ಬೈಲೂರು: ನೀರೆ ಹೆದ್ದಾರಿ ದುರಸ್ತಿಗೆ ಶಾಸಕ ಸೂಚನೆ

7

ಬೈಲೂರು: ನೀರೆ ಹೆದ್ದಾರಿ ದುರಸ್ತಿಗೆ ಶಾಸಕ ಸೂಚನೆ

Published:
Updated:

ಕಾರ್ಕಳ: ನೀರೆ ಹೆದ್ದಾರಿಯ ಪ್ರಧಾನ ರಸ್ತೆ ತೀರಾ ಕೆಟ್ಟುಹೋಗಿದ್ದು ಅಪಘಾತ ನಡೆಯುವ ಸಂಭವವಿದೆ. ಅಧಿಕಾರಿಗಳು ಸ್ಪಂದಿಸಿ ದುರಸ್ತಿಗೊಳಿಸಬೇಕು ಎಂದು ಎಂದು ಶಾಸಕ ಗೋಪಾಲ ಭಂಡಾರಿ ಇಲ್ಲಿ ಸೂಚಿಸಿದರು.ಬೈಲೂರು ಸರ್ಕಾರಿ ಪದವಿಪೂರ್ವ ಕಾಲೇಜು ಸಭಾಭವನದಲ್ಲಿ ಶನಿವಾರ ನಡೆದ ಜನಸ್ಪಂದನ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ತಾಲ್ಲೂಕಿನಾದ್ಯಂತ ಹಲವು ಮಂದಿ ವಾಸ್ತವ್ಯಕ್ಕಾಗಿ ಸರ್ಕಾರಿ ಭೂಮಿಯಲ್ಲಿ ನಿವೇಶನಗಳನ್ನು ಮಾಡಿಕೊಂಡಿದ್ದು ಅವರಿಗೆ ಈತನಕ ಹಕ್ಕುಪತ್ರ ಪಡೆಯಲು ಸಾಧ್ಯವಾಗಿಲ್ಲ. ಈವರೆಗೆ ಅರ್ಜಿ ಸಲ್ಲಿಸದೇ ಇರುವವರಿಗೆ ಈಗ ಅವಕಾಶ ನೀಡಬೇಕು. ಹಕ್ಕುಪತ್ರಕ್ಕಾಗಿ ಸಾರ್ವಜನಿಕ ಹಿತಾಸಕ್ತಿ ಹಿನ್ನೆಲೆಯಲ್ಲಿ ಬೇಡಿಕೆಗಳು ಬಂದಿದ್ದು ಸರ್ಕಾರದ ಗಮನಕ್ಕೆ ತರಲಾಗುವುದು ಎಂದರು. ನೆಮ್ಮದಿ ಕೇಂದ್ರಗಳನ್ನು ಪ್ರಾದೇಶಿಕ ಆಡಳಿತಕ್ಕೊಳಪಡಿಸಿದರೆ ಸ್ವಲ್ಪವಾದರೂ ನೆಮ್ಮದಿ ಸಿಗುತ್ತಿತ್ತು. ಅಲ್ಲಿ ಖಾಸಗೀಕರಣವೇ ಸಮಸ್ಯೆಯಾಗಿದೆ. ಬದಲಿ ವ್ಯವಸ್ಥೆಯಾಗಬೇಕು ಎಂದರು. ಸಭೆಯಲ್ಲಿ ವಿವಿಧ ಸಮಸ್ಯೆಗಳ ಕುರಿತು ಪ್ರಸ್ತಾವನೆಗಳು ಬಂದುವು. ಮುಖ್ಯವಾಗಿ ತಾಲ್ಲೂಕಿನ ಕೌಡೂರು ಗ್ರಾಮದ ಶೇರಿಗಾರಬೆಟ್ಟು, ನೀರೆಹೆದ್ದಾರಿ, ಬೈಲೂರು-ಪಳ್ಳಿ ರಸ್ತೆ ಮೊದಲಾದ ಕಡೆ ರಸ್ತೆಗಳು ಕೆಟ್ಟು ಹೋಗಿದ್ದು ಪ್ರಯಾಣಿಕರಿಗೆ ದಿನಾಲೂ ಕಿರಿಕಿರಿಯಾಗುತ್ತಿದೆ. ಕೆಲವೆಡೆ ಜಲ್ಲಿ ಹಾಕಲಾಗಿದೆ. ಅಲ್ಲಿ ದುರಸ್ತಿ ಕಾರ್ಯ ನಡೆಸದಿದ್ದಲ್ಲಿ ಜಲ್ಲಿ ತೆಗೆಸಿ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದರು.ಮತದಾರರ ದಿನಾಚರಣೆ ಸಂದರ್ಭ ಹಂಚಿದ ಗುರುತುಚೀಟಿಗಳು ದೋಷ ಪೂರಿತವಾಗಿದ್ದು, ಅದನ್ನು ಬದಲಾಯಿಸಿ ಎಂದು ನಾಗರಿಕರು ಒತ್ತಾಯಿಸಿದಾಗ ತಹಸೀಲ್ದಾರ್ ಜಗನ್ನಾಥ್ ರಾವ್ ಒಪ್ಪಿಗೆ ಸೂಚಿಸಿದರು. ತಾಲ್ಲೂಕಿನ ನಿವೇಶನ ಹಂಚಿಕೆಗೆ 40 ಎಕರೆ ಸರ್ಕಾರಿ ಜಮೀನು ಗುರುತಿಸಲಾಗಿದೆ. ನಿವೇಶನ ರಹಿತರನ್ನು ಗುರುತಿಸಿ ವಿತರಿಸಲಾಗುತ್ತದೆ. ಈಗಾಗಲೇ ಎರಡು ಸಾವಿರದಿಂದ ಮೂರು ಸಾವಿರ ಮಂದಿ ಮನೆಕಟ್ಟಿ ಕೂತಿದ್ದು ಅವರಿಗೆ ಹಕ್ಕುಪತ್ರ ದೊರೆತಿಲ್ಲ. ಸರ್ಕಾರಿ ಜಾಗವಿದ್ದು ಅರಣ್ಯ ಇಲಾಖೆಗೆ ಸೇರಿದ ಕಡೆ ಸ್ಥಳ ನೀಡಲಾಗುವುದಿಲ್ಲ ಎಂದು ತಹಸೀಲ್ದಾರ್ ತಿಳಿಸಿದರು.ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಜಯರಾಮ ಸಾಲ್ಯಾನ್, ಜಿಲ್ಲಾ ಪಂಚಾಯಿತಿ ಸದಸ್ಯೆ ಸವಿತಾ ಎಸ್. ಕೋಟ್ಯಾನ್, ಬೈಲೂರು ತಾಲ್ಲೂಕು ಪಂಚಾಯಿತಿ ಸದಸ್ಯೆ ಮಾಲಿನಿ ಜೆ. ಶೆಟ್ಟಿ, ಹಿರ್ಗಾನ ತಾಲ್ಲೂಕು ಪಂಚಾಯಿತಿ ಸದಸ್ಯ ವಿಕ್ರಂ ಹೆಗ್ಡೆ, ನೀರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ರಮೇಶ್ ಶೆಟ್ಟಿ, ಬೈಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಸುರೇಶ ಸಾಲ್ಯಾನ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಾಜೇಂದ್ರ ಬೇಕಲ್, ವಿವಿಧ ಇಲಾಖಾಧಿಕಾರಿಗಳು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry