ಬೇಸಗೆಯ ತನು ತಂಪಿಗೆ ಪಾಂಡವರ ತಳಿ

7

ಬೇಸಗೆಯ ತನು ತಂಪಿಗೆ ಪಾಂಡವರ ತಳಿ

Published:
Updated:
ಬೇಸಗೆಯ ತನು ತಂಪಿಗೆ ಪಾಂಡವರ ತಳಿ

ಹೊಸನಗರ: ಪಶ್ಚಿಮಘಟ್ಟದ ದಟ್ಟವಾದ ಮಳೆಕಾಡು, ದಿಗಂತದಲ್ಲಿ ಕೊಡಚಾದ್ರಿ ಶಿಖರದ ಶ್ರೇಣಿ, ದೊಡ್ಡ ಕಣಿವೆಯ ಸಾಲು. ಅದರ ಉದ್ದಗಲಕ್ಕೂ ಹರಿಯುವ ನದಿ, ಹಕ್ಕಿಗಳ ಕಲರವದ ಮಧ್ಯದ ತಂಪಾದ ವಾತಾವರಣದಲ್ಲಿ ಬೇಸಿಗೆಯ ಬಿಸಿಲ ತಂಪಿಗೆ `ನೀರಾಟ~ ಅವಕಾಶ ಇದ್ದರೆ ಹೇಗೆ?

ಇದು ಬರೀ ಉತ್ಪ್ರೇಕ್ಷೆ ಮಾತಲ್ಲ!ಹೊಸನಗರ ತಾಲ್ಲೂಕಿನ ಕೊಲ್ಲೂರು ಘಾಟಿ ಸಮೀಪದ ನಿಟ್ಟೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ `ಪಾಂಡವರ ತಳಿ~ ಎಂಬ ಹೆಸರಿನ ಪ್ರದೇಶದಲ್ಲಿ ಇದೆಲ್ಲವೂ ಲಭ್ಯ!ರಾಜ್ಯ ಹೆದ್ದಾರಿ ಬೈಂದೂರು-ಹೊನ್ನಾಳಿಯ ಮರಕುಟಿಕ ಸೇತುವೆಯ ಪಕ್ಕದಲ್ಲಿ ಸ್ವಲ್ಪ ದೂರದ ಚಾರಣ ಮಾಡಿದರೆ ಸಿಗುವ `ಪಾಂಡವರ ತಳಿ~ಯಲ್ಲಿ ಹಾಸುಕಲ್ಲು ಬಂಡೆಗಳ ಮೇಲೆ ಕೊಡಚಾದ್ರಿ ಬೆಟ್ಟದಿಂದ ಹರಿಯುವ ನದಿಯು ವಿವಿಧ ನೀರಿನ ಮಟ್ಟದಲ್ಲಿ ಸಣ್ಣಪುಟ್ಟ ಕೊಳಗಳ ರೀತಿಯಲ್ಲಿ ನಿರ್ಮಿಸಿದೆ. ಇದರಿಂದಾಗಿ ಮಹಿಳೆಯರು, ಮಕ್ಕಳಿಂದ ಹಿಡಿದು ದೊಡ್ಡವರ ತನಕ ನೀರಾಟ ಆಡಲು ಅನಕೂಲವಾಗಿದೆ.ಕಾನನದ ಮಧ್ಯೆ ಇರುವ `ಪಾಂಡವರ ತಳಿ~ಯ ಪ್ರಕೃತಿದತ್ತ ಈಜುಕೊಳದಲ್ಲಿ ನೀರಾಟದ ಜತೆಗೆ ಪರಿಸರ ಅಧ್ಯಯನ ಚಾರಣವನ್ನು ಹೊರ ಪ್ರಪಂಚಕ್ಕೆ ತೋರಿಸಲು ನಿಟ್ಟೂರಿನಲ್ಲಿರುವ ಕಲ್ಯಾಣಿ ನಿಸರ್ಗಧಾಮ ಹೊರಟಿರುವುದು ಶ್ಲಾಘನೀಯ.ಜಾರಿಕೆಯ ಹಾಸುಬಂಡೆಗಳ ಮಧ್ಯೆ ಆಳದ ಅರಿವಿಲ್ಲದ ನೀರಿನಲ್ಲಿ ಜೀವಭಯ ತೊರೆದು ಜಲಕ್ರೀಡೆ ಆಡಲು ಲೈಫ್‌ಜಾಕೆಟ್‌ಗಳನ್ನು ಸಹ ಒದಗಿಸುವ ಈ ಸಂಸ್ಥೆಯು ಸ್ಥಳಕ್ಕೆ ಮಲೆನಾಡಿನ ಸಂಪ್ರದಾಯಿಕ ರಸವತ್ತಾದ ಊಟದ ಉಪಚಾರಗಳನ್ನು ನೀಡುತ್ತದೆ.ಸ್ಥಳ ಪುರಾಣ: ಪಾಂಡವರ ತಳಿ ಎಂದು ಹೆಸರು ಬರಲು ಸಣ್ಣದೊಂದು ಸ್ಥಳ ಪುರಾಣ ಸಹ ಜೋಡಣೆಯಾಗಿದೆ. ಪಾಂಡವರು ವನವಾಸ ಕಾಲದಲ್ಲಿ ಈ ಸ್ಥಳದಲ್ಲಿ ತಂಗಿ, ಊಟ ಮಾಡಿದ್ದರು. ಭೀಮನ ಪಾದದ ಹೆಜ್ಜೆಯ ಗುರುತುಗಳು ಹಾಸು ಬಂಡೆಯ ಮೇಲೆ ಇದೆ. ದೊಡ್ಡಬಂಡೆಗಳನ್ನು ತಟ್ಟಿದರೆ `ಭರಣಿ~ ಶಬ್ದ ಬರುತ್ತದೆ ಎಂದು ಹಿರಿಯರು ನಂಬಿದ್ದಾರೆ.ಇದರ ಜತೆಗೆ ಸುತ್ತಲಿನ ಗ್ರಾಮಸ್ಥರು ವರ್ಷಕ್ಕೊಮ್ಮೆ ಹುಣ್ಣಿಮೆಯ ದಿನ ಬುತ್ತಿಗಳ ಸಹಿತ `ಹೊಳೆಯೂಟ~ದ ನೆಪದಲ್ಲಿ  ಪಾಂಡವರ ತಳಿಗೆ ಬಂದು ನೀರಾಡುವ ಪ್ರತೀತಿ ಬೆಳೆಸಿಕೊಂಡಿದ್ದಾರೆ.ಕೊಡಚಾದ್ರಿ-ಕೊಲ್ಲೂರು ಎರಡರ ಮಧ್ಯೆ ಇರುವ `ಪಾಂಡವರ ತಳಿ~ಯು ಕುಟುಂಬಸಹಿತ ಒಂದು ದಿನದ ನೀರಾಟದ ಜತೆಗೆ `ಪ್ರಕೃತಿ ಪಿಕ್ನಿಕ್~ಗೆ ಹೇಳಿ ಮಾಡಿಸಿದಂತಿದೆ.

ಹೆಚ್ಚಿನ ಮಾಹಿತಿಗೆ ಮೊಬೈಲ್: 94491 00850, 94492 65840 ಸಂಪರ್ಕಿಸಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry