ಸೋಮವಾರ, ಜೂನ್ 21, 2021
27 °C

ಬೇಸಿಗೆ ಎಂದರೆ ಏನೆಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೇಸಿಗೆ ಎಂದರೆ ಏನೆಲ್ಲ

ಎದೆಯ ಗೂಡನ್ನೂ ಸೀಳಿಕೊಂಡು ಹೊಕ್ಕಿತ್ತು ಈ ಬಾರಿಯ ಚಳಿ. ನಾನು ಈ ವರ್ಷ ಮಾತ್ರವೇ ಬೆಂಗಳೂರಿನಲ್ಲಿ ಒರಿಜಿನಲ್ ಚಳಿಯನ್ನು ಕಂಡಿದ್ದು. ಅಬ್ಬಾ! ಎಂಥ ಚಳಿಯಿತ್ತು ಇಲ್ಲಿ. ನಾನಂತೂ ಚಳಿಯನ್ನು ತುಂಬಾ ಎಂಜಾಯ್ ಮಾಡಿದೆ. ಬೆಂಗಳೂರಿನ ಚಳಿಗೂ ಒಂದು ವಿಶೇಷತೆ ಇದೆ.

 

ಬೆಳ್ಳಂಬೆಳಿಗ್ಗೆ ಎದ್ದು ಇಲ್ಲಿ ಬೀಸುವ ಚುಮುಚುಮು ಗಾಳಿಗೆ ಮೈ ಒಡ್ಡುವುದು ಅಂದರೆ ಅದರ ಮಜಾನೇ ಬೇರೆ. ಈಗ ಚಳಿಯ ಜೋರು ಮುಗಿದಿದೆ. ಅದರ ಬೆನ್ನಿಗೆ ಬಿಸಿಲಿನ ಚುರುಕು ಶುರುವಿಟ್ಟುಕೊಂಡಿದೆ.ಸಣ್ಣ ಸಣ್ಣ ಸಂಗತಿಗಳನ್ನು ಎಂಜಾಯ್ ಮಾಡಲು ಸೂಕ್ತ ಸಮಯ ಬೇಸಿಗೆ. ಚಳಿಯಂತೆ ಬಿಸಿಲು ಕೂಡ ವಿಶಿಷ್ಟವಾದುದು. ಬಿಸಿಲಿಗೂ ಒಂದು ಲಾಲಿತ್ಯವಿದೆ. ಬಿಸಿಲಿನ ಬೇಗೆ ಕೂಡ ಫೀಲ್ ಮಾಡೋ ಅಂತಹಾ ವಿಚಾರ.ಹೇಗೆ ಅನ್ತೀರಾ? ಬೇಸಿಗೆಯಲ್ಲಿ ತಣ್ಣನೆಯ ನೀರಿಗೆ ಮೈಯೊಡ್ಡುವುದು, ಒಮ್ಮಮ್ಮೆ ಬೀಸುವ ತಂಪು ಗಾಳಿಗೆ ಪುಳಕಗೊಳ್ಳುವುದು, ಎ.ಸಿ.ಯನ್ನು ಆಸ್ವಾದಿಸುವುದು ಎಲ್ಲವೂ ಖುಷಿ ಕೊಡುವ ಸಂಗತಿಗಳು. ಬೇಸಿಗೆ ಕೇವಲ ಬಿಸಿಲೊಂದನ್ನೇ ಹೊತ್ತು ತರುವುದಿಲ್ಲ.

 

ಹಲವು ಖುಷಿಗಳನ್ನು ತರುತ್ತದೆ. ಅವುಗಳನ್ನು ಆಸ್ವಾದಿಸುವ ಮನಸ್ಸು ನಮ್ಮಲ್ಲಿ ಇರಬೇಕು ಅಷ್ಟೇ. ಬೇಸಿಗೆಯಲ್ಲಿ ನಂಗೆ ಆಗುವ ಒಂದೇ ಒಂದು ಬೇಜಾರು ಅಂದ್ರೆ ಶೂಟಿಂಗ್‌ನಲ್ಲಿ ತೊಡಗುವುದು.

 

ಅದರಲ್ಲೂ ಬೀಚ್‌ನಲ್ಲಿ ಶೂಟಿಂಗ್ ಮಾಡುವುದು ಎಂದರೆ ಮೈಯಲ್ಲಿ ಮುಳ್ಳು ಏಳುತ್ತದೆ. ಕಡಲ ಕಿನಾರೆಗೆ ಹೋಗಿ ಅಲ್ಲಿ ಡ್ಯುಯೆಟ್ ಸಾಂಗ್ ಹಾಡುವುದು ಇನ್ನೂ ಕಷ್ಟ. ಬೀಚ್‌ನಲ್ಲಿರುವ ಹೀಟ್ ಹಾಗೂ ನೆತ್ತಿ ಮೇಲೆ ಉರಿವ ಸೂರ್ಯನ ಧಗೆಗೆ ಮಾಡಿಕೊಂಡ ಮೇಕಪ್ ನೀರಾಗಿ ಇಳಿಯುತ್ತದೆ.ಅಬ್ಬಾ ಅದನ್ನು ನೆನಸಿಕೊಂಡರೇ ಒಂಥರಾ ಅನಿಸುತ್ತೆ.ಇನ್ನು ಬೇಸಿಗೆಯಲ್ಲಿ ನಡೆಯೋ ಸಮ್ಮರ್ ಕ್ಯಾಂಪ್ ಬಗ್ಗೆ ಹೇಳೋದಾದ್ರೆ ಮಕ್ಕಳ ಬೆಳವಣಿಗೆ ದೃಷ್ಟಿಯಿಂದ ಇದು ಒಳ್ಳೆ ಬೆಳವಣಿಗೆ.ಮಕ್ಕಳಿಗೆ ಇಲ್ಲಿ ಗೊತ್ತಿಲ್ಲದ ಅನೇಕ ವಿಚಾರಗಳನ್ನು ಕಲಿಯಲು ಅವಕಾಶ ಸಿಗುತ್ತೆ. ಕಳೆದ ಬಾರಿ ನನ್ನ ಮಗನನ್ನು ನಾನು ಹ್ಯಾಂಡ್‌ರೈಟಿಂಗ್ ಕ್ಯಾಂಪ್‌ಗೆ ಕಳುಹಿಸಿದ್ದೆ. ಅವನ ಕೈ ಬರಹ ಈಗ ಸುಧಾರಿಸಿದೆ.ಆದ್ರೆ, ಸಮ್ಮರ್ ಕ್ಯಾಂಪ್ ಅಂತ ಕ್ಲಾಸ್ ಮಾಡುವುದು ಮಕ್ಕಳಿಗೆ ಹಿಂಸೆ ಕೊಡೋ ವಿಚಾರ. ನನಗಂತೂ ಇಂತಹ ಕ್ಯಾಂಪ್‌ಗಳ ಬಗ್ಗೆ ಎಳ್ಳಷ್ಟೂ ಪ್ರೀತಿ ಇಲ್ಲ. ಮಕ್ಕಳು ವರ್ಷಪೂರ್ತಿ ಓದಿ ಬೇಸಿಗೆಯಲ್ಲಿ ಎರಡು ತಿಂಗಳು ಎಲ್ಲ ಮರೆತು ಚೆನ್ನಾಗಿ ಕಾಲ ಕಳೆಯಬೇಕು. ಅದು ಬಿಟ್ಟು ರಜದಲ್ಲೂ ಮಕ್ಕಳಿಗೆ ಪಾಠ ಮಾಡುವುದು ಸರಿಯಲ್ಲ.ಬೇಸಿಗೆಯೊಂದಿಗೆ ನನ್ನ ಬಾಲ್ಯದ ನೆನಪುಗಳು ಕೂಡ ತಳುಕು ಹಾಕಿಕೊಂಡಿವೆ. ಶಾಲಾ ದಿನಗಳಲ್ಲಿ ಬೇಸಿಗೆ ಬಂತು ಎಂದರೆ ನನಗಂತೂ ಹಬ್ಬ. ಇಡೀ ದಿನ ಆಟ, ಆಟ ಮತ್ತೂ ಆಟ. ಎರಡು ತಿಂಗಳು ನಾನು ಬಿಸಿಲಿಗೆ ಕ್ಯಾರೇ ಅಂತಿರಲಿಲ್ಲ.ಲೆಕ್ಕವಿಲ್ಲದಷ್ಟು ಮಾವಿನ ಹಣ್ಣು ತಿನ್ನುತ್ತಾ, ಗೆಳೆಯರೊಂದಿಗೆ ಆಟವಾಡುತ್ತಾ ಕಳೆದ ಬಾಲ್ಯದ ಬೇಸಿಗೆಯ ಮಜವೇ ಬೇರೆ. ಹಿಂದೆಲ್ಲಾ ಬೇಸಿಗೆ ಬಂತು ಅಂದ್ರೆ ನಾವು ಅಜ್ಜಿ ಮನೆಗೆ ಲಗ್ಗೆ ಇಡುತ್ತಿದ್ದೆವು. ಅಲ್ಲಿ ನಾವು ಮಾಡುತ್ತಿದ್ದ ತರ್ಲೆಗಳು ಅಷ್ಟಿಷ್ಟಲ್ಲ.ತುಂಟಾಟವನ್ನೆಲ್ಲಾ ಸಹಿಸಿಕೊಂಡು ಅಜ್ಜಿ ಬೆನ್ನಿನ ಮೇಲೆ ಪ್ರೀತಿಯ ಗುದ್ದು ಕೊಡುತ್ತಿದ್ದರು. ಬಾಲ್ಯ ಮುಗಿದು ತಾರುಣ್ಯದ ಪರ್ವ ಶುರುವಾದ ನಂತರ ನನಗೆ ಕುಟುಂಬದೊಂದಿಗೆ ಕಾಲ ಕಳೆಯುವ ಅವಕಾಶವೇ ಕಮ್ಮಿ ಆಯ್ತು. ನನ್ನ ರೋಟಿನ್ ಲೈಫ್‌ನಲ್ಲಿ ಅದೂ ಸಾಧ್ಯವಿಲ್ಲ ಕೂಡ.ನನ್ನ ಕುಟುಂಬದವರು ಫ್ರೀ ಇದ್ದಾಗ ನನಗೆ ಶೂಟಿಂಗ್ ಇರುತ್ತದೆ. ನಾನು ಫ್ರೀ ಇದ್ದಾಗ ಅವರು ಕೆಲಸದಲ್ಲಿ ಬ್ಯುಸಿ ಆಗಿರುತ್ತಾರೆ. ಹಾಗಾಗಿ ಹಿಂದಿನಂತೆ ನಾವೀಗ ಕುಟುಂಬ ಸಮೇತರಾಗಿ ಬೇಸಿಗೆಯಲ್ಲಿ ಪ್ರವಾಸ ಕೈಗೊಳ್ಳಲು ಆಗುತ್ತಿಲ್ಲ. ಸದ್ಯಕ್ಕೆ ನಾನು `ತುಂತುರು~ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದೇನೆ. ಈ ಚಿತ್ರ ಮುಗಿದ ನಂತರ ನನ್ನದೇ ಒಂದು ಚಿತ್ರವನ್ನು ನಿರ್ದೇಶಿಸಬೇಕು ಅಂದುಕೊಂಡಿದ್ದೇನೆ. ಕನ್ನಡಿಗರೆಲ್ಲರಿಗೂ ನೋಡಲೇಬೇಕಾದ ಸಿನಿಮಾ ಇದು. ಅಂದಹಾಗೆ, ಬೆಂಗಳೂರಲ್ಲಿ ಈ ಬಾರಿ ಏನು ಸೆಖೆ ಅಂತೀರಾ?

ಭಾವನೆಗಳಿಗೆ ಜೀವ ತುಂಬೋ ನಟ ರಮೇಶ್ ಅರವಿಂದ್ ತೆರೆ ಹಿಂದೆ ಕೂಡ ಉತ್ಸಾಹದ ಬುಗ್ಗೆ. ಇವರ ಪ್ರತಿ ಮಾತಿನಲ್ಲೂ ಜೀವನಪ್ರೀತಿ ಒಸರುತ್ತದೆ. ನಟ, ನಿರ್ದೇಶಕನಾಗಿ ಹೊಸತನಕ್ಕೆ ತೆರೆದುಕೊಂಡಿರುವ ಇವರಿಗೆ ಪ್ರಕೃತಿಯ ಪ್ರತಿಯೊಂದು ಋತುವಿನ ಮೇಲೂ ವಿಪರೀತ ಒಲವಿದೆಯಂತೆ. ಅರಳು ಹುರಿದಂತೆ ಮಾತನಾಡುವ ರಮೇಶ್ ಬೆಂಗಳೂರಿನ ಬೇಸಿಗೆ ಕುರಿತು ಮಾತನಾಡಿದ್ದಾರೆ. ಅದನ್ನು ಅವರ ಮಾತುಗಳಲ್ಲೇ ಕೇಳಿ...

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.