ಬುಧವಾರ, ಜೂನ್ 23, 2021
28 °C

ಬೇಸಿಗೆಯ ಜಾತಕಫಲ!

ಕೆ.ಎಂ.ಸತೀಶ್ ಬೆಳ್ಳಕ್ಕಿ Updated:

ಅಕ್ಷರ ಗಾತ್ರ : | |

ಅಮ್ಮನ ತೊಡೆಯ ಮೇಲೆ ಮಲಗಿ, ತನ್ನ ಪುಟ್ಟ ಕೈಕಾಲುಗಳನ್ನು ಜಾಡಿಸುತ್ತಾ, ಮನೆಯ ಹಂಚಿನ ಸಂದಿಯಿಂದ ತೂರಿಬರುತ್ತಿದ್ದ ಸೂರ್ಯನ ಕಿರಣಗಳನ್ನು ಕೈಯಲ್ಲಿ ಹಿಡಿದು ಖುಷಿಪಡುತ್ತಿದ್ದ ಪುಟಾಣಿಗಳು ಈಗ ಸೂರ್ಯನ ಬದಲಾದ ರೂಪಕ್ಕೆ ಬೆಚ್ಚುತ್ತಿವೆ. ಇನ್ನು, ದೊಡ್ಡವರು ಬಿಸಿಲ ಧಗೆ ತಾಳಲಾರದೇ ಸೂರ್ಯನಿಗೆ ಶಾಪ ಹಾಕುತ್ತಿದ್ದಾರೆ. ಹೌದು, ಬೆಂಗಳೂರು ನಗರಿ ಈಗ ಬಿಸಿಲಿನಿಂದ ಬೇಯುತ್ತಿದೆ.ಸೂರ್ಯನ ಪ್ರಖರತೆ ದಿನೇದಿನೇ ಹೆಚ್ಚುತ್ತಿರುವುದರಿಂದ ನಗರದಲ್ಲಿ ಈಗ ಬೆಳಿಗ್ಗೆ ಎಂಟು ಗಂಟೆಗೆಲ್ಲಾ ಶಾಖ. ಪೂರ್ವ ಮುಂಗಾರು ಸಮಯದಲ್ಲಿ ನಗರ ಬಿಸಿಲಿನಿಂದ ಬೆವೆತು ಹೋಗುವುದಂತೂ ನಿಜ. ಆದರೆ, ರಾಜ್ಯದ ಇತರೆ ಭಾಗಗಳಿಗೆ ಹೋಲಿಸಿದರೆ ಬೆಂಗಳೂರಿಗರು ಬಿಸಿಲಿಗೆ ಹೆದರಬೇಕಿಲ್ಲ ಎಂಬುದು ಹವಾಮಾನ ತಜ್ಞರ ಅಭಿಪ್ರಾಯ. ಅಂದಹಾಗೆ, ಬೆಂಗಳೂರಿನ ಬಿಸಿಲು ಕುರಿತು ಹವಾಮಾನ ಇಲಾಖೆಯ ನಿರ್ದೇಶಕ ಪುಟ್ಟಣ್ಣ ಮಾತನಾಡಿದ್ದಾರೆ.‘ಮಾರ್ಚ್‌ ಆರಂಭದಲ್ಲೇ ಆಲಿಕಲ್ಲಿನ ಮಳೆಸುರಿಸಿ ಜನರಲ್ಲಿ ಆತಂಕ ಸೃಷ್ಟಿಸಿದ್ದ ನಿಸರ್ಗ ಈಗ ಎಲ್ಲರಿಗೂ ಬಿಸಿಲಿನ ಬಿಸಿ ಮುಟ್ಟಿಸುತ್ತಿದೆ. ಕಳೆದ ಒಂದು ವಾರದಲ್ಲಿ ತಾಪಮಾನ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ. ದಿನೇದಿನೇ ಬೇಸಿಗೆಯ ತಾಪಮಾನ ಹೆಚ್ಚುತ್ತಿದ್ದರೂ ಈವರೆಗೂ ದಾಖಲೆ ಸರಿಗಟ್ಟುವ ತಾಪಮಾನ ಕಂಡುಬಂದಿಲ್ಲ. ಬೇಸಿಗೆ ಅವಧಿ ತುಸು ಹೆಚ್ಚಾಗಿದೆ. ಅಂತೆಯೇ ಈ ಅವಧಿಯಲ್ಲಿ ಬೀಳಬಹುದಾದ ಸರಾಸರಿ ಮಳೆಯ ಪ್ರಮಾಣವೂ ಹೆಚ್ಚಾಗಲಿದೆ. ಮಾರ್ಚ್‌, ಏಪ್ರಿಲ್‌ ಹಾಗೂ ಮೇ ತಿಂಗಳನ್ನು ಪೂರ್ವ ಮುಂಗಾರಿನ ತಿಂಗಳು ಎಂದು ಕರೆಯುತ್ತೇವೆ. ಈ 90 ದಿನಗಳ ಅವಧಿಯನ್ನು ಅತಿ ತಾಪಮಾನ ಇರುವ ದಿನಗಳು ಎಂದು ಗುರ್ತಿಸುತ್ತೇವೆ. ಸೂರ್ಯ ದಕ್ಷಿಣಾರ್ಧ ಗೋಳದಿಂದ ಉತ್ತರಾರ್ಧ ಗೋಳಕ್ಕೆ ಬರುವ ಸಮಯವಿದು. ಈ ಅವಧಿಯಲ್ಲಿ ಹಗಲು ಜಾಸ್ತಿಯಾಗುತ್ತಾ ಹೋಗುತ್ತದೆ. ಮಾರ್ಚ್‌ 11ಕ್ಕೆ ಹಗಲು–ರಾತ್ರಿಯ ಸಮಯ ಸಮವಾಗಿತ್ತು. ಈಗ ಹಗಲಿನ ಪ್ರಮಾಣದಲ್ಲಿ ಸುಮಾರು 54 ನಿಮಿಷ ಹೆಚ್ಚಳ ಕಂಡುಬಂದಿದೆ.ಬೇಸಿಗೆಯಲ್ಲಿ ಬಿಸಿಲಿನ ತಾಪ ಹೆಚ್ಚಲು ಅನೇಕ ಕಾರಣಗಳಿವೆ. ವಾತಾವರಣದಲ್ಲಿ ಮೋಡದ ಪ್ರಮಾಣ ಎಷ್ಟಿರುತ್ತದೆ ಎಂಬುದು ಮೊದಲ ಅಂಶ. ಮೋಡ ಇರಲಿಲ್ಲ ಅಂದರೆ ಸಹಜವಾಗಿಯೇ ತಾಪಮಾನ ಹೆಚ್ಚುತ್ತದೆ. ಯಾವ ದಿಕ್ಕಿನಿಂದ ಗಾಳಿ ಬೀಸುತ್ತದೆ ಎಂಬುದು ಇನ್ನೊಂದು ಅಂಶ. ಭೂ ಪ್ರದೇಶದಿಂದ ಬೀಸುವ ಒಣಗಾಳಿ ಉಷ್ಣವನ್ನು ಹೊತ್ತು ತರುತ್ತದೆ. ಹಾಗಾಗಿ, ಈ ಸಮಯದಲ್ಲೂ ವಾತಾವರಣದಲ್ಲಿ ತಾಪಮಾನ ಹೆಚ್ಚುತ್ತದೆ. ಹಗಲಿನಲ್ಲಿ ಆಗುವ ಹೆಚ್ಚಳ, ಒಣಗಾಳಿ, ಮೋಡದ ಪ್ರಮಾಣ ಇವೆಲ್ಲವೂ ವಾತಾರಣದಲ್ಲಿನ ಉಷ್ಣಾಂಶದ ಏರಿಕೆಗೆ ಕಾರಣವಾಗುತ್ತವೆ. ಬೆಂಗಳೂರಿನಲ್ಲಿ ಮಾರ್ಚ್‌ 19ರಂದು 35.4 ಡಿಗ್ರಿ ಉಷ್ಣಾಂಶವಿತ್ತು. ಮಾರ್ಚ್‌ 20ರಂದು 35.6 ಡಿಗ್ರಿಗೆ ಏರಿತು. 35.5 ಡಿಗ್ರಿಗಿಂತ ಜಾಸ್ತಿ ಉಷ್ಣಾಂಶವಿದ್ದರೆ ನಾವು ಅದನ್ನು 36 ಡಿಗ್ರಿ ಅಂತಲೇ ಹೇಳುತ್ತೇವೆ. ದಿನದ ತಾಪಮಾನವನ್ನು ಅಳತೆ ಮಾಡಲು ನಾವು ಸಾಮಾನ್ಯವಾಗಿ ಮಧ್ಯಾಹ್ನ 2ರಿಂದ 3ಗಂಟೆಯ ಸಮಯವನ್ನು ಗಣನೆಗೆ ತೆಗೆದುಕೊಳ್ಳುತ್ತೇವೆ. ಈ ವೇಳೆಯಲ್ಲಿ ಬಿಸಿಲಿನ ತಾಪಮಾನ ಜಾಸ್ತಿ ಇರುತ್ತದೆ. ಬೆಂಗಳೂರಿನಲ್ಲಿ ದಾಖಲಾದ ಅತಿಹೆಚ್ಚು ಉಷ್ಣಾಂಶ 37.3 ಡಿಗ್ರಿ ಅಷ್ಟೇ. ಹಿಂದಿನ ದಾಖಲೆಗಳನ್ನು ಗಮನಿಸಿದರೆ ಇದು ಗೊತ್ತಾಗುತ್ತದೆ. ಈ ಬಾರಿಯ ಬೇಸಿಗೆಯಲ್ಲಿ ಅಂದರೆ, ಏಪ್ರಿಲ್‌ ಮತ್ತು ಮೇ ತಿಂಗಳ ನಡುವೆ ನಗರದಲ್ಲಿ ಹೆಚ್ಚೆಂದರೆ 37.6 ಡಿಗ್ರಿ ಗರಿಷ್ಠ ತಾಪಮಾನ ದಾಖಲಾಗಬಹುದು ಎಂದು ಅಂದಾಜಿಸಲಾಗಿದೆ.ಈಗಾಗಲೇ ವಾಡಿಕೆಯಂತೆ ರಾಜ್ಯದೆಲ್ಲೆಡೆ ಸರಾಸರಿ ಮೂರರಿಂದ ನಾಲ್ಕು ಸೆಂಟಿ ಮೀಟರ್‌ ಮಳೆಯಾಗಿದೆ. ಇದರ ಜತೆಗೆ ಸಮುದ್ರದಲ್ಲಿ ಎದ್ದ ಮೇಲ್ಮೈಗಾಳಿಯ ಪರಿಣಾಮದಿಂದ ಆಲಿಕಲ್ಲಿನ ಮಳೆಯೂ ಸುರಿಯಿತು. ಇದು ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆ ನಾಶಕ್ಕೆ ಕಾರಣವಾಯಿತು. ಆದರೆ, ಇನ್ನು ಮುಂದೆ ಆಲಿಕಲ್ಲಿನ ಮಳೆ ಬೀಳುವ ಸಂಭವ ಇಲ್ಲ. ಬೇಸಿಗೆ ಬೇಗನೆ ಪ್ರಾರಂಭವಾಗಿರುವುದರಿಂದ ಉಷ್ಣಾಂಶದಲ್ಲಿ ಸತತವಾಗಿ ಏರಿಕೆ ಕಂಡುಬಂದು, ಗರಿಷ್ಠ ಮಟ್ಟ ತಲುಪಿದ ನಂತರ ಮಳೆಯಾಗುವ ಸಾಧ್ಯತೆಯೇ ಹೆಚ್ಚಿರುತ್ತದೆ.ಬೆಳಿಗ್ಗೆಯಿಂದ ಮಧ್ಯಾಹ್ನದವರೆಗಿನ ಬಿಸಿಲಿಗೆ ಉಷ್ಣಾಂಶ ಏರಿಕೆಯಾಗುತ್ತದೆ. ಆ ನಂತರ ವಾತಾವರಣದಲ್ಲಿ ಒತ್ತಡ ಕಡಿಮೆಯಾಗುವುದರಿಂದ ಮೋಡಗಳು ಸಾಂದ್ರಗೊಂಡು ಮಳೆಯಾಗುವ ಸಾಧ್ಯತೆಯಿರುತ್ತದೆ. ವಾತಾವರಣದಲ್ಲಿ ಗುಡುಗು, ಸಿಡಿಲಿನ ಆರ್ಭಟ ಶುರುವಾಗುವುದು ಮೇ ಅಂತ್ಯದಲ್ಲಿ. ಹಾಗಾಗಿ, ಮಳೆಗಾಲ ಜೂನ್‌ನಿಂದ ಪ್ರಾರಂಭಗೊಂಡು ಸೆಪ್ಟೆಂಬರ್‌ವರೆಗೂ ಮುಂದುವರಿಯಲಿದೆ. ನಿರ್ದಿಷ್ಟವಾಗಿ ಮಳೆ ಯಾವಾಗಿನಿಂದ ಪ್ರಾರಂಭಗೊಳ್ಳುತ್ತದೆ ಎಂಬುದನ್ನು ಏಪ್ರಿಲ್‌ 16ರ ನಂತರವಷ್ಟೇ ಹೇಳಲು ಸಾಧ್ಯ.ನಗರದಲ್ಲಿ ಈ ಬಾರಿ ಸದ್ಯಕ್ಕೆ 36 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಪ್ರಮಾಣದ ತಾಪಮಾನ ದಾಖಲಾಗಿದೆ. ಏಪ್ರಿಲ್‌ ಮತ್ತು ಮೇ ತಿಂಗಳಲ್ಲಿ ನಗರದ ಉಷ್ಣಾಂಶದ ಪ್ರಮಾಣ 38 ಡಿಗ್ರಿ ಸೆಲ್ಸಿಯಸ್‌ಗೆ ಜಿಗಿಯಬಹುದು. ಹಾಗಾಗಿ, ನಗರದಲ್ಲಿ ಈವರೆಗೂ ಭಾರಿ ಪ್ರಮಾಣದಲ್ಲಿ ಉಷ್ಣಾಂಶ ಏರಿಕೆಯಾಗಿಲ್ಲ. ಯಾವುದೇ ಒಂದು ಪ್ರದೇಶದ ಉಷ್ಣಾಂಶ ಕನಿಷ್ಠ ಐದರಿಂದ ಆರು ಡಿಗ್ರಿಯಷ್ಟು ಹೆಚ್ಚಳ ಕಂಡುಬಂದರೆ ಮಾತ್ರ ಅಲ್ಲಿನ ತಾಪಮಾನ ಅಧಿಕಗೊಂಡಿದೆ ಎಂದು ಹೇಳಲಾಗುತ್ತದೆ. ಬೆಂಗಳೂರಿನಲ್ಲಿ ಈ ಪ್ರಮಾಣದ ತಾಪಮಾನ ಜಿಗಿತ ಕಡಿಮೆ. ಹಾಗಾಗಿ, ಬೆಂಗಳೂರಿಗರು ಬಿಸಿಲಿಗೆ ಹೆದರಬೇಕಿಲ್ಲ. ಅಂದಹಾಗೆ, ಜೂನ್ ಮೊದಲವಾರದಿಂದ ಮುಂಗಾರು ಮಳೆಯಾಗುವ ಸಾಧ್ಯತೆಯಿದ್ದು, ಆಗ ಎಲ್ಲರೂ ಬಿಸಿಲ ಬೇಗೆ ಮರೆತು ಮಳೆಗೆ ಮುಖವೊಡ್ಡಿ ಆನಂದಿಸಬಹುದು’.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.