ಬೇವು ಬೆಲ್ಲದ ಪಯಣ

7

ಬೇವು ಬೆಲ್ಲದ ಪಯಣ

Published:
Updated:
ಬೇವು ಬೆಲ್ಲದ ಪಯಣ

ಅದೋ ಚೈತ್ರ; ಬಗಲಲ್ಲೇ ವಸಂತ. ಹಾಲುಗಲ್ಲದ ಕಂದನ ನಗೆಮೊಗಕ್ಕೆ ಮುತ್ತಿಕ್ಕಿದ ಬಾಲನೇಸರನ ಎಳೆಗಿರಣ. ಮೊಗದ ತುಂಬಾ ಚಿನ್ನದ ಹೊಳಪು... ಮುಂಚಾಚಿದ ಪುಟ್ಟ ಕೈಯಲ್ಲಿ ನೇಸರನನ್ನೇ ಬಾಚಿಕೊಳ್ಳುವ ಸಂಭ್ರಮ ಆ ಎಳೆಗೂಸಿಗೆ... ಚೈತ್ರಕ್ಕೆ ಚೈತ್ರನೇ ಸಾಟಿ. ವಸಂತನಿಗೆ ಚೈತ್ರನೇ ಸಹಪಾಠಿ.

ಪ್ರತಿ ಮುಂಜಾವಿಗೂ ಹೊಸತನ, ಹೊಸ ಬಣ್ಣ. ನಿನ್ನೆ ಗಾಢ ನೇರಳೆಯಿದ್ದ ಅರಳಿಯ ಚಿಗುರೆಲೆಗೆ ಈ ಮುಂಜಾವು ತಿಳಿಗುಲಾಬಿ ಛಾಪು. ಅದರಾಚೆಗಿನ ಮಾವಿನ ಮರದಲ್ಲಿ ಎಳೆಗಾಯಿಗಳ ಮೇಲಾಟ. ಪಕ್ಕದಲ್ಲಿ- ರೆಂಬೆಕೊಂಬೆಗಳಿಲ್ಲದ ಮಾವಿನ ಮರಕ್ಕೆ ಬಂಜೆ ತಾನೆಂಬ ಅಪರಾಧಿ ಭಾವ. ‘ಸಿಕ್ಸ್ ಪ್ಯಾಕ್’ ಹೀರೋನಂತಿದ್ದ ಆ ಮರವನ್ನು ‘ಜೀರೋ ಸೈಜ್’ ಬೆಡಗಿಯಂತೆ ಮಾಡಿದ್ದು ಯಾರು? ಮಾಮರಕ್ಕೆ ಬಂಜೆತನವ ಹೇರಿದ್ದು ಯಾವ ಆಡಳಿತ? ಓಹ್... ಅಲ್ಲೊಂದು ರಮ್ಯ ಜಾದೂ ನೋಟ ನೋಡಿ... ದೂರದ ಬೋಗನ್‌ವಿಲ್ಲಾ ಮತ್ತು ಗುಲ್‌ಮೊಹರ್ ವೃಕ್ಷಗಳಲ್ಲಿ ಎಲೆಗಳೂ ಹೂವಾಗಿ ಅರಳಿವೆಯೇ? ವಸಂತನ ಮಾಯಾಜಾಲದಲ್ಲಿ ಚಿಗುರು - ಹೂ - ಎಳೆಗಾಯಿಗಳ ಮೇಳ ನಡೆದಿದೆ ಕಂಡಿರಾ?ಯುಗಾದಿಗೆ ನಿಸರ್ಗಕ್ಕೆ ನಿಸರ್ಗವನ್ನೇ ಸಿಂಗರಿಸಲು ಚೈತ್ರ, ವಸಂತರು ನಡೆಸುವ ಜಂಟಿ ಕಾರ್ಯಾಚರಣೆಯ ಫಲವಿದು. ಜಗತ್ತಿಗೇ ಮೋಡಿ ಮಾಡಿದೆ ಜಾದೂಗಾರ ಜೋಡಿ.ಇಲ್ಲಿ ನೋಡಿ... ಜಗದ ವ್ಯಾಮೋಹ ಬೇಡವೆಂದು ಕಣ್ಮುಚ್ಚಿ ಕುಳಿತಿದ್ದಾನೊಬ್ಬ ಸಂತ. ಮಗ್ಗುಲಿನಲ್ಲಿ ಹೂತ ಮರ... ಸಂತನ ಮೂಗು ಅರಳಿತು... ಅಷ್ಟೇ; ಈಗ ಅವನು ಬದುಕಿನ ಕಡುವ್ಯಾಮೋಹಿ. ಚೈತ್ರನ ಮೊಗದಲ್ಲಿ ತುಂಟ ನಗೆ; ಕಾರಣ... ರಸಿಕ ವಸಂತ.ಅಂದಹಾಗೆ, ಈ ಬಾರಿಯದು ಖರ ನಾಮ ಸಂವತ್ಸರ. ಚಾಂದ್ರಮಾನ ಯುಗಾದಿಯಂದು ಆರಂಭವಾಗುವ ಸಂವತ್ಸರ ನಮ್ಮನಿಮ್ಮೆಲ್ಲರನ್ನೂ ಕಾಯಕಯೋಗಿಯನ್ನಾಗಿಸುವುದೇ? ಯಾಕೆ ಹೇಳಿ? ‘ಖರ’ ಎಂದರೆ ಕತ್ತೆ ಎಂದು ಅರ್ಥ. ಬದುಕಿನ ಬಂಡಿಗೆ ಇನ್ನಿಲ್ಲದ ವೇಗ ಕೊಟ್ಟಿರುವ ನಾವು ನೀವು ಎಲ್ಲ ಒಂದರ್ಥದಲ್ಲಿ ದುಡಿಯುವ ಕತ್ತೆಗಳೇ. ಅವುಗಳಂತೆ ನಮಗೂ ಕಾಯಕವೇ ಕೈಲಾಸ!ಯುಗಾದಿಗಾಗಿ ಕಾತರಿಸುವುದರಲ್ಲೇ ಏನೋ ಸುಖವಿದೆ. ಅದು ಸಂಭ್ರಮದ ಪ್ರತೀಕ್ಷೆ. ಹಬ್ಬವೆಂದರೆ ಸಂಭ್ರಮ. ಭೂರಿ ಭೋಜನವಿಲ್ಲದ ಹಬ್ಬವನ್ನು ಊಹಿಸಲುಂಟೇ?ಬೇವು - ಬೆಲ್ಲ ಮೆಲ್ಲುವುದಷ್ಟೇ ಯುಗಾದಿಯ ವೈಶಿಷ್ಟ್ಯವಲ್ಲ. ಋತುವಿಗೂ ಊಟೋಪಹಾರಕ್ಕೂ ಅವಿನಾಭಾವ ನಂಟು. ಹಬ್ಬದಡುಗೆಯಲ್ಲಿ ಪಾಕಸೂತ್ರವೂ ಬೆರೆತರೆ ಎಷ್ಟು ಚೆನ್ನ!ಯುಗಾದಿಗೆ ತಯಾರಿಸುವ ಪಚಡಿ ಬಗ್ಗೆ ನಿಮಗೆ ಗೊತ್ತೇ ಇದೆ. ಅದು ತೆಲುಗು ಭಾಷಿಗರ ಯುಗಾದಿ  ವೈಶಿಷ್ಟ್ಯವೂ ಹೌದು. ಆದರೆ ಅದರೊಳಗೆ ಅಡಗಿರುವ ಬಾಳಸೂತ್ರ ಗೊತ್ತೇ?ಬೇವಿನ ಹೂ/ ಚಿಗುರೆಲೆ, ಎಳೆಮಾವಿನಕಾಯಿ, ಹುಣಸೆ ರಸ, ಹಸಿ ಮೆಣಸು ಇಲ್ಲವೇ ಕಾಳುಮೆಣಸು, ಬೆಲ್ಲ, ಕಳಿತ ಬಾಳೆಹಣ್ಣಿನ ಮಿಶ್ರಣವೇ ಯುಗಾದಿ ಪಚಡಿ. ನಮ್ಮ ಬದುಕಿನಲ್ಲಿ ನಾವು ಕಂಡುಂಡು ಸಾಗುವ ಪಥವಾದರೂ ಏನು? ಕಹಿ, ಸಿಹಿ, ಕೋಪತಾಪ, ಭಯ, ಬೇಸರ, ಅಚ್ಚರಿ- ಪಚಡಿಯಲ್ಲಿರುವ ಹೂರಣಗಳು ಹೇಳುವ ಬಾಳಸೂತ್ರವೂ ಅದುವೇ.ಕುದುರೆಯ ಕಣ್ಕಟ್ಟು ಅದರ ಪಥಕ್ಕೆ ಲಗಾಮು ಹಾಕುತ್ತದೆ. ನಮ್ಮೊಳಗಿನ ತುಡಿತಗಳು, ಆಕಾಂಕ್ಷೆಗಳು ನಮಗೆ ಕಣ್ಕಟ್ಟೂ ಆಗಿ, ಲಗಾಮೂ ಆಗಿ ನಮ್ಮನ್ನು ಹದ್ದುಬಸ್ಸಿನಲ್ಲಿಡುತ್ತವೆ. ತಾಳ್ಮೆಯೆಂಬ ಲಗಾಮಿನ ಎಲ್ಲೆ ಮೀರದಿರಲಿ.ಹೊಂಗೆ ಹೂವ ತೊಂಗಲಲ್ಲಿ ಭೃಂಗದ ಸಂಗೀತ ಕೇಳಿ ಬರಲಿ... ಹೂತ ಮಾಮರದಲ್ಲಿ ಕೋಗಿಲೆ ಕುಹೂಗಾನ ಮೇಳ ನಡೆಯಲಿ... ನಮ್ಮ ನಿಮ್ಮೊಳಗೆ ಇರುವ ಬೇವು ಬೆಲ್ಲವಾಗಿ ಮಾರ್ಪಡಲಿ... ಯುಗಾದಿ ಮತ್ತೆ ಮತ್ತೆ ಹೊಸತು ಹೊಸತನ್ನು ತರಲಿ... ಬಾಳು ಸದಾ ನವಪಲ್ಲವದ ತೊಟ್ಟಿಲಾಗಲಿ...ಶತಯುರ್ವಜ್ರ ದೇಹಾಯ, ಸರ್ವ ಸಂಪತ್ಯರಾಯಚ, ಸರ್ವಾರಿಷ್ಟ ವಿನಾಶಾಯ, ನಿಂಬಕಂ ದಳ ಭಕ್ಷ....

ಅರ್ಥಾತ್ ‘ವಜ್ರದಂತ ದೇಹ, ಸಂಪತ್ತಿನ ಅಧಿಪತ್ಯ, ಎಲ್ಲ ಕೆಡಕುಗಳ ವಿನಾಶವಾಗಲಿ’ ಹೀಗೆಂದುಕೊಂಡು ಬೇವು-ಬೆಲ್ಲ ತಿನ್ನಿ.ಇದು ಯುಗಾದಿಯ ಸಂದೇಶ. ಜೀವನದಲ್ಲಿ ಬೆಲ್ಲದ ಸಿಹಿಯ ಜೊತೆ ಬೇವಿನ ಕಹಿಯನ್ನೂ ಅನುಭವಿಸಿ , ಬಾಳಿನ ಪಯಣ ಬೆಳೆಸಿ ಎಂಬುದು ಇದರ ಸಂಕೇತ..

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry