ಬೇಸಿಗೆ ಬೇಗೆ

7

ಬೇಸಿಗೆ ಬೇಗೆ

Published:
Updated:
ಬೇಸಿಗೆ ಬೇಗೆ

ಮೋಡ ಕವಿದ ವಾತಾವರಣ ಕಂಡು ಮಂಗಳವಾರದ ದಿನೋದಯ ದಿಗಿಲಿನೊಂದಿಗೇ ಆರಂಭವಾಗಿತ್ತು. `ಆಗಲೇ ತುಂತುರು ಮಳೆ ಹನೀತಿತ್ತು...~ ಐದೂವರೆಗೆ ಗಾಳಿ ವಿಹಾರಕ್ಕೆ ಹೋಗಿದ್ದವರ ವರದಿ. ಫೆಬ್ರುವರಿಯ ಉರಿ ಧಗೆಯಲ್ಲಿ ಮಳೆಯೇ? ಎಳೆಚಿಗುರು, ಹೂಮೊಗ್ಗು, ಕಣ್ಣು ಬಿಡುತ್ತಿರುವ ಕಾಯಿಗಳು... ಎಲ್ಲವೂ ಮುರುಟಿ ಹೋಗುವುದು ಖಂಡಿತ. ಮತ್ತೆ ದರ ಸಮರ... ತಿಂಗಳ ಖರ್ಚು ಅಂಕೆ ಮೀರುವುದು ಗ್ಯಾರಂಟಿ! ಒಂದು ಮೋಡದ ಹಿಂದೆ ಎಷ್ಟೊಂದು ದುಮ್ಮಾನ...

ಬೆಂಗಳೂರಿನಲ್ಲಿ ಬೇಸಿಗೆಯೆಂದರೆ ಬೆಚ್ಚಿ ಬೀಳುವವರೇ ಹೆಚ್ಚು. ಕಾರಣ ಒಂದೇ ಎರಡೇ?**

ಪೂರ್ವದಲ್ಲಿ ಬೆಳಕಿನ ಸೆಳಕು ಕಾಣಿಸಿಕೊಳ್ಳುವ ಮೊದಲೇ ಮನೆ ಬಿಟ್ಟ ಪತಿ ಬೆಳಗ್ಗಿನ ಬುತ್ತಿಯೊಂದಿಗೆ, ಅಗತ್ಯ ಬಿದ್ದರೆ ಇರಲಿ ಎಂದು ಮಧ್ಯಾಹ್ನಕ್ಕೂ ಕಟ್ಟಿಕೊಂಡಿದ್ದಾನೆ. ಆರರ ಪಾಳಿಗೆ ಹೊರಟವನು ಪಾಳಿ ಶುರುವಾಗುವುದಕ್ಕೂ ಮುಂಚೆ ಮನೆಗೆ ವಾಪಸ್! ಪವರ್ ಪ್ರಾಬ್ಲಮ್ಮು ಕಣೇ. ರಾತ್ರಿಗೆ ಬರಹೇಳಿದ್ದಾರೆ.

 

ಈ ತಿಂಗಳು ಪೂರ್ತಿ ಹೀಗೇ ಅಂತೆ. ಹೆಚ್ಚುವರಿ ದುಡಿತದ ಲೆಕ್ಕಾಚಾರದಲ್ಲಿದ್ದವರಿಗೆ ಸಣ್ಣ ಶಾಕ್. ಬಡತನ ಕೊಟ್ಟ ದೇವರಿಗೆ, ದಿನಚರಿ ಏರುಪೇರು ಮಾಡಿದ ಬೆಸ್ಕಾಂಗೆ ಹಿಡಿಶಾಪ.ದೂರವಾದರೂ ಪರವಾಗಿಲ್ಲ ಅಂತ ಇಷ್ಟದ ಶಾಲೆಗೆ ಸೇರಿಸಿದ ಮಗುವಿನ ಶಾಲಾ ಬಸ್ ಮನೆ ಮುಂದೆ ಬೆಳಗ್ಗಿನ ಏಳಕ್ಕೇ ಹಾರನ್ ಮಾಡುತ್ತದೆ. ದೋಸೆ ಮಗುವಿನ ಇಷ್ಟದ ತಿಂಡಿ. ಪವರ್ ಕಟ್ ನೆನಪಿಲ್ಲದೆ ಚಟ್ನಿ, ಸಾಂಬಾರ್‌ಗೆ ರುಬ್ಬಿಕೊಂಡಿಲ್ಲ. ಚಟ್ನಿ ಇಲ್ಲದ ಕಾರಣಕ್ಕೆ ದೋಸೆ ತಿನ್ನದೇ ಮಗು ಶಾಲಾ ಬಸ್ ಹತ್ತಿದೆ.

 

ಸಾಸ್, ಉಪ್ಪಿನಕಾಯಿ ಜೊತೆ ತಿನ್ನಲು ಗಂಡನೂ ಒಲ್ಲೆ ಎಂದಿದ್ದಾರೆ. ಎಲ್ಲವನ್ನೂ ಒಬ್ಬಳೇ ಮಾಡ್ಬೇಕೂಂದ್ರೆ ಹೇಗೆ? ಗ್ಯಾಸ್ ಬುಕ್ ಮಾಡಿ ಹದಿನೇಳು ದಿನವಾಗಿದೆ. ಗ್ಯಾಸ್ ಬಂದು 21 ದಿನ ಕಳೆದರೆ ಹೊಸದನ್ನು ಕಾಯ್ದಿರಿಸಿಕೊಳ್ಳಬಹುದು ಅನ್ನುತ್ತದೆ, ಕಂಪೆನಿ.ಆದರೆ ಬುಕ್ ಮಾಡಿ ತಿಂಗಳಾದರೂ ಗ್ಯಾಸ್ ಕೊಡೋದಿಲ್ಲ ಅಂದ್ರೆ? ಹೋಗಲಿ, ಇಂಡಕ್ಷನ್ ಒಲೆ, ಕುಕ್ಕರ್ ಬಳಸೋಣವೆಂದರೆ ವಿದ್ಯುತ್‌ನ ಪ್ರವರ. ನೀವು ಇಬ್ಬರೇ ಇರೋದು ನಿಮಗೆ ಬೆಸ್ಕಾಂ ನಿಗದಿ ಮಾಡಿದ್ದಕ್ಕಿಂತ ಹೆಚ್ಚಿನ ಪ್ರಮಾಣದ ವಿದ್ಯುತ್ ಬಳಕೆ ಮಾಡಿದರೆ ದಂಡ ವಿಧಿಸುತ್ತಾರೆ ಅಷ್ಟೇ ಎಂದು ಎಚ್ಚರಿಕೆ ಕೊಟ್ಟಿದ್ದಾನೆ ಮೀಟರ್ ರೀಡರ್.ದಿನವಿಡೀ ಆಟವಾಡಿ ಸುಸ್ತಾದ ಮಗುವಿಗೆ `ರಾತ್ರಿಯಾಯ್ತು ಮಲಗು ನನ್ನ ಪುಟ್ಟ ಕಂದ~ ಅಂತ ಜೋಗುಳ ಹಾಡಿದರೂ ಫ್ಯಾನ್ ಚಾಲೂ ಆಗೋವರೆಗೆ ಕಣ್ಣು ಮುಚ್ಚುವುದಿಲ್ಲ. `ಡಮ್ಮ...~ ಸದ್ದಿನೊಂದಿಗೆ ಸುಟ್ಟುಹೋದ ಟ್ರಾನ್ಸ್‌ಫಾರ್ಮರ್ ದೆಸೆಯಿಂದ ವಿದ್ಯುತ್ತಿಲ್ಲ. ಲಾಲಿ ಹಾಡಿಗೆ ಮಗು ರಾಜಿಯಾಗಿಲ್ಲ. ಮನೆಯಲ್ಲಿ ಜಾಗರಣೆ.`ನೀವೂ ಯುಪಿಎಸ್ ಹಾಕಿಸಿಕೊಳ್ಳಿ. ನಮ್ ಮನೇಲಿ ಕರೆಂಟ್ ಹೋಗೋದೇ ಗೊತ್ತಾಗೋದಿಲ್ಲ~ ಅಂತ ಕಿವಿಮಾತು ಹೇಳುತ್ತದೆ ಪಕ್ಕದ ಮನೆಯ ಬಾಲಕಿ. ಹೌದಲ್ಲ? ಹೊತ್ತು ಗೊತ್ತಿಲ್ಲದೆ, ಬೇಸಿಗೆ ಮಳೆಗಾಲವೆನ್ನದೆ ಕೈಕೊಡುವ ವಿದ್ಯುತ್ತಿಗೆ ಯುಪಿಎಸ್ ಎಂಬ ಸವತಿ!ಬಿಸಿಲಿನಿಂದ ಬಂದ ತಕ್ಷಣ ನೀರು ಕುಡೀಬೇಡ ಉರಿಶೀತ ಶುರುವಾಗುತ್ತದೆ ಅಂತ ಹಿತನುಡಿಯುತ್ತಾರೆ ಅಜ್ಜಿ. ಆದರೆ, ಬಿಎಂಟಿಸಿ ಬಸ್ಸಿನ ವಿಪರೀತ ರಶ್‌ನಲ್ಲಿ ನೇತಾಡಿಕೊಂಡು ಬಂದು ಮನೆಗೆ ಓಡುನಡಿಗೆಯಲ್ಲಿ ಬಂದವಳಿಗೆ ನಖಶಿಖಾಂತ ದಾಹ.ಹೋಲ್ಡಾನ್ ಮಾಡುವುದೆಂತು? ಶವರ್‌ಗೆ ಮೈಚೆಲ್ಲಿ ತಂಪಾಗಿಸಿಕೊಳ್ಳುವ ಬಯಕೆಯಾಗುತ್ತದೆ. ಲೋಟದ ಬಾಯಿಯನ್ನು ಹಲ್ಲಿನಲ್ಲಿ ಕಚ್ಚಿ ನೀರು ಹೀರಿ ಹೀರಿ ಖಾಲಿ ಮಾಡಿದರೇ ಬಾಯಾರಿಕೆಗೆ ಬ್ರೇಕ್. ಗುಟುಕು ನೀರು ದಾಹ ನೀಗುವುದಿಲ್ಲ!ಸುಡು ಬಿಸಿಲಲ್ಲೂ ತಂಪು ತಂಪು ಕೂಲ್ ಕೂಲ್ ಅನ್ನೋ ಹಾಗಿರುವ ಕಲ್ಲಂಗಡಿ ಹಣ್ಣಿನ ಗುಡ್ಡೆಗಳು ಹೆದ್ದಾರಿ, ಮುಖ್ಯರಸ್ತೆ, ಅಡ್ಡರಸ್ತೆಗಳಲ್ಲಿ ಬಿಸಿಲಬೇಗೆಯನ್ನೇ ಅಣಕಿಸುತ್ತವೆ. ದಾರಿಹೋಕರ ಬೇಡಿಕೆಗೆಂದೇ ನಿನ್ನೆಯಿಂದ ಹಣ್ಣಿನ ಹೋಳು ಮಾರುತ್ತಿದ್ದಾನೆ, ಕಲ್ಲಂಗಡಿ ವ್ಯಾಪಾರಿ. ಹಣ್ಣಿಗಿಂತ ಹೋಳು ಬೇಗ ಬಿಕರಿಯಾಗಿದೆ.

