ಬೇಸಾಯದ ವಿಶಿಷ್ಟ ಮಾದರಿ

7

ಬೇಸಾಯದ ವಿಶಿಷ್ಟ ಮಾದರಿ

Published:
Updated:

ಇರುವ ಆರು ಎಕರೆ ಭೂಮಿಯಲ್ಲಿ ಅಡಿಕೆ, ತೆಂಗು, ಭತ್ತ, ಬಾಳೆ, ಕೋಕೊ, ಗೆಣಸು, ಸೌತೆ, ಬೆಂಡೆ, ಹೀರೆ, ಬದನೆ, ತೊಂಡೆ, ಶುಂಠಿ, ವೀಳ್ಯದೆಲೆ, ಮಲ್ಲಿಗೆ ಇತ್ಯಾದಿ ಹಲವು ಬೆಳೆಗಳು. ಜತೆಗೆ ಹೈನುಗಾರಿಕೆ ಮತ್ತು ಮೀನು ಸಾಕಣೆ.ಇಷ್ಟೆಲ್ಲ ಸಾಧ್ಯವೇ ಎನ್ನುವವರಿಗೆ ಉಜಿರೆ ಸಮೀಪದ ಸೂರ್ಯ ಪ್ರಭಾಕರ ಮಯ್ಯರ ತೋಟಕ್ಕೆ ಕಾಲಿಟ್ಟರೆ ಉತ್ತರ ಸಿಗುತ್ತದೆ. ಶಿಕ್ಷಕರಾಗಿ ಸ್ವಗ್ರಾಮದಲ್ಲೇ ಇದ್ದ ಮಯ್ಯರು ಕೆಲಸಕ್ಕೆ ರಾಜೀನಾಮೆ ಕೊಟ್ಟು ಬೇಸಾಯದಲ್ಲಿ ತೊಡಗಿಕೊಂಡರು. ಬೇಸಾಯವೆಂದರೆ ಕಷ್ಟಗಳ ಸರಮಾಲೆ ಎಂದು ದೂರ ಉಳಿಯುವವರೇ ಹೆಚ್ಚಾಗಿರುವ ಈ  ಸಂದರ್ಭದಲ್ಲಿ ಮಯ್ಯರು ಭಿನ್ನವಾಗಿ ಕಾಣಿಸುತ್ತಾರೆ.ಹದಿನೈದು ಸಲ ಆಕಾಶವಾಣಿ ಕೃಷಿರಂಗ ಕಾರ್ಯದಲ್ಲಿ ಅವರ ಸಂದರ್ಶನ ಪ್ರಸಾರವಾಗಿದೆ. ಬೆಂಗಳೂರಿನ ಕೃಷಿ ಮೇಳದಲ್ಲಿ ದಕ್ಕಿಣ ಕನ್ನಡ ಜಿಲ್ಲೆಯ ಅತ್ಯುತ್ತಮ ಕೃಷಿಕ ಪ್ರಶಸ್ತಿ ಹಾಗೂ ಕೇರಳದ ಸಂಸ್ಥೆಯೊಂದು ನೀಡಿದ ಉತ್ತಮ ಅಡಿಕೆ ಬೆಳೆಗಾರ ಪ್ರಶಸ್ತಿ ಹಾಗೂ ಸಾಧನಾ ಪ್ರಶಸ್ತಿಯನ್ನು ಅವರು ಪಡೆದಿದ್ದಾರೆ. ಮಾದರಿ ರೈತರಾಗಿ ನೆಮ್ಮದಿಯ ಜೀವನ ನಡೆಸುತ್ತಿರುವ ಪರಿ ಅಚ್ಚರಿ ಹುಟ್ಟಿಸುವಂತದ್ದು.ಸಾವಯವ ಬೇಸಾಯ ವಿಧಾನಗಳ ಜತೆಗೆ ಸಮಗ್ರ ತೋಟಗಾರಿಕೆಯನ್ನೂ ಅಳವಡಿಸಿಕೊಂಡಿದ್ದು ಅವರ ವಿಶೇಷ. ಬೆಲೆ ನಿಗದಿ ಮಾಡುವ ಅಧಿಕಾರ ರೈತರಿಗೆ ಇಲ್ಲ. ಹೀಗಾಗಿ ಬೇಡಿಕೆ ಹಾಗೂ ಪೂರೈಕೆ ಪ್ರಮಾಣವೇ ಬೆಲೆ ನಿರ್ಧರಿಸುವಂತಾಗಿದೆ. ಹೀಗಾಗಿ ಹೊಂದಾಣಿಕೆ  ಸಾಧ್ಯವಾಗದೆ ರೈತರು ಬೇಸಾಯ ಬಿಟ್ಟು ನಗರಗಳಿಗೆ ಹೋಗಿ ಇತರೆ ಕೆಲಸ ಮಾಡಲು ಬಯಸುತ್ತಾರೆ. ಸಂಪೂರ್ಣ ತೊಡಗಿಕೊಳ್ಳುವ ಮನಸ್ಸು ಹಾಗೂ ಛಲ ಇದ್ದರೆ ಮಾತ್ರ ಬೇಸಾಯದಲ್ಲಿ ಯಶಸ್ಸು ಸಾಧ್ಯ ಎನ್ನುತ್ತಾರೆ ಪ್ರಭಾಕರ ಮಯ್ಯ.ಆರಂಭದಲ್ಲಿ ಶುಂಠಿ, ಸುವರ್ಣ ಗೆಡ್ಡೆ ಬಿತ್ತನೆ ಮಾಡಿ ಬೆಳೆದುದನ್ನೇ ಬೀಜಕ್ಕಾಗಿ ಉಪಯೋಗಿಸಿಕೊಂಡು ಭೂಮಿ ವಿಸ್ತೀರ್ಣ ಹೆಚ್ಚಿಸಿಕೊಂಡೆ. ಐಆರ್‌ಡಿಪಿ ಯೋಜನೆಯ ನೆರವಿನಿಂದ ಎಮ್ಮೆ ಖರೀದಿಸಿ ಹೈನುಗಾರಿಕೆ ಆರಂಭಿಸಿದೆ ಎನ್ನುವ ಮಯ್ಯರಲ್ಲಿ ಈಗ ಐದು ಜರ್ಸಿ, ಎರಡು ಸಾಯಿವಾಲ ತಳಿಯ ಹಸುಗಳಿವೆ. ನಿತ್ಯ 20-25 ಲೀಟರ್ ಹಾಲು ಉತ್ಪಾದಿಸಿ ಅದನ್ನು ಸ್ಥಳೀಯ ಡೇರಿಗೆ ಹಾಕುತ್ತಾರೆ. ಅವರದು ಅವಿಭಕ್ತ ಕುಟುಂಬ. ಮನೆಯವರೆಲ್ಲರೂ ಕೊಟ್ಟಿಗೆ ಕೆಲಸದಲ್ಲಿ ನೆರವಾಗುತ್ತಾರೆ. ಹೀಗಾಗಿ ಹೈನುಗಾರಿಕೆಗೆ ಹೆಚ್ಚಿನ ಖರ್ಚು ಬರುವುದಿಲ್ಲ. ಹಸುಗಳ ಆಹಾರಕ್ಕಾಗಿ ಅಜೋಲ ಬೆಳೆಸಿದ್ದಾರೆ. ಅದರಿಂದ ಹಿಂಡಿಯ ಹಣ ಉಳಿತಾಯವಾಗುತ್ತಿದೆ.ಕೊಳವೆ ಬಾವಿ ನೀರು ಬಳಸಿ ಒಂದು ಎಕರೆಯಲ್ಲಿ ತೋಟಗಾರಿಕೆ ಇಲಾಖೆ ನೆರವಿನಿಂದ ನೇಂದ್ರ ಬಾಳೆ ಬೆಳೆದಿದ್ದಾರೆ. ಅದರಿಂದ ಬಂದ ಆದಾಯದಿಂದ ಪ್ರತಿ ವರ್ಷ 300 ರಿಂದ 500 ಅಡಿಕೆ ಸಸಿ ನೆಟ್ಟಿದ್ದಾರೆ. ಅಡಿಕೆ ಸಸಿಗಳ ನಡುವೆ ತೊಂಡೆ, ಅಲಸಂಡೆ ಇತ್ಯಾದಿ ತರಕಾರಿ ಬೆಳೆಯುತ್ತಾರೆ. ಈಗ ಅವರ ತೋಟದಲ್ಲಿ 1700- ಮಂಗಳ, 300- ಸೈಗನ್, 350- ಇಂಟರ್‌ಸೇ, 350-ರತ್ನಗಿರಿ ಅಡಿಕೆ ಗಿಡಗಳಿವೆ. ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳ ತಾಂತ್ರಿಕ ನೆರವು ಪಡೆದು ಸಾವಯವ ಹಾಗೂ ರಾಸಾಯನಿಕ ಗೊಬ್ಬರಗಳನ್ನು ಬಳಸುತ್ತಾರೆ. ರೋಗ-ಕೀಟ ನಿರ್ವಹಣೆಗೆ ವೈಜ್ಞಾನಿಕ ಕ್ರಮ ಅನುಸರಿಸುತ್ತಿದ್ದಾರೆ.  ದೊಡ್ಡ ಕೆರೆಯೊಂದರಲ್ಲಿ ಮಳೆಗಾಲದಲ್ಲಿ  ಸಂಗ್ರಹಿಸಿ ಅದರಲ್ಲಿ ಮೀನು ಸಾಕಿದ್ದಾರೆ. ಕೆರೆಯ ನೀರನ್ನು ಭೂಮಿಗೆ ಇಂಗಿಸುತ್ತಾರೆ. ಮನೆಯಲ್ಲೇ ಎರೆಹುಳು ಗೊಬ್ಬರ ತಯಾರಿಸುತ್ತಾರೆ. ಅದನ್ನು ತರಕಾರಿ ಬೆಳೆಗಳಿಗೆ ಬಳಸುತ್ತಾರೆ.ತಮ್ಮ ಊರಿನ ಸುತ್ತಮುತ್ತಲಿನ ರೈತರಿಗೆ ಕಡಿಮೆ ಬೆಲೆಯಲ್ಲಿ ಎರೆಹುಳು ಗೊಬ್ಬರ  ಪೂರೈಸುತ್ತಾರೆ. ತೋಟದಲ್ಲಿ 250 ವೀಳ್ಯದೆಲೆ ಬಳ್ಳಿಗಳಿವೆ. ಅದು ಪೂರಕ ಆದಾಯ. ಅಡಿಕೆ ತೋಟದ ಬದುಗಳಲ್ಲಿ ಕೋಕೊ, ಸಾಗುವಾನಿ ಗಿಡಗಳನ್ನು ನೆಟ್ಟು ಬೆಳೆಸುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry