ಬೈಸಿಕಲ್‌ನಲ್ಲೇ ದೇಶ ಸಂಚಾರ..!

7
ಒಳ್ಳೆಯವರಾಗಿರಿ: ಒಡಿಶಾದ ಶಿವಪ್ರಸಾದ್ ದಾಸ್ ಸಾಹಸ –ಸಂದೇಶ

ಬೈಸಿಕಲ್‌ನಲ್ಲೇ ದೇಶ ಸಂಚಾರ..!

Published:
Updated:

ಕೋಲಾರ: ಈತ ಒಳ್ಳೆಯತನದ ಪ್ರತಿ­ಪಾದಕ. ಒಳ್ಳೆಯತನ ಎಂಬುದು ಬಹು­ತೇಕ ಸಂದರ್ಭಗಳಲ್ಲಿ ಬಾಯು­ಪ­ಚಾರದ ಮಾತಾಗಿ ಅಷ್ಟೇ ಚಾಲ್ತಿ­ಯಲ್ಲಿರುವ ಸನ್ನಿವೇಶದಲ್ಲಿ ಈತ ಒಳ್ಳೆಯವರಾಗಿರಿ, ಒಳ್ಳೆಯ ಕೆಲಸವನ್ನೇ ಮಾಡಿರಿ ಮತ್ತು ವಿಶ್ವಶಾಂತಿಗೆ ನೆರವಾಗಿರಿ ಎಂಬ ಪ್ರತಿಪಾದನೆಯನ್ನೇ ಧ್ಯೇಯವಾಗಿಸಿಕೊಂಡು ಬೈಸಿಕಲ್‌ ತುಳಿಯುತ್ತಾ ದೇಶ ಸಂಚಾರ ಕೈಗೊಂಡಿದ್ದಾರೆ.ವಯಸ್ಸು 55 ಆಯಿತೆಂದರೆ ಬಹುತೇಕ ಪುರುಷರಿಗೆ ವೈರಾಗ್ಯ ಆಪ್ತವಾಗಿಬಿಡುತ್ತದೆ. ಇಲ್ಲ ವಿಶ್ರಾಂತ ಜೀವನದ ನಿರೀಕ್ಷೆ ಹೆಚ್ಚಾಗತೊಡಗುತ್ತದೆ. ಆದರೆ ಒಡಿಶಾದ ಅವಿವಾಹಿತ ಶಿವಪ್ರಸಾದ್ ದಾಸ್, ಹಿರಿಯ ನಾಗರಿಕರ ಜತೆಗೆ ಯುವಕರೂ ನಾಚುವಂತೆ ಒಳ್ಳೆಯತನ ಮತ್ತು ಶಾಂತಿ ಸಂದೇಶವನ್ನು ಅಪ್ಪಿಕೊಂಡಿದ್ದಾರೆ. ಅದನ್ನು ದೇಶದ ಜನರಿಗೆ ತಲುಪಿಸುವ ಕೆಲಸವನ್ನೂ ಎರಡು ವರ್ಷದಿಂದ ನಿರಂತರವಾಗಿ ಮಾಡುತ್ತಿದ್ದಾರೆ.ಈ ಸೈಕಲ್ ಸಂಚಾರ ಬಿಟ್ಟರೆ ನಿಮ್ಮ ಕೆಲಸವೇನು? ಎಂದು ಕೇಳಿದರೆ ಏನೂ ಇಲ್ಲ. ಶಾಂತಿ ಸಂದೇಶ ಸಾರುವುದಷ್ಟೇ ಎನ್ನುತ್ತಾರೆ. ಅದಕ್ಕೆ ಅವರು ನೆಚ್ಚಿಕೊಂಡಿರುವುದು ಹಳೇ ಬೈಸಿಕಲ್ ಅನ್ನು ಮಾತ್ರ. ಹಿಂದಿ ಮತ್ತು ಕೊಂಚ ಇಂಗ್ಲಿಷ್ ಮಾತ್ರ ಬಲ್ಲ ಈ ಉತ್ಸಾಹಿ ನಗರಕ್ಕೆ ರಾತ್ರಿ 7.30ಕ್ಕೆ ಬಂದು ‘ಪ್ರಜಾವಾಣಿ’ಯೊಂದಿಗೆ ತಮ್ಮ ಒಳ್ಳೆಯತನ ಹಾಗೂ ಶಾಂತಿ ಸಂದೇಶದ ಕುರಿತು ಮಾತನಾಡಿದರು.

ಒಡಿಶಾದ ಬ್ರಹ್ಮಪುರದ ನಿವಾಸಿಯಾದ ಇವರಿಗೆ ಸ್ಥಳೀಯರು ನೀಡಿದ ಪ್ರೋತ್ಸಾಹವೇ ದೇಶ ಸಂಚಾರದ ಬಾಗಿಲನ್ನು ತೆರೆದಿದೆ. ಅಚ್ಚರಿಯ ವಿಷಯವೆಂದರೆ ಹೀಗೆ ಅವರು ಬೈಸಿಕಲ್‌ನಲ್ಲಿ ದೇಶ ಸಂಚಾರ ಕೈಗೊಂಡಿರುವುದು ಆರನೇ ಬಾರಿಗೆ.2012ರ ಗಣರಾಜ್ಯೋತ್ಸವದ ದಿನವಾದ ಜ.26ರಂದು ಬ್ರಹ್ಮಪುರಲ್ಲಿ ಬೈಸಿಕಲ್ ಏರಿದ ಅವರು ಇದುವರೆಗೆ ಪಶ್ಚಿಮ ಬಂಗಾಳ, ಬಿಹಾರ, ಉತ್ತರ ಪ್ರದೇಶ, ಲಕ್ನೋ, ಡೆಹರಾಡೂನ್, ಉತ್ತರಾಖಂಡ, ಹಿಮಾಚಲಪ್ರದೇಶ, ಶಿಮ್ಲಾ, ಕುಲು ಮನಾಲಿ, ಶ್ರೀನಗರ, ಕಾರ್ಗಿಲ್, ಜಮ್ಮು, ಪಂಜಾಬ್, ಹರಿಯಾಣ, ನವದೆಹಲಿ, ರಾಜಾಸ್ತಾನ್, ಜಯಪುರ, ಗುಜರಾತ್, ಭೋಪಾಲ್, ಮಹಾರಾಷ್ಟ್ರ, ನಾಗಪುರ, ಪೂನಾ, ಮುಂಬೈ, ಗೋವಾ, ಆಂಧ್ರಪ್ರದೇಶ, ಕೇರಳ, ಕನ್ಯಾಕುಮಾರಿ, ಪಾಂಡಿಚೇರಿ ಮೂಲಕ ಬೆಂಗಳೂರು ತಲುಪಿ ಕೋಲಾರ ತಲುಪಿದ್ದಾರೆ.

ಎರಡು ವರ್ಷದಿಂದ ಇದುವರೆಗೆ ಸುಮಾರು 16 ಸಾವಿರ ಕಿಮೀ ದೂರವನ್ನು ಬೈಸಿಕಲ್ ಮೂಲಕ ಕ್ರಮಿಸಿದ್ದಾರೆ.