**

ಕತ್ತಿನಿಂದ ಜಾರಿದ ಬೆವರಿನ ಬಿಂದು ಹತ್ತಿ ಬಟ್ಟೆಯಲ್ಲಿ ಲೀನವಾಯಿತು. ಇಷ್ಟೇ ದೊಡ್ಡ ಕಿಟಕಿ ಇಡಬೇಕಿತ್ತೇ ಎಂದು ಬಿಎಂಟಿಸಿ ಬಸ್ ವಿನ್ಯಾಸಕನಿಗೆ ಬೈಯ್ದುಕೊಂಡಳು ಯುವತಿ. ಅದುಮಿದ್ದ ತುಟಿ ಮೀರಿ ಬರಲಾರದೆ ಮಾತು ಒದ್ದಾಡಿದ ಗುರುತಾಗಿ ಗಂಟಲು ಮೇಲೇರಿ ಕೆಳಗಿಳಿಯಿತು.ಪಸೆಯಿಲ್ಲದ ಗಂಟಲು! ಬಸ್ ನಿಲ್ದಾಣ, ಹೋಟೆಲ್‌ನ ನೀರು ಸುರಕ್ಷಿತವಲ್ಲ. ಮತ್ತೆ? ಅದೇ ದಾಹ... ಹೊರಗೆ ಇಣುಕಿದರೆ ಕಂಡದ್ದು, ಇಬ್ಬರು ಬಡ ವಿದ್ಯಾರ್ಥಿನಿಯರೊಂದಿಗೆ ಸಾವಿರ ವೋಲ್ಟ್ ನಗೆ ನಕ್ಕ ಶೋಭಕ್ಕನ ಹೋರ್ಡಿಂಗು! ಕೈಯಲ್ಲಿನ ದೀಪದ ಕೆಳಗೆ ಕತ್ತಲು!ಅದಕ್ಕೆ ತಾಕಿಕೊಂಡಂತೆ ಮತ್ತೊಂದು ಹೋರ್ಡಿಂಗು. ಸದಾ ಆನಂದಮಯವಾಗಿ ಕಾಣುವ ಮುಖ್ಯಮಂತ್ರಿಗಳೊಂದಿಗೆ ನೀರಾವರಿ ಸಚಿವರ ಹಸನ್ಮುಖದ ಚಿತ್ರಗಳು... ಜಾಹೀರಾತಿಗೆ ನಗುವಿನ ಸ್ಪ್ರಿಂಕ್ಲರ್! ಅದರ ಕೆಳಗೆ... ಪ್ಲಾಸ್ಟಿಕ್ ಚೀಲವನ್ನು ನೆಕ್ಕುತ್ತಿದ್ದ ಬಡನಾಯಿ. ಯಾರೋ ಉಗುಳಿದ ನೀರು, ಇಂಗಬಿಡದಂತೆ ಹಿಡಿದಿಟ್ಟುಕೊಂಡ ಪ್ಲಾಸ್ಟಿಕ್ಕು...

**

`ಚೆನ್ನಾಗೇ ಇದ್ದೆ ಡಾಕ್ಟ್ರೇ. ಒಮ್ಮೆಲೇ ಚಳಿ ಜ್ವರ, ಮೈಕೈ ನೋವು ಶುರುವಾಗಿಬಿಡ್ತು. ಇಂಜೆಕ್ಷನ್ ಹಾಕಿಬಿಡಿ ಡಾಕ್ಟ್ರೇ. ಕೆಲ್ಸಕ್ಕೆ ಹೋಗ್ಲೇಬೇಕು. ರಜೆ ಮಾಡಿದರೆ ಸಂಬಳ ಕಟ್ ಆಗುತ್ತಲ್ಲ?~ ಕ್ಲಿನಿಕ್‌ಗೆ ದಾಂಗುಡಿಯಿಡುವ ಬಹುತೇಕ ರೋಗಿಗಳ ದೂರು ಒಂದೇ. ನೋಟದಲ್ಲೇ ವೈದ್ಯರು ಅಳೆದುಬಿಡುತ್ತಾರೆ- `ವೈರಲ್ ಫಿವರ್.ಇಂಜೆಕ್ಷನ್ ಎಲ್ಲಾ ಏನೂ ಬೇಡ. ಔಷಧಿ ತಗೊಳ್ಳಿ. ಥಂಡಿ, ಎಣ್ಣೆ ಪದಾರ್ಥ ತಿನ್ನಬೇಡಿ. ಹೊರಗಿನ ಊಟ ತಿಂಡಿ ಬೇಡ. ಬಿಸಿನೀರು ಕುಡೀರಿ~. ಅಂತ ಚೀಟಿ ಸಲಹೆ, ಜೊತೆಗೊಂದು ಚೀಟಿ. ಇಂಜೆಕ್ಷನ್ನೇ ಬೇಕು ಅಂತ ವೈದ್ಯರಿಗೇ ತಾಕೀತು ಮಾಡುವವರಿಗೆ ಸೂಜಿಗಿಂತಲೂ ಮೊನಚು ಮಾತಿನ ಚಾಟಿ.ರೋಗಿಗಳ ಬವಣೆ ಹೀಗಾದರೆ, ಈ ಸಣ್ಣಪುಟ್ಟ ಕಾಯಿಲೆಯ ಔಷಧ ತಯಾರಿಕಾ ಕಂಪೆನಿಗಳ ಪಾಲಿಗೆ ಈ ಸೀಸನ್ ವರದಾನ! ಸೋಂಕು ಜ್ವರಕ್ಕೆ ಹತ್ತಾರು ಬಗೆಯ ಮಾತ್ರೆ/ಸಿರಪ್, ನೆಗಡಿಗೆ ಒಂದಷ್ಟು, ಒಣಕೆಮ್ಮಿಗೆ ಮತ್ತೊಂದಿಷ್ಟು, ಮೈಕೈ ನೋವು ಮಂಗಮಾಯಕ್ಕೆ ಮುಲಾಮುಗಳದ್ದೇ ಇನ್ನೊಂದು ಪಟ್ಟಿ...

