ಬೈಪಾಸ್ ರಸ್ತೆಗೆ ಭೂಸ್ವಾಧೀನ: ವಿರೋಧ

7

ಬೈಪಾಸ್ ರಸ್ತೆಗೆ ಭೂಸ್ವಾಧೀನ: ವಿರೋಧ

Published:
Updated:

ಹುಬ್ಬಳ್ಳಿ: ನಗರ ಹೊರವಲಯದ ರಾಷ್ಟ್ರೀಯ ಹೆದ್ದಾರಿ 218ರ ವಿಜಾಪುರ ರಸ್ತೆಯಿಂದ ರಾಷ್ಟ್ರೀಯ ಹೆದ್ದಾರಿ ನಾಲ್ಕರ ಬೆಂಗಳೂರು ರಸ್ತೆಯ ವರೆಗೆ ಬೈಪಾಸ್ ರಸ್ತೆ ನಿರ್ಮಾಣಕ್ಕಾಗಿ ಭೂಸ್ವಾಧೀನ ಮಾಡುವುದನ್ನು ಕೈಬಿಡಬೇಕು ಎಂದು ಆಗ್ರಹಿಸಿ ಕುಸುಗಲ್ ರೈತ ಸೇವಾ ಸಂಘದ ಸದಸ್ಯರು ಮುಖ್ಯಮಂತ್ರಗಳಿಗೆ ಮನವಿ ಸಲ್ಲಿಸಿದರು.ಬೆಳಗಾವಿಗೆ ತೆರಳುವುದಕ್ಕಾಗಿ ಸೋಮವಾರ ಹುಬ್ಬಳ್ಳಿ ವಿಮಾನನಿಲ್ದಾಣದಲ್ಲಿ ಬಂದಿಳಿದ ಮುಖ್ಯಮಂತ್ರಿಯನ್ನು ಭೇಟಿ ಮಾಡಿದ ಕುಸುಗಲ್, ಬಮ್ಮಾಪುರ, ವೀರಾಪುರ, ಬಿಡ್ನಾಳ, ಗಬ್ಬೂರ, ಕೊಟಗುಣಶಿ ಮುಂತಾದ ಗ್ರಾಮಗಳ ನೂರಕ್ಕೂ ಹೆಚ್ಚು ಮಂದಿಯ ನಿಯೋಗ, ಭೂಸ್ವಾಧೀನ ಮಾಡುವುದರಿಂದ ರೈತರು ಫಲವತ್ತಾದ ಭೂಮಿ ಕಳೆದುಕೊಳ್ಳಬೇಕಾಗುತ್ತದೆ ಎಂದು ಹೇಳಿದರು.ವಿಜಾಪುರ ಹಾಗೂ ಬೆಂಗಳೂರು ರಸ್ತೆಯ ನಡುವೆ ಸುಮಾರು 12 ಕಿ.ಮೀ. ಬೈಪಾಸ್ ರಸ್ತೆ ನಿರ್ಮಿಸುವುದಕ್ಕಾಗಿ ಫಲವತ್ತಾದ 289 ಎಕರೆ ಪ್ರದೇಶವನ್ನು ಸ್ವಾಧೀನಪಡಿಸಿಕೊಳ್ಳಲು ಧಾರವಾಡದ ವಿಶೇಷ ಭೂಸ್ವಾಧೀನಾಧಿಕಾರಿಗಳು ಪ್ರಕಟಣೆ ಹೊರಡಿಸಿದ್ದಾರೆ. ಇದು ರೈತರಲ್ಲಿ ಆತಂಕ ಸೃಷ್ಟಿಸಿದೆ ಎಂದು ಅವರು ಮನವಿಯಲ್ಲಿ ಹೇಳಿದ್ದಾರೆ.ಈಗಾಗಲೇ ಅಸ್ತಿತ್ವದಲ್ಲಿರುವ ಕುಸುಗಲ್ ಹಳಿಯಾಳ ರಸ್ತೆ ಈ ಭಾಗದ ಎಲ್ಲ ಮುಖ್ಯ ರಸ್ತೆಗಳನ್ನು ಜೋಡಿಸುತ್ತಿದ್ದು ಇದರ ಸಮೀಪದಲ್ಲೇ ಸುಮಾರು 300ರಿಂದ 400 ಮೀಟರ್ ಅಂತರದಲ್ಲಿ ಬೈಪಾಸ್ ರಸ್ತೆ ನಿರ್ಮಾಣಕ್ಕೆ ಮುಂದಾಗಿರುವುದು ಸರಿಯಲ್ಲ ಎಂದು ಅವರು ಹೇಳಿದ್ದಾರೆ.ಕುಸುಗಲ್‌ನಿಂದ ಬಿಡ್ನಾಳದ ವರೆಗಿನ ಪ್ರದೇಶಗಳಲ್ಲಿ ಈಗಾಗಲೇ ಪ್ರತಿಷ್ಠಿತ ಬಡಾವಣೆಗಳು, ಆಸ್ಪತ್ರೆಗಳು ಹಾಗೂ ಹೋಟೆಲ್‌ಗಳು ತಲೆಎತ್ತಿವೆ. ಹೀಗಾಗಿ ಇಲ್ಲಿನ ಜಮೀನಿಗೆ ಭಾರಿ ಬೆಲೆ ಬಂದಿದೆ. ಈ ಹಿನ್ನೆಲೆಯಲ್ಲೂ ರೈತರು ಭೂಮಿ ನೀಡಲು ಹಿಂಜರಿಯುತ್ತಿದ್ದಾರೆ. ಸರ್ಕಾರ ಎಷ್ಟೇ ಬೆಲೆ ನೀಡಿದರೂ ಭೂಮಿ ನೀಡುವುದಿಲ್ಲ ಎಂದು ತಿಳಿಸಲಾಗಿದೆ.ಮನವಿ ಸ್ವೀಕರಿಸಿದ ಮುಖ್ಯಮಂತ್ರಿಗಳು ಸಮಸ್ಯೆಯನ್ನು ಅಧ್ಯಯನ ಮಾಡಿ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದರು. ಸಂಘದ ಅಧ್ಯಕ್ಷ ಟಿ.ಎಸ್. ಚವನಗೌಡ, ಎಪಿಎಂಸಿ ಸದಸ್ಯ ರಘುನಾಥಗೌಡ ಯಲ್ಲಪ್ಪಗೌಡ ಕೆಂಪಲಿಂಗನಗೌಡ್ರ, ಮುಖಂಡರಾದ ಎಸ್.ಎಂ. ಹೊಸಮನಿ, ಜಿ.ಪಿ. ಕೆಂಚನಗೌಡ, ಎಸ್.ಎಚ್. ಪಾಟೀಲ, ಶಂಕರಗೌಡ ಪಾಟೀಲ ಮುಂತಾದವರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry