರ ಗಾತ್ರ : | |

ಬೇವಿನ ಗಿಡಕ್ಕೆ ರೋಗ: ಕಳವಳ

ಮುಂಡರಗಿ: ಆಯುರ್ವೇದ ವೈದ್ಯ ಪದ್ಧತಿಯಲ್ಲಿ ಹಲವು ರೋಗಗಳ ನಿವಾರಣೆಗೆ ರಾಮ ಬಾಣವಾಗಿರುವ ಬೇವಿನ ಮರಗಳು ಇತ್ತೀಚೆಗೆ ವಿಚಿತ್ರ ರೋಗಕ್ಕೆ ಈಡಾಗಿದ್ದು, ಜನರಲ್ಲಿ ತೀವ್ರ ಆತಂಕ ಮೂಡಿಸಿದೆ. ತಾಲ್ಲೂಕಿನ ಬಹುತೇಕ ಭಾಗಗಳಲ್ಲಿ ಬೆಳೆದಿರುವ ಬೃಹತ್ ಬೇವಿನ ಗಿಡಗಳು ತಮ್ಮಷ್ಟಕ್ಕೆ ತಾವೆ ಒಣಗಿ ಹೋಗುತ್ತಿದ್ದು, ರೋಗ ನಿವಾರಕ ಔಷಧಿ  ಗಿಡಕ್ಕೇ ರೋಗ ಬಡಿದರೆ ಏನು ಮಾಡುವುದು ಎಂದು ಜನರು ಪ್ರಶ್ನಿಸುತ್ತಿದ್ದಾರೆ.ಸಹಜವಾಗಿ ಎಲೆಗಳು ಉದುರಿ ಚಿಗುರೊಡೆಯುವ ಕಾಲದಲ್ಲಿ ಬೇವಿನ ಗಿಡದಲ್ಲಿರುವ ಎಲೆಗಳೆಲ್ಲ ಅಕಾಲದಲ್ಲಿ ವಿನಾಕಾರಣ ಒಣಗಿ ನೆಲಕ್ಕುರುಳುತ್ತಲಿವೆ. ಈಗ ಚಿಗುರೋಡೆದು ಯುಗಾದಿಯ ಹೊತ್ತಿಗೆ ಬೇವಿನ ಗಿಡದ ತುಂಬಾ ಹೂವುಗಳು ನಳನಳಿಸುತ್ತಿರುತ್ತವೆ. ಆದರೆ ಈಗ ಬೇವಿನ ಗಿಡಗಳಿಗೆ ವಿಚಿತ್ರ ರೋಗ ತಗುಲಿದ್ದು, ಎಲೆಗಳೆಲ್ಲ ಗಾಡ ಹಳದಿ ಬಣ್ಣಕ್ಕೆ ತಿರುಗಿ ಗಾಳಿಗೆ ಧರೆಗುರುಳುತ್ತಿವೆ.   Azadhirachta indika ಎಂಬ ವೈಜ್ಞಾನಿಕ ಹೆಸರಿನಿಂದ ಗುರುತಿಸಿಕೊಂಡಿರುವ ಬೇವು ಉಷ್ಣವಲಯದಲ್ಲಿ ಹೆಚ್ಚಾಗಿ ಬೆಳೆಯುತ್ತದೆ. ಬೇವನ್ನು ಹಿಂದಿಯಲ್ಲಿ ನೀಮ್‌, ಸಂಸ್ಕೃತದಲ್ಲಿ ಸುಖಪ್ರಿಯಾ, ಸರ್ವತೋಭದ್ರ, ಸುತ್ತಿಕ, ಪಿಚುಮರ್ಧ ಹೀಗೆ ಹಲವು ಹೆಸರುಗಳಿಂದ ಕರೆಯಲಾಗುತ್ತದೆ. ವೇದಗಳ ಕಾಲದಿಂದಲೂ ಆಯುರ್ವೇದ ಔಷಧ ಪದ್ಧತಿಯಲ್ಲಿ ಬೇವಿಗೆ ಅಗ್ರ ಸ್ಥಾನ ನೀಡಲಾಗಿದೆ. ಇಂದಿಗೂ ಬೇವಿನ ಉತ್ಪಾದನೆಗಳಿಗೆ ಬಹು ಬೇಡಿಕೆ ಇದ್ದು, ವಿದೇಶಿಗರು ಅದರ ಔಷಧ ಗುಣಗಳಿಗೆ ಮಾರು ಹೋಗಿದ್ದಾರೆ.  ಬೇವು ಹಾಗೂ ಬೇವಿನ ಉಪ ಉತ್ಪನ್ನಗಳಿಂದ ಸರ್ವವ್ಯಾಪಿ ಕಾಯಿಲೆಗಳಾಗಿರುವ ಮಧುಮೇಹ, ಅಧಿಕ ರಕ್ತದೊತ್ತಡ, ಅಧಿಕ ಕೊಲೆಸ್ಟ್ರಾಲ್‌ ಸೇರಿದಂತೆ ಜ್ವರ, ಚರ್ಮರೋಗ, ಸಂದಿವಾತ, ಜಂತು ಹುಳು ನಿವಾರಣೆ, ಕಾಮಾಲೆ, ತಲೆಹೊಟ್ಟು ನಿವಾರಣೆ ಮೊದಲಾದ ನೂರೆಂಟು ಗಂಭೀರ ಹಾಗೂ ಸಾಮಾನ್ಯ ಕಾಯಿಲೆಗಳನ್ನು ನಿವಾರಿಸಬುದಾಗಿದೆ. ಹೀಗಾಗಿ ಬೇವಿಗೆ ಎಲ್ಲ ಕಾಲದಲ್ಲಿಯೂ ಬೇಡಿಕೆ ಇದ್ದು, ಅದಕ್ಕೆ ರೋಗ ತಗುಲಿರುವುದು ಸಾರ್ವಜನಿಕರಲ್ಲಿ ಆಶ್ಚರ್ಯ ಮೂಡಿಸಿದೆ. ಯಾವುದೆ ರಸಾಯನಿಕ ಗೊಬ್ಬರದ ನೆರವಿಲ್ಲದೆ ಸಹಜವಾಗಿ ಬೆಳೆಯುವ ಬೇವಿನ ಗಿಡದ ಪ್ರತಿಯೊಂದು ಭಾಗವೂ ತುಂಬಾ ಉಪಯುಕ್ತವಾಗಿರುತ್ತದೆ. ಬೇವಿನ ಅಂಟು, ಬೇರು, ಕಾಂಡ, ತೊಗಟಿ, ಎಲೆ, ಹೂವು, ಕಾಯಿ, ಹಣ್ಣು ಮೊದಲಾದ ವಸ್ತುಗಳಿಂದ ವಿವಿಧ ಔಷಧಗಳನ್ನು ತಯಾರಿಸಲಾಗುತ್ತಿದೆ.‘ಆಯುರ್ವೇದದಲ್ಲಿ ತುಂಬಾ ಪ್ರಮುಖ ಪಾತ್ರ ವಹಿಸುವ ಬೇವು, ಅರಿಷಿಣ, ಶುಂಠಿ, ತುಳಸಿ ಮೊದಲಾದ ಕೆಲವು ಸಸ್ಯಗಳಿಗೆ ಸಾಮಾನ್ಯವಾಗಿ ರೋಗಗಳು ಬರುವುದಿಲ್ಲ. ಹವಾಮಾನ  ಕಾರಣಗಳಿಂದ ಬರಬಹುದಾದ ಕಾಯಿಲೆ ವಿಷಜನ್ಯ ಹಾಗೂ ವಿಷವರ್ಗ ಚಿಕಿತ್ಸೆಯ ಮೂಲಕ ಗುಣಪಡಿಸಬಹುದಾಗಿದೆ’ ಎನ್ನುತ್ತಾರೆ  ಆಯುರ್ವೇದ ವೈದ್ಯ ಡಾ.ಲೋಕೇಶ ಟೇಕಲ್.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.