ಭಾನುವಾರ, ಏಪ್ರಿಲ್ 11, 2021
29 °C

ಬೇಹುಗಾರಿಕೆ ಬಲಗೊಳಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನೂತನ ಗೃಹಸಚಿವ ಸುಶೀಲ್‌ಕುಮಾರ್ ಶಿಂಧೆ ಅವರನ್ನು ಭಯೋತ್ಪಾದಕರು ಬಾಂಬ್‌ಸ್ಫೋಟದ ಮೂಲಕ ಸ್ವಾಗತಿಸಿದ್ದಾರೆ.  ಕಳೆದ ಎರಡು ವರ್ಷಗಳ ಅವಧಿಯಲ್ಲಿ ಇದು ಪುಣೆಯಲ್ಲಿ ನಡೆದ ಎರಡನೆ ಘಟನೆ.

 

ಮುಂಬೈ ಮತ್ತು ದೆಹಲಿಯ ನಂತರ ಪುಣೆ ಅಪಾಯಕಾರಿ ನಗರವಾಗಿ ಬೆಳೆಯುತ್ತಿರುವ ಸೂಚನೆಯೂ ಹೌದು. ಪುಣೆಯ ಮೇಲೆ ಭಯೋತ್ಪಾದಕರ ಕಣ್ಣು ಬಿದ್ದು  ಹತ್ತುವರ್ಷಗಳಾಗಿವೆ. 2002ರಲ್ಲಿಯೇ ಪ್ಯಾಲೆಸ್ಟೀನ್ ಮೂಲದ ಭಯೋತ್ಪಾದಕ ಅಬು ಜುಬೈದ್ ಅಮೆರಿಕದ ಪೊಲೀಸರ ಕೈಯಲ್ಲಿ ಸಿಕ್ಕಿಬಿದ್ದಾಗ ಆತ ಪುಣೆಗೆ ಬಂದುಹೋಗಿದ್ದು ಗೊತ್ತಾಗಿತ್ತು.ಭಾರತದಲ್ಲಿ ಭಯೋತ್ಪಾದನಾ ಕೃತ್ಯ ನಡೆಸುವ ಸಂಚಿನಲ್ಲಿ ಪಾಲ್ಗೊಂಡಿದ್ದ ಡೇವಿಡ್ ಹೆಡ್ಲಿಯನ್ನು ಅಮೆರಿಕದ ಎಫ್‌ಬಿಐ ಅಧಿಕಾರಿಗಳು ಬಂಧಿಸಿದಾಗಲೂ ಆತನ ಪುಣೆ ಸಂಪರ್ಕ ಬಯಲಾಗಿತ್ತು.ಎರಡು ವರ್ಷಗಳ ಹಿಂದೆ ಪುಣೆಯ ಜರ್ಮನ್ ಬೇಕರಿಯಲ್ಲಿ ನಡೆದ ಬಾಂಬ್‌ಸ್ಫೋಟದಲ್ಲಿ ಹದಿನೇಳು ಮಂದಿ ಸಾವಿಗೀಡಾಗಿದ್ದರು. ಭಯೋತ್ಪಾದಕ ಕೃತ್ಯಗಳು ನಡೆದಾಗಲೆಲ್ಲ ಮೊದಲು ಕೇಳಿಬರುತ್ತಿರುವುದು ಬೇಹುಗಾರಿಕೆ ವೈಫಲ್ಯದ ಬಗ್ಗೆ ದೂರು. ಗುಪ್ತಚರ ಇಲಾಖೆಗಳು ದಕ್ಷತೆಯಿಂದ ಕೆಲಸ ಮಾಡಿದರೆ ಭಯೋತ್ಪಾದನಾ ನಿಗ್ರಹದ ಅರ್ಧ ಕೆಲಸ ಮುಗಿದಂತೆ.

 

ಪ್ರತಿ ಭಯೋತ್ಪಾದಕ ಕೃತ್ಯದ ನಂತರದ `ಮರಣೋತ್ತರ ಪರೀಕ್ಷೆ~ ಇದನ್ನೇ ಹೇಳುತ್ತಿದ್ದರೂ ಬೇಹುಗಾರಿಕಾ ವ್ಯವಸ್ಥೆಯನ್ನು ಬಲಪಡಿಸಲು  ಸಾಧ್ಯವಾಗದೆ ಇರುವುದು ಸರ್ಕಾರ ತಲೆತಗ್ಗಿಸಬೇಕಾದಂತಹ ವೈಫಲ್ಯ.ಕೇಂದ್ರ ಗೃಹಸಚಿವರಾಗಿದ್ದ ಪಿ.ಚಿದಂಬರಂ ಉಳಿದೆಲ್ಲ ಸುಧಾರಣಾಕ್ರಮಗಳ ಜತೆಯಲ್ಲಿ ಎರಡು ಪ್ರಮುಖ ಪ್ರಸ್ತಾವಗಳನ್ನು ಮುಂದಿಟ್ಟಿದ್ದರು. ಮೊದಲನೆಯದು ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ಕೇಂದ್ರದ (ಎನ್‌ಸಿಟಿಸಿ)ಸ್ಥಾಪನೆ, ಎರಡನೆಯದು ಆಂತರಿಕ ಭದ್ರತೆಗಾಗಿ ಪ್ರತ್ಯೇಕ ಸಚಿವ ಖಾತೆ.ಮೂರುಮುಕ್ಕಾಲು ವರ್ಷಗಳ ನಂತರ ಆ ಖಾತೆಯನ್ನು ಬಿಟ್ಟುಹೋಗುವಾಗಲೂ ಚಿದಂಬರಂ ಅವರಿಗೆ ಈ ಎರಡು ಕೆಲಸಗಳನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಈಗಿನ ಗೃಹ ಸಚಿವ ಸುಶೀಲ್‌ಕುಮಾರ್ ಶಿಂಧೆ ಅವರ ಮುಂದೆ ಈ ಸವಾಲು ಇದೆ. ರಾಷ್ಟ್ರ ಮತ್ತು ರಾಜ್ಯಮಟ್ಟದಲ್ಲಿ ವಿಸ್ತಾರವಾಗಿ ಹರಡಿಕೊಂಡಿರುವ ಬೇಹುಗಾರಿಕಾ ವ್ಯವಸ್ಥೆ ನಮ್ಮಲ್ಲಿದೆ.  ಸಂಪನ್ಮೂಲದ ಕೊರತೆ ಕೂಡಾ ಇಲ್ಲ. ಸಂಸ್ಥೆ ಮತ್ತು ಸಂಸ್ಥೆ  ಹಾಗೂ ಕೇಂದ್ರ ಮತ್ತು ರಾಜ್ಯದ ನಡುವಿನ ಸಹಯೋಗದ ಕೊರತೆಯೇ ಮುಖ್ಯ ಸಮಸ್ಯೆ. ಎನ್‌ಸಿಟಿಸಿ ಸ್ಥಾಪನೆಯ ಉದ್ದೇಶವೇ ಈ ಸಮಸ್ಯೆಯನ್ನು ಬಗೆಹರಿಸುವುದು. ಭಯೋತ್ಪಾದನೆ ಒಂದು ರಾಜ್ಯದ ಸಮಸ್ಯೆ ಅಲ್ಲ, ಅದರ ತನಿಖೆಯನ್ನು ಕೂಡಾ ಒಂದು ರಾಜ್ಯಕ್ಕೆ ಸೀಮಿತಗೊಳಿಸಲಾಗುವುದಿಲ್ಲ. 2001ರ ಸೆಪ್ಟೆಂಬರ್ 11ರಂದು ನಡೆದ ಭಯೋತ್ಪಾದಕ ಕೃತ್ಯದ ನಂತರ ಅಮೆರಿಕಾ ರಚಿಸಿದ್ದ `ಹೋಂ ಲ್ಯಾಂಡ್ ಸೆಕ್ಯುರಿಟಿ~ ಎಂಬ ಇಲಾಖೆಯ ಮಾದರಿಯಲ್ಲಿ ಎನ್‌ಸಿಟಿಸಿಯನ್ನು ರೂಪಿಸಲಾಗಿತ್ತು. ಆದರೆ ಇದರಿಂದ `ಒಕ್ಕೂಟ ವ್ಯವಸ್ಥೆಗೆ ಸಂಚಕಾರ~ ಬರಲಿದೆ ಎಂದು ಆರೋಪಿಸಿ ಎಂಟು ರಾಜ್ಯಗಳು ಇದನ್ನು ವಿರೋಧಿಸಿದವು.ಪುಣೆ ಬಾಂಬ್‌ಸ್ಫೋಟದ ಹಿನ್ನೆಲೆಯಲ್ಲಿ ಈ ರಾಜ್ಯಗಳು ತಮ್ಮ ವಿರೋಧವನ್ನು ಪುನರ್‌ಪರಿಶೀಲನೆಗೊಳಪಡಿಸಿ ಎನ್‌ಸಿಟಿಸಿ ಸ್ಥಾಪನೆಗೆ ಅವಕಾಶ ಮಾಡಿಕೊಡಬೇಕು. ಅದೇ ರೀತಿ ಆಂತರಿಕ ಭದ್ರತೆಗಾಗಿ ಪ್ರತ್ಯೇಕ ಸಚಿವಖಾತೆಯನ್ನು ರಚಿಸುವ ಬಗ್ಗೆಯೂ ಸರ್ಕಾರ ಯೋಚಿಸಬೇಕು. ಇವೆಲ್ಲವೂ ತುರ್ತಾಗಿ ಆಗಬೇಕಾದ ಕೆಲಸ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.