ಬೇಸಿಗೆ ಜೊತೆಗೆ ಕಾಡುವ ನೀರು ಪೂರೈಕೆ ಸಮಸ್ಯೆ

7

ಬೇಸಿಗೆ ಜೊತೆಗೆ ಕಾಡುವ ನೀರು ಪೂರೈಕೆ ಸಮಸ್ಯೆ

Published:
Updated:

ಮಂಡ್ಯ: ಬೇಸಿಗೆ ಆರಂಭವಾಗಿದೆ. ಹವಾಮಾನ ಇಲಾಖೆಯ ಅನುಸಾರ ಜಿಲ್ಲೆಯಲ್ಲಿ ಗರಿಷ್ಠ ಉಷ್ಣಾಂಶ 28-29 ಡಿಗ್ರಿ ಸೆಲ್ಸಿಯಸ್‌ನ ಆಸುಪಾಸಿನಲ್ಲಿದೆ. ಆದರೂ, ಬಿಸಿಲ ಬೇಗೆ ಜನರಿಗೆ ತಟ್ಟುತ್ತಿದ್ದು, ತತ್ತರಿಸುವಂತೆ ಆಗಿದೆ. ಸಾಮಾನ್ಯವಾಗಿ ಶಿವರಾತ್ರಿ ಬಳಿಕ ಬಿಸಿಲ ಬೇಗೆ ಹೆಚ್ಚುತ್ತಿದ್ದರೂ ಈ ಬಾರಿ ಶಿವರಾತ್ರಿಕ್ಕೂ ಮೊದಲೇ ಬಿಸಿ ತಾಕತೊಡಗಿದೆ.ಬಿಸಿಲಿನ ಜೊತೆಗೆ ನೀರು ಪೂರೈಕೆಯ ಸಮಸ್ಯೆಗಳು ಕಾಣಿಸತೊಡಗಿದ್ದು, ಈಗಾಗಲೇ ಶಾಸಕರು, ನಗರಸಭೆ ಅಧ್ಯಕ್ಷರು, ಸದಸ್ಯರು ಜನರ ಪ್ರತಿಭಟನೆಯನ್ನು ಎದುರಿಸಿದ್ದಾರೆ. ಬೇಸಿಗೆ ಆರಂಭವಾಗುವುದಕ್ಕೆ ಮುನ್ನವೇ ನೀರು ಪೂರೈಕೆ ಸಮಸ್ಯೆ ಆಧರಿಸಿ ಮುಂಜಾಗ್ರತಾ ಕ್ರಮಗಳನ್ನು ನಗರಸಭೆ ಕೈಗೊಳ್ಳಬೇಕಿತ್ತಾದರೂ ಅಂಥ ಯಾವುದೇ ಕ್ರಮ ಕೈಗೊಂಡಿಲ್ಲ.`ಕುಡಿಯುವ ನೀರು ಪೂರೈಕೆ ಸಮಸ್ಯೆ ಕುರಿತು ದೂರು ಬರುತ್ತಿವೆ. ಅಂಥ ಸಂದರ್ಭದಲ್ಲಿ ತಕ್ಷಣವೇ ಹೋಗಿ ಸಮಸ್ಯೆ ಬಗೆಹರಿಸುತ್ತಿದ್ದೇವೆ. ಆದರೆ, ನೀರಿನ ಬವಣೆ ಕಂಡು ಬರಲಿದೆ ಎಂಬ ಸ್ಥಳಗಳನ್ನು ಗುರುತಿಸಿಲ್ಲ~ ಎನ್ನುತ್ತಾರೆ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀಧರ್.ಜಲಮಂಡಳಿ ಅಧಿಕೃತವಾಗಿ ದಿನ ಬಿಟ್ಟು ದಿನ ನೀರ ಪೂರೈಸುತ್ತಿದೆ ಎಂದು ಹೇಳಿಕೊಂಡರೂ, ಬಹುತೇಕ ಕಡೆ ನೀರು ಪೂರೈಕೆಯಾಗುತ್ತಿಲ್ಲ ಎಂಬುದು ಸಾರ್ವಜನಿಕರ ದೂರು. ಇದರ ಜೊತೆಗೆ, ನೀರು ದರವನ್ನು ಮಾಸಿಕ ರೂ. 70 ರಿಂದ ರೂ. 120ಕ್ಕೆ  ಏರಿಕೆ ಮಾಡಿರುವುದನ್ನು ಬೇಸಿಗೆಯಲ್ಲಿ ಜನರ ಸಿಟ್ಟನ್ನು ಇನ್ನಷ್ಟು ಹೆಚ್ಚಿಸಿದೆ.ಗಾಂಧಿನಗರದಲ್ಲಿ ಖಾಲಿ ಕೊಡಗಳೊಂದಿಗೆ ಪ್ರತಿಭಟನೆ ಮಾಡಿರುವ ಸಾರ್ವಜನಿಕರ ಮೂರು ದಿನಕಳೆದರೂ ನೀರು ಬರುವುದಿಲ್ಲ. ಅಧಿಕಾರಿಗಳು, ನಗರಸಭೆ ಸದಸ್ಯರು ನಮ್ಮ ಸಮಸ್ಯೆ ಕೇಳುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಇನ್ನೊಂದೆಡೆ, ಹೊರವಲಯದ ಷುಗರ್ ಟೌನ್‌ಗೆ ಹೊಂದಿಕೊಂಡಿರುವ ಬಡಾವಣೆಯಲ್ಲಿ ಭಾನುವಾರ ಪೋಲಿಯೊ ಹನಿ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲು ತೆರಳಿದ ಶಾಸಕರ ಎದುರೇ ನೀರು ಪೂರೈಕೆ ಜೊತೆಗೆ, ಮೂರ ತಿಂಗಳು ಕಳೆದರೂ ಒಳಚರಂಡಿ ಸಮಸ್ಯೆ ಕುರಿತು ಆಕ್ರೋಶ ಹೊರಹಾಕಿದ್ದಾರೆ.ಕಾವೇರಿ ನದಿಯ ಕೃಪೆ ಇದ್ದರೂ, ನೀರು ಪೂರೈಕೆ ವ್ಯವಸ್ಥೆ ಸುಲಲಿತವಾಗೇನು ಇಲ್ಲ. ವಿದ್ಯುತ್ ಇಲ್ಲ, ಪೈಪ್‌ಲೈನ್ ಒಡೆದಿದೆ ಎಂಬ ಕಾರಣಗಳಿಂದಾಗಿಯೂ ನೀರು ಪೂರೈಕೆ ವ್ಯತ್ಯಯವಾಗುತ್ತಿದೆ. ಗಾಂಧಿನಗರಲ್ಲಿ ಸಮಸ್ಯೆ ಎದುರಾದಾಗ ಜನರ ಅಹವಾಲು ಆಲಿಸಲು ಹೋದ ಅಧ್ಯಕ್ಷ ಅರುಣ್‌ಕುಮಾರ್ ಅವರೂ, ಜಲಮಂಡಳಿ ಅಧಿಕಾರಿಗಳ ಕಾರ್ಯವೈಖರಿ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶ್ರೀಧರ್ ಅವರು, ನೀರು ಪೂರೈಕೆ ಕುರಿತಂತೆ ಜಲಮಂಡಳಿ ಅಧಿಕಾರಿಗಳು, ವಾಟರ್‌ಮನ್‌ಗಳು ಆಯಾ ವಾರ್ಡ್‌ನ ಸದಸ್ಯರ ಜೊತೆಗೂ ಚರ್ಚೆನಡೆಸುವುದಿಲ್ಲ. ಜಲಮಂಡಳಿ ಅಧಿಕಾರಿಗಳು, ಸಿಬ್ಬಂದಿ ಹೊಂದಾಣಿಕೆ ಇಲ್ಲವಾಗಿದೆ. ಆದರೂ, ಸಮಸ್ಯೆ ಕಂಡು ಬಂದ ಕೂಡಲೇ ಬಗೆಹರಿಸುವ ಯತ್ನ ಮಾಡಲಾಗುತ್ತಿದೆ ಎನ್ನುತ್ತಾರೆ.ಈ ನಡುವೆ, ಇದೇ 23ರಂದು ಬೇಸಿಗೆ ಹಿನ್ನೆಲೆಯಲ್ಲಿ ಕುಡಿಯುವ ನೀರು ಪೂರೈಕೆ ಸಮಸ್ಯೆ, ನೀರಿನ ದರ ಏರಿಕೆ, ಮುಂಜಾಗ್ರತಾ ಕ್ರಮಗಳನ್ನು ಕುರಿತು ವಿಶೇಷ ಸಭೆಯನ್ನು ಕರೆಯಲಾಗಿದೆ ಎಂದು ಶ್ರೀಧರ್ ಅವರು ವಿವರಿಸುತ್ತಾರೆ.ಆಡಳಿತದ ಚುಕ್ಕಾಣಿ ಹಿಡಿದಿರುವ ಜೆಡಿಎಸ್‌ನಲ್ಲಿ ಈಗ ಅಧಿಕಾರದ ಕಚ್ಚಾಟ ಆರಂಭವಾಗಿದೆ. ಅಧ್ಯಕ್ಷರ ಪದಚ್ಯುತಿ ಯತ್ನ, ಇನ್ನೊಂದೆಡೆ ಆರು ಸದಸ್ಯರನ್ನು ಆರುತಿಂಗಳ ಅವಧಿಗೆ ಅಮಾನತುಪಡಿಸಿರುವ ಕ್ರಮದ ಹಿನ್ನೆಲೆಯಲ್ಲಿ ನಿಜಕ್ಕೂ ಸಮಸ್ಯೆ ಕುರಿತು ಚರ್ಚೆ ಆಗುತ್ತದಾ? ಖಾಲಿ ಕೊಡ ಹಿಡಿದು ಪ್ರತಿಭಟಿಸುವ ನಾಗರಿಕರ ಸಮಸ್ಯೆಗೆ ಪರಿಹಾರ ಸಿಗಲಿದೆಯಾ ಎಂಬುದನ್ನು ಕಾದುನೋಡಬೇಕಾಗಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry