ಶುಕ್ರವಾರ, ನವೆಂಬರ್ 22, 2019
20 °C

ಬೇಸಿಗೆಯಲ್ಲೂ ಜಲಾಶಯ ಭರ್ತಿಗೆ ಯೋಜನೆ

Published:
Updated:
ಬೇಸಿಗೆಯಲ್ಲೂ ಜಲಾಶಯ ಭರ್ತಿಗೆ ಯೋಜನೆ

ಬಸವಕಲ್ಯಾಣ: ಕಡು ಬಿಸಿಲಲ್ಲೂ ಕೊಂಗಳಿ ನದಿಯಲ್ಲಿ ಸಾಕಷ್ಟು ನೀರಿದೆ. ಹೀಗಾಗಿ ಅಲ್ಲಿಂದ ಚುಳಕಿನಾಲಾ ಜಲಾಶಯಕ್ಕೆ ನೀರು ಭರ್ತಿ ಮಾಡುವ ಕಾರ್ಯ ಬೇಸಿಗೆಯಲ್ಲಿಯೂ ನಡೆಯಲಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ಜಲಾಶಯದಿಂದ ಪ್ರತಿದಿನ ನಗರಕ್ಕೆ ನೀರು ಸರಬರಾಜು ಮಾಡಬಹುದು. ಅಲ್ಲದೆ ಕೃಷಿ ಕಾರ್ಯಕ್ಕೂ ನೀರಿನ ಉಪಯೋಗ ಆಗಲಿದೆ.ನದಿಯು ನಗರದಿಂದ 22 ಕಿ.ಮೀ. ದೂರದಲ್ಲಿ ಹುಲಸೂರ ಹತ್ತಿರದಲ್ಲಿದೆ. ಇಲ್ಲಿಂದ ಏತ ನೀರಾವರಿ ಮೂಲಕ ಚುಳಕಿನಾಲಾ ಜಲಾಶಯಕ್ಕೆ ನೀರು ಭರ್ತಿ ಮಾಡುವ ಯೋಜನೆಯನ್ನು 24 ಕೋಟಿ ರೂಪಾಯಿ ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿದೆ. ನಗರ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಹಣಕಾಸು ನಿಗಮದಿಂದ ಏಶಿಯನ್ ಅಭಿವೃದ್ಧಿ ಬ್ಯಾಂಕ್ ಸಾಲದ ನೆರವಿನಿಂದ ಈ ಕೆಲಸ ನಡೆಯುತ್ತಿದೆ.ಮುಖ್ಯವೆಂದರೆ, ನಗರದ ಜನಸಂಖ್ಯೆ  ಬೆಳೆಯುತ್ತಿರುವ ಕಾರಣ ಕುಡಿಯುವ ನೀರಿಗೆ ತತ್ವಾರವಾಗಿದೆ. ಬೇಸಿಗೆ ಕಾಲದಲ್ಲಿ ನಲ್ಲಿಗಳಿಗೆ ಐದಾರು ದಿನಗಳಿಗೊಮ್ಮೆ ನೀರು ಬರುವಂತಹ ಪರಿಸ್ಥಿತಿ ಇದೆ. ಇಂಥ ಪರದಾಟ ತಪ್ಪಿಸುವುದಕ್ಕಾಗಿ 12 ಕೋಟಿ ರೂಪಾಯಿ ವೆಚ್ಚದಲ್ಲಿ ಚುಳಕಿನಾಲಾ ಜಲಾಶಯದಿಂದ ನಗರಕ್ಕೆ ನೀರು ಸರಬರಾಜು ಮಾಡುವ ಯೋಜನೆ 10 ವರ್ಷಗಳ ಹಿಂದೆ ಕೈಗೊಳ್ಳಲಾಗಿದೆ.ವಿಪರ‌್ಯಾಸವೆಂದರೆ, ಮಳೆಯ ಕೊರತೆಯಿಂದಾಗಿ ಜಲಾಶಯ ತುಂಬುತ್ತಿಲ್ಲ. ಆದ್ದರಿಂದ ಬಿಸಿಲಿನ ಝಳ ಆರಂಭವಾದಾಗ ಇಲ್ಲಿ ನೀರು ಇಲ್ಲದಂತಾಗುತ್ತಿದೆ. ಆದ್ದರಿಂದ ನಗರ ನಿವಾಸಿಗಳು ನೀರಿಗಾಗಿ ಪರದಾಡುವುದು ತಪ್ಪದಂತಾಗಿದೆ. ಆದ್ದರಿಂದಲೇ ಜಲಾಶಯಕ್ಕೆ ನದಿ ನೀರು ಭರ್ತಿ ಮಾಡುವ ಮಹತ್ವದ ಯೋಜನೆ ಹಾಕಿಕೊಳ್ಳಲಾಯಿತು.ನದಿಯಿಂದಲೂ ಬರೀ ಮಳೆಗಾಲದಲ್ಲಿ ಮಾತ್ರ ನೀರು ಸಾಗಿಸಬಹುದು ಎನ್ನಲಾಗುತ್ತಿತ್ತು. ಆದರೆ ಈಚೆಗೆ ಇಲ್ಲಿ ಮೂರು ಕಡೆ ಬ್ಯಾರೇಜ್‌ಗಳನ್ನು ನಿರ್ಮಿಸಿ ನೀರು ಸಂಗ್ರಹಿಸಲು ವ್ಯವಸ್ಥೆ ಮಾಡಲಾಗಿದೆ. ಹೀಗಾಗಿ ಈಗಲೂ ಇಲ್ಲಿ ನೀರು ಲಭ್ಯವಿದೆ. ದಂಡೆಯಲ್ಲಿ ನಿಂತರೆ ನದಿ ತುಂಬಿಕೊಂಡಿರುವಂತೆ ಕಾಣುತ್ತಿದೆ.

`ಮೊದಲು ಮಾರ್ಚ್ ಬಂತೆಂದರೆ ನದಿ ಒಣಗುತಿತ್ತು. ಅದರಲ್ಲಿ ಗುಂಡ (ತಗ್ಗು) ಗಳನ್ನು ಕೊರೆದು ಪಂಪಸೆಟ್‌ಗಳ ಮೂಲಕ ಹೊಲಗಳಿಗೆ ನೀರು ಹರಿಸುತ್ತಿದ್ದೇವು. ಆದರೆ ಈ ವರ್ಷ ಬ್ಯಾರೇಜ್‌ಗಳು ನಿರ್ಮಿಸಿ ನೀರು ನಿಲ್ಲಿಸಿದ ಕಾರಣ ಎಲ್ಲೆಡೆ ಸಾಕಷ್ಟು ನೀರಿದೆ' ಎಂದು ಕೊಂಗಳಿಯ ರೈತ ಮಹಾದೇವ ಹೇಳುತ್ತಾರೆ.ಹಾಗೆ ನೋಡಿದರೆ, ಜಲಾಶಯಕ್ಕೆ ನೀರು ಸಾಗಿಸುವ ಯೋಜನೆ ಮಾರ್ಚ್ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ಮೂಲಸೌಕರ್ಯ ಅಭಿವೃದ್ಧಿ ನಿಗಮದ ಹಿಂದಿನ ವ್ಯವಸ್ಥಾಪಕ ನಿರ್ದೇಶಕ ಹರ್ಷ ಗುಪ್ತಾ ಮೂರು ತಿಂಗಳ ಹಿಂದೆ ಇಲ್ಲಿಗೆ ಆಗಮಿಸಿದ್ದಾಗ ತಿಳಿಸಿದ್ದರು. ಆದರೆ, ಏಪ್ರಿಲ್ ತಿಂಗಳಾದರೂ ಇನ್ನುವರೆಗೆ ಕೆಲಸ ಮುಗಿದಿಲ್ಲ. ಇನ್ನು ಕೆಲ ತಿಂಗಳವರೆಗೆ ಕಾಮಗಾರಿ ನಡೆಯಬಹುದು ಎನ್ನಲಾಗುತ್ತಿದೆ. ಏನಿದ್ದರೂ, ಯೋಜನೆ ಪೂರ್ಣಗೊಂಡಾಗ ನಗರ ನಿವಾಸಿಗಳಿಗೆ ಲಾಭವೇ ಆಗಲಿದೆ.

ಪ್ರತಿಕ್ರಿಯಿಸಿ (+)