ಮುಂದೆ ಬಂಗಾರಪೇಟೆ ಮೂಲಕ ಚಿತ್ತೂರು, ಚೆನ್ನೈ, ವೇಲೂರು, ಹೈದರಾಬಾದ್ ಮೂಲಕ ಮತ್ತೆ ಒಡಿಶಾ ತಲುಪುವ ಯೋಜನೆ ಅವರದು. ಅದಕ್ಕೆ ಇನ್ನೂ ಆರು ತಿಂಗಳು ಬೇಕಾಗಬಹುದು ಎನ್ನುತ್ತಾರೆ ಅವರು.ಹೋದ ಸ್ಥಳದಲ್ಲೆಲ್ಲ ಜನ ಏನೇನೋ ಕೊಡುಗೆಗಳನ್ನು ನೀಡಿ ಪ್ರೋತ್ಸಾಹಿಸುತ್ತಾರೆ. ಆದರೆ ಅವುಗಳನ್ನೆಲ್ಲ ಬೈಸಿಕಲ್‌ನಲ್ಲಿ ಸಾಗಿಸುವುದು ಕಷ್ಟ. ಹೀಗಾಗಿ ಸಾಗಿಸಬಹುದಾದ ಕೊಡುಗೆಗಳನ್ನು ನಯವಾಗಿ ನಿರಾಕರಿಸುತ್ತೇನೆ. ಆಹಾರ ಪದಾರ್ಥಗಳನ್ನು ಸ್ಥಳದಲ್ಲೇ ಖುಷಿಯಾಗಿ ಸೇವಿಸುತ್ತೇನೆ. ಹೆಚ್ಚೆಂದರೆ ಎರಡು ಹೊತ್ತಿಗಾಗುವಷ್ಟು ಮಾತ್ರ ಜೋಳಿಗೆಯಲ್ಲಿರುತ್ತದೆ. ಉಳಿದುದೆಲ್ಲ ನೆರವು ನೀಡಿದವರ ದಾನಗುಣದಲ್ಲೇ ಲೀನವಾಗುತ್ತದೆ ಎಂದು ಅವರು ಹೇಳಿದರು.ಎರಡು ವರ್ಷದ ಹಿಂದೆ ಅವರು ಸೈಕಲ್ ಏರಿದಾಗ ಬಟ್ಟೆಗಂಟು ಮತ್ತು ಕೆಲವು ನೂರು ರೂಪಾಯಿಗಳು ಮಾತ್ರ ಜತೆಗಿದ್ದವು. ಈಗಲೂ ಅಷ್ಟೇ. ಹೆಚ್ಚು ಹಣವನ್ನು ಕೂಡ ಅವರು ಪಡೆಯುವುದಿಲ್ಲ. ಇಂದಿಗೆ ಎಷ್ಟು ಬೇಕೋ ಅಷ್ಟು ಎಂಬುದು ಅವರ ಸರಳ ಪ್ರವಾಸದ ಸಿದ್ಧಾಂತ.ನೆರವು

ಲಯನ್ಸ್‌ ಕ್ಲಬ್, ರೋಟರಿ ಕ್ಲಬ್ ಸೇರಿದಂತೆ ಹಲವು ಸಂಘ ಸಂಸ್ಥೆಗಳ ನೆರವನ್ನಷ್ಟೇ ನೆಚ್ಚಿಕೊಂಡಿರುವ ಈ ಸಾಹಸಿ ಕೋಲಾರಕ್ಕೆ ಬಂದಾಗ ರೋಟರಿ ಸಂಸ್ಥೆಯ ಪ್ರಮುಖರಾದ ಜಿ.ಸಿ.ಹನುಮಂತು ಸಂಸ್ಥೆ ವತಿಯಿಂದ ಹಣದ ನೆರವನ್ನು ನೀಡಿದರು. ಹನುಮಂತು ಅವರಿಗಾಗಿ ನಗರದ ಡೂಂಲೈಟ್ ವೃತ್ತದಲ್ಲಿ ದಾಸ್ ಹುಡುಕಾಟ ನಡೆಸಿದ್ದಾಗ ಪತ್ರಿಕಾ ಏಜೆಂಟರೊಬ್ಬರು ನೆರವಾಗಿ ಪ್ರವಾಸದ ದಾರಿಯನ್ನು ಸುಗಮಗೊಳಿಸಿದರು. ನೆರವು ಪಡೆದ ದಾಸ್ ನಿಧಾನಕ್ಕೆ ಬಂಗಾರಪೇಟೆ ಕಡೆಗೆ ಬೈಸಿಕಲ್ ತಿರುಗಿಸಿ ನಿಧಾನಕ್ಕೆ ಪೆಡಲ್ ತುಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry