ಬೈಕ್‌ ಮೈಲೇಜ್‌ ಹೆಚ್ಚಿಸಿದ ರುದ್ರಪ್ಪ

7

ಬೈಕ್‌ ಮೈಲೇಜ್‌ ಹೆಚ್ಚಿಸಿದ ರುದ್ರಪ್ಪ

Published:
Updated:

ಧಾರವಾಡ:ಯಾವುದೇ ಎಂಜಿನಿಯರಿಂಗ್‌ ಪದವಿ ಪಡೆಯದ ವ್ಯಕ್ತಿಯೊಬ್ಬರು ತಮ್ಮ ಬೈಕ್‌ಗೆ ಆಯಿಲ್‌ ಕೂಲರ್‌ ಉಪಕರಣ ಅಳವಡಿಸಿ ಹೆಚ್ಚುವರಿ ಮೈಲೇಜ್‌ ಪಡೆಯುತ್ತಿದ್ದಾರೆ.ಮೂರು ವರ್ಷಗಳ ಹಿಂದೆ ಮೊಬೈಲ್‌ ಮೂಲಕ ನೀರಿನ ಪಂಪ್‌ ಚಾಲೂ ಮಾಡುವ, ಬಂದ್‌ ಮಾಡುವ ವಿಧಾನವನ್ನು ಕಂಡು ಹಿಡಿದಿದ್ದಾರೆ. ಆಯಿಲ್‌ ಕೂಲರ್‌ ಪ್ರಯೋಗವನ್ನು ಹೆಸ್ಕಾಂನ ವಿದ್ಯುತ್‌ ಟ್ರಾನ್ಸ್‌ಫಾರ್ಮರ್‌­ಗಳಿಗೂ ಅಳವಡಿಸುವ ಪ್ರಯತ್ನವನ್ನೂ ನಡೆಸಿದ್ದಾರೆ.ಇಂತಹ ಪ್ರಯೋಗಗಳನ್ನು ಮಾಡಿ ಯಶಸ್ಸು ಕಂಡವರು ರುದ್ರಪ್ಪ ಜಾಧವ. ಬೆಳಗಾವಿ ಜಿಲ್ಲೆ ಇಟಗಿ ಕ್ರಾಸ್‌ ಬಳಿಯ ಸಕ್ಕರೆ ಕಾರ್ಖಾನೆಯಲ್ಲಿ ಉದ್ಯೋಗಿ­ಯಾಗಿರುವ ಅವರು ಆಗಾಗ ತಮ್ಮ ಬೈಕ್‌ನಲ್ಲಿ ಧಾರವಾಡದ ಕೃಷಿ ವಿ.ವಿ.ಗೆ ಬೀಜ ಖರೀದಿಸಲೆಂದು ಬರುವುದುಂಟು.ಇತ್ತೀಚೆಗಷ್ಟೇ ಬಜಾಜ್‌ ಕಂಪೆನಿಯ ಡಿಸ್ಕವರ್‌ ಬೈಕ್‌ ಖರೀದಿಸಿರುವ ಅವರು ಕಂಪೆನಿಯವರು ಹೇಳಿದಷ್ಟು ಮೈಲೇಜ್‌ ಬರದೇ ಇರುವುದನ್ನು ಗಮನಿಸಿದರು. ಮೈಲೇಜ್‌ ಹೆಚ್ಚಿಸಲು ಬಜಾಜ್‌ ಆಟೊಗೆ ಬಳಸುವ ಆಯಿಲ್‌ ಕೂಲರ್‌ ಬಳಸಿದರೆ ಹೇಗೆ ಎಂಬ ಯೋಚನೆ ಹೊಳೆದದ್ದಷ್ಟೇ ತಡ, ಕಂಪೆನಿಯ ಷೋರೂಂಗೆ ಹೋಗಿ ಐದು ಸಾವಿರ ಖರ್ಚು ಮಾಡಿ ಎರಡು ಬದಿಯಲ್ಲಿ ಆಯಿಲ್ ಕೂಲರ್‌ ಮಷಿನ್‌ ಅಳವಡಿ­ಸಿದರು.ಬೈಕ್‌ ಓಡುವ ಸಂದರ್ಭದಲ್ಲಿ ಎಂಜಿನ್‌ ಆಯಿಲ್‌ ಬಿಸಿಯಾಗು­ವುದರಿಂದ ಹೆಚ್ಚು ಮೈಲೇಜ್‌ ಕೊಡುವುದಿಲ್ಲ. ಎಂಜಿನ್‌ ಆಯಿಲ್‌ ತಂಪಾಗಿದ್ದರೆ ಹೆಚ್ಚು ಮೈಲೇಜ್ ಕೊಡಬಹುದು ಎಂಬ ಅಂದಾಜಿನ ಮೇಲೆ ಅದನ್ನು ಅಳವಡಿಸಿದರು (ಟ್ಯಾಂಕ್‌ನಿಂದ ಆಯಿಲ್‌ ನೇರವಾಗಿ ಎಂಜಿನ್‌ಗೆ ಹೋಗುವ ಬದಲು ಕೂಲರ್‌ ಮೂಲಕ ಹಾಯ್ದು ಹೋಗುತ್ತದೆ). ಬಳಿಕ ಓಡಿಸಿ ನೋಡಿದಾಗ ಸರಾಸರಿ ಪ್ರತಿ ಲೀಟರ್‌ಗೆ 10 ಕಿ.ಮೀ. ಮೈಲೇಜ್‌ ಜಾಸ್ತಿಯಾಯಿತು ಎನ್ನುತ್ತಾರೆ ರುದ್ರಪ್ಪ.'