ಶುಕ್ರವಾರ, ಅಕ್ಟೋಬರ್ 18, 2019
27 °C

ಬೇಸಾಯದ ಖುಷಿಯಲ್ಲಿ ಸೋದರರು

Published:
Updated:

ಬೇಸಾಯ ಲಾಭದಾಯಕವಲ್ಲ ಎಂಬ ಮಾತುಗಳೇ ಈಗ ಎಲ್ಲೆಡೆ ದೊಡ್ಡದಾಗಿ ಕೇಳಿ ಬರುತ್ತಿದೆ. ಇಂಥ ಸಂದರ್ಭದಲ್ಲಿ ಅದನ್ನು ಲಾಭದಾಯಕ ವೃತ್ತಿಯಾಗಿ ಮಾಡುವ ಪ್ರಯತ್ನಗಳು ಅಲ್ಲಲ್ಲಿ ನಡೆಯುತ್ತಿವೆ. ಯಾವ ಬೆಳೆಗೆ ಯಾವಾಗ ಬೇಡಿಕೆ ಮತ್ತು ಬೆಲೆ ಇರುತ್ತದೆ ಎನ್ನುವುದನ್ನು ಅರ್ಥಮಾಡಿಕೊಂಡು ಬೇಸಾಯ ಮಾಡುವವರು ಯಶಸ್ವಿಯಾಗುತ್ತಿದ್ದಾರೆ.ಇದಕ್ಕೆ ಶಿವಮೊಗ್ಗ ಜಿಲ್ಲೆ ಸೊರಬ ಪಕ್ಕದ ರಾಜೀವ ನಗರದ ನಾಗರಾಜ ಗೌಡ್ರು ಹಾಗೂ ಅವರ ಸಹೋದರ ಇಂದೂಧರ ಅತ್ಯುತ್ತಮ ಮಾದರಿ.ತಾಲ್ಲೂಕಿನ ಮಣ್ಣು ಮತ್ತು ಹವಾಮಾನ ಪರಿಸ್ಥಿತಿ ಬಯಲು ಹಾಗೂ ಮಲೆನಾಡು ಬೆಳೆಗಳಿಗೆ ಹೊಂದಿಕೊಳ್ಳುವಂತಿದೆ. ಇಂತಹ ಜಾಗದ ಸದುಪಯೋಗ ಪಡೆದು ಹೊಸ ಹೊಸ ಬೆಳೆಗಳನ್ನು ತಂದು ಶ್ರಮಪಟ್ಟು ಬೆಳೆಸಿ ಕೃಷಿ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಬೇಕೆಂಬ ಛಲ ಈ ಸಹೋದರರದ್ದು.10-12 ವರ್ಷಗಳ ಹಿಂದ ಚಿಕ್ಕಾವಲಿಯಲ್ಲಿ ಕೇವಲ ಅರ್ಧ ಎಕರೆ ಭೂಮಿಯಲ್ಲಿ ನಾಗರಾಜಗೌಡರು ಸಾಂಪ್ರದಾಯಕ ಬೆಳೆ ಬೆಳೆಯುತ್ತಿದ್ದರು. ಕಷಿ ಕ್ಷೇತ್ರದಲ್ಲಿ ಸಾಧನೆಗೆ ಹಟತೊಟ್ಟಾಗ ಪ್ರಗತಿ ಗ್ರಾಮೀಣ ಬ್ಯಾಂಕ್‌ನ ಅಧ್ಯಕ್ಷ ಮೋನಪ್ಪ ರೈ ಇವರನ್ನು ಹುರಿದುಂಬಿಸಿದರು. ಅವರ ಸಲಹೆ ಹಾಗೂ ಬ್ಯಾಂಕ್‌ನ ಆರ್ಥಿಕ ಸಹಾಯದಿಂದ ಸೊರಬ ಪಟ್ಟಣದ ಸಮೀಪದ ಯಲಸಿ ಹಾಗೂ ರಾಜೀವ ನಗರದಲ್ಲಿ ಜಾಗ ಖರೀದಿಸಿ 40 ಎಕರೆಯಷ್ಟು ಜಾಗದಲ್ಲಿ ಅನಾನಸ್ ಬೆಳೆದರು. ಎರಡು ಎಕರೆಯಲ್ಲಿ ಸಪೋಟಾ ಬೆಳೆದರು. ಪಪ್ಪಾಯಿ ಕೃಷಿ ಬಗ್ಗೆ ಬೇರೆ ಕಡೆಗಳಿಂದ ಮಾಹಿತಿ ಪಡೆದು ಬೆಳೆಸಲು ಮುಂದಾದರು.ಪಪ್ಪಾಯಿಯಲ್ಲಿ ಉತ್ತಮ ತಳಿಗಳನ್ನು ಆಯ್ಕೆ ಮಾಡಿ ಬೆಳೆಸಿದರೆ ಮಾತ್ರ ಲಾಭ. ಜೊತೆಗೆ ಹಣ್ಣು ನೋಡಲು ಆಕರ್ಷಕವಾಗಿರಬೇಕು, ರುಚಿಕಟ್ಟಾಗಿರಬೇಕು ಎಂದು ಅರಿತು ತೈವಾನ್ ಪಪ್ಪಾಯಿ ಬೆಳೆದರು. ನಾಲ್ಕು ಸಾವಿರದಷ್ಟು ಗಿಡಗಳನ್ನು ನೆಟ್ಟರು. ಒಂದೊಂದು ಗಿಡದಲ್ಲಿ ನೂರಕ್ಕೂ ಮಿಕ್ಕಿ ಹಣ್ಣುಗಳು (ಸರಾಸರಿ 150 ಕಿಲೋ) ಸಿಕ್ಕವು. ಐದು ಬೆಳೆ ತೆಗೆದರು. ಸರಿಯಾಗಿ ನಿರ್ವಹಣೆ ಮಾಡಿದರೆ ಪಪ್ಪಾಯಿಯಲ್ಲಿ ನಷ್ಟವಿಲ್ಲ ಎಂದು ಅರಿತರು. ಇವರ ಪಪ್ಪಾಯಿಗೆ ಮಾರುಕಟ್ಟೆಯ ಸಮಸ್ಯೆಯಾಗಲಿಲ್ಲ. ಮುಂಬೈ, ಗೋವಾ ವ್ಯಾಪಾರಿಗಳು ತೋಟಕ್ಕೇ ಬಂದು ಖರೀದಿಸಿ ಒಯ್ದರು. ಪಪ್ಪಾಯಿ ಬೇಗ ಹಣ್ಣಾಗಲು ಹಾಗೂ ಆಕರ್ಷಕ ಬಣ್ಣ ಬರಲು ಅವರು ಯಾವುದೇ ರಾಸಾಯನಿಕ ಬಳಸಲಿಲ್ಲ.ತಮ್ಮ ಭೂಮಿಯಲ್ಲಿದ್ದ ಮುಳ್ಳು ಪೊದೆಗಳನ್ನು ತೆಗೆದು ಸಮತಟ್ಟು ಮಾಡಿ ಒಣಗಿದ ಗಿಡಗಂಟಿಗಳನ್ನು ಸುಟ್ಟು ಅದರಲ್ಲಿ ಬಾಳೆ ಬೆಳೆದರು. ಇಂದು ಬಾಳೆ ಗಿಡಗಳಲ್ಲಿ ದಷ್ಟಪುಷ್ಟ ಗೊನೆಗಳು ತೊನೆದಾಡುತ್ತಿವೆ. ತಲಾ 9 ಅಡಿ ಉದ್ದಗಲದ ಅಂತರದಲ್ಲಿ ಸಸಿಗಳನ್ನು ನಾಟಿ ಮಾಡಿ ನಡುವೆ ಅಡಿಕೆ ಗಿಡಗಳನ್ನು ಹಾಕಿದ್ದಾರೆ. ಒಂದೊಂದು ಗೊನೆಯಲ್ಲಿ 11-12 ಚಿಪ್ಪುಗಳು. ಒಂದೊಂದು ಚಿಪ್ಪಿನಲ್ಲಿ 22-26 ಕಾಯಿಗಳು. ಗೊನೆಯಲ್ಲಿ 225-250 ಕಾಯಿಗಳಿವೆ. ಈ ವರ್ಷ ಸುಮಾರು 200 ಟನ್ ಬಾಳೆ ಫಸಲು ನಿರೀಕ್ಷಿಸಿದ್ದಾರೆ.ಎಲ್ಲ ಋತುಗಳಲ್ಲಿ ಅನಾನಸ್‌ಗೆ ಬೇಡಿಕೆ ಇದೆ. ಇದನ್ನು ಅರಿತು ಈ ಸಹೋದರರು ಅಲ್ಪಾವಧಿ ಮತ್ತು ದೀರ್ಘಾವಧಿ ಬೆಳೆಯಾಗಿ ಪ್ರತ್ಯೇಕ ಭೂಮಿಯಲ್ಲಿ ಅನಾನಸ್ ಬೆಳೆಯುತ್ತಾರೆ. ದೀರ್ಘಾವಧಿಯಲ್ಲಿ ಹೆಚ್ಚಿನ ಇಳುವರಿ ಪಡೆಯಬಹುದೆಂಬುದು ಇವರ ಅನುಭವ. ಅನಾನಸ್ ಕೋಯ್ಲು ಬಳಿಕ ಮುಂದಿನ ಫಸಲಿಗೆ ಗಿಡಗಳನ್ನು ಸಿದ್ಧಗೊಳಿಸುತ್ತಾರೆ. ಸಸಿಯಲ್ಲಿನ ಹೆಚ್ಚಿನ ಗರಿಗಳನ್ನು ಕತ್ತರಿಸಿ ತೆಗೆದು ಗಿಡಗಳಿಗೆ ಹೊಸ ಮಣ್ಣು ಹಾಕಿ ಸಮಪ್ರಮಾಣದಲ್ಲಿ ಗೊಬ್ಬರ ನೀರು ಕೊಡುತ್ತಾರೆ.

 

ಇವರ ತೋಟದಲ್ಲಿ ಒಂದು ಅನಾನಸ್ 2 ರಿಂದ 2.5 ಕಿಲೋ ತೂಗುತ್ತದೆ. ಇವರು `ಒಂದು ಗಿಡದಲ್ಲಿ ನಾಲ್ಕರಿಂದ ಐದು ಬೆಳೆ ಪಡೆಯಬಹುದು. ನಂತರ ಗಿಡಗಳನ್ನು ಬದಲಿಸಬೇಕು~ ಎನ್ನುತ್ತಾರೆ. ಕಳೆದ ಸೀಸನ್‌ನಲ್ಲಿ ಇನ್ನೂರು ಟನ್ ಫಸಲು ಪಡೆದಿದ್ದಾರೆ.ಭೂಮಿಯನ್ನು ವಿಭಾಗಿಸಿ ಐದು ಎಕರೆಯಾಗುವಷ್ಟು ಜಾಗದಲ್ಲಿ ಅರಿಷಿಣ ಬೆಳೆದಿದ್ದಾರೆ. ಮೂವತ್ತು ಕ್ವಿಂಟಲ್ ಬೀಜ ನೆಟ್ಟಿದ್ದು ಸರಾಸರಿ ಎಕರೆಗೆ ಮೂವತ್ತು ಕ್ವಿಂಟಲ್ ಫಸಲು ನಿರೀಕ್ಷಿಸಿದ್ದಾರೆ. ಅರಷಿಣಕ್ಕೆ ಉತ್ತರದ ರಾಜ್ಯಗಳಿಂದ ಬೇಡಿಕೆ ತುಂಬಾ ಇರುವುದನ್ನು ಗೌಡರು ಕಂಡುಕೊಂಡಿದ್ದಾರೆ.ತೋಟದಲ್ಲಿ ಐದು ಎಕರೆ ರಬ್ಬರ್ ಹಾಕಿದ್ದಾರೆ. ಒಮ್ಮೆ ಶುಂಠಿ ಹಾಕಿದ್ದರು. ಅಡಿಕೆ ಗಿಡಗಳ ಜೊತೆಯಲ್ಲಿ ತರಕಾರಿ ಬೆಳೆಗಳನ್ನೂ ಹಾಕಿದ್ದಾರೆ. ಎಲ್ಲಾ ಬೆಳೆಗಳಿಗೂ ರೋಗ, ಪ್ರಾಣಿಗಳ ಕಾಟ, ಕೂಲಿ ಕಾರ್ಮಿಕರ ಸಮಸ್ಯೆ ಇದೆ.ತೋಟದಲ್ಲಿ ವಿಫುಲವಾಗಿ ಸಾವಯವ ಗೊಬ್ಬರ ಹಾಕಿದ್ದಾರೆ. ಭೂಮಿಯಲ್ಲಿ ಬಿದ್ದ ನೀರನ್ನು ಅಲ್ಲಿಯೇ ಇಂಗಿಸುವ ಯಶಸ್ವೀ ಪ್ರಯತ್ನ ಮಾಡಿದ್ದಾರೆ. ಜಮೀನಿಗೆ ನೀರುಣಿಸಲು ನಾಲ್ಕು ಬೋರ್‌ವೆಲ್ ತೆಗೆಸಿದ್ದು ನೀರನ್ನು 60 ಅಡಿ ಉದ್ದ 40 ಅಡಿ ಅಗಲ, 15 ಅಡಿ ಆಳದ ಟ್ಯಾಂಕ್‌ನಲ್ಲಿ ಸಂಗ್ರಹಿಸಿ ಸ್ಪ್ರಿಂಕ್ಲರ್ ಮೂಲಕ ಕೊಡುತ್ತಾರೆ.ಸಮದ್ಧ ಹಸಿರಿನಿಂದ ಕಂಗೊಳಿಸುತ್ತಿರುವ ಇವರ ಜಮೀನಿನಲ್ಲಿ ಹಲವು ಬೆಳೆಗಳ ಬೇಸಾಯ ಪದ್ಧತಿಯನ್ನು ನೋಡಬಹುದು. ಇದರಿಂದ ಭೂಮಿಯ ಫಲವತ್ತತೆ ಹೆಚ್ಚುತ್ತದೆ ಎನ್ನುವುದು ಇವರ ಅನುಭವಕ್ಕೆ ಬಂದಿದೆ. ಆಸಕ್ತ ರೈತರು ಇವರ ಜೊತೆಯಲ್ಲಿ ಸಮಾಲೋಚನೆ ಮಾಡಬಹುದು. ಮಾಹಿತಿಗೆ: ನಾಗರಾಜ 94486 28173, ಇಂದೂಧರ 99643 14455. 

 

Post Comments (+)