ಶನಿವಾರ, ನವೆಂಬರ್ 23, 2019
18 °C

ಬೈಸಿಕಲ್ ಮೂಲಕ ಮತದಾರರ ಜಾಗೃತಿ ಜಾಥಾ

Published:
Updated:

ಶಿಗ್ಗಾವಿ: ಧಾರವಾಡದಿಂದ ಬೆಂಗಳೂರಿವರಗೆ ಬೈಸಿಕಲ್ ಪ್ರಯಾಣದ ಮೂಲಕ ಜನರಲ್ಲಿ ಮತದಾನದ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮ ಹಾಕಿಕೊಂಡು ಶಿಗ್ಗಾವಿ ಪಟ್ಟಣಕ್ಕೆ ಆಮಿಸಿದ ಧಾರವಾಡ ವಿದ್ಯಾರ್ಥಿಗಳ ಜಾಥಾಕ್ಕೆ ತಹಶೀಲ್ದಾರ್ ಎ.ಎ.ಕುಲಕರ್ಣಿ ಜಾಲನೆ ನೀಡಿದರು.ಧಾರವಾಡದ ಬಾಲಬಳಗದ ವಿದ್ಯಾರ್ಥಿಗಳಾದ ವೈಸಾಖ ಮೆಹೆಂದಳೆ, ವಿನಯಕುಮಾರ ಪಾಟೀಲ 10ನೇ ತರಗತಿ ವಾರ್ಷಿಕ ಪರೀಕ್ಷೆ ಮುಗಿಸಿಕೊಂಡು ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಮತದಾರರಲ್ಲಿ ಮತದಾನದ ಕುರಿತು ಜಾಗೃತಿ, ಪರಿಸರ ಸಂರಕ್ಷಣೆ, ಭ್ರಷ್ಟಾಚಾರ ನಿರ್ಮೂಲನೆ ಹಾಗೂ ದುಶ್ಚಟಗಳನ್ನು ದೂರ ಮಾಡುವ ಕಾರ್ಯಗಳನ್ನು ಕೈಗೊಂಡಿದ್ದಾರೆ.ಜಾಥಾ ನೇತೃತ್ವ ವಹಿಸಿದ ವಿದ್ಯಾರ್ಥಿ ವೈಸಾಖ ಮೆಹೆಂದಳೆ ಮಾತನಾಡಿ, ಮತದಾನದಿಂದ ವಂಚಿತರಾಗಬೇಡಿ, ಮತದಾನ ಒಂದು ಬೃಹತ್ ಶಕ್ತಿಯಾಗಿದೆ. ಅದನ್ನು ಸರಿಯಾಗಿ ಉಪಯೋಗಿಸುವ ಮೂಲಕ ಉತ್ತಮ ವ್ಯಕ್ತಿ ಆಯ್ಕೆ ನಿಮ್ಮದಾಗಬೇಕು. ಒಂದು ಮತದಿಂದ ಸುಭದ್ರ ನಾಡು ನಿರ್ಮಾಣದ ಶಕ್ತಿ ಅಡಗಿದೆ. ಆಸೆ, ಆಮಿಷಗಳಿಗೆ ಬಲಿಯಾಗದೆ ಉತ್ತಮ ಭವಿಷ್ಯತ್ವಕ್ಕೆ ಮತದಾನ ಮಾಡಲು ಮುಂದಾಗಬೇಕು ಎಂದು ಸಲಹೆ ಮಾಡಿದರು.ಸಾರ್ವಜನಿಕರು ಚುನಾವಣೆ ಸಂದರ್ಭದಲ್ಲಿ ದುಶ್ಚಟಗಳಿಂದ ದೂರ ಇರಬೇಕು. ಹಣ ಹಾಳು ಖರ್ಚುಮಾಡಿ ಆರೋಗ್ಯ ಹಾಳು ಮಾಡಿಕೊಳ್ಳಬೇಡಿ. ಪ್ಲಾಸ್ಟಿಕ್ ಬಳಕೆ ಬಿಟ್ಟು ಬಟ್ಟೆಗಳ ಚೀಲಗಳನ್ನು ಬಳಸಿ ಉತ್ತಮ ಪರಿಸರ ನಿರ್ಮಿಸಿದಲ್ಲಿ ಪರಿಸರ ಶುದ್ಧಗೊಂಡು ಆರೋಗ್ಯವಂತ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದರು.ಪರೀಕ್ಷೆಗಳು ಮುಗಿದ ನಂತರ ಇಂದಿನ ವಿದ್ಯಾರ್ಥಿಗಳು ಆಟ-ಪಾಠಗಳ ಜೊತೆಗೆ ಸಾಮಾಜಿಕ ಹೊಣೆಗಾರಿಕೆ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಸೇವಾ ಮನೋಭಾವನೆ ಬೆಳೆಸಿಕೊಳ್ಳುವುದು ಅಗತ್ಯ ಎಂದು ಹೇಳಿದರು.ಈ ಸಂದರ್ಭದಲ್ಲಿ ಚುನಾವಣೆ ಸಿಬ್ಬಂದಿ ಸೂರ್ಯವಂಶಿ, ತಾಲ್ಲೂಕು ಸಾಕ್ಷರತಾ ಅಧಿಕಾರಿ ಎಸ್.ಕೆ.ಹೂಗಾರ, ಎಸ್.ಬಿ.ಪಾಟೀಲ ಮತ್ತಿತರರು ಹಾಜರಿದ್ದರು.ರಾಣೆಬೆನ್ನೂರು ವರದಿ

ರಾಣೆಬೆನ್ನೂರು: `ಮತದಾನ ನಮ್ಮೆಲ್ಲರ ಹಕ್ಕು. ಆದ್ದರಿಂದ ಚುನಾವಣೆಯಲ್ಲಿ ನಿಮ್ಮ ಮತ ಹಾಳಾಗಲು ಬಿಡದೇ ತಪ್ಪದೇ ಮತದಾನ ಮಾಡಬೇಕು. ಅಲ್ಲದೆ ಮತದಾನದ ಕುರಿತ ಪ್ರತಿಯೊಬ್ಬರಲ್ಲಿಯೂ ಜಾಗೃತಿ ಮೂಡಿಸಬೇಕು' ಎಂದು ಧಾರವಾಡದ ಬಾಲ ಬಳಗದ ವಿದ್ಯಾರ್ಥಿ ವೈಶಾಖ್ ಮೆಹಂದಳೆ ಹೇಳಿದರು.ನಗರದ ಮಿನಿ ವಿಧಾನಸೌಧದ ಎದುರು ಧಾರವಾಡದಿಂದ ಬೆಂಗಳೂರಿಗೆ ಸೈಕಲ್ ಮೇಲೆ ಮತದಾನ ಜಾಗೃತಿ ಮೂಡಿಸಲು ಹೊರಟಿರುವ ಸಂದರ್ಭದಲ್ಲಿ ಅವರ ಮಾತನಾಡಿದರು.`ಅನಗತ್ಯ ಆಮಿಷೆಗಳಿಗೆ ಬಲಿಯಾಗದೆ ಮತದಾನ ಮಾಡಲು ಮುಂದಾಗಬೇಕು. ಸಚ್ಚಾರಿತ್ರ ಉಳ್ಳ ಅಭ್ಯರ್ಥಿಗೆ ಮತ ನೀಡಿ ಅವರನ್ನು ಆಯ್ಕೆ ಮಾಡಬೇಕು. ಅಂದಾಗ ಮಾತ್ರ ಮತದಾನದ ಸಾರ್ಥಕತೆ ಹೊಂದಲಿದೆ' ಎಂದರು.ಧಾರವಾಡ ಬಾಲ ಬಳಗದ ವಿನಯಕುಮಾರ ಪಾಟೀಲ ಮಾತನಾಡಿ, `ಮಾರ್ಗ ಮಧ್ಯೆದಲ್ಲಿ ಮತದಾರರಿಗೆ ಜಾಗೃತಿ ಮೂಡಿಸುವ ಮೂಲಕ ರಾಜ್ಯ ಚುನಾವಣಾ ಕಮೀಶನರ್ ಭೇಟಿ ಮಾಡಿ ಜಾಥಾವನ್ನು ಅಂತ್ಯಗೊಳಿಸಲಾಗುವುದು' ಎಂದರು.ಎಂ.ಎಸ್. ಕಡೂರು,  ಬಿದರಿ ಆರ್.ಐ, ವಾಗೀಶ ಮಳೇಮಠ, ಎಸ್.ಟಿ.ದೊಡ್ಡಮನಿ, ಜಿ.ಐ.ತಹಶೀಲ್ದಾರ್, ಪಿ.ಎಸ್. ಸಪ್ಪಣ್ಣನವರ, ಮಂಜುನಾಥ ಕೆಂಚರಡ್ಡಿ, ಸುರೇಶ, ಗುರು ಲಮಾಣಿ, ಅಶೋಕ ಮತ್ತಿತರರು ಉಪಸ್ಥಿತಿದ್ದರು.

ಪ್ರತಿಕ್ರಿಯಿಸಿ (+)