ವೈದ್ಯೋ ನಾರಾಯಣೋ ಹರಿಃ...**

ಶಿವನ ಅಡ್ಡೆ ಸ್ಮಶಾನದಲ್ಲಿ ಪರಿಸ್ಥಿತಿಯೇ ಬೇರೆ. ಅಲ್ಲಿ ಹೆಣಗಳು ಮಾತ್ರವಲ್ಲ, ಶವಾಗಾರದ ಸಿಬ್ಬಂದಿಯೂ ನಿಶ್ಚಿಂತೆಯಿಂದ ಇದ್ದಾರೆ. ಕಾರಣ 180 ಕೆ.ವಿ. ಸಾಮರ್ಥ್ಯದ ಜನರೇಟರ್‌ಗಳು. ಒಂದು ಹೆಣ ಸುಡಲು ಸರಾಸರಿ ಒಂದು ಗಂಟೆ ಬೇಕಾಗುತ್ತದೆ.

 

ಈ ಅವಧಿಗೆ ಜನರೇಟರ್ 20ರಿಂದ 30 ಲೀಟರ್ ಡೀಸೆಲ್ ಕುಡಿಯುತ್ತದೆ. ಇದಕ್ಕೆ ಅವಶ್ಯ ಸಿದ್ಧತೆಗಳನ್ನು ಮೊದಲೇ ಮಾಡಿಕೊಂಡಿರುತ್ತೇವೆ ಎನ್ನುತ್ತಾರೆ ಶವಾಗಾರ ಸಿಬ್ಬಂದಿ.`ಜನರೇಟರ್ ಬರೋ ಮುಂಚೆ ಹೆಣಗಳಿಗೂ ಸರತಿಯಿದ್ದವು. ಇಲ್ಲವೇ ಸಮಯವನ್ನು ಪೂರ್ವ ನಿಗದಿ ಮಾಡಿಕೊಂಡು ಹೆಣಗಳನ್ನು ಇಲ್ಲಿಗೆ ತರುತ್ತಿದ್ದರು. ಈಗ ಯಾರೂ ಗಲಾಟೆ ಮಾಡಲು ಅವಕಾಶವಿಲ್ಲ. ಡೀಸೆಲ್ ಖಾಲಿಯಾಗುವುದಕ್ಕೂ ಮೊದಲೇ ತರಿಸಿಕೊಳ್ಳಲು ಅಧಿಕಾರಿಗಳು ಸಹಕರಿಸುತ್ತಾರೆ.

 

ಹೀಗಾಗಿ ಡೀಸೆಲ್ ಅಭಾವವಾಗಲಿ, ನಮ್ಮಿಂದಾಗಿ ಅಂತಿಮ ಸಂಸ್ಕಾರದಲ್ಲಿ ವಿಳಂಬವಾಗಲಿ ಆಗುವ ಸಮಸ್ಯೆಯೇ ಉದ್ಭವಿಸುವುದಿಲ್ಲ~ ಎಂದು ವಿಲ್ಸನ್ ಗಾರ್ಡನ್ ಮತ್ತು ಹರಿಶ್ಚಂದ್ರ ಘಾಟ್‌ನ ವಿದ್ಯುತ್ ಶವಾಗಾರದ ಸಿಬ್ಬಂದಿ ವಿವರಿಸುತ್ತಾರೆ.`ಈ ಸಲ ಬೆಂಗಳೂರು ಬೇಸಿಗೆ ಬಿಸಿ ಮುಟ್ಟಿಸುವುದಿಲ್ಲ~

ವರ್ಷದ 365 ದಿನದಲ್ಲೂ ಹಗಲು ರಾತ್ರಿಗಳಲ್ಲಿ ವ್ಯತ್ಯಾಸ ಇದ್ದೇ ಇರುತ್ತದೆ. ರಾತ್ರಿ ಸಮಯ ಹೆಚ್ಚಿದ್ದರೆ ಚಳಿ ಜಾಸ್ತಿ, ಹಗಲು ಹೆಚ್ಚಿರುವ ತಿಂಗಳಿನಲ್ಲಿ ಬಿಸಿಲು ಜಾಸ್ತಿ. ಸೋಲಾರ್ ರೇಡಿಯೇಷನ್‌ನಿಂದ ಅತಿ ತಾಪಮಾನ ಉಂಟಾಗುತ್ತದೆ. ಬೆಂಗಳೂರಲ್ಲಿ ಈ ಬಾರಿಯ ಬೇಸಿಗೆ ಅಷ್ಟೇನು ಹೆಚ್ಚಿರುವುದಿಲ್ಲ.

 

ಸಾಮಾನ್ಯ ಸ್ಥಿತಿಯಲ್ಲಿಯೇ ಇರುತ್ತದೆ. 1884ರ ಜನವರಿಯಲ್ಲಿ 7.8 ಡಿಗ್ರಿ ಅತಿ ಕನಿಷ್ಠ ತಾಪಮಾನ ದಾಖಲಾಗಿದ್ದರೆ, 1931ರ ಮೇ ತಿಂಗಳಿನಲ್ಲಿ 38.9 ಡಿಗ್ರಿ ತಾಪಮಾನ ದಾಖಲಾಗಿತ್ತು. ನಗರದಲ್ಲಿ ಈವರೆಗಿನ ಕನಿಷ್ಠ ಹಾಗೂ ಗರಿಷ್ಠ ತಾಪಮಾನ ಇದೇ.ಆಗಿನಿಂದ ನಗರದ ತಾಪಮಾನ ಇವೆರಡರ ನಡುವೆಯೇ ಇದೆ. ಕಳೆದ ವರ್ಷ ನಗರದಲ್ಲಿ ಹೆಚ್ಚಿನ ತಾಪಮಾನ 36 ಡಿಗ್ರಿಯಷ್ಟು ಮಾತ್ರವಿತ್ತು. ಹಗಲು ಜಾಸ್ತಿ ಇರುವ ದಿನಗಳಲ್ಲಿ ಉತ್ತರ ದಿಕ್ಕಿನಿಂದ ಗಾಳಿ ಬೀಸಿದರೆ ಹಾಗೂ ಉಷ್ಣದ ಅಲೆಗಳು ಬೀಸಿದಾಗ ತಾಪಮಾನ ಹೆಚ್ಚಾಗುತ್ತದೆ.

 

ತಾಪಮಾನ ಕುರಿತು ವೈಜ್ಞಾನಿಕ ಸಂಶೋಧನೆ ಮಾಡುವವರಿಗೆ ಭಾರತೀಯ ಹವಾಮಾನ ಇಲಾಖೆಯ (ಐಎಂಡಿ) ಅಂಕಿಅಂಶಗಳೇ ಅಳತೆಗೋಲು. ಈ ದತ್ತಾಂಶಗಳನ್ನು ತೆಗೆದುಕೊಂಡು ವೈಜ್ಞಾನಿಕ ವಿಶ್ಲೇಷಣೆ ಮಾಡಬೇಕು.

 

ಅದು ಬಿಟ್ಟು ಜನರಲ್ಲಿ ಆತಂಕ ಹುಟ್ಟಿಸುವ ಹೇಳಿಕೆ ನೀಡಿ ಅವರಲ್ಲಿ  ಮಾನಸಿಕ ಭಯ ಉಂಟು ಮಾಡಬಾರದು. ಹಾಗಾಗಿ ಜನರು ಈ ಬೇಸಿಗೆಯನ್ನು ಕಡು ಕಷ್ಟದಿಂದ ಕಳೆಯಬೇಕೆಂದು ಭಯಪಡುವುದು ಬೇಡ.  

-  ಬಿ.ಪುಟ್ಟಣ್ಣ, ನಿದೇರ್ಶಕರು, ಭಾರತೀಯ ಹವಾಮಾನ ಇಲಾಖೆ 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry