ಬೈಕೂ ಅಲ್ಲ ಸ್ಕೂಟರೂ ಅಲ್ಲ ಇಂಥಾ ಗಾಡಿ ಇನ್ನೊಂದಿಲ್ಲ!

7

ಬೈಕೂ ಅಲ್ಲ ಸ್ಕೂಟರೂ ಅಲ್ಲ ಇಂಥಾ ಗಾಡಿ ಇನ್ನೊಂದಿಲ್ಲ!

Published:
Updated:
ಬೈಕೂ ಅಲ್ಲ ಸ್ಕೂಟರೂ ಅಲ್ಲ ಇಂಥಾ ಗಾಡಿ ಇನ್ನೊಂದಿಲ್ಲ!

ರಿಷಿ ಕಪೂರ್‍ ಹಾಗೂ ಡಿಂಪಲ್‌ ಕಪಾಡಿಯಾ ಅಭಿನಯಿಸಿದ್ದ ಹಿಂದಿಯ ‘ಬಾಬಿ’ ಸಿನಿಮಾದಲ್ಲಿ ಬರುವ ‘ಏ ಪ್ರೇಮ್‌ ರೋಗ್...’ ಹಾಡು ಅಂದಿನ ಯುವಕರ ಗುಂಡಿಗೆ ವೇಗವನ್ನು ದ್ವಿಗುಣಗೊಳಿಸಿತ್ತು. ಅದು 1973. ಆಗ ಇವರಿಬ್ಬರದು  ಸೂಪರ್‌ ಜೋಡಿ ಎಂದು ಹೆಸರು ಮಾಡಿದ್ದು ಇದಕ್ಕೆ ಒಂದು ಕಾರಣವಾದರೆ, ಆ ಹಾಡಿನಲ್ಲಿ ಬಳಸಲಾಗಿರುವ ‘ರಾಜದೂತ್‌ ಜಿಟಿಎಸ್‌ 175’ ಬೈಕ್ ಇನ್ನೊಂದು ಕಾರಣ. ಈ ಬೈಕಿನಿಂದ ಸಿನಿಮಾವೂ ಪ್ರಸಿದ್ಧಿ ಪಡೆದು, ಈ ಸಿನಿಮಾದ ಹೆಸರಿನಿಂದ ಈ ಬೈಕ್‌ ಅನ್ನು ‘ರಾಜದೂತ್‌ ಬಾಬಿ’ ಎಂದು ಕರೆಯುವಂತೆಯೂ ಆಗಿತ್ತು.

ಇದು ಅತ್ಯಂತ ಗಿಡ್ಡವಾದ ಬೈಕ್‌. ಇದೇ ಮಾದರಿಯ ಬೈಕ್‌ ‘ರಾಯಲ್‌ ಎನ್‌ಫೀಲ್ಡ್‌’ನಲ್ಲೂ ಇತ್ತು. ಅದಕ್ಕೆ ‘ರಾಯಲ್‌ ಎನ್‌ಫೀಲ್ಡ್‌ ಮಿನಿ ಬುಲೆಟ್‌’ ಎಂದು ಕರೆಯಲಾಗುತ್ತಿತ್ತು. ಈ ಎರಡೂ ಬೈಕ್‌ಗಳ ಉತ್ಪಾದನೆ ಈಗ ಇಲ್ಲ. ಸೊಂಟದ ಎತ್ತರಕ್ಕೂ ಬರದಿದ್ದ ಈ ಬೈಕ್‌ಗಳ ಎತ್ತರವೇ ವಿಶೇಷವಾಗಿತ್ತು. ಈ ಬೈಕ್‌ಗಳ ಬಗ್ಗೆ ಏಕೆ ಹೇಳಬೇಕಾಯಿತು ಎಂದರೆ, ಇದೇ ಮಾದರಿಯ ಗಿಡ್ಡ ವಾಹನವೊಂದು ಈಗ ಬಿಡುಗಡೆಯಾಗಿದೆ. ಇದು ‘ಹೋಂಡಾ ನವೀ’. ಇದರ ವಿಶೇಷವೆಂದರೆ ಇದು ಬೈಕೂ ಅಲ್ಲ, ಸ್ಕೂಟರ್‍ ಸಹ ಅಲ್ಲ!

ಜನವರಿಯಲ್ಲಿ ಪ್ರಗತಿ ಮೈದಾನದಲ್ಲಿ ನಡೆದ ‘ಆಟೊ ಎಕ್ಸ್‌ಪೋ 2016’ರ ಕಾರ್ಯಕ್ರಮದಲ್ಲಿ ‘ಹೋಂಡಾ’ ತನ್ನ ಈ ಹೊಸ ವಾಹನವನ್ನು ಬಿಡುಗಡೆಗೊಳಿಸಿತು. ಈ ವಾಹನದ ವಿಶೇಷವೆಂದರೆ ಇದು ‘ಹೈಬ್ರಿಡ್‌’ ವಾಹನ. ಇದು ಬೈಕ್‌ ಹಾಗೂ ಸ್ಕೂಟರ್‌ನ ಮಿಶ್ರಣ. ಇದರಲ್ಲಿ ಬಳಸಲಾಗಿರುವುದು ಹೋಂಡಾ ‘ಆಕ್ಟಿವಾ’ ಸ್ಕೂಟರ್‌ನ ಪುಟ್ಟ ಎಂಜಿನ್ ಹಾಗೂ ಅಷ್ಟೇ ಗಾತ್ರದ ಚಕ್ರಗಳು. ದೇಹ ಮಾತ್ರ ಬೈಕ್‌ನ ರೀತಿ ಇದೆ. ಆದರೆ, ಅದು ಬಹಳ ಗಿಡ್ಡ. ಈ ಬೈಕ್‌ನ ಅಳತೆಯನ್ನು ನೋಡಿ. ಎತ್ತರ ಕೇವಲ 1,039 ಮಿಲಿಮೀಟರ್‌. ಅಂದರೆ ಕೇವಲ 7.40 ಅಡಿ. ಸಾಮಾನ್ಯವಾಗಿ ‘ಹೀರೊ ಸ್ಪ್ಲೆಂಡರ್‌’ನಂತಹ ಸಾಮಾನ್ಯ ಬಳಕೆಯ ಬೈಕ್‌ಗಳು ಈಗ 4 ಅಡಿ ಎತ್ತರ ಇರುತ್ತದೆ. ‘ಪಲ್ಸರ್‌’, ‘ರಾಯಲ್‌ ಎನ್‌ಫೀಲ್ಡ್‌’ ಮುಂತಾದ ಬೈಕ್‌ಗಳಂತೂ ಇನ್ನೂ ಎತ್ತರ ಇರುತ್ತವೆ.

ಇದು ಕೇವಲ ಎತ್ತರದ ಪ್ರಶ್ನೆ ಅಲ್ಲ. ಈ ವಾಹನದ ಚಕ್ರಗಳ ಬಗ್ಗೆ ತಿಳಿದುಕೊಳ್ಳಬೇಕು. 12 ಇಂಚಿನ ಚಕ್ರಗಳನ್ನೇ ಇದಕ್ಕೆ ಬಳಸಿಕೊಳ್ಳಲಾಗಿದೆ. ಆ ಚಕ್ರಗಳು ನೇರವಾಗಿ ‘ಆಕ್ಟಿವಾ’ ದಿಂದಲೇ ಎರವಲು ಪಡೆದವು. ಹಾಗಾಗಿ ವಿಭಿನ್ನ ನೋಟ, ವಿಭಿನ್ನ ಕಾರ್ಯಕ್ಷಮತೆ ಈ ವಾಹನಕ್ಕೆ ಸಿಗುತ್ತದೆ.

ಏನಿದು ‘ನವೀ’?
ಹೋಂಡಾ ಪ್ರಕಾರ ಇದು ಸಂಪೂರ್ಣ ಹೊಸ ಮಾದರಿಯ ಬೈಕ್‌. ಹೋಂಡಾ ‘ಆಕ್ಟಿವಾ’ ಮಾದರಿಯಲ್ಲೇ ಈ ವಾಹನದಲ್ಲೂ ಗಿಯರ್‌ ಇಲ್ಲದ ಎಂಜಿನ್‌ ಇದೆ. ಅದು ಬೈಕ್‌ಗಳಲ್ಲಿ ಇರುವಂತೆ ಬೈಕ್‌ನ ಮುಂಭಾಗದಲ್ಲಿ ಇಲ್ಲ. ಬದಲಿಗೆ, ಸ್ಕೂಟರ್‌ನಂತೆ ಮಧ್ಯ ಭಾಗದಲ್ಲಿದೆ. ಎಂಜಿನ್ ಇರುವ ಜಾಗ ಖಾಲಿ ಇದ್ದು, ಅಲ್ಲಿ ಲಗ್ಗೇಜ್‌ ಇಟ್ಟುಕೊಳ್ಳಬಹುದು. ಸುರಕ್ಷೆಗಾಗಿ ಬೀಗ ಇರುವ ಲಗ್ಗೇಜ್‌ ಬಾಕ್ಸ್‌ ಕೊಂಡು ಅಳವಡಿಸಿಕೊಳ್ಳುವ ಆಯ್ಕೆ ಇದೆ.

ಎಂಜಿನ್‌ ಎಂಥದ್ದು?: 110 ಸಿಸಿ ಎಂಜಿನ್‌ ಇದರ ಜತೆ ಇದೆ. 5.84 ಕಿಲೊವ್ಯಾಟ್‌ (7 ಸಾವಿರ ಆರ್‌ಪಿಎಂ) ಹಾಗೂ 8.96 ನ್ಯಾನೊಮೀಟರ್‌ ಶಕ್ತಿ ಇದಕ್ಕಿದೆ. ಸೆಲ್ಫ್‌ ಹಾಗೂ ಕಿಕ್‌ ಸ್ಟಾರ್ಟ್‌- ಎರಡೂ ಸೌಲಭ್ಯಗಳು ಇದಕ್ಕಿದೆ. ಹೋಂಡಾ ಆಕ್ಟಿವಾ ಸ್ಕೂಟರ್‌ ಓಡಿಸಿರುವವರು ಹೇಳುವುದು ಒಂದೇ ಮಾತು. ಇದರ ಎಂಜಿನ್‌ ಬಹಳ ನಯವಾದ್ದು ಎಂದು. ಅದೇ ಭರವಸೆ ಹೊತ್ತ ಎಂಜಿನ್ ಅನ್ನು ಈ ಹೊಸ ವಾಹನ ಹೊಂದಿದೆ. ಹೆಚ್ಚು ತೊಂದರೆ ನೀಡದ, ಬಹಳ ಕಾಲ ಕೆಡದೇ ಬಾಳಿಕೆ ಬರುವ ಎಂಜಿನ್‌ ಇದು.

ಅತ್ಯುತ್ತಮ ಮೈಲೇಜ್‌ ಸಹ ಈ ವಾಹನದ ವಿಶೇಷ. ಲೀಟರ್‌ ಪೆಟ್ರೋಲ್‌ಗೆ ಈ ವಾಹನ ಗರಿಷ್ಠ 66 ಕಿಲೋ ಮೀಟರ್‌ ಮೈಲೇಜ್‌ ನೀಡುತ್ತದೆ. ಅಲ್ಲದೇ, ಗರಿಷ್ಠ 80 ಕಿಲೋ ಮೀಟರ್‌ ವೇಗವನ್ನು ಮುಟ್ಟುತ್ತದೆ. ಸ್ಪೀಡೊಮೀಟರ್‌ನಲ್ಲಿ 120 ಕಿಲೋ ಮೀಟರ್‌ವರೆಗೆ ಮಾರ್ಕಿಂಗ್‌ ಮಾಡಲಾಗಿದೆ.

ಅವತರಣಿಕೆ ವಿಶೇಷ: ಮೂರು ಅವತರಣಿಕೆಗಳಲ್ಲಿ ‘ನವೀ’ ಸಿಗುತ್ತದೆ. ಸ್ಟ್ರೀಟ್‌, ಆಫ್‌ ರೋಡ್‌ ಹಾಗೂ ಅಡ್ವೆಂಚರ್‌. ‘ಸ್ಟ್ರೀಟ್‌’ ಸಂಪೂರ್ಣ ನಗರ ಸಂಚಾರಕ್ಕೆ ಮೀಸಲಾಗಿರುವ ಬೈಕ್‌. ಅತಿ ಚುರುಕಾದ ನೋಟ ಹೊಂದಿದೆ. ಅತ್ಯುತ್ತಮ ಗಡುಸಾದ ದೇಹ, ವಿನ್ಯಾಸ, ಸ್ಟಿಕರಿಂಗ್‌, ಬಣ್ಣ ಇದೆ. ‘ಆಫ್‌ ರೋಡ್‌’ ಬೈಕ್‌ನಲ್ಲಿ ದಪ್ಪನೆಯ ಟೈರ್‌ಗಳು, ಕೊಂಚ ಗಡುಸು ದೇಹವಿದೆ. ‘ಅಡ್ವೆಂಚರ್‌’ ಬೈಕ್‌ನಲ್ಲಿ ದೂರದ ಪ್ರಯಾಣಕ್ಕೆ ಬೇಕಾಗುವ ಅನುಕೂಲಗಳಿವೆ. ಅಂದರೆ ವಿಂಡ್‌ಶೀಲ್ಡ್‌, ಎರಡು ಲಗ್ಗೇಜ್‌ ಕ್ಯಾರಿಯರ್‌ಗಳು, ಎಂಜಿನ್‌ನ ಕೆಳಭಾಗದಲ್ಲಿ ಎಂಜಿನ್‌ ಪ್ರೊಟೆಕ್ಟರ್‌, ಕೈಗಳಿಗೆ ರಕ್ಷಣೆ ನೀಡುವ ಹ್ಯಾಂಡ್ ಪ್ರೊಟೆಕ್ಟರ್‌ ಇವೆ.

ಬೆಲೆ ಇನ್ನೂ ವಿಶೇಷ
ಈ ಎಲ್ಲ ಅವತರಣಿಕೆಗಳ ಬೆಲೆಯೂ ಸಮಾನವಾಗಿರುವುದು ಈ ಬೈಕ್‌ನ ವಿಶೇಷ. ಅಂದರೆ, ನವದೆಹಲಿ ಎಕ್ಸ್‌ ಶೋರೂಂ 39,500 ರೂಪಾಯಿ. ಇದಕ್ಕೆ ಕಾರಣವಿದೆ. ಎಲ್ಲ ಬೈಕ್‌ಗಳ ಮೂಲ ದೇಹ ಒಂದೇ ರೀತಿಯದ್ದು. ಅಂದರೆ, ಈ ಬೈಕ್‌ಗೆ ಅನೇಕ ಇತರ ಸಲಕರಣೆಗಳನ್ನು ಜೋಡಿಸಿಕೊಳ್ಳಬಹುದು. ಉದಾಹರಣೆಗೆ, ಲಗ್ಗೇಜ್‌ ಕ್ಯಾರಿಯರ್‌, ಎಂಜಿನ್‌ ಪ್ರೊಟೆಕ್ಟರ್‌, ವಿಂಡ್‌ ಶೀಲ್ಡ್‌ ಇತ್ಯಾದಿ.

  ಇವಕ್ಕೆ ಬೆಲೆ ಪ್ರತ್ಯೇಕ ಇರಲಿದೆ. ಅವುಗಳನ್ನು ಅಳವಡಿಸಿಕೊಳ್ಳುವುದರ ಮೇಲೆ ಹೆಚ್ಚುವರಿ ಬೆಲೆ ಆಗುತ್ತದೆ. ಈ ಬೈಕ್‌ ಅನ್ನು ನೇರವಾಗಿ ಹೋಂಡಾ ಶೋರೂಂನಲ್ಲಿ ಕೊಳ್ಳುವಂತೆ ಇಲ್ಲ. ಗೂಗಲ್‌ ಪ್ಲೇ ಸ್ಟೋರ್‌ಗೆ ಹೋಗಿ, ‘ಹೋಂಡಾ ನವೀ’ ಅಪ್ಲಿಕೇಷನ್‌ ಅನ್ನು ಮೊಬೈಲ್‌ನಲ್ಲಿ ಡೌನ್‌ಲೋಡ್‌ ಮಾಡಿಕೊಂಡು, ಅದರ ಮೂಲಕ ಬುಕ್‌ ಮಾಡಿಕೊಳ್ಳಬೇಕು.

 

Tags: 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry