ಶುಕ್ರವಾರ, ಮೇ 14, 2021
25 °C

ಬೇಸಿಗೆಗೆ ತಂಪೆರೆವ ಎಳನೀರು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಬೇಸಿಗೆಯಲ್ಲಿ ಜನರು ದಾಹ ತಣಿಸಿಲು ತಂಪಾದ ಪಾನೀಯಗಳಿಗೆ ಮೊರೆ ಹೋಗುತ್ತಿದ್ದಾರೆ. ದೇಹಕ್ಕೆ ತಂಪು ನೀಡುವ ಎಳನೀರು ಈಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.ಎಳನೀರು ಬಂಡಿಯ ಹತ್ತಿರ ಸೇರುವ ಜನರು, ಅದನ್ನು ಕುಡಿದು ದಾಹ, ದಣಿವು ತೀರಿಸಿಕೊಳ್ಳುವ ದೃಶ್ಯ ನಗರದಲ್ಲಿ ಸಾಮಾನ್ಯವಾಗಿದೆ. ಜೊತೆಗೆ ಎಳನೀರಿನ ಬೆಲೆಯೂ ಈಗ ಹೆಚ್ಚಿದೆ, ಕೈಯಲ್ಲಿ ಚಿಲ್ಲರೆ ಹಿಡಿದುಕೊಂಡು ಎಳನೀರು ಕುಡಿಯಲು ಮುಂದಾದರೆ ಅದು ಕೈಗೆಟುಕದ ಮಾತು.ಒಂದು ಎಳನೀರಿಗೆ ಈಗ 18 ರೂಪಾಯಿಯಿಂದ 20 ರೂಪಾಯಿವರೆಗೆ ಬೆಲೆ ಇದ್ದು, ಖರೀದಿದಾರನಿಗೆ ಸ್ವಲ್ಪ ತೊಂದರೆಯಾದರೆ, ವ್ಯಾಪಾರಸ್ಥರಿಗೆ ಖುಷಿ ತಂದಿದೆ. ಮದ್ದೂರು, ಮಂಡ್ಯ, ಮೈಸೂರು, ಶಿವಮೊಗ್ಗ ಮತ್ತು ಸ್ಥಳೀಯ ರೈತರಿಂದ ಖರೀದಿಸಿದ ಎಳನೀರು ಗುಲ್ಬರ್ಗ ನಗರದಲ್ಲಿ ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿವೆ. ಆದರೆ ರೈತರಿಗೆ ಮಾತ್ರ ಈ ಬೆಲೆ ಸಿಗುತ್ತಿಲ್ಲ.ವರ್ಷವಿಡೀ ತೆಂಗಿನ ಮರದ ಆರೈಕೆಯಲ್ಲಿ ಜೀವನ ಸವೆಸುವ ರೈತರು ಬೇಸಿಗೆಯಲ್ಲಿ ಎಲ್ಲ ಕಾಯಿಗಳನ್ನು ಮರದಿಂದ ಇಳಿಸಿ ವ್ಯಾಪಾರಸ್ಥರು ಕೇಳುವ ಬೆಲೆಗೆ ನೀಡುತ್ತಾರೆ. ಅದೇ ರೈತರು ನಗರಕ್ಕೆ ಬಂದು ಎಳನೀರು ಖರೀದಿಸಿದಾಗ ಅವರಿಗೆ ಅಚ್ಚರಿಯಾಗುವುದಂತೂ ಸತ್ಯ.`ಎಳನೀರು ಎಂದರೆ ಮೂಗು ಮುರಿಯುವವರೇ ಹೆಚ್ಚಾಗಿದ್ದರು. ಹೋಟೆಲ್‌ಗಳಲ್ಲಿ ಕುಳಿತು, ಪೆಪ್ಸಿ, ಮಾಜಾ ಕುಡಿಯುತ್ತಿದ್ದರು. ರಸ್ತೆಯ ಪಕ್ಕದಲ್ಲಿರುವ ನಮ್ಮಂತಹ ಬಡ ಎಳನೀರು ವ್ಯಾಪರಸ್ಥರ ಬಳಿ ಈ ಹಿಂದೆ ಯಾರೂ ಸುಳಿಯುತ್ತಿರಲಿಲ್ಲ. ಆರೋಗ್ಯದ ದೃಷ್ಟಿಯಿಂದ ಇದು ಒಳ್ಳೆಯದು ಎನ್ನುವುದು ಜನರಿಗೆ ಈಗ ಅರ್ಥವಾಗಿರಬಹುದು. ಎಲ್ಲರೂ ಎಳನೀರು ಕಡೆಗೆ ಗಮನ ಹರಿಸುತ್ತಿದ್ದಾರೆ. ದಿನಾಲೂ ಒಂದು ಸಾವಿರದಿಂದ ಎರಡು ಸಾವಿರ ಎಳನೀರು ವ್ಯಾಪಾರವಾಗುತ್ತಿದೆ~ ಎಂದು ವ್ಯಾಪಾರಿ ಪ್ರಸಾದ ಹರ್ಷದಿಂದ ನುಡಿದರು.`ಎಳನೀರು ಕುಡಿಯುವುದರಿಂದ ದೇಹಕ್ಕೆ ತಂಪು, ಮನಸ್ಸಿಗೆ ನಮ್ಮದಿ ಎನಿಸುತ್ತದೆ. ಫ್ರಿಜ್‌ನಲ್ಲಿ ತಂಪಾಗುವ ಪಾನೀಯ ಕುಡಿಯುವುದರಿಂದ ಆರೋಗ್ಯಕ್ಕೆ ಒಳ್ಳೆಯದಲ್ಲ. ಒಮ್ಮೆ ಹೆಸರಾಂತ ಕಂಪೆನಿಯ ಪಾನೀಯ ಬಾಟಲ್‌ನಲ್ಲಿ ಜಿರಳೆ ಕಂಡು ಅಲ್ಲಿಂದ ಬಾಟಲ್‌ನಲ್ಲಿ ತಯಾರಾಗುವ ಪಾನೀಯ ಕುಡಿಯುವುದನ್ನು ಬಿಟ್ಟು ಎಳನೀರು ಕುಡಿಯುವುದನ್ನು ಆರಂಭಿಸಿದ್ದೇನೆ~ ಎನ್ನುತ್ತಾರೆ ಎಳನೀರು ಪ್ರಿಯ ನಿಜಾಮ್.`ಬೇಸಿಗೆಯಲ್ಲಿ ಊಟ ಸೇರುವುದಿಲ್ಲ, ಮನೆಯಲ್ಲಿ ಕುಳಿತು ಬೇಜಾರಾಗಿ ಅಪರೂಪಕ್ಕೆ ಮಕ್ಕಳ ಜೊತೆ ಹೊರಗೆ ಬಂದಾಗ ಮಾತ್ರ ಎಳನೀರು ಕುಡಿಯುತ್ತೇವೆ. ಎಳನೀರು, ಅದರೊಳಗೆ ಇರುವ ಎಳೆತಿರುಳು ಮಕ್ಕಳಿಗೆ ಇಷ್ಟವಾಗುತ್ತದೆ. ಮೊದಲು ಪಾನಿಪುರಿ, ಬಜ್ಜಿ ತಿನ್ನಿಸುವಂತೆ ಒತ್ತಾಯ ಮಾಡುತ್ತಿದ್ದರು. ಒಂದು ಸಾರಿ ಎಳನೀರು ಕುಡಿದ ಮೇಲೆ ಅವರ ಚಿತ್ತ ಎಳನೀರಿನತ್ತ ಆಗಿದೆ. ನಮ್ಮ ಮನೆಯವರು  ಎರಡು ದಿನಕ್ಕೊಮ್ಮೆಯಾದರೂ ಮನೆಗೆ ಎಳನೀರು ತರುತ್ತಾರೆ~ ಎಂದು ಗೃಹಿಣಿ ಅನಸೂಯ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.