ಇದು ಬರೀ ಬಜಾಜ್‌ ಬೈಕ್‌ಗೆ ಅಷ್ಟೇ ಅಲ್ಲ. ಎಲ್ಲ ಕಂಪೆನಿಯ ಬೈಕ್‌ಗಳಿಗೂ ಅಳವಡಿಸಿ ಹೆಚ್ಚಿನ ಮೈಲೇಜ್‌ ಪಡೆಯಬಹುದು. ಪೆಟ್ರೋಲ್‌ ಬೆಲೆ ದಿನದಿಂದ ದಿನಕ್ಕೆ ದುಬಾರಿ­ಯಾಗುತ್ತಿರುವ ಈ ದಿನಗಳಲ್ಲಿ ಐದು ಸಾವಿರ ಖರ್ಚು ಮಾಡಿ ಆಯಿಲ್‌ ಕೂಲರ್‌ ಅಳವಡಿಸಿಕೊಳ್ಳುವುದು ಹೆಚ್ಚು ಅನುಕೂಲ' ಎಂದೂ ಹೇಳುತ್ತಾರೆ.ತಮ್ಮ ಸಂಶೋಧನೆಯ ಬಗ್ಗೆ ಬೆಳಗಾವಿಯಲ್ಲಿರುವ ಕಂಪೆನಿಯ ಎಂಜಿನಿಯರ್‌ಗಳ ಮುಂದೆ ಪ್ರಾತ್ಯಕ್ಷಿಕೆ ನೀಡಿದ್ದಾರೆ. ಇವರ ಅನ್ವೇಷಕ ಪ್ರವೃತ್ತಿ ಹಲವು ಸಂಶೋಧನೆಗಳಿಗೆ ಬುನಾದಿ­ಯಾಗಿದೆ.ಮೂರು ವರ್ಷಗಳ ಹಿಂದೆ ನೀರಿನ ಪಂಪ್‌ನ ಸ್ಟಾರ್ಟರ್‌ನಲ್ಲಿ ಮೊಬೈಲ್‌ ಇಟ್ಟು ಅದಕ್ಕೆ ಇನ್ನೊಂದು ಮೊಬೈಲ್‌ನಿಂದ ಫೋನ್‌ ಮಾಡಿಸಿ ಅದು ವೈಬ್ರೇಟ್‌ ಮಾಡುವ ಮೂಲಕ ಪಂಪ್‌ ಚಾಲೂ ಮಾಡುವ ಬಂದ್‌ ಮಾಡುವ ವಿಧಾನವನ್ನೂ ಕಂಡು ಹಿಡಿದಿದ್ದರು. ಕೃಷಿ ಮೇಳದಲ್ಲೂ ಈ ಬಗ್ಗೆ ಪ್ರಾತ್ಯಕ್ಷಿಕೆ ನಡೆದಿತ್ತು.ವಿದ್ಯುತ್‌ ಹೆಚ್ಚಾಗಿ ಪ್ರವಹಿಸಿ ನಿರಂತರವಾಗಿ ಟ್ರಿಪ್‌ ಆಗಿ ಟಿಸಿಗಳು ಸುಟ್ಟು ಹೋಗುವುದನ್ನು ತಡೆಯಲು ಆಯಿಲ್ ಕೂಲರ್‌ ಅಳವಡಿಸಬಹುದು. ‘ಹೆಸ್ಕಾಂ’ ಅನುಮತಿ ನೀಡಿದರೆ ಅದರ ಪ್ರಯೋಗ ಕೈಗೊಳ್ಳಲೂ ಸಿದ್ಧ ಎಂದು ರುದ್ರಪ್ಪ ಹೇಳುತ್ತಾರೆ.ಇಷ್ಟೇ ಅಲ್ಲ. ಕಬ್ಬನ್ನು ಆಲೆಮನೆಯಲ್ಲಿ ಹಾಕಿ ಬೆಲ್ಲ ತೆಗೆಯಲಾಗುತ್ತಿದೆ. ಅದರ ಬದಲು ನೇರವಾಗಿ ಸಕ್ಕರೆಯನ್ನೂ ಉತ್ಪಾದಿಸಲು ಸಾಧ್ಯ. ಅದರ ವಿಧಾನಗಳ ಬಗ್ಗೆ ಪಕ್ಕಾ ಸಂಶೋಧನೆ ನಡೆಸಿ ಇಷ್ಟರಲ್ಲೇ ಸಮಗ್ರ ಮಾಹಿತಿ ಕೊಡುತ್ತೇನೆ ಎಂದೂ ವಿಶ್ವಾಸ ವ್ಯಕ್ತಪಡಿಸಿದರು.‘ಇಷ್ಟೆಲ್ಲ ಕಂಡುಹಿಡಿದರೂ ನನ್ನ ಗೆಳೆಯ ರುದ್ರಪ್ಪನ ಬಗ್ಗೆ ಜನರು ಏನೇನೊ ಮಾತನಾಡಿಕೊಳ್ಳುತ್ತಾರೆ. ಆದರೆ ತನ್ನ ಸಂಶೋಧನೆಯನ್ನು ಮಾತ್ರ ಬಿಟ್ಟಿಲ್ಲ ಎನ್ನುತ್ತಾರೆ’ ರುದ್ರಪ್ಪ ಅವರ ಆತ್ಮೀಯ ಗೆಳೆಯ ಸುಭಾಷ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry