ಬೈಸಿಕಲ್ ಯೋಜನೆಗೆ 250 ಕೋಟಿ

7

ಬೈಸಿಕಲ್ ಯೋಜನೆಗೆ 250 ಕೋಟಿ

Published:
Updated:

ಬೆಂಗಳೂರು: ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಕ್ಷೇತ್ರಕ್ಕೆ ನೀಡುವ ಹಣಕಾಸಿನ ಅನುದಾನದಲ್ಲಿ ಏರಿಕೆ ಮಾಡಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು, 2011-12ನೇ ಸಾಲಿನಲ್ಲಿ ಈ ಕ್ಷೇತ್ರಕ್ಕೆ ಒಟ್ಟು 10,281 ಕೋಟಿ ರೂಪಾಯಿ ಹಣ ಮೀಸಲಿಟ್ಟಿದ್ದಾರೆ.2010-11ನೇ ಸಾಲಿನಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಕ್ಷೇತ್ರಕ್ಕೆ ರೂ 8,830 ಕೋಟಿ  ಹಂಚಿಕೆ ಮಾಡಲಾಗಿತ್ತು. ಇದರಿಂದಾಗಿ ಈ ಬಾರಿ ರೂ 1,451 ಕೋಟಿ ಹೆಚ್ಚುವರಿ ಅನುದಾನ ಈ ಕ್ಷೇತ್ರಕ್ಕೆ ದೊರೆತಂತಾಗಿದೆ.ಬೈಸಿಕಲ್‌ಗೆ 250 ಕೋಟಿ: ವಿದ್ಯಾರ್ಥಿಗಳಿಗೆ ಬೈಸಿಕಲ್ ನೀಡುವ ಯೋಜನೆಗೆ 2011-12ರಲ್ಲಿ ರೂ 250 ಕೋಟಿ ಒದಗಿಸಲಾಗಿದೆ. ಈ ಸಾಲಿನಲ್ಲಿ ಸುಮಾರು 12 ಲಕ್ಷ ವಿದ್ಯಾರ್ಥಿಗಳಿಗೆ ಬೈಸಿಕಲ್ ವಿತರಿಸಲಾಗುವುದು ಎಂದು ಮುಖ್ಯಮಂತ್ರಿಗಳು ಬಜೆಟ್‌ನಲ್ಲಿ ಭರವಸೆ ನೀಡಿದ್ದಾರೆ.ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಓದುತ್ತಿರುವ 9 ಮತ್ತು 10ನೇ ತರಗತಿಯ ಮಕ್ಕಳಿಗೆ ಈ ವರ್ಷದಿಂದ ಉಚಿತ ಪಠ್ಯಪುಸ್ತಕ ವಿತರಿಸುವ ಭರವಸೆ ನೀಡಲಾಗಿದೆ. ಇದುವರೆಗೆ 1ರಿಂದ 8ನೆಯ ತರಗತಿ ವರೆಗಿನ ವಿದ್ಯಾರ್ಥಿಗಳಿಗೆ ಮಾತ್ರ ಉಚಿತ ಪಠ್ಯಪುಸ್ತಕ ನೀಡಲಾಗುತ್ತಿತ್ತು.ಆದಾಯ ಪ್ರಮಾಣಪತ್ರ ಬೇಡ: ಇನ್ನು ಮುಂದೆ ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಮಕ್ಕಳನ್ನು ಸೇರಿಸುವಾಗ ಕುಟುಂಬದ ಆದಾಯ ಪ್ರಮಾಣಪತ್ರ ನೀಡುವ ಅಗತ್ಯ ಇಲ್ಲ. ಆದಾಯ ಪ್ರಮಾಣಪತ್ರ ಒದಗಿಸಲು ತೊಂದರೆಯಾಗುತ್ತಿದೆ ಎಂದು ಗ್ರಾಮೀಣ ಭಾಗದ ಜನರು ಅಳಲು ತೋಡಿಕೊಂಡ ಕಾರಣ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು  ಹೇಳಿದ್ದಾರೆ.2011-12ನೇ ಸಾಲಿನಲ್ಲಿ ಸರ್ವ ಶಿಕ್ಷಣ ಅಭಿಯಾನದ ವೆಚ್ಚವಾಗಿ ರೂ 900 ಕೋಟಿ ನಿಗದಿ ಮಾಡಲಾಗಿದೆ. ಈ ಕಾರ್ಯಕ್ರಮಕ್ಕೆ ರಾಜ್ಯ ಸರ್ಕಾರ ರೂ 394 ಕೋಟಿ ನೀಡಲಿದೆ. ರಾಜ್ಯದ 20 ಜಿಲ್ಲೆಗಳಲ್ಲಿ ಆರಂಭವಾಗಿರುವ ‘ಸಾಕ್ಷರ ಭಾರತ’ ಯೋಜನೆಗೆ ರಾಜ್ಯ ಸರ್ಕಾರ ರೂ 5 ಕೋಟಿ ನೀಡಲಿದೆ.2010-11ರಲ್ಲಿ ಪ್ರಾರಂಭವಾಗಿದ್ದ ರಾಷ್ಟ್ರೀಯ ಮಾಧ್ಯಮಿಕ ಯೋಜನೆಗೆ ಸರ್ಕಾರ 2011-12ನೇ ಸಾಲಿನಲ್ಲಿ ರೂ 50 ಕೋಟಿ ರೂಪಾಯಿ ನೀಡಲಿದೆ.ಸ್ಕೌಟ್ಸ್ ಮತ್ತು ಗೈಡ್ಸ್ ಸೇರುವ ಬಡ ಮಕ್ಕಳಿಗೆ ಉಚಿತ ಸಮವಸ್ತ್ರ ನೀಡುವ ಉದ್ದೇಶಕ್ಕೆ ಸರ್ಕಾರ 50 ಲಕ್ಷ ರೂಪಾಯಿ ಮೀಸಲಿಡಲಿದೆ. ಅಲ್ಲದೆ ಬೆಂಗಳೂರಿನಲ್ಲಿ ಸ್ಕೌಟ್ಸ್ ಭವನ ನಿರ್ಮಾಣಕ್ಕೆ 4 ಕೋಟಿ  ರೂಪಾಯಿ ನೀಡಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry