ಬೈಕ್ಗಳ ಡಿಕ್ಕಿ: ರಾಜಸ್ತಾನ ವ್ಯಕ್ತಿ ಸಾವು
ಬೆಂಗಳೂರು: ಆರ್ಪಿಸಿ ಲೇಔಟ್ನ ಪೈಪ್ಲೈನ್ ರಸ್ತೆಯಲ್ಲಿ ಸೋಮವಾರ ರಾತ್ರಿ ಬೈಕ್ಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ರಾಜಸ್ತಾನ ಮೂಲದ ಪಿಂಟೊ (22) ಎಂಬುವರು ಮೃತಪಟ್ಟಿದ್ದಾರೆ.
ಮಲ್ಲತ್ಹಳ್ಳಿಯಲ್ಲಿ ವಾಸವಾಗಿದ್ದ ಪಿಂಟೊ ಬಡಗಿಯಾಗಿದ್ದರು. ಅವರು, ಸ್ನೇಹಿತ ದಿನೇಶ್ ಎಂಬುವರನ್ನು ನಗರ ರೈಲು ನಿಲ್ದಾಣಕ್ಕೆ ಬಿಡಲು ಹೋಗುತ್ತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ.
ಪೈಪ್ಲೈನ್ ರಸ್ತೆಯ ಈಜುಕೊಳ ಜಂಕ್ಷನ್ ಬಳಿ ಎದುರುಗಡೆಯಿಂದ ಬಂದ ಬೈಕ್ ಸವಾರನೊಬ್ಬ ಪಿಂಟೊ ಅವರ ಬೈಕ್ಗೆ ಡಿಕ್ಕಿ ಹೊಡೆದ. ಈ ವೇಳೆ ಕೆಳಗೆ ಬಿದ್ದು ತೀವ್ರವಾಗಿ ಗಾಯಗೊಂಡ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಮೃತಪಟ್ಟರು ಎಂದು ಪೊಲೀಸರು ಹೇಳಿದ್ದಾರೆ.
ಹಿಂಬದಿ ಸವಾರ ದಿನೇಶ್ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಪಿಂಟೊಗೆ ಡಿಕ್ಕಿ ಹೊಡೆದ ಬೈಕ್ ಸವಾರ ಸೈಯದ್ ಖಲೀಂನನ್ನು ಬಂಧಿಸಲಾಗಿದೆ. ವಿಜಯನಗರ ಸಂಚಾರ ಠಾಣೆಯಲ್ಲಿ ದೂರು ದಾಖಲಾಗಿದೆ.
ಬಂಧನ
ಸಾಲಗಾರರಿಂದ ಹೆಚ್ಚಿನ ಬಡ್ಡಿ ವಸೂಲಿ ಮಾಡುತ್ತಿದ್ದ ಆರೋಪದ ಮೇಲೆ ಇಬ್ಬರನ್ನು ಬಂಧಿಸಿರುವ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು 15 ಸಾವಿರ ನಗದು ವಶಪಡಿಸಿಕೊಂಡಿದ್ದಾರೆ.
ಸರಸ್ವತಿನಗರದ ನಿತಿನ್ (30) ಮತ್ತು ನಂದಿನಿಲೇಔಟ್ನ ಕುಮಾರ್ (29) ಬಂಧಿತರು. ಆರೋಪಿಗಳಿಂದ ಬ್ಯಾಂಕ್ ಚೆಕ್ಗಳು, ಛಾಪಾ ಕಾಗದಗಳು, ಆಸ್ತಿಯ ದಾಖಲೆಪತ್ರಗಳು, ಹಣ ಹಾಗೂ ಮೊಬೈಲ್ ಫೋನ್ ಜಪ್ತಿ ಮಾಡಲಾಗಿದೆ.
ವಿಜಯನಗರದಲ್ಲಿ ಬೃಂದಾ ಎಂಟರ್ಪ್ರೈಸಸ್ ಹೆಸರಿನ ಕಚೇರಿ ನಡೆಸುತ್ತಿದ್ದ ನಿತಿನ್, ಸಣ್ಣಪುಟ್ಟ ವ್ಯಾಪಾರಿಗಳಿಗೆ ಸಾಲ ನೀಡಿ ಮಾಸಿಕ ಶೇ 25ರಿಂದ 30ರಷ್ಟು ಬಡ್ಡಿ ಪಡೆಯುತ್ತಿದ್ದ. ಮತ್ತೊಬ್ಬ ಆರೋಪಿ ಕುಮಾರ್ ಮಾಸಿಕ ಶೇ 15ರಷ್ಟು ಬಡ್ಡಿ ವಸೂಲಿ ಮಾಡುತ್ತಿದ್ದ. ನಿತಿನ್ ವಾರ್ಷಿಕ ಸುಮಾರು 85 ಲಕ್ಷ ರೂ ಬಡ್ಡಿ ವ್ಯವಹಾರ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತರ ವಿರುದ್ಧ ವಿಜಯನಗರ ಹಾಗೂ ಮಹಾಲಕ್ಷ್ಮಿಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಜೂಜುಕೋರರ ಬಂಧನ
ಜೂಜು ಆಡುತ್ತಿದ್ದ ಆರೋಪದ ಮೇಲೆ 14 ಮಂದಿಯನ್ನು ಬಂಧಿಸಿರುವ ಸಿಸಿಬಿ ಪೊಲೀಸರು 1.50 ಲಕ್ಷ ನಗದು ಜಪ್ತಿ ಮಾಡಿದ್ದಾರೆ.
ಕನಕಪುರದ ಮಹದೇವ (38), ಭುವನೇಶ್ವರಿನಗರದ ಲಿಂಗರಾಜು (33), ಕಮಲಾನಗರದ ಮೂರ್ತಿ (40), ಅಗ್ರಹಾರ ದಾಸರಹಳ್ಳಿಯ ಸುಜಯ್ (34), ಗೋಪಾಲ್ (34), ಹರೀಶ್ (29), ವಿಜಯನಗರದ ಚಂದ್ರಶೇಖರ್ (36), ಸುರೇಶ (38), ಚಾಮರಾಜಪೇಟೆಯ ದೇವರಾಜ (30), ಮೂಡಲಪಾಳ್ಯದ ವಿಶ್ವನಾಥ್ (37), ಯಲಚೇನಹಳ್ಳಿಯ ಮಲ್ಲಿಕಾರ್ಜುನ (21), ಕಾಂತರಾಜು (24), ಮಂಜುನಾಥ (24) ಮತ್ತು ಜಾಲಹಳ್ಳಿಯ ಡಿ.ಆರ್.ಮಂಜುನಾಥ (29) ಬಂಧಿತರು.
ಬಂಧಿತರ ವಿರುದ್ಧ ವಿಜಯನಗರ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.