ಸೋಮವಾರ, ಏಪ್ರಿಲ್ 19, 2021
32 °C

ಬೇಸಿಗೆಯಲ್ಲಿ ತೀವ್ರ ವಿದ್ಯುತ್ ಅಭಾವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಚೂರು: ಮಳೆ ಅಭಾವ, ಬರಗಾಲ ಪರಿಸ್ಥಿತಿಯಿಂದ ವಿದ್ಯುತ್ ಬೇಡಿಕೆ ಕಳೆದ ವರ್ಷಕ್ಕಿಂತ ಶೇ 20ರಷ್ಟು ಈ ವರ್ಷ ಹೆಚ್ಚಾಗಿದೆ. ವಿದ್ಯುತ್ ಖರೀದಿ ಅನಿವಾರ್ಯ. ಜನವರಿಯಿಂದ ಮೇ ತಿಂಗಳವರೆಗೆ 6 ತಾಸು ತ್ರಿಫೇಸ್ ಹಾಗೂ ಸಂಜೆ 6ರಿಂದ ಬೆಳಿಗ್ಗೆ 6ರವರೆಗೆ ಸಿಂಗಲ್ ಫೇಸ್ ವಿದ್ಯುತ್ ಪೂರೈಸಲು ನಿರ್ಧರಿಸಲಾಗಿದೆ ಎಂದು ರಾಜ್ಯ ಇಂಧನ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ನೀರಿನ ಲಭ್ಯತೆ ಕಡಿಮೆ ಇರುವುದರಿಂದ ಜಲವಿದ್ಯುತ್ ಘಟಕಗಳಿಂದ ಪೂರ್ಣ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದನೆ ಸಾಧ್ಯವಾಗುತ್ತಿಲ್ಲ. ಲಿಂಗನಮಕ್ಕಿ ಜಲಾಶಯದಲ್ಲಿ ಶೇ 70ರಷ್ಟು ನೀರಿದೆ. ಬೇರೆ ಜಲವಿದ್ಯುತ್ ಘಟಕಗಳಲ್ಲಿ ಶೇ 56, 60ರಷ್ಟಿದೆ. ಹೀಗಾಗಿ ಬೇಸಿಗೆ ದಿನದಲ್ಲಿ ವಿದ್ಯುತ್ ಅಭಾವ ಹೆಚ್ಚಾಗಲಿದೆ ಎಂದರು.ಈ ಪರಿಸ್ಥಿತಿ ನಿಭಾಯಿಸಲು ಕಡಿಮೆ ದರಕ್ಕೆ ಯಾವ ರಾಜ್ಯದಲ್ಲಿ ವಿದ್ಯುತ್ ದೊರಕುತ್ತದೋ ಆ ರಾಜ್ಯದಿಂದ ವಿದ್ಯುತ್ ಖರೀದಿ ಮಾಡಲು ತೀರ್ಮಾನಿಸಲಾಗಿದೆ. ಸದ್ಯ ಗುಜರಾತ್ ರಾಜ್ಯದಿಂದ 700 ಮೆಗಾವಾಟ್ ವಿದ್ಯುತ್ ಖರೀದಿಸಲಾಗುತ್ತಿದೆ. ಇದರಲ್ಲಿ 500 ಮೆಗಾವಾಟ್ ವಿದ್ಯುತ್ ಪೂರೈಕೆ ಆಗುತ್ತಿದೆ. 200 ಮೆಗಾವಾಟ್ ಡಿಸೆಂಬರ್ ತಿಂಗಳಲ್ಲಿ ಪೂರೈಕೆ ಆಗಲಿದೆ ಎಂದು ವಿವರಿಸಿದರು. ರಾಜ್ಯದಲ್ಲಿನ ಸಕ್ಕರೆ ಕಾರ್ಖಾನೆಗಳಿಂದ 350ರಿಂದ 400 ಮೆಗಾವಾಟ್ ವಿದ್ಯುತ್ ಖರೀದಿಸಲು ಸರ್ಕಾರ ಚಿಂತನೆ ನಡೆಸಿದೆ. ಗುಜರಾತ್ ಹೊರತುಪಡಿಸಿದರೆ ಬೇರೆ ಯಾವ ರಾಜ್ಯಗಳೂ ವಿದ್ಯುತ್ ಸ್ವಾವಲಂಬನೆ ಹೊಂದಿಲ್ಲ. ದಕ್ಷಿಣ ಭಾರತದಲ್ಲಿ ವಿದ್ಯುತ್ ಅಭಾವ ಎದುರಿಸುತ್ತಿರುವ ರಾಜ್ಯಗಳೇ ಹೆಚ್ಚಾಗಿವೆ ಎಂದರು.ಯರಮರಸ್, ಯದ್ಲಾಪುರ ಹಾಗೂ ಛತ್ತೀಸಗಡದಲ್ಲಿ ಶಾಖೋತ್ಪನ್ನ ವಿದ್ಯುತ್ ಸ್ಥಾವರ ನಿರ್ಮಾಣಕ್ಕೆ ರಾಜ್ಯ ಸರ್ಕಾರವು ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದೆ. ಬಿಡದಿಯಲ್ಲಿ 700 ಮೆಗಾವಾಟ್ ವಿದ್ಯುತ್ ಉತ್ಪಾದನೆ ಸಾಮರ್ಥ್ಯದ ಅನಿಲ ವಿದ್ಯುತ್ ಘಟಕ (ಗ್ಯಾಸ್ ಪ್ಲಾಂಟ್) ಆರಂಭಿಸಲಾಗುತ್ತಿದೆ. ಕೇಂದ್ರ ಸರ್ಕಾರದ ಅಸಹಕಾರ ಧೋರಣೆ ಮುಂದುವರಿಸಿದ್ದು ಕಲ್ಲಿದ್ದಲು ಪೂರೈಕೆಯ ಭರವಸೆ ನೀಡಿಲ್ಲ ಎಂದು ಆರೋಪಿಸಿದರು.ಕಲ್ಲಿದ್ದಲು ಪೂರೈಕೆ ವಿಷಯದಲ್ಲಿ ಕೇಂದ್ರ ಸರ್ಕಾರ ತಪ್ಪು ನೀತಿಗಳನ್ನು ಅನುಸರಿಸುತ್ತಿದೆ. ಬೇಡಿಕೆ ಸಲ್ಲಿಸಿದ ರಾಜ್ಯಗಳಿಗೆ ಕೇಂದ್ರ ಸರ್ಕಾರವು ಕಲ್ಲಿದ್ದಲನ್ನು ಸಮರ್ಪಕವಾಗಿ ಪೂರೈಸದೇ ಖಾಸಗಿ ಕಂಪೆನಿಗಳಿಗೆ ಪೂರೈಕೆ ಮಾಡುತ್ತಿದೆ. ಇದು ಕಲ್ಲಿದ್ದಲು ಸಮಸ್ಯೆಗೆ ಕಾರಣವಾಗಿದೆ ಎಂದು ಆಪಾದಿಸಿದರು.ವಿದ್ಯುತ್ ಸ್ವಾವಲಂಬನೆ: ರಾಜ್ಯದ ಅಪೇಕ್ಷೆಯಂತೆ ಕೇಂದ್ರ ಸರ್ಕಾರವು ಸಹಕಾರ ನೀಡಿದರೆ 2014ರ ಹೊತ್ತಿಗೆ ಕರ್ನಾಟಕವು ವಿದ್ಯುತ್ ಸ್ವಾವಲಂಬಿ ರಾಜ್ಯವಾಗಿ ರೂಪುಗೊಳ್ಳಲಿದೆ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.