ಶುಕ್ರವಾರ, ನವೆಂಬರ್ 15, 2019
21 °C

ಬೈಕ್‌ಗೆ ಲಾರಿ ಡಿಕ್ಕಿ: ದಂಪತಿ ಸಾವು

Published:
Updated:

ಶ್ರೀರಂಗಪಟ್ಟಣ: ಬೈಕ್‌ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಪತಿ, ಪತ್ನಿ ಇಬ್ಬರೂ ಮೃತಪಟ್ಟ ಘಟನೆ ತಾಲ್ಲೂಕಿನ ಬಾಬುರಾಯನಕೊಪ್ಪಲು ಬಳಿ ಗುರುವಾರ ಸಂಜೆ ನಡೆದಿದೆ.ತಾಲ್ಲೂಕಿನ ಬೆಳಗೊಳದ ಕೆಂಪಣ್ಣನ ಮಗ ತಮ್ಮಣ್ಣ (50) ಹಾಗೂ ಅವರ ಪತ್ನಿ ಶಶಿಕಲಾ (40) ಸಾವನ್ನಪ್ಪಿದವರು.ತಮ್ಮಣ್ಣ ಅವರು ಪತ್ನಿ ಜತೆ ಮಂಡ್ಯ ಕಡೆಯಿಂದ ಪಟ್ಟಣದ ಕಡೆ ಬೈಕ್‌ನಲ್ಲಿ ಬರುವ ವೇಳೆ ಹಿಂದಿನಿಂದ ಬಂದ ಲಾರಿ ಬಾಬುರಾಯನಕೊಪ್ಪಲು ಬಳಿ ಬೈಕ್‌ಗೆ ಡಿಕ್ಕಿ ಹೊಡೆದಿದೆ. ತಮ್ಮಣ್ಣ ಮತ್ತು ಅವರ ಪತ್ನಿಯ ಮೇಲೆ ಲಾರಿಯ ಚಕ್ರ ಹರಿದ ಕಾರಣ ಇಬ್ಬರೂ ಸ್ಥಳದಲ್ಲೇ ಅಸುನೀಗಿದರು. ಲಾರಿ ಚಾಲಕನ ಅಜಾಗರೂಕತೆಯಿಂದ ಈ ಅಪಘಾತ ನಡೆದಿದೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತಿಳಿಸಿದ್ದಾರೆ.ಅಪಘಾತ ನಡೆದ ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಗುಂಪುಗೂಡಿದ್ದರಿಂದ ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಕೆಲಕಾಲ ಅಡ್ಡಿಯಾಯಿತು. ಪೊಲೀಸರು ಜನರನ್ನು ಚದುರಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಘಟನೆ ಹಿನ್ನೆಲೆಯಲ್ಲಿ ಲಾರಿ ಮತ್ತು ಚಾಲಕನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಸ್ಥಳಕ್ಕೆ ಸಬ್‌ಇನ್ಸ್‌ಪೆಕ್ಟರ್ ಎಂ.ವೆಂಕಟರಾಮಪ್ಪ ಭೇಟಿ ನೀಡಿದ್ದರು. ಶವಗಳನ್ನು ಇರಿಸಿದ್ದ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಎದುರು ಮೃತರ ಬಂಧುಗಳ ಆಕ್ರಂದನ ಮುಗಿಲು ಮುಟ್ಟಿತ್ತು.

 

ಪ್ರತಿಕ್ರಿಯಿಸಿ (+)