ಬೈಬಲ್ ಮ್ಯೂಸಿಯಂ

7

ಬೈಬಲ್ ಮ್ಯೂಸಿಯಂ

Published:
Updated:

ಬೈಬಲ್-ಕ್ರೈಸ್ತ ಧರ್ಮೀಯರ ಪವಿತ್ರ ಗ್ರಂಥ. ಇದು ಒಮ್ಮೆಲೆ ರಚಿತವಾದದ್ದಲ್ಲ. ಒಂದೇ ಕಾಲದಲ್ಲಿ ರಚನೆಯಾದ ಕೃತಿಯೂ ಅಲ್ಲ. ಜಗತ್ತಿನಲ್ಲಿ ಜೀವಂತವಾಗಿರುವ ಬಹುತೇಕ ಭಾಷೆಗಳಲ್ಲಿ ಅನುವಾದಗೊಂಡಿರುವ ಬೈಬಲ್ ಮೊದಲು ರಚನೆಗೊಂಡಿದ್ದು ಮೂರು ಭಾಷೆಗಳಲ್ಲಿ, ಹಿಬ್ರೂ, ಅರೇಬಿಕ್ ಹಾಗೂ ಗ್ರೀಕ್‌ನಲ್ಲಿ.ಕಥೆ, ಕಾವ್ಯ ಹಾಗೂ ಕೀರ್ತನೆಗಳನ್ನು ತನ್ನಲ್ಲಿಟ್ಟುಕೊಂಡ ಬೈಬಲ್ ಸಂಪೂರ್ಣವಾಗಲು ಹಿಡಿದಿದ್ದು ಹಲವಾರು ವರ್ಷ. ಇಂಥ ಪವಿತ್ರ ಬೈಬಲ್ ರೂಪುಗೊಂಡ ಪರಿಯನ್ನು ನೋಡಬೇಕಾದರೆ ಮಲ್ಲೇಶ್ವರಂನಲ್ಲಿರುವ ಸಂತ ಪೀಟರ್ಸ್‌ ಪೊಂಟಿಫಿಕಲ್ ಸಂಸ್ಥೆಯಲ್ಲಿ ಒಂದಿಷ್ಟು ಕಾಲ ಕಳೆಯಬೇಕು.ನಾಲ್ಕೂವರೆ ದಶಕಗಳ ಹಿಂದೆ (1965) ಬೈಬಲ್ ಕುರಿತ ಸಂಗ್ರಹಾಲಯವೊಂದು ಬೆಂಗಳೂರಿನಲ್ಲಿ ರೂಪುಗೊಳ್ಳಲು ಹೆಚ್ಚಿನ ಆಸಕ್ತಿ ತೋರಿದವರು ಇಲ್ಲಿ ಫ್ರೆಂಚ್ ಭಾಷೆ ಬೋಧಿಸುತ್ತಿದ್ದ ಪ್ರಾಧ್ಯಾಪಕ ರೆವರೆಂಡ್ ಫಾದರ್ ಲೀ ಗ್ರ್ಯಾಂಡ್. ಇವರ ಪರಿಶ್ರಮದಿಂದ ಮೈದಾಳಿದ ಬೈಬಲ್ ಸಂಗ್ರಹಾಲಯದಲ್ಲಿ ಕೇವಲ ಗ್ರಂಥಗಳು ಮಾತ್ರವಲ್ಲ; ಬೈಬಲ್ ರಚನೆ, ಆಗಿನ ವಾತಾವರಣ, ಸಮಾಜದ ಸ್ಥಿತಿಗತಿ ಇವೆಲ್ಲವೂ ಮಾದರಿಗಳ ಮೂಲಕ ಕಾಣಸಿಗುತ್ತವೆ.ಸಂಕ್ಷಿಪ್ತ ಚಿತ್ರಣ

ಕ್ರೈಸ್ತಧರ್ಮ ಹುಟ್ಟಿದ ‘ಸೀ ಆಫ್ ಗೆಲ್ಲಾ’ ಮಾದರಿಯಿಂದ ಹಿಡಿದು ಕ್ರೈಸ್ತ ಪವಿತ್ರ ಸ್ಥಳಗಳ ಆಗಿನ ಪರಿಸ್ಥಿತಿಯನ್ನು ಸಾದರಪಡಿಸುವ ಚಿತ್ರಣವನ್ನು ಇಲ್ಲಿ ನಾವು ನೋಡಬಹುದು.ಅಂದಾಜು 70 ಪುಸ್ತಕಗಳ ಸಾರಾಂಶವನ್ನು ಒಳಗೊಂಡು ರಚನೆಗೊಂಡ ಬೈಬಲ್ ಪ್ರಸ್ತುತ 2000ಕ್ಕೂ ಹೆಚ್ಚು ಭಾಷೆಗಳಿಗೆ ಅನುವಾದಗೊಂಡಿದ್ದು ಅವುಗಳ ಪೈಕಿ ಸುಮಾರು 180ಕ್ಕೂ ಅಧಿಕ ಭಾಷೆಯ ಬೈಬಲ್‌ಗಳು ಈ ಸಂಗ್ರಹಾಲಯದಲ್ಲಿ ವೀಕ್ಷಿಸಲು ಲಭ್ಯ. ಭಾರತದ ಬಹುತೇಕ ಎಲ್ಲಾ ಭಾಷೆಗಳಲ್ಲೂ ಬೈಬಲ್ ತರ್ಜುಮೆಗೊಂಡಿದ್ದು ಅವೆಲ್ಲವೂ ಇಲ್ಲಿವೆ.ರೆ. ಲೀಗ್ರ್ಯಾಂಡ್ ಅವರೊಂದಿಗೆ ಫಾದರ್ ಆ್ಯಂಟನಿ ಆರ್. ಸೆರಕ್ಕೂ ಅವರೂ ಬೆಂಗಳೂರು ಬೈಬಲ್ ಸಂಗ್ರಹಾಲಯವನ್ನು ವೈವಿಧ್ಯಮಯವಾಗಿ ರೂಪಿಸಲು ಶ್ರಮಿಸಿದ್ದಾರೆ. ಇವರೆಲ್ಲರ ಶ್ರಮದಿಂದ ಇಲ್ಲೆಗ ಹಿಬ್ರೂ ಭಾಷೆಯಲ್ಲಿ ರಚನೆಗೊಂಡ ಮೂಲ ಹಾಳೆಗಳು ಜತನದಿಂದಿವೆ. ಇಂತಹ ಹಾಳೆಗಳು ಭಾರತದಲ್ಲಿರುವುದು ಇಲ್ಲಿ ಮಾತ್ರ.ಮೊದಲ ಇಂಗ್ಲಿಷ್ ಬೈಬಲ್ ಹಾಳೆ

ಆಂಗ್ಲದಲ್ಲಿ ಮುದ್ರಣಗೊಂಡ ಮೊದಲ ಬೈಬಲ್‌ನ (1611) ಮೂಲ ಹಾಳೆಗಳೂ ಇಲ್ಲಿವೆ. ಮುದ್ರಣ ಮಾತ್ರವಲ್ಲ ಬ್ರೈಲ್ ಲಿಪಿಯಲ್ಲಿರುವ ಬೈಬಲ್‌ಗಳೂ ಇಲ್ಲುಂಟು.ಲಿಪಿ ಇರುವ ಭಾಷೆಯ ಬೈಬಲ್‌ಗಳಲ್ಲದೆ ಲಿಪಿ ಇಲ್ಲದ ಭಾಷೆಗಳಿಗೆ ಸ್ಥಳೀಯವಾಗಿ ಬಳಸುವ ಭಾಷೆಗಳ ಮೂಲಕ ಅನುವಾದಗೊಂಡ ಬೈಬಲ್‌ಗಳನ್ನೂ ಇಲ್ಲಿ ಕಾಣಬಹುದು. ಕನ್ನಡ ಲಿಪಿಯಲ್ಲಿ ಪ್ರಕಟವಾಗಿರುವ ತುಳು-ಕೊಂಕಣಿ ಬೈಬಲ್‌ಗಳು ಇದಕ್ಕೆ ನಿದರ್ಶನ.ಪ್ರಥಮ ಕನ್ನಡ ಬೈಬಲ್

ಕನ್ನಡದಲ್ಲಿ ಪ್ರಥಮ ಬೈಬಲ್ ಮುದ್ರಣವಾಗಿದ್ದು 1812 ರಲ್ಲಿ, ಅಲ್ಲಿಂದೀಚೆಗೆ ಅನೇಕ ಕನ್ನಡ ಆವೃತ್ತಿಗಳು ಹೊರಬಂದಿದ್ದು ಮೊದಲ ಆವೃತ್ತಿಯ ಕನ್ನಡ ಬೈಬಲ್ ಇಲ್ಲಿ ವೀಕ್ಷಣೆಗೆ ಇಡಲಾಗಿದೆ.ಹಲವು ಸಂಸ್ಕೃತಿಗಳನ್ನು ತನ್ನ ತೆಕ್ಕೆಯಲ್ಲಿಟ್ಟುಕೊಂಡು ಜಗತ್ತಿನಾದ್ಯಂತ ಆಚರಣೆಯಲ್ಲಿ ಕ್ರೈಸ್ತ ಧರ್ಮದ ಪವಿತ್ರ ಗ್ರಂಥ ಬೈಬಲ್ ಕುರಿತು ಆಳವಾದ ಅಧ್ಯಯನದ ಜತೆಗೆ ಆಸಕ್ತರಿಗೆ ಬೈಬಲ್ ಅರಿವು ಮೂಡಿಸುವ ನಿಟ್ಟಿನಲ್ಲಿ ಸಂತ ಪೀಟರ್ಸ್‌ ಪೊಂಟಿಷಿಯಲ್ ಸಂಸ್ಥೆ ಬೈಬಲ್‌ಕ್ವಿಬ್-ಬೈಬಲ್ ಮಾದರಿ ಸ್ಪರ್ಧೆಗಳನ್ನು ನಿಯತವಾಗಿ ಏರ್ಪಡಿಸುತ್ತಾ ಬಂದಿದೆ.


